ಶ್ರೀ ಧೀರೇಂದ್ರ ಢಾಣಕಶಿರೂರ ಅವರ ‘ಕತೆಯೊಂದು ಕತೆ’ ಎಂಬ ಕತೆಗಳ ಸಂಕಲನವನ್ನು ಶರ್ವಿಲ್ ಪಬ್ಲಿಷರ್ಸ್ ಪ್ರಕಟನೆಯ ಮೊದಲ ಕೃತಿಯಾಗಿ ಹೊರತರಲು ಅತ್ಯಂತ ಸಂತೋಷವೆನಿಸುತ್ತದೆ. ಅವರು ಈ ಕತೆಗಳನ್ನು ಬರೆದು ಅನೇಕ ಸಮಯವಾದರೂ ತಮ್ಮ ಸಂಕೋಚದ ಸ್ವಭಾವದ ಮೂಲಕ ಹಾಗೇ ಇಟ್ಟುಕೊಂಡಿದ್ದರು. ಈಗ ಅದನ್ನು ಹೊರತರಲು ಅವರ ಮಕ್ಕಳ ಒತ್ತಾಸೆಯೇ ಕಾರಣ.
ಇವುಗಳಲ್ಲಿ ‘ಸಾಕ್ಷಿ’ ನನ್ನ ಮೊಟ್ಟ ಮೊದಲ ಬರಹ. ಅದು ಅಷ್ಟಷ್ಟೇ, ಅಷ್ಟಷ್ಟೇ ಆಗಿ ಹದಿನೈದು-ಇಪ್ಪತ್ತು ವರುಷ ಮೀರಿ ಬೆಳೆದಿದೆ. ನನಗೆ ಪ್ರಕಟಿಸಬೇಕೆಂಬ ಕುದಿ ಇಲ್ಲದ್ದರಿಂದ ಅದು ಹಾಗೇ ಬೆಳೆಯುತ್ತ ಇತ್ತು. ಸುಮಾರು ೨೦೦೦ದ ಇಸ್ವಿಯಲ್ಲಿ ಯಾವದೋ ಸಂದರ್ಭದಲ್ಲಿ ಅದನ್ನು ದಿ. ಕುರ್ತಕೋಟಿಯವರಿಗೆ ತೋರಿಸಿದೆ. ಚೆನ್ನಾಗಿ ಬಂದಿದೆ ಎಂದು ಹೇಳಿದರು. ಮೊದಲಿನ ಏಳು ಪುಟಗಳನ್ನು ತಿರುಗಿ ಬರೆಯಿರಿ ಎಂದು ಐಡಿಯಾ ಕೊಟ್ಟರು. ಬರೆದೆ. ಆಮೇಲೆ ಅವರಿಗೆ ತೋರಿಸುವದರಲ್ಲಿ ಅವರೇ ಇಲ್ಲವಾದರು. ದುರ್ದೈವ. ಆಮೇಲೆ ಪ್ರಕಟನೆಯ ವಿಚಾರ ಬಿಟ್ಟು ಬಿಟ್ಟೆ. ಇದೀಗ ನಮ್ಮ ಮಿತ್ರ ಡಾ. ರಮಾಕಾಂತ ಅವರು ಪ್ರಕಟನೆಗೆ ಸೂಚಿಸಿದ್ದಾರೆ. ನನಗೆ ಮಾತ್ರ ಈ ಕತೆಯ ಕಾಲ ಮೀರಿ ಹೋಗಿದೆ, ಯಾರೂ ಓದಲಿಕ್ಕೂ ಇಲ್ಲ ಎನಿಸುತ್ತದೆ. ಆದರೂ ಕೀರ್ತಿಯವರಿಗೆ ತೋರಿಸಿದ್ದು ಎಂದು ಪ್ರಕಟವಾಗಲಿ ಎನಿಸಿದೆ.
ಡಾ. ರೇಣೂಳ ತುಲ್ಪಾ ಇನ್ನೊಂದು ಕತೆ. ಇದು ನನಗೆ ಬಹಳ ತೃಪ್ತಿ ತಂದಿದೆ. ಈ ಕತೆಯಲ್ಲಿ ರೇಣೂಳ ಮೊಮ್ಮಗಳು ಬರುವವರೆಗೆ ತುಲ್ಪಾಳ ವಿಷಯ ನನ್ನ ಮನಸ್ಸಿನಲ್ಲಿರಲಿಲ್ಲ . ಆಮೇಲೆ ಮೊಮ್ಮಗಳು ತುಲ್ಪಾ ಆದರೆ ಒಳ್ಳೆಯದೆನಿಸಿ ಹಾಗೆ ಬರೆದು ಕತೆ ಬೆಳೆಸಿದೆ. ಹಾಗಿಲ್ಲದಿದ್ದರೆ ಇದು ಮತ್ತೆ ಒಂದು ಮೊಮ್ಮಗಳು, ಅಜ್ಜಿ, ಆಸ್ಟ್ರೇಲಿಯಾ ಹೀಗೆ ಕತೆ ಬೆಳೆಯುತ್ತಿತ್ತು. ಆಮೇಲೆ ಬಹುಶಃ ನಾನು ಅದನ್ನು ಹರಿದು ಹಾಕುತ್ತಿದ್ದೆ. ಓದುಗರಿಗೆ ಹೇಗೆನಿಸುವದೋ ನೋಡಬೇಕು.
ಇನ್ನೊಂದು ಕತೆ (‘ಸಿದ್ಧರ ಸಂಗತಿ’) ರುಸಿ, ಈ ಕತೆ ಸ್ವಲ್ಪ ವಿಚಿತ್ರ. ಆಗ ನನಗೆ ಎರಡು ಸಲ ಬೆಳಿಗ್ಗೆ ಏಳುವ ಮೊದಲು ‘ರುಸಿ ಬಂದನೆ?’ ಎಂಬ ವಾಕ್ಯ ಕೇಳಿಸುತ್ತಿತ್ತು. ಆಮೇಲೆ ನಾನು ರುಸಿಯನ್ನು ಹುಟ್ಟು ಹಾಕಿದೆ. ಕತೆ ಬರೆದೆ. ನನಗೆ ನಾನು ರುಸಿಯಂತಾಗ ಬೇಕೆನಿಸುತ್ತಿತ್ತು. ಹಾಗೆ ಆಗಲು ಯಾವ ಸಂದರ್ಭಗಳೂ ಕೂಡಿ ಬರಲಿಲ್ಲ. ಅದಕ್ಕೆ ಕತೆ ಬಂತು.
Reviews
There are no reviews yet.