ಸಮಕಾಲೀನ ಕನ್ನಡ ಲೇಖಕರಲ್ಲಿ ಪ್ರಸಿದ್ಧರಾಗಿರುವ ವಿವೇಕ ಶಾನಬಾಗ ಅವರು ಕಳೆದ ಕೆಲವು ವರ್ಷಗಳಲ್ಲಿ ರಚಿಸಿದ ೬ ಕಥೆಗಳು ಈ ಸಂಕಲನದಲ್ಲಿ ಕೂಡಿವೆ. ಘಾಚರ್ ಘೋಚರ್, ನಿರ್ವಾಣ, ಕೋಳಿ ಕೇಳಿ ಮಸಾಲೆ, ರಿಸ್ಕ್ ತಗೊಂಡು, ಸುಧೀರನ ತಾಯಿ, ವಿಚಿತ್ರ ಕತೆ – ಇವು ಈ ಸಂಕಲನದಲ್ಲಿರುವ ವಿವೇಕರ ಕಥೆಗಳು.
ಪುಸ್ತಕದ ಬೆನ್ನುಡಿಯು ಈ ಸಂಕಲನದ ಎರಡು ಕತೆಗಳಿಂದ ಕೆಲವು ಸಾಲುಗಳನ್ನು ಎತ್ತಿಕೊಟ್ಟಿದೆ:
ಹಾಗೆ ನೋಡಿದರೆ ಅವತಾರವೆತ್ತಿ ಬಂದವರು ದೊಡ್ಡ ದೊಡ್ಡ ಮಾತುಗಳನ್ನು ಆಡುವುದೇ ಇಲ್ಲ. ಅವರ ಸಾಮಾನ್ಯ ಮಾತುಗಳಿಗೇ ದೊಡ್ಡ ದೊಡ್ಡ ಅರ್ಥಗಳನ್ನು ಪಾಮರರು ಗ್ರಹಿಸುವುದಲ್ಲವೆ? ಶಬ್ದಗಳ ಶಕ್ತಿ ಸ್ಫೋಟವಾಗೋದು ಅವು ಹೊಕ್ಕ ಮನಸ್ಸಿನಲ್ಲಿಯೇ ತಾನೇ? ಅಷ್ಟಕ್ಕೂ ದೇವರು ಯಾವ ರೂಪದಲ್ಲಿ ಬರುತ್ತಾನೆಂದು ಬಲ್ಲವರಾರು?
(‘ಘಾಚರ್ ಘೋಚರ್’ ಕತೆಯಿಂದ)
ಬೇರೆ ಎಲ್ಲಿದ್ದರೂ ನಾವು ಮಾತಾಡುತ್ತಿರಲಿಲ್ಲ. ಒಬ್ಬರನ್ನೊಬ್ಬರು ನೋಡದ ಹಾಗೆ ಹೋಗಿಬಿಡುತ್ತಿದ್ದೆವು ಅಂತಲೂ ಅನಿಸುತ್ತದೆ. ಆ ಸಂಜೆ, ಆ ಹಸಿವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆ ಪರದೇಶ – ಇದೆಲ್ಲ ಇಲ್ಲದಿದ್ದರೆ ಈ ಭೆಟ್ಟಿ ಆಗುತ್ತಲೇ ಇರಲಿಲ್ಲ. ಸಂಯೋಗ ಅಂದರೆ ಹಾಗೇ. ಎಲ್ಲವೂ ಏಕತ್ರ ಸಂಭವಿಸಬೇಕು.
(‘ನಿರ್ವಾಣ’ ಕತೆಯಿಂದ)
ಕನ್ನಡದಲ್ಲಿ ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ಪ್ರಕಟವಾಗಿರುವ ಮಹತ್ವದ ಕಾದಂಬರಿಗಳಲ್ಲೊಂದು ಘಾಚರ್ ಘೋಚರ್. ಆಧುನಿಕ ಬೆಂಗಳೂರು ನಗರದ ಜೀವನವನ್ನು ಎತ್ತಿಕೊಂಡು ಇಷ್ಟೊಂದು ಸಂವೇದನಾಶೀಲವಾಗಿ, ಸೂಕ್ಷ್ಮವಾಗಿ, ಹೃದಯಂಗಮವಾಗಿ ವಿವೇಚಿಸುವ ಇನ್ನೊಂದು ಕಾದಂಬರಿ ನಮ್ಮಲ್ಲಿ ಬಂದಿಲ್ಲ.
-ಗಿರೀಶ ಕಾರ್ನಾಡ
ಧ್ಯಾನಿಸಿ ಬರೆದ ಕತೆಯೊಂದು ಹೇಗೆ ಒಳನೋಟಗಳನ್ನೂ ಅನುಭವವನ್ನೂ ಒಂದಿಡೀ ತಲೆಮಾರಿನ ತಲ್ಲಣವನ್ನೂ ಹಿಡಿದಿಟ್ಟುಕೊಂಡಿರುತ್ತದೆ ಎಂಬುದು ಕುತೂಹಲಕಾರಿ. ಘಾಚರ್ ಘೋಚರ್ ಅಂಥದ್ದೊಂದು ಕತೆ.
-ಜೋಗಿ
`ಘಾಚರ್ ಘೋಚರ್’ ಕಥೆಯಲ್ಲಿ ಕಥೆ ನಿಜವಾಗಿಯೂ ಮುಗಿದಿಲ್ಲ ಅಂತನ್ನಿಸುವುದು, ಆ ದಾರಿಗೆ ಇರಬಹುದಾದ ಹಲವು ಸಾಧ್ಯತೆಗಳ ಕಾರಣದಿಂದಾಗಿ.
-ವೆಂಕಟ್ರಮಣ ಗೌಡ
ಕೇವಲ ಸಾಂಸಾರಿಕ ರಗಳೆ ಅಥವಾ ಗೋಳುಕರೆಯಾಗಬಹುದಾಗಿದ್ದ ಕಥನವೊಂದು ಮನುಷ್ಯ ಸ್ವಭಾವ ಮತ್ತು ವರ್ತನೆಗಳ ಹಿಂದಿನ ನಿಗೂಢತೆಗೆ ಹಿಡಿದ ಕನ್ನಡಿಯಾಗಿ ಬಿಡುತ್ತದೆ; ಗ್ರಹಿಕೆ ಮತ್ತು ಅಭಿವ್ಯಕ್ತಿಗಳ ಸಾಧ್ಯತೆ ಮತ್ತು ಕಷ್ಟಗಳ ಬಗೆಗಿನ ಧ್ಯಾನವಾಗಿ ಬಿಡುತ್ತದೆ.
-ಟಿ.ಪಿ. ಅಶೋಕ
ಈ ಯುಗಳ ಪದ ನಮ್ಮ ಇಡೀ ಬದುಕೇ ಗೋಜಲಾಗಿರುವ ಕ್ರಮಕ್ಕೆ ಭಾವ ಪ್ರತಿಧ್ವನಿಯಂತೆ ಅನುರಣನಗೊಳ್ಳುತ್ತದೆ.
-ಎಸ್. ಆರ್. ವಿಜಯಶಂಕರ
Reviews
There are no reviews yet.