ಕನ್ನಡದ ಶ್ರೇಷ್ಠ ಲೇಖಕರಲ್ಲೊಬ್ಬರಾದ ಯು.ಆರ್. ಅನಂತಮೂರ್ತಿಯವರ ನಾಲ್ಕನೆಯ ಕಾದಂಬರಿ ‘ಭವ’. ಈ ಕೃತಿಯ ಮೂಲಕ ಶ್ರೀಯುತರು ತಮ್ಮ ಸೃಜನಶೀಲ ಜೀವನದ ಹೊಸ ಘಟ್ಟವನ್ನು ಪ್ರವೇಶಿಸಿದ್ದಾರೆ. ಭವ ಎಂದರೆ ಇರುವಿಕೆಯೂ ಹೌದು, ಆಗುವಿಕೆಯೂ ಹೌದು. ಮೂರು ತಲೆಮಾರಿಗೆ ಸೇರಿದ ಮೂವರು ವ್ಯಕ್ತಿಗಳ ಮೂಲಕ ಅನಂತಮೂರ್ತಿ ತೀವ್ರ ಅನುರಕ್ತಿ ಮತ್ತು ವಿರಕ್ತಿ ಬೆಳೆಯುವ ಸಂಗಮಸ್ಥಾನವನ್ನು ಶೋಧಿಸಿದ್ದಾರೆ. ಇಲ್ಲಿಯ ನಾಯಕರೆಲ್ಲರೂ ಸಂಸಾರದ ಒಡಲೊಳಗೆ ತೀವ್ರವಾಗಿ ಮುಳುಗಿದ್ದೂ ನಿರ್ವಾಣಕ್ಕಾಗಿ ಹಂಬಲಿಸುವವರು. ಆದರೆ ಸರಿಯಾದ ದಾರಿ ಸಿಕ್ಕದೆ ಕಂಗಾಲಾದವರು. ವಿಶ್ವನಾಥ ಶಾಸ್ತ್ರಿಗಳಲ್ಲಿ ಪ್ರಾರಂಭವಾದ ಪ್ರಯಾಣ ಪ್ರಸಾದನಲ್ಲಿ ಸಾರ್ಥಕತೆ ಕಾಣುತ್ತದೆ. ಸಂಸಾರ-ನಿರ್ವಾಣಗಳ ನಡುವೆ ವ್ಯತ್ಯಾಸವೇ ಇಲ್ಲ ಎಂಬ ಘನವಾದ ಬೌದ್ಧ ದಾರ್ಶನಿಕ ಸತ್ಯವನ್ನು ತೀರ ಆಕರ್ಷಕವಾದ ಲೌಕಿಕ ರೀತಿಯಲ್ಲೇ ಕಾದಂಬರಿ ಮಂಡಿಸುತ್ತದೆ. ಉಪನಿಷತ್ ಸತ್ಯವೂ ಅದೇ ಇದ್ದೀತು. ಬಹುಮುಖಿ ಕಥನದ ದನಿಗಳಲ್ಲಿ ಈ ಕಾದಂಬರಿಯನ್ನು ಬರೆಯಲಾಗಿದೆ. ಒಮ್ಮೆ ಉತ್ಕಟ ಕೌತುಕದ ಕಥೆಯಾಗಿ, ಒಮ್ಮೆ ಅಂತರಂಗ ವಿಶ್ಲೇಷಣೆಯ ಪ್ರಜ್ಞಾವಾಹಿನಿಯಾಗಿ, ಒಮ್ಮೆ ನಿರ್ಲಿಪ್ತ ಸಾಕ್ಷಿಪ್ರಜ್ಞೆಯ ನಿರೂಪಣೆಯಾಗಿ. ಹೀಗೆ ಈ ಪುಟ್ಟ ಕೃತಿಯಲ್ಲಿ ಒಂದು ಎಪಿಕ್ ಕಾದಂಬರಿಯ ತಂತ್ರ ತುಂಬಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜೀವನವನ್ನು ಪೊಳ್ಳು ನೈತಿಕ ಮೌಲ್ಯಗಳ ತೀರ್ಮಾನವೆನ್ನದೆ ಪ್ರೀತಿ ತುಂಬಿದ ವಿನಯವಾಗಿ ಇಲ್ಲಿ ಕಾಣಲಾಗಿದೆ.

-ಡಿ.ಆರ್. ನಾಗರಾಜ್

Additional information

Category

Author

Publisher

Language

Kannada

Book Format

Ebook

Year Published

2009

Reviews

There are no reviews yet.

Only logged in customers who have purchased this product may leave a review.