ಪಾಶ್ಚಾತ್ಯ ದೇಶಗಳಲ್ಲಿನ ಹಲವಾರು ಮೇಧಾವಿಗಳು ಝೆನ್ ‌ ನ ಮೂಲಕ ಪೌರ್ವಾತ್ಯ ಸಂಸ್ಕೃತಿಯ ಹೊಸ ನೋಟವನ್ನೇ ಕಂಡುಕೊಂಡಿದ್ದಾರೆ; ಪೌರ್ವಾತ್ಯರು ರೂಢಿಸಿಕೊಂಡ ವಿಶಿಷ್ಟ ಪ್ರವೃತ್ತಿಯನ್ನು ಅರಿತು ಮೆಚ್ಚಿಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಝೆನ್ ‌ , ಪೌರ್ವಾತ್ಯರಿಂದ ಆಮದು ಮಾಡಿಕೊಂಡ ಹೊಸ ಅಮಲು ಎನ್ನುವಂತೆ ಹುಚ್ಚು ಲಹರಿಯಾಗಿ ಹಬ್ಬಿಕೊಂಡಿದ್ದೂ ಉಂಟು.ಬೌದ್ಧ ಧರ್ಮದ ಹಲವು ಶಾಖೆಗಳು ಇಂಡಿಯಾದಿಂದ ಕ್ರಮೇಣ ಚೀನಾ-ಜಾಪಾನುಗಳಿಗೆ ವಲಸೆ ಹೋಗಿ ನಿಂತವು ಮತ್ತು ಅಲ್ಲಿ ಪುನಃ, ಶಾಖೆ-ಉಪಶಾಖೆಗಳಾಗಿ ವಿಂಗಡನೆಗೊಂಡು ಹಬ್ಬಿಕೊಂಡವು. ಅಂಥ ಶಾಖೆಗಳಲ್ಲಿ ಪ್ರಮುಖವಾದ್ದು ಮತ್ತು ಹೆಚ್ಚು ಸ್ಥಿರವಾಗಿ ಬಾಳಿಕೊಂಡು ಬಂದದ್ದು – ‘ ಝೆನ್ ‌’ ಎಂಬ ಬೌದ್ಧಪಂಥ. ಜಾಪಾನ್ ‌ ನಲ್ಲಿ ಅದು ಇವತ್ತಿಗೂ ಒಂದು ಪ್ರಮುಖ ಧರ್ಮವಾಗಿ ನೆಲೆಗೊಂಡಿದೆ.
‘ ಝೆನ್ ‌’ ಎನ್ನುವುದಕ್ಕೆ ಮೂಲ, ಸಂಸ್ಕೃತದ ಧ್ಯಾನ ಎನ್ನುವ ಪದ. ಅದು ಪಾಲಿಯಲ್ಲಿ ‘ ಝಾನ ‘ ಆಗಿ, ಅನಂತರ ಚೀನೀ ಭಾಷೆಯಲ್ಲಿ ‘ ಚಾನ್ ‌’ , ‘ ಚನ್ನಾ ‘ ಎಂಬ ರೂಪ ಪಡೆದುಕೊಂಡಿತು. ಅದೇ ಪುನಃ, ಜಾಪಾನಿ ಭಾಷೆಯಲ್ಲಿ ‘ ಜೆನ್ನಾ ‘, ‘ ಜೆಂಜೋ ‘ ಎಂದಾಗಿ, ಹ್ರಸ್ವಕ್ಕೆ ‘ ಝೆನ್ ‌’ ಎಂದು ಪರಿವರ್ತಿತಗೊಂಡಿತು.ಕ್ರಿ.ಪೂ. 2ನೇ ಶತಮಾನದ ಹೊತ್ತಿಗೇ ಬೌದ್ಧಧರ್ಮವು ಚೀನಾವನ್ನು ಪ್ರವೇಶಿಸಿತ್ತು ಎನ್ನುತ್ತಾರೆ. ಕ್ರಿಸ್ತನ ಕಾಲಕ್ಕಂತೂ ಅಲ್ಲಿ ಈ ಧರ್ಮ ಪ್ರಚುರಗೊಂಡಿತ್ತು ಎಂಬುದು ನಿಶ್ಚಿತ. ಹಾಗೇ, ಕ್ರಿ.ಶ. 6ನೇ ಶತಮಾನದ ಹೊತ್ತಿಗೆ ಬೌದ್ಧಧರ್ಮ ಜಾಪಾನ್ ದೇಶವನ್ನು ಪ್ರವೇಶಿಸಿತ್ತು. ಕ್ರಿ.ಶ. 401ರಲ್ಲಿ ಕುಮಾರ ಜೀವ ಎಂಬಾತ ಚೀನಾಕ್ಕೆ ಹೋಗಿ ಅಲ್ಲಿ ‘ ಮಹಾಯಾನ ‘ ದ ‘ ಮಾಧ್ಯಮಿಕ ಪಂಥ ‘ ವನ್ನು ಪ್ರವೇಶಗೊಳಿಸಿದ ಮತ್ತು ಕ್ರಿ.ಶ. 500ರ ಅನಂತರ, ಪರಮಾರ್ಥ ಎಂಬಾತ ಅಲ್ಲಿಗೆ ಹೋಗಿ ‘ ಮಹಾಯಾನ ‘ ದ ‘ ಯೋಗಾಚಾರ ಪಂಥ ‘ ವನ್ನು ಪ್ರಚುರಗೊಳಿಸಿದ. ಕ್ರಿ.ಶ. 520ರಲ್ಲಿ ಚೀನಾಕ್ಕೆ ಹೋದ ಬೋಧಿಧರ್ಮ ಎಂಬಾತ, ಅಲ್ಲಿ ಪ್ರಚಲಿತಗೊಳಿಸಿದ ‘ ಚಾನ್ ‌’ ಎಂಬ ಧರ್ಮಪಂಥವು ಮುಂದೆ ಜಾಪಾನೀಯರಿಗೂ ಪರಿಚಿತವಾಯ್ತು. 11ನೇ ಶತಮಾನದಲ್ಲಿ, ‘ ಝೆನ್ ‌’ ಎಂಬ ಹೆಸರಿನಿಂದ ಅದು ಜಾಪಾನಿನಲ್ಲಿ ಸ್ಥಿರವಾಗಿ ನೆಲೆಗೊಂಡಿತು.

Additional information

Author

Language

Kannada

Publisher

Reviews

There are no reviews yet.

Only logged in customers who have purchased this product may leave a review.