ಕೆನೆತ್‌ ಆಂಡರ್ಸನ್‌ರ ಕಥೆಗಳನ್ನು ನಾವು ಕೇವಲ ಶಿಕಾರಿಯ ಅನುಭವಗಳೆಂದು ಮಾತ್ರ ಓದಿದರೆ ಬಹು ದೊಡ್ಡ ತಪ್ಪು ಮಾಡಿದಂತೆ. ಏಕೆಂದರೆ ಈ ಪುಸ್ತಕದ ಮೂರು ಕಥೆಗಳಲ್ಲೂ ಅವರು ಚಿತ್ರಿಸಿರುವ ಪಾತ್ರಗಳು, ಸಾಮಾಜಿಕ ಚಿತ್ರಣ ಮುಂತಾದವುಗಳು ನಮ್ಮ ಕಾಲದ ಯಾವ ಶೇಷ್ಠ ಸಾಹಿತ್ಯಕ್ಕೂ ಕಿಂಚಿತ್ತೂ ಕಡಮೆ ಇಲ್ಲದವು ಎಂಬುದನ್ನು ಇಲ್ಲಿ ನೋಡಬಹುದು. ಅಷ್ಟಲ್ಲದೆ ಒಬ್ಬ ಸೃಷ್ಟಿಶೀಲ ಲೇಖಕನಿಗೆ ಇರಬೇಕಾದ ಸಾಮಾಜಿಕ ಕಳಕಳಿ, ವಿಮರ್ಶಾತ್ಮಕ ದೃಷ್ಟಿ, ಪ್ರತಿಯೊಂದೂ ಕೆನೆತ್‌ ಆಂಡರ್ಸನ್ನರ ಅನುಭವಗಳಲ್ಲಿ ಹೇರಳವಾಗಿರುವುದರಿಂದ ಈ ಕಥೆಗಳನ್ನು ವಾಸ್ತವ ಜೀವನದ ಸಾಹಸಗಳಂತೆ ನೋಡದೆ ಕಲಾಕೃತಿಗಳೆಂದೇ ನೋಡಬಹುದು. ಯೂರೋಪಿಯನ್ನನಾದರೂ ಭಾರತೀಯನಿಗಿಂತ ಹೆಚ್ಚಾಗಿ ಭಾರತವನ್ನು ಪ್ರೀತಿಸಿದ ಆಂಡರ್ಸನ್ನರ ಪ್ರತಿಭೆ ‘ಅಲೀಮ್‌ ಖಾನ್‌’ ‘ಬೈರ’ ಮುಂತಾದ ಪಾತ್ರಗಳನ್ನು ಚಿತ್ರಿಸಿರುವ ಆತ್ಮೀಯತೆಯಲ್ಲೇ ಸುವ್ಯಕ್ತವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಯೂರೋಪಿಯನ್‌ ದೊರೆ ಇಲ್ಲಿನ ಕಳ್ಳಕಾಕರು, ಖದೀಮರು, ಮೂರ್ಖರು, ಮುಠ್ಠಾಳರು, ಇವರೆಲ್ಲರೊಂದಿಗೆ ಮಿಳಿತವಾಗಿ ಅವರೊಳಹೊಕ್ಕು ಅವರ ಆಂತರ್ಯವನ್ನೇ ಅರಿತು ಚಿತ್ರಿಸುವುದು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಜಾತಿಗಳ, ಧರ್ಮಗಳ ಬೇಲಿಗಳನ್ನು ನಿರ್ಮಿಸಿಕೊಂಡು ಒಬ್ಬರಿಗೊಬ್ಬರು ಅಗಮ್ಯವಾಗಿದ್ದ ಸಾಮಾಜಿಕ ಪರಿಸರ ಒಂದರಲ್ಲಿ ಈ ಎಲ್ಲರ ಒಳಹೊಕ್ಕು ನೋಡಲು ಆಂಡರ್ಸನ್ನರಿಗೆ ರಹದಾರಿ ದೊರೆತಿದ್ದು ಕಾಡು ಮತ್ತು ಶಿಕಾರಿಗಳಿಂದ. ಆದ್ದರಿಂದ ಅವರು ಬರೆದದ್ದು ಕಾಡಿನ ಕಥೆಗಳಾದರೂ ಅವುಗಳಲ್ಲಿ ಅವರ ಕಾಲದ ಅತ್ಯಂತ ಕೆಳವರ್ಗದ ನೋಟ ಒಂದು ನಮಗೆ ನಿರಾಯಾಸವಾಗಿ ದೊರೆಯುತ್ತದೆ. ಸಮಾಜ ಶಾಸ್ತ್ರಜ್ಞನಂತಾಗಲಿ, ಸುಧಾರಕನಂತಾಗಲೀ ಎಂದೂ ನೋಡದೆ ಭಾರತವನ್ನು ಅವರೊಳಗೊಬ್ಬನಾಗಿ ಚಿತ್ರಿಸಿರುವುದರಿಂದಲೇ ಈ ಕಥೆಗಳು ಶ್ರೇಷ್ಠ ಕಲಾಕೃತಿಗಳ ಮಟ್ಟಕ್ಕೇರುತ್ತವೆ.

Additional information

Author

Publisher

Category

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.