ಮನುಷ್ಯನನ್ನು ದುಃಖ, ಅಸಹನೆ, ನಿರಾಸೆ, ವಿಕಾರ, ಆತ್ಮನಿಂದೆ, ಲೌಕಿಕ ಸಂಕಟ-ಇವೆಲ್ಲವು ಗಳಿಂದಲೂ ಬಿಡುಗಡೆ ಮಾಡಬಲ್ಲಂತಹ ಅದ್ಭುತ ಚೈತನ್ಯವೇ – ಪ್ರೇಮ! ಎಷ್ಟು ಬೊಗಸೆ ಕುಡಿದರೂ ಸಾಲದು. ಇದೊಂದು ವಿಷಯದಲ್ಲಿ ಮನುಷ್ಯ ನಿರಂತರ ದಾಹಿ. ಒಂದೇ ಒಂದು ಹಿಡಿ ಪ್ರೀತಿ ದೊರೆತ ಮನುಷ್ಯ ಬದುಕಿನ ಯಾವ ಹೋರಾಟದಲ್ಲೂ ಕೈ ಸೋತು ಮಲಗಲಾರ.
‘ಮಾಂಡೋವಿ’ಯ ಬಗ್ಗೆ ಈ ತನಕ ಯಾವುದೇ ಪತ್ರಿಕೆಯಲ್ಲಿ ವಿಮರ್ಶೆ ಪ್ರಕಟವಾಗಲಿಲ್ಲ. ಕನ್ನಡದ ವಿಮರ್ಶಕ ಜಾತಿ, ಅಂತಸ್ತು, ಹುದ್ದೆ ಮತ್ತು ಲಾಬಿಗಳನ್ನು ಮೊದಲು ಸ್ಟಡಿ ಮಾಡಿ ಆಮೇಲೆ ಪುಸ್ತಕ ಕೈಗೆತ್ತಿಕೊಳ್ಳುತ್ತಾನೆ. ಜಗತ್ಪ್ರಸಿದ್ಧ ಲೇಖಕ, ನೊಬೆಲ್ ವಿಜೇತ ಗೇಬ್ರಿಯಲ್ ಗಾರ್ಸಿಯಾ ಮಾಕ್ರ್ವೆಜ್ನ ಅಪರೂಪದ ಕೃತಿಯೊಂದು ಕನ್ನಡಕ್ಕೆ ಬಂದರೆ ಆ ಬಗ್ಗೆ ಸಣ್ಣದೊಂದು ಚರ್ಚೆ ಕೂಡ ಆಗುವುದಿಲ್ಲವೆಂದರೆ-ಅದಕ್ಕೇನನ್ನಬೇಕೋ ಅರ್ಥವಾಗುತ್ತಿಲ್ಲ.
‘ಮಾಂಡೋವಿ’ ಕಾದಂಬರಿಯಷ್ಟೆ ಆಗಿದ್ದಿದ್ದರೆ, ಅದನ್ನು ಬರೆದು ಏಳೆಂಟು ವರ್ಷಗಳಾದ ನಂತರವೂ ನನ್ನಲ್ಲಿ ಅದರೆಡೆಗೊಂದು ಅದಮ್ಯ ಸೆಳೆತ ಉಳಿದಿರುತ್ತಿರಲಿಲ್ಲ. ಎಲ್ಲೋ ಒಂದು ಕಡೆ ‘ಮಾಂಡೋವಿ’ಯ ನಾಯಕ ಚಲಪತಿಯೊಂದಿಗೆ ನನ್ನನ್ನು ನಾನು ಮಾಡಿಕೊಂಡೇ ಅದನ್ನು ಬೆಳೆಸುತ್ತ ಹೋದೆ. ಕಾದಂಬರಿಯಲ್ಲಿ ನನ್ನ ಅಮ್ಮ ಬಂದಳು, ನನ್ನ ಊರು ಬಂತು, ನಾನು ಅಲೆದ ಹಿಮಾಲಯ ಬಂತು, ನನಗಿಷ್ಟವಾದ ಶಿರಸಿ-ಯಲ್ಲಾಪುರದ ಕಾಡುಗಳ ನಡುವಿನ ಭರತನಹಳ್ಳಿ ಮನೆ ಬಂತು, ನನ್ನ ನಿರೀಕ್ಷೆ, ಹತಾಶೆ, ಎಂದಾದರೂ ಗೆದ್ದೇನೆಂಬ ಆಸೆ-ಎಲ್ಲವೂ ಈ ಕಾದಂಬರಿಯಲ್ಲಿ ಪಾತ್ರಗಳಾಗಿ ಬಂದುಬಿಟ್ಟವು. ಮೂಲತಃ ಸ್ಪ್ಯಾನಿಶ್ ಬರಹಗಾರ, ನೊಬೆಲ್ ಪ್ರಶಸ್ತಿ ವಿಜೇತ ಗೇಬ್ರಿಯಲ್ ಗಾರ್ಸಿಯಾ ಮಾಕ್ರ್ವೆಜ್ನ ಕಾದಂಬರಿಯ ಪ್ರೇರಣೆಯ ಅಡಿಪಾಯದ ಮೇಲೆಯೇ ‘ಮಾಂಡೋವಿ’ ಬೆಳೆದು ನಿಂತಿದೆಯಾದರೂ, ಇದು ನನ್ನದೇ ಕೂಸು ಎಂಬಂತೆ ಮೂಡಿ ಬಂದ ಕಥಾನಕ.
Reviews
There are no reviews yet.