ತೇರು ಕೃತಿಯನ್ನು ನಾವು ನೀಳ್ಗತೆಯಂತೆಯೂ ನೋಡಬಹುದು. ಅಥವಾ ಅದನ್ನು ಒಂದು ಜಾನಪದ / ಜನಾಂಗಿಕ ಅಧ್ಯಯನದಂತೆಯೂ ನೋಡಬಹುದು.
ತೇರು ಕೃತಿಯೂ ಧರಮನಟ್ಟಿ ದೇಸಗತಿಯ ಸ್ಥಾಪನೆಯ ಕಾಲದಿಂದಲೇ ಪ್ರಾರಂಭ ವಾಗುತ್ತದೆ. ಹೊಸ ದೇಸಾಯಿ ಧರಮನಟ್ಟಿಯಲ್ಲಿ ತನ್ನ `ಮನೆ ದೇವರಾದ’ ವಿಠ್ಠಲನ ಒಂದು ಭವ್ಯ ದೇವಾಲಯವನ್ನು ಕಟ್ಟಿಸುತ್ತಾನೆ. ಹೊನ್ನ ಕಳಸದ, ಬೃಹತ್ ಕಲ್ಲಿನ ಚಕ್ರಗಳ, ಆ ದೇವಾಲಯದ ತೇರು ಇಡೀ ದೇಸಗತಿಯ ಪ್ರತಿಷ್ಠೆಯ ಸಂಕೇತ. ಆದರೆ ಮೊದಲನೆಯ ರಥೋತ್ಸವದ ಸಂದರ್ಭದಲ್ಲಿಯೇ ಆ ತೇರು ನೂರಾರು ಜನರು ಪ್ರಯತ್ನಿಸಿದರೂ ಚಲಿಸುವುದಿಲ್ಲ; ಮತ್ತು ಶಾಸ್ತ್ರದ ಅಯ್ಯನವರು ನರ ಬಲಿ ಆಗಬೇಕೆಂದು ಹೇಳುತ್ತಾರೆ. ಕೊನೆಗೆ, `ಕೆಳ’ ಜಾತಿಯ ಬಡ ದ್ಯಾವಪ್ಪ ಎಂಬುವವನ ಮಗನನ್ನು ಬಲಿ ಕೊಟ್ಟ ನಂತರ ತೇರು ಚಲಿಸುತ್ತದೆ. ಈ ತ್ಯಾಗಕ್ಕಾಗಿ ದ್ಯಾವಪ್ಪನಿಗೆ ದೇಸಾಯಿಯಿಂದ ಕಳ್ಳೀಗುದ್ದಿ ಎಂಬ ಊರಿನಲ್ಲಿ ಎಂಟೆಕರೆ ಜಮೀನು ಇನಾಮಾಗಿ ದೊರೆಯುತ್ತದೆ; ಮತ್ತು ಅಂದಿನಿಂದ ಪ್ರತಿ ವರ್ಷ ದ್ಯಾವಪ್ಪ ಅಥವಾ ಅವನ ವಂಶದವರು ರಥೋತ್ಸವದ ದಿನ ರಥದ ಚಕ್ರಕ್ಕೆ ಹಣೆ ಒಡೆದುಕೊಂಡು ಮಾಡುವ `ರಕ್ತ ತಿಲಕ’ದ ಸೇವೆಯ ಆಚರಣೆ ಪ್ರಾರಂಭವಾಗುತ್ತದೆ. ಆದರೆ, ಕಾಲಕ್ರಮದಲ್ಲಿ ಜನರಿಗೆ ದೇವರಲ್ಲಿ ಮತ್ತು ರಥೋತ್ಸವದಲ್ಲಿಯೇ ನಂಬಿಕೆ ಕಮ್ಮಿಯಾಗುತ್ತದೆ; ಇನಾಮಿನ ಜಮೀನನ್ನು ಮೋಸದಿಂದ ಆ ಊರಿನ ಗೌಡ ತನ್ನದಾಗಿಸಿಕೊಳ್ಳುತ್ತಾನೆ; ಮತ್ತು ಆಧುನಿಕ ಕಾಲದ ದ್ಯಾವಪ್ಪನ ವಂಶಸ್ಥ (ಅವನ ಹೆಸರೂ ದ್ಯಾವಪ್ಪ ಎಂತಲೇ) ರಕ್ತತಿಲಕದ ಸೇವೆಯನ್ನು ತ್ಯಜಿಸಿ, ಕೆಲಕಾಲ ಜೆ.ಪಿ. ಆಂದೋಳನದಲ್ಲಿ ಭಾಗವಹಿಸಿ ಜೈಲಿಗೆ ಹೋಗಿ, ಅನಂತರ (ಬಾಬಾ ಆಮ್ಟೆ ಅವರ) ಸೇವಾಶ್ರಮವನ್ನು ಸೇರುತ್ತಾನೆ.
ಓದು ಮುಗಿದಾಗ ಮನದೊಳಗೆ ನೆನಪುಳಿಯುವ ಎರಡು ಮುಖ್ಯ ಪಾತ್ರಗಳೆಂದರ ಒಂದು ಕಾದಂಬರಿ ಆರಂಭದ ದ್ಯಾವಪ್ಪ ಇನ್ನೊಂದು ಕಾದಂಬರಿ ಮುಕ್ತಾಯದ ದ್ಯಾವಪ್ಪ. ಒಬ್ಬರು ಗತಕಾಲ. ಒಬ್ಬರು ವರ್ತಮಾನ. ಅಜ್ಜ ದ್ಯಾವಪ್ಪ ಧಾರ್ಮಿಕ ಭಕ್ತ. ಮೊಮ್ಮಗ ದ್ಯಾವಪ್ಪ ಧಾರ್ಮಿಕತೆಯಲ್ಲಿ ನಂಬಿಕೆ ಕಳೆದುಕೊಂಡವ. ಗತಕಾಲದೊಡನೆ ವಾಸ್ತವವನ್ನು ನೋಡುತ್ತಲೇ ಧರಮನಟ್ಟಿ ತೇರು ಎಳೆದು ಖುಷಿಪಟ್ಟಂತಾಯ್ತು. ವಿಭಿನ್ನ ಸಾಂಸ್ಕೃತಿಕ ಮಜಲುಗಳ ಪರಿಚಯವೂ ಆದಂತಾಯ್ತು. ನೀವೂ ಓದಿ ಖುಷಿಪಡಿ.
Reviews
There are no reviews yet.