‘ಪ್ರಯಾಗ’ ಎಂದರೆ ಹಿಂದಿಯಲ್ಲಿ ಸಂಗಮ ಎಂದರ್ಥ. ರುದ್ರ ಪ್ರಯಾಗದಲ್ಲಿ ಕೇದಾರನಾಥದಿಂದ ಮಂದಾಕಿನಿ ನದಿಯೂ ಬದರೀನಾಥದಿಂದ ಅಲಕಾನಂದಾ ನದಿಯೂ ಹರಿದುಬಂದು ಸಂಗಮವಾಗುತ್ತದೆ. ಇಲ್ಲಿಂದ ಮುಂದೆ ಸಮ್ಮಿಳನಗೊಂಡ ಈ ಎರಡು ನದಿಗಳ ನೀರೂ ಗಂಗಾನದಿಯೆಂದು ಹೆಸರಾಂತು ಮುಂದಕ್ಕೆ ಹರಿಯುತ್ತದೆ. ಹಿಂದೂಗಳು ಇದನ್ನು ಗಂಗಾಮಾಯಿ ಅಥವಾ ಗಂಗಾತಾಯಿ ಎಂದು ಭಕ್ತಿಯಿಂದ ಕರೆಯುತ್ತಾರೆ.
ಯಾವುದಾದರೂ ಪ್ರಾಣಿ, ಅದು ಹುಲಿಯಾಗಿರಲಿ ಚಿರತೆ ಯಾಗಿರಲಿ ಅಥವಾ ಸಿಂಹವಾಗಿರಲಿ, ಅದು ನರಭಕ್ಷಕನಾದರೆ ಅದಕ್ಕೆ ಆ ಸ್ಥಳದ ಹೆಸರು ಕೊಟ್ಟು ಕರೆಯುತ್ತಾರೆ. ಇದು ಕೇವಲ ಅದನ್ನು ಗುರುತಿಸುವ ಸೌಲಭ್ಯಕ್ಕಾಗಿಯೇ ಹೊರತು, ಆ ಪ್ರಾಣಿ ಆ ಜಾಗದಲ್ಲೇ ತನ್ನ ನರಭಕ್ಷಣೆಯನ್ನು ಪ್ರಾರಂಬಿಸಿತೆಂದಾಗಲಿ, ಅಥವಾ ತನ್ನ ನರಭಕ್ಷಣೆಯನ್ನು ಅದೊಂದೇ ಜಾಗಕ್ಕೆ
ಸೀಮಿತಗೊಳಿಸಿಕೊಂಡಿದೆಯೆಂದಾಗಲೀ ಅದರ ಅರ್ಥವಲ್ಲ. ರುದ್ರಪ್ರಯಾಗದಿಂದ ಕೇವಲ ಹನ್ನೆರಡು ಮೈಲು ದೂರದ ಚಿಕ್ಕ ಹಳ್ಳಿಯೊಂದರ ಬಳಿ ತನ್ನ ನರಭಕ್ಷಣೆ ಆರಂಭಿಸಿದ, ಮತ್ತು ರುದ್ರಪ್ರಯಾಗ ಹಾಗೂ ಕೇದಾರನಾಥ ಯಾತ್ರಾ ಮಾರ್ಗದ ಅನೇಕರನ್ನು ಕೊಂದು ತಿಂದ ಈ ಚಿರತೆ ರುದ್ರಪ್ರಯಾಗದ ನರ ಭಕ್ಷಕ ಎಂದು ಪ್ರಸಿದ್ಧವಾಗಿದ್ದು ಸಹಜವಾಗೇ ಆ ಕಾರಣಕ್ಕೆ. ಹುಲಿಗಳು ನರಭಕ್ಷಕಗಳಾಗುವ ಕಾರಣಗಳಿಗಾಗಿಯೇ ಚಿರತೆಗಳೂ ಆಗುವುದಿಲ್ಲ. ಚಿರತೆಗಳು ಭಾರತದ ಕಾಡುಗಳಲ್ಲಿನ ಅತಿ ಸುಂದರ ಪ್ರಾಣಿಗಳಲ್ಲಿ ಒಂದೆಂಬುದು ನಿಜವಾದರೂ, ಅತಿ ಧೈರ್ಯಶಾಲಿ ಮತ್ತು ಯುಕ್ತಿವಂತ ಪ್ರಾಣಿಯಾದರೂ, ಇದು ಬಹುಪಾಲು ತಂತಾನೇ ಸತ್ತ ಪ್ರಾಣಿಗಳನ್ನೂ, ಇತರ ಪ್ರಾಣಿಗಳು ತಿಂದು ಬಿಟ್ಟ ಉಚ್ಫಿಷ್ಠಗಳನ್ನೂ ತಿಂದು ಬದುಕುತ್ತದೆ. ಹಸಿವಾದಾಗ ಅದು ಸತ್ತ ಎಂಥದನ್ನೂ ಆಫ್ರಿಕಾದ ಸಿಂಹಗಳಂತೆ ತಿನ್ನುತ್ತದೆ. ಚಿರತೆಗೆ ಹುಲಿಗಳಂತೆ ತಮ್ಮ ಆಹಾರವನ್ನು ತಾವೇ ಕೊಂದು ತಿನ್ನಬೇಕೆಂಬ ನಿಯಮವಿಲ್ಲ.
Reviews
There are no reviews yet.