ಬೆಳ್ಳಂದೂರು ಒಂದು ಗುಡ್ಡದ ತಪ್ಪಲಿನಲ್ಲಿ, ತ್ಯಾಗರ್ಥಿ ಎನ್ನುವ ಚಿಕ್ಕ ಊರಿನಿಂದ ಸುಮಾರು ಮೂರು ಮೈಲು ದೂರದಲ್ಲಿರುವ, ಮೈಸೂರು ಸಂಸ್ಥಾನದ ಶಿವಮೊಗ್ಗಾ ಜಿಲ್ಲೆಯ ಒಂದು ಚಿಕ್ಕ ಹಳ್ಳಿ.
ಅನೇಕ ಶತಮಾನಗಳಿಂದ ಮೈಸೂರು ಸಂಸ್ಥಾನದ ಈ ಜಿಲ್ಲೆ ಭಯಾನಕ ಹುಲಿಗಳ ತವರುಮನೆ ಎಂದು ಹೆಸರುವಾಸಿಯಾಗಿತ್ತು. ಇಲ್ಲಿನ ಕಾಡುಗಳಲ್ಲಿ ಹುಲಿಗಳು ಎಷ್ಟೊಂದು ಅಗಣಿತವಾಗಿದ್ದುವೆಂದರೆ ಇದರಿಂದಾಗಿಯೇ ಇಲ್ಲಿ ಚಿರತೆಗಳು ತುಂಬಾ ಕಡಿಮೆಯಾಗಿದ್ದುವು. ಬಹುಶಃ ಈ ಹುಲಿಗಳು ಚಿರತೆಗಳನ್ನು ಹಿಡಿದು ಕೊಂದೋ ತಿಂದೋ ಖಾಲಿ ಮಾಡಿದ್ದುವೆಂದು ನನಗೆ ತೋರುತ್ತದೆ. ಚಿರತೆಗಳು ಹುಲಿಗಳಿಗಿಂತ ಹೆಚ್ಚು ಕುತಂತ್ರಿಗಳು, ಅಪಾರ ಬುದ್ಧಿಯುಳ್ಳವು. ಚಿರತೆಗಳು ಪೊದೆಗಳೆಡೆಯಲ್ಲಿ ಅಡಗಿ ಕುಳಿತು ಊರಿನ ಜನಗಳ ಕುರಿ ಮೇಕೆ, ನಾಯಿಗಳನ್ನು, ಮುಖ್ಯವಾಗಿ ನಾಯಿಗಳನ್ನು ಮಿಂಚಿನ ವೇಗದಲ್ಲಿ ಹಿಡಿದು ಹೊತ್ತೊಯ್ಯದರಲ್ಲಿ ಅವು ತೋರಿಸುವ ಕೌಶಲ್ಯ ಹುಲಿಗಳಿಗೆ ಎಂದೂ ಬರುವುದಿಲ್ಲ. ಆದರೆ ಹುಲಿಗಳ ಸಂಖ್ಯಾ ಬಾಹುಳ್ಯದಿಂದ ಇಲ್ಲಿ ಚಿರತೆಗಳು ಕ್ಷೀಣಿಸಿದ್ದುವು.
ಸಾಮಾನ್ಯವಾಗಿ ಚಿರತೆಗಳು ಮನುಷ್ಯರ ತಂಟೆಗೆ ಬರುವುದಿಲ್ಲ. ಆದರೆ ಒಮ್ಮೊಮ್ಮೆ ದುರ್ದೈವವಶಾತ್ ಇವು ನರಮಾಂಸದ ರುಚಿ ಹಿಡಿದು ನರಭಕ್ಷಕಗಳಾದರೆ ಇವುಗಳ ಬುದ್ಧಿವಂತಿಕೆ ಮತ್ತು ಕುತಂತ್ರದ ದೆಸೆಯಿಂದ ಶಿಕಾರಿ ಮಾಡಿ ಸಂಹರಿಸುವುದು ತುಂಬಾ ಕಷ್ಟವಾಗುತ್ತದೆ. ಅದೂ ಮಲೆನಾಡಿನ ಬೆಳ್ಳಂದೂರಿನ ಸುತ್ತ ಇರುವ ದಟ್ಟಡವಿಗಳಲ್ಲಂತೂ ಕಡುಕಷ್ಟವೆನ್ನಬಹುದು.
ನನ್ನ ಕತೆ ಪ್ರಾರಂಭವಾಗುವುದಕ್ಕೆ ಮೊದಲೇ ಈ ಕಾಡುಗಳಲ್ಲಿ ಹುಲಿಯ ಆಳ್ವಿಕೆ ಪ್ರಾರಂಭವಾಗಿ ಚಿರತೆಗಳು ಅವನತಿಯ ಹಾದಿ ಹಿಡಿದಿದ್ದುವು.
Reviews
There are no reviews yet.