ಅವಸ್ಥೆ (ಕಾದಂಬರಿ) –
ಅವಸ್ಥೆ ಕಾದಂಬರಿ ಸ್ವಾತಂತ್ರ್ಯೋತ್ತರ ಭಾರತದ ಸ್ಥೂಲ ರಾಜಕಾರಣದ ಒಂದು ಸೂಕ್ಷ್ಮ ಮಾದರಿಯನ್ನು ಕಟ್ಟಲು ಪ್ರಯತ್ನಿಸುತ್ತದೆ. ಜನಪರ ಹೋರಾಟಗಳ ಸೈದ್ಧಾಂತಿಕ ರಾಜಕಾರಣ, ನಕ್ಸಲ್‌ಬಾರಿ ಚಳುವಳಿಯ ಉಗ್ರಗಾಮಿ ರಾಜಕಾರಣ, ನಮ್ಮ ಸಂವಿಧಾನ ಒಪ್ಪಿಕೊಂಡಿರುವ ಸಂಸದೀಯ ರಾಜಕಾರಣ, ನವಶ್ರೀಮಂತ ವರ್ಗದ ಅವಕಾಶವಾದೀ ರಾಜಕಾರಣ ಇವೆಲ್ಲ ಒಂದರೊಳಗೊಂದು ಸೇರಿಹೋದ ಸಂಕೀರ್ಣ ರಾಜಕೀಯ ವಿನ್ಯಾಸವನ್ನು ಹೆಣೆಯುವ ಈ ಕಾದಂಬರಿ ಮಾರ್ಕ್ಸ್ವಾದ, ಗಾಂಧೀವಾದ ಮತ್ತು ಲೋಹಿಯಾವಾದಗಳ ನೇರ ಮುಖಾಮುಖಿಯನ್ನು, ಕಾದಂಬರಿಯ ಬಂಧವನ್ನು ಸಡಿಲಗೊಳಿಸದೆ ಮಂಡಿಸುತ್ತದೆ. ಹೀಗೆ ಈ ಕ್ಷಣದ ಕ್ಷಿಪ್ರ ವಿದ್ಯಮಾನಗಳನ್ನು ಕಟ್ಟಿಕೊಡುತ್ತಲೇ ಅವನ್ನು ರಾಜಕಾರಣದ ಕೆಲವು ಮೂಲಭೂತ ಪ್ರಶ್ನೆಗಳಿಗೆ ಎದುರುಬದರಾಗಿಸುವ ಲೇಖಕ ತನ್ನ ಬರವಣಿಗೆ ಒಂದು ರಾಜಕೀಯ ವರದಿಯಾಗಿಬಿಡಬಹುದಾದ ಅಪಾಯಗಳನ್ನು ಮೀರಿಬಿಡುತ್ತಾನೆ. ಆದ್ದರಿಂದಲೇ ಕಾದಂಬರಿ ಕೇವಲ ಒಂದು ಕಾಲಾವಧಿಯ ರಾಜಕೀಯ ಚರಿತ್ರೆಯೂ ಆಗುವುದಿಲ್ಲ, ರಾಜಕೀಯ ನಾಯಕನೊಬ್ಬನ ಜೀವನ ಚರಿತ್ರೆಯೂ ಆಗುವುದಿಲ್ಲ. ಈ ಅಂಶಗಳನ್ನು ಕಥನ ತನ್ನ ಅಗತ್ಯಕ್ಕೆ ತಕ್ಕಷ್ಟು ದುಡಿಸಿಕೊಂಡರೂ ಅವುಗಳನ್ನು ಇತರ ಹಲವು ಹತ್ತು ಅಂಶಗಳೊಡನೆ ಕಲಾತ್ಮಕವಾಗಿ ಕರಗಿಸಿ ಕೇಂದ್ರರೂಪಕ ನಿರ್ಮಾಣದತ್ತ ಚಲಿಸುತ್ತದೆ.
-ಟಿ.ಪಿ. ಅಶೋಕ
(‘ಯು.ಆರ್.ಅನಂತಮೂರ್ತಿ: ಒಂದು ಅಧ್ಯಯನ’)
Reviews
There are no reviews yet.