ಕೆಲವು ದಿನಗಳ ಹಿಂದೆ ನನ್ನ ಇಬ್ಬರು ಕಿರಿಯ ಮಿತ್ರರು ನನ್ನಲ್ಲಿಗೆ ಬಂದವರು ಅದೂ ಇದೂ ಮಾತಾಡುತ್ತ ನನ್ನ’ಕಾಡಿನ ಕಥೆಗಳು’ ಪುಸ್ತಕದ ಬಗ್ಗೆಪ್ರಸ್ತಾಪಿಸಿ, ಆಂಡರ್ಸನ್ ‘ಮತ್ತು ಜಿಮ್ ಕಾರ್ಬೆಟ್ ಭಾರತದ ಕಾಡುಗಳ ಬಗ್ಗೆ ಹೇಳಿರುವುದೆಲ್ಲಾ ಸುಳ್ಳೆಂದೂ, ಅವು ಕೇವಲ ಪಾಶ್ಚಿಮಾತ್ಯ ಓದುಗರ ಮನರಂಜಿಸಲು ಬರೆದ ಕಟ್ಟುಕಥೆಗಳೆಂದೂ ಹೇಳಿದರು. ಕರ್ನಾಟಕ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಈ ಕುರಿತು ಹೀಗೆ ಹೇಳಿದ್ದೇ ಅವರಿಗೆ ಉಂಟಾಗಿದ್ದ ದುರಭಿಪ್ರಾಯಕ್ಕೆ ಕಾರಣ. ಹುಲಿಗಳು ನಿರ್ವಂಶವಾಗುವ ಅಪಾಯದಲ್ಲಿರುವುದರಿಂದ ಅವುಗಳನ್ನು ಸಂರಕ್ಷಿಸಮೆಕೆನ್ನುವ ಭರದಲ್ಲಿ ಆ ಅರಣ್ಯಾಧಿಕಾರಿ ನನ್ನ ಮಿತ್ರರಿಗೆ ಹುಲಿಗಳು ಅಪಾಯಕಾರಿಗಳೇ ಅಲ್ಲವೆಂದೂ, ಅವುಗಳು ಭೀಕರ ನರಭಕ್ಷಕಗಳೆಂದು ವರ್ಣಿಸಿರುವ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಇಬ್ಬರೂ ಸುಳ್ಳರೆಂದೂ ಹೇಳಿದ್ದರು. ಕೇವಲ ಐವತ್ತು ವರ್ಷಗಳಲ್ಲಿ ಕಾಡುಗಳೂ, ಕಾಡು ಪ್ರಾಣಿಗಳ ಪರಿಸ್ಥಿತಿಯೂ ಎಷ್ಟೊಂದು ಬದಲಾಗಿದೆಯೆಂದರೆ ಈ ಯುವ ಮಿತ್ರರಿಗೆ ಈ ಇಬ್ಬರು ಮಹಾನ್ ಬೇಟೆಗಾರರ ಅನುಭವಗಳು ಸತ್ಯಸ್ಯ ಸತ್ಯ ಎಂದು ನನಗೆ ಸ್ಪಷ್ಟವಾಗಿ ಗೊತ್ತಿದ್ದರೂ, ಅದನ್ನು ಮನದಟ್ಟು ಮಾಡಿಸಲು ಕಷ್ಟವಾಯ್ತು. ಕೊನೆಗೆ ಆಂಡರ್ಸನ್ ಮತ್ತು ಕಾರ್ಬೆಟ್ ಅನುಭವಗಳಿರಲಿ, ನಾನೇ ಸಾಕ್ಷಾತ್ತಾಗಿ ನನ್ನ ಚಿಕ್ಕಂದಿನಲ್ಲಿ ಕಂಡದ್ದನ್ನು ಸಹ ಅವರಿಗೆ ತಿಳಿಸಲು ಅಸಾಧ್ಯವೆಂದು ಕಂಡುಕೊಂಡೆ. ಏಕೆಂದರೆ ಉದಾಹರಣೆಗೆ ಈ ಪುಸ್ತಕದಲ್ಲಿ ಹೇಳಿರುವ ಲಕ್ಕವಳ್ಳಿಯ ಹೆಬ್ಬುಲಿಯ ಕಥೆ ನಮ್ಮೂರಿಗೆ ತೀರಾ ಹತ್ತಿರದ್ದು. ನಾನು ಚಿಕ್ಕಂದಿನಲ್ಲಿ ಪ್ರಪುಲ್ಲ, ಪುರುಷೋತ್ತಮ ಮುಂತಾದವರ ಜೊತೆ ಶಿಕಾರಿ ತಿರುಗುತ್ತಿದ್ದಾಗ ಈ ದಾರಿಯಲ್ಲಿ ಶಿವಮೊಗ್ಗಾದಿಂದ ಲಕ್ಕವಳ್ಳಿಯವರೆಗೂ ಭೀಕರವಾದ ಕಾಡು ಇತ್ತು. ಆ ಕಾಡಿನಲ್ಲಿ ಅನೇಕಸಾರಿ ಹುಲಿಗಳನ್ನು ನಾವು ನೋಡಿದ್ದೆವು. ಆ ಹೆಬ್ಬುಲಿಗಳ ಮೇಲೆ ಕೋವಿಯೆತ್ತಲು ಧೈರ್ಯ ಸಾಲದೆ ಅದು ಸಾಗಿ ಹೋಗುವವರೆಗೂ ಅವಿತು ಕುಳಿತು ಪರಾರಿಯಾಗಿದ್ದಕ್ಕೆ ಲೆಕ್ಕವಿಲ್ಲ. ಇದೇ ಉಮ್ಳೆಬೈಲು ರಸ್ತೆಯಲ್ಲಿ ಲಕ್ಕವಳ್ಳಿ ಉಮ್ಳೆಬೈಲು ಕ್ರಾಸಿನ ಹತ್ತಿರ ಭಯಂಕರ ಕಾಡಿತ್ತು. ಕ್ರಾಸಿಗಿಂತ ಕೊಂಚ ಮುಂಚಿ ಇದ್ದ ದಟ್ಟ ಬಿದಿರು ಕಾಡಿನ ಮಧ್ಯೆ ನಮ್ಮ ಮಾವನವರ ಬಟ್ಟೆಟಾಪಿನ ಫೋರ್ಡ್ ಕಾರನ್ನು ಹೆಬ್ಬುಲಿ ಅಡ್ಡಹಾಕಿ, ಕಾರಲ್ಲಿದ್ದ ಹೆಂಗಸರು ಮಕ್ಕಳೆಲ್ಲ ಚಿಟ್ಟನೆ ಚೀರಿದ್ದೂ, ಬಾಯಿ ಕಳೆದು ಘರ್ಜಿಸಿದ ಹುಲಿಗೆ ನಮ್ಮ ಮಾವ ಗುಂಡು ಹಾರಿಸಿದ್ದೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ಇದನ್ನಾದರೂ ತೋರಿಸಿ ಸಾಬೀತು ಮಾಡೋಣೆಂದು ನಮ್ಮ ಮಿತ್ರರನ್ನು ಕರೆದೊಯ್ದರೆ ಕಾಡು ಎಲ್ಲಿದೆ ಅಲ್ಲಿ? ತರೀಕೆರೆಯಿಂದ ಲಕವಳ್ಳಿಗೆ ಹೋಗುತ್ತ ನಡುವೆ ಎಲ್ಲೋ ಕೊಂಚ ಕೃಷಿ ಯೋಗ್ಯವಲ್ಲದ ಜಾಗದಲ್ಲಷ್ಟು ಕುರುಚಲು ಕಾಡಿತ್ತು. ಉಮ್ಳೆಬೈಲ್ ಕ್ರಾಸಿನಿಂದ ಶಿವಮೊಗ್ಗದವರೆಗಿದ್ದ ಕಾಡಂತೂ ಹೇಳ ಹೆಸರಿಲ್ಲದಂತೆ ನಿರ್ನಾಮವಾಗಿದೆ! ಕಣ್ಣು ಕಾಣುವವರೆಗೂ ಹೊಲ, ಗದ್ದೆ, ಮನೆಗಳು! ಕಾಡಿರಲಿ ಇಲ್ಲದಿರಲಿ ನಾವು ಭಯಂಕರ ಕಾಡು ಹಂದಿಗಳನ್ನು ಹೊಡೆದ ಜಾಗ, ಹುಲಿಗಳನ್ನು ಸಂಧಿಸಿ ಪರಾರಿ ಕಿತ್ತ ಜಾಗ, ಕೊನೆಯಪಕ್ಷ ನಮ್ಮ ಮಾವ ಹುಲಿ ಹೊಡೆದ ಜಾಗವನ್ನಾದರೂ ಪತ್ತೆ ಹಚ್ಚಿ ತೋರಿಸಿಯೇ ತೋರಿಸುತ್ತೇನೆಂದು ಹೋದೆ. ಆ ಕಾಡು, ಏರು ತಗ್ಗುಗಳು, ಕೊನೆಗೆ ಗುಡ್ದಬೆಟ್ಟಗಳು ಸಹ ಮಾಯವಾದಂತೆನಿಸಿತು.
-4%
Ebook
ಕಾಡಿನ ಕಥೆಗಳು -ಭಾಗ ೨ ಪೆದ್ದಚೆರುವಿನ ರಾಕ್ಷಸ
Author: K P Poornachandra Tejasvi
₹75.00 Original price was: ₹75.00.₹72.00Current price is: ₹72.00.
About this Ebook
Information
Additional information
Author | |
---|---|
Publisher | |
Category | |
Language | Kannada |
Book Format | Ebook |
Reviews
Only logged in customers who have purchased this product may leave a review.
Reviews
There are no reviews yet.