ಆರೂ ಮೂರರ ಸೈಟು
ಮುಂಜಾನೆಯ ವಾಕಿಂಗ್ ವೇಳೆ ಎದುರಾಗುತ್ತಿದ್ದ ಆತ ತನ್ನನ್ನು ರಿಯಲ್ ಎಸ್ಟೇಟ್ ಎಜೆಂಟ್ ಎಂದೇ ಪರಿಚಯಿಸಿಕೊಂಡ, ನಂತರ ಎದುರಾದಾಗ, ಕಂಡಾಗ ತಿಳಿನಗೆಯೊಂದಿಗೆ ‘ಹಾಯ್…! ಬಾಯ್…! ಅಷ್ಟಕ್ಕೆ ಮಾತು ಮುಗಿದು ಹೋಗುತ್ತಿತ್ತು. ಆ ದಿನ ಸಿಕ್ಕ ಅದೇಕೋ ಮಾತನಾಡುವ ಹುಕಿಗೆ ಬಿದ್ದಂತಿದ್ದ ಲೋಕಾಭಿರಾಮದ ಮಾತಾದರೂ, ಆತನ ವುತ್ತಿ ಸಂಬಂಧಿ ವಿಷಯದತ್ತಲೇ ಗಿರಕಿ ಹೊಡೆಯುತ್ತಿತ್ತು. ಮಾತಿನ ಮಧ್ಯೆ ಆತನಿಂದ ‘ನೀವೇನಾದ್ರೂ ಸೈಟು-ಗೀಟು ಅಂತ ಮಾಡ್ಕೋಂಡ್ರಾ ಹೇಗೆ?’ ಎನ್ನುವ ಪ್ರಶ್ನೇ ಎದುರಾಯಿತು. ಉತ್ತರ ಸಿಕ್ಕುವ ಮೊದಲೇ “ಇಲ್ಲಿ ಸೈಟಿಲ್ಲದಿದ್ದರೆ, ಮನೆ ಕಟ್ಟದಿದ್ದರೆ ಲೈಫೇ ವೇಷ್ಟು” ಎನ್ನುವ ಲುಕ್ಕು ಬೀರುತ್ತಾ ನಿಂತ.
ಸೈಟು –ಮನೆ ಅಂತ ಏನೊಂದರ ರಗಳೆ ಅಂಟಿಸಿಕೊಳ್ಳದ ನಾನು, ಆತನಿಗೆ ನನ್ನ ‘ಜೇಬಿನ ಆರೋಗ್ಯದ’ ಪ್ರವರ ಒಪ್ಪಿಸುವುದು ಅರ್ಥ ಹೀನ ಅನ್ನಿಸಿ, ‘ಎರಡು ಕಡೆ ಸೈಟಿದೆ; ಆದರೆ ಬಹಳ ಚಿಕ್ಕದು ಮಾರಾಯ್ರೇ’ ಎಂದೆ ನನ್ನ ಮಾತಿನಿಂದ ಉತ್ಸುಕನಾದ ಆತ ‘ ಎಲ್ರೀ…! ಎಲ್ರೀ…! ಏನ್ ಮೆಜರ್ ಮೆಂಟು’ ಅಂತ ಅವಸರಿಸಿದ. ಇನ್ನು ಈ ಪಾರ್ಟಿಯಿಂದ ತಪ್ಪಿಸಿಕೊಳ್ಳುವುದು ಕಷ್ಟ ಅನ್ನಿಸಿತು. ‘ಅಯ್ಯೋ ಬಿಡ್ರೀ… ಅದೇನ್ ಅಂತಾ ಮಹಾ ದೊಡ್ಡದಲ್ಲಾರಿ; ಅಂತಾ ಡೆವಲಪ್ ಆದ ಏರೀಯಾ ಕೂಡಾ ಅಲ್ರೀ, ಇನ್ನೂ ಯಾರೂ ಒಂದು ಶೆಡ್ ಸೈತಾ ಕಟ್ಟಿಲ್ರೀ ‘ ಅಂತ ಮಾತು ಮುಗಿಸಿವೆ.
ಆತನದೋ ತೀರದ ಕುತೂಹಲ! ಎಲ್ಹೇಳ್ರೀ…! ಎಲ್ಲಾ ಏರಿಯಾ ನಂಗೋತ್ತು ಎನ್ನುವ ಝೇಂಕಾರದ ಒತ್ತಾಯ ಇನ್ನು ಹೆಚ್ಚು ಉದ್ದದ ಕುತೂಹಲಕ್ಕೆ ದೂಡಿದರೆ ಎಲ್ಲಿ ನನ್ನ ಮೈ ಮೇಲೆ ಏರಿ ಬಂದಾನೋ ಅಂತ ನನ್ನ ಅಸಹನೆಯನ್ನು ಮುಚ್ಚಿಟ್ಟು ತುಟಿಗೆ ನಗುವಂಟಿಸಿ ‘ಇಲ್ಲೇರಿ…! ದೇವಯ್ಯ ಪಾರ್ಕ್ ಗಿಂತ ಸ್ವಲ್ಪ ಕೆಳಗೊಂದು ವಿಲ್ಹನ್ ಗಾರ್ಡನ್ನ ಲ್ಲೊಂದು ಅಂತ ಮೆಲ್ಲನೆ ಉಸುರಿದೆ ಆಳದ ಮೂಲೆಯಿಂದೆಲ್ಲೋ ಹೊರಟಂತಿತ್ತು ನನ್ನ ಧ್ವನಿ.
ಅಷ್ಟಕ್ಕೇ ಸಮಾಧಾನವಾಗುವ ಶರೀರವಾ ಅದು ನಾನೇನೋ ಅಪಥ್ಯ ನುಡಿದೆ ಎನ್ನುವ ನೋಟ ಬೀರಿ, ‘ವಿಲ್ಹನ್ ಗಾರ್ಡನ್, ದೇವಯ್ಯ ಪಾರ್ಕ್ ಅಂತೀರಿ…! ಡೆವಲಪ್ ಆಗಿಲ್ಲಾ ಅಂತೀರಲ್ರೀ ನಿಮಗೆ ಈ ಸಿಟಿ ಬಗ್ಗೆ ಏನಾದರೂ ಗೊತ್ತಾ ಎನ್ನುವ ಧಮಕಿಯಂತಾ ಮಾತು ಅಪ್ಪಳೀಸಿತು. ಇನ್ನು ಸತಾಯಿಸುವುದು ಸರಿಯಲ್ಲವೆಂದುಕೊಂಡ ನಾನು ನಗೆಯೊಂದಿಗೆ ಮೆಲು ದನಿಯಲ್ಲಿ ‘ಹರಿಶ್ಚಂದ್ರ ಘಾಟ್ ನಲ್ಲಿ ಸಿಕ್ಸ್ ಬೈ ತ್ರಿ ವಿಲ್ಸ್ ನ ಗಾರ್ಡನ್ನಲೂ ಡಿಟೋ ಅಂದೆ.
ಕೆಲಕಾಲ ಕರೆಂಟ್ ಹೊಡೆದು ಸೆಟಗೊಂಡವನಂತೆ ನಿಂತಿದ್ದೆ. ಆಮೇಲೆ ಕೀ ಕೊಟ್ಟ ಗೊಂಬೆಯಂತೆ ಪಕ್ಕೆ ಹಿಡಿದುಕೊಂಡು ಪಕಪಕ ನಗತೊಡಗಿದ ನಿಮ್ಮೊಳ್ಳೇ ಕಥೆ, ಹೋಗ್ ಹೋಗ್ ರೀ… ಸುಮ್ಮನೆ ಎಲ್ಲಾದ್ರೂ ಒಂದ್ ಸೈಟ್ ಮಾಡ್ಕೊಂಡು ಬೇಗ ಬದುಕೋ ದಾರಿ ನೋಡಿ” ಎಂದು ಹೇಳಿ ವಾಕಿಂಗ್ ನೆನಪಾದವನಂತೆ ಜೋರು ಹೆಜ್ಜೆ ಹಾಕಿದ. ನಾನು ನನ್ನ ಅಸಹಾಯಕತೆಯೊಂದಿಗೆ ವಾಕಿಂಗ್ ಮರೆತು ಆತ ಹೋದ ದಿಕ್ಕನ್ನೇ ಎವೆಯಿಕ್ಕದೆ ದಿಟ್ಟಿಸುತ್ತಾ ನಿಂತ.
ಹೊಸ್ಮನೆ ಮುತ್ತು