`ಒಂದನೇ ಇಶ್ಯೂ ಆಗೋತನಕ ಇಷ್ಟ ಒಂದ ಇಶ್ಯು’ ಅಂತ ಹೊಸ್ದಾಗಿ ಮದ್ವಿ ಆದವರಿಗೆ ಮನಿ ಮಂದಿ, ಬಳಗದವರ ಜೀವಾ ತಿನ್ನೋ ಪ್ರಹಸನದೊಂದಿಗೆ `ತಂಬಿಟ್ಟು’ ಶುರು ಆಗ್ತದ. ಮುಂದ ಒಂದ ಹಡದ ಕೈತೊಳ್ಕೊಂಡರ ಸುಮ್ಮನ ಬಿಡದ `ಈಗ ನಮಗ ಹಡಿ ಅಂದರ ಹಡಿಲಿಕ್ಕೆ ಆಗ್ತದೇನ್ವಾ’ ಇನ್ನೊಂದ ಆಗಿ ಬಿಡ್ಲಿ ಅನ್ನೊ ಅತ್ತಿ ಕಾಟ…ಹುಟ್ಟಿದ್ದ ಕೂಸಿಗೆ ಹೆಸರ ಇಡ್ಲಿಕ್ಕೆ ಸೋದರತ್ತಿ ಇಲ್ಲಾ ಅಂತ ನನ್ನ ಹೆಂಡ್ತಿ ಕರೆಯೋ ಪ್ರಸಂಗಗಳ ಪ್ರಹಸನ…..ಇತ್ತಲಾಗ ಕನ್ಯಾ ತೀರಿಹೋದ ನಮ್ಮ ಸಮಾಜದಾಗ ಡಿಜಿಟಲ್ ಇಂಡಿಯಾ ಅಂತ ಗೂಗಲನಾಗ ಕನ್ಯಾ ಹುಡ್ಕೋದು, ಇನ್ನ ಅಪರೂಪಕ್ಕ ಕನ್ಯಾ ಇದ್ದವರ ಫೇಸಬುಕ್ಕಿನಾಗ ತಮ್ಮ ಮಗಳ ಹೆಸರ ಹಚ್ಚಿ ಕುಂಡ್ಲಿ ಅಪಲೋಡ ಮಾಡಿ ಆಕ್ಶನ್ ಮಾಡೊ ಸಂಸಾರದ ಮೊದ್ಲನೇ ಘಟ್ಟದ ಪ್ರಹಸನಗಳು ಇದರ ಒಳಗ ಅವ.
ಸಂಸಾರದ, ಜೀವನದ ಕೊನೆಯ ಘಟ್ಟದೊಳಗ ಇವತ್ತ ವಯಸ್ಸಾದವರ ಪಡ್ತಾ ಇರೋ ಕಷ್ಟಗಳ ಬಗ್ಗೆ `ಪ್ರಾಣೇಶಚಾರರೂ ಕಡಿಕೂ ಪ್ರಾಣ ಬಿಟ್ಟರು’ ಅನ್ನೋ ಪ್ರಹಸನ…ವೃದ್ಧಾಶ್ರಮದಾಗ ಇರೋ ಅಪ್ಪನ್ನ ಯಾರ ಕರದರೂ ಕಳಸಬ್ಯಾಡ ಅನ್ನೊ ಪ್ರಹಸನ ನಮ್ಮ ಇವತ್ತಿನ ಮಾಡರ್ನ ಜಗತ್ತಿನೊಳಗ ನಾವ ನಮ್ಮ ವಯಸ್ಸಾದ ಅವ್ವಾ-ಅಪ್ಪನ ನೋಡ್ಕೊತಿರೊ ರೀತಿ, ಇದರ ಬಗ್ಗೆ ಇವತ್ತಿನ ಮಕ್ಕಳಿಗೆ ಸ್ವಲ್ಪ ಕಾಳಜಿ ಬರಲಿ ಅನ್ನೊ ದೃಷ್ಟಿಯಿಂದ ಬರದದ್ದ ಅವ.
ಕಾಶಿಗೆ ಹೋಗಿ ಗಂಡನ್ನ ಬಿಟ್ಟ ಬಂದ ಕಾಶಕ್ಕ, ಒಂದ ಕಾಲದಾಗ ಹಾನಗಲ ಒಳಗಿನ ಅಮ್ಮಗೋಳ ಪಟ್ಟ ವ್ಯಥೆ…ಹಿಂತಾ ಪ್ರಹಸನಗಳು ಇದರೊಳಗ ಅವ….
ಕಡಿಕೆ ಅಪ್ಪ ಸತ್ತಾಗ ಒಬೆಚುರಿನೂ ಟ್ರೆಂಡ್ ಆಗಲಿ ಅಂತ ನನ್ನಂತಾ ಹಾಸ್ಯ ಸಾಹಿತಿಗಳ ಕಡೆ ಒಬೆಚುರಿ (ನಿಧನ ವಾರ್ತೆ) ಬರಸೋ ಪ್ರಹಸನದೊಂದಿಗೆ ತಂಬಿಟ್ಟ ಮುಗಿತದ.
Reviews
There are no reviews yet.