ವ್ಯಾಪಾರೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ ಶಿಕ್ಷಣವೂ ತೀರಾ ಯಾಂತ್ರಿಕವಾಗುತ್ತಿದೆ. ಶಿಕ್ಷಣವೆಂಬುದು ಕೇವಲ ಪಠ್ಯಪುಸ್ತಕ, ಪರೀಕ್ಷೆ ಮತ್ತು ಎಲ್ಲವನ್ನೂ ಉರು ಹೊಡೆದು ಗಳಿಸುವ ಅಂಕಗಳಿಗೆ ಸೀಮಿತವಾಗುತ್ತಿದೆ. ಅಧ್ಯಾಪಕರೂ ಸಹ ತರಗತಿಯಲ್ಲಿ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಹತ್ವ ಕೊಟ್ಟು ಇನ್ನಿತರ ವಿಷಯಗಳಲ್ಲಿ ಸಾಧನೆ ಮಾಡುವವರನ್ನು ಕಡೆಗಣಿಸುವ ಸಂಕುಚಿತ ಪ್ರವೃತ್ತಿ ಬೆಳೆಯುತ್ತಿದೆ. ವಾಸ್ತವ ಏನೆಂದರೆ ಶಾಲೆಯಲ್ಲಿ ಮಕ್ಕಳು ಪಡೆಯುವ ಶಿಕ್ಷಣವು ಅವರ ವ್ಯಕ್ತಿತ್ವವನ್ನು ಬೆಳೆಸುವಂತಿರಬೇಕು. ಜೀವನ ಮೌಲ್ಯಗಳನ್ನು ಕಲಿಸುವಂತಿರಬೇಕು ಮತ್ತು ಅಕ್ಕ ಪಕ್ಕದವರೊಂದಿಗೆ ಸ್ನೇಹ ಸಂಬಂಧಗಳನ್ನು ಬೆಳೆಸುವ ಅಗತ್ಯವನ್ನು ಅವರಿಗೆ ಮನವರಿಕೆ
ಮಾಡುವಂತಿರಬೇಕು. ಇದರ ಪರಿವೆಯಿಲ್ಲದೆ ಅಧ್ಯಾಪಕರೇ ತಾರತಮ್ಯ ಧೋರಣೆಯನ್ನು ಬೆಳೆಸಿಕೊಂಡರೆ ಅದರ ಪಾರ್ಶ್ವ ಪರಿಣಾಮಗಳನ್ನು ಎಲ್ಲರೂ ಅನುಭವಿಸಬೇಕಾಗಿ ಬರಬಹುದು. ಈ ಅಪಾಯದತ್ತ ನಾವು ಗಮನ ಹರಿಸಬೇಕು ಎಂಬ ದೃಷ್ಟಿ ಈ ನಾಟಕದಲ್ಲಿದೆ.
ಆತ್ಮೋನ್ನತಿಗಾಗಿ ಹುಟ್ಟಿಕೊಂಡ ಧರ್ಮವು ಮನುಷ್ಯನ ಸ್ವಾರ್ಥ ರಾಜಕಾರಣದಿಂದಾಗಿ ಯಾವ ಮಟ್ಟವನ್ನು ತಲುಪಿದೆ ಎಂಬುದನ್ನು ನಾವೆಲ್ಲ ಈಗಾಗಲೇ ನೋಡಿದ್ದೇವೆ. ದೇವರು ಒಬ್ಬನೇ, ನಾಮ ಹಲವು, ಧರ್ಮವೆಂದರೆ ಮನುಷ್ಯ ಧರ್ಮ ಮಾತ್ರ ಎಂಬೆಲ್ಲ ದೊಡ್ಡ ದೊಡ್ಡ ಮಾತುಗಳನ್ನು ಹೇಳುತ್ತಲೆ ಇವತ್ತು ಸಮಾಜ ಧರ್ಮದ ಹೆಸರಿನಲ್ಲಿ ಛಿದ್ರಗೊಳ್ಳುತ್ತಿದೆ. ಸಮಾಜವನ್ನು ಒಡೆಯುವ ಬೆರಳೆಣಿಕೆಯ ಸ್ವಾರ್ಥಸಾಧಕರಿಂದ ಮುಗ್ಧ
ಮಂದಿ ಮೋಸ ಹೋಗಬಾರದು, ಎಲ್ಲರನ್ನೂ ಸಮಾನವಾಗಿ ಪ್ರೀತಿಸಲು ಕಲಿಯಬೇಕು ಎಂದು ಈ ನಾಟಕ ಹೇಳ ಬಯಸುತ್ತದೆ.
Reviews
There are no reviews yet.