Ebook

ಸಮ್ಮುಖದಲ್ಲಿ ಸ್ವಗತ

Author: Akshara K V

90.00

ಕನ್ನಡ ಸಾಹಿತ್ಯಲೋಕಕ್ಕೆ ಈ ಕಾಲದಲ್ಲಿ ಪ್ರವೇಶಿಸಿರುವ ಗಟ್ಟಿಗರಲ್ಲಿ ಅಕ್ಷರ ಒಬ್ಬರು ಎಂಬುದನ್ನು ಅವರ ನಾಟಕಗಳಲ್ಲಿ, ನಾಟಕದ ಪ್ರಯೋಗಗಳಲ್ಲಿ, ನಾಟಕದ ಬಗ್ಗೆ ಅವರು ಬರೆದ ಗ್ರಂಥಗಳಲ್ಲಿ ಕಂಡಿರುವ ನನಗೆ, ಈ ಲೇಖನಗಳಲ್ಲಿನ ಸಮಕಾಲೀನವಾದ ಅವರ ಚಿಂತನಶೀಲ ಗುಣವನ್ನು ಕಂಡು ಕನ್ನಡದ ಭವಿಷ್ಯದ ಬಗ್ಗೆ ಭರವಸೆ ಮೂಡಿದೆ. (ಹೀಗೆ ಬರೆಯುವಾಗ ನನಗೆ ಮುಜುಗರವಾಗುತ್ತದೆ. ಯಾಕೆಂದರೆ ಅಕ್ಷರನನ್ನು ಸಣ್ಣ ಹುಡುಗನಾಗಿದ್ದಾಗಿನಿಂದ ನೋಡಿರುವ ನನಗೆ ಪ್ರಶಂಸೆ ಕಷ್ಟವಾದದ್ದು, ಬಹುವಚನದಲ್ಲಿ ಅಕ್ಷರನ ಬಗ್ಗೆ ಮಾತಾಡುವುದು ಇನ್ನೂ ಕಷ್ಟವಾದದ್ದು).ಇದೊಂದು ರೀತಿಯ ಆಧುನಿಕ ‘ಸ್ಯಾದ್ವಾದ’. ಜೈನರು ಬಳಸುವ ಶ್ರೀಮಂತವಾದ ಈ ಪದವನ್ನು ‘ಪೋಸ್ಟ್‌ಮಾಡರ್ನ್‌’ ಜನಾಂಗದ ಚಿಂತನಾಕ್ರಮಕ್ಕೆ ಕ್ಷಮೆಕೋರಿ ಬಳಸುತ್ತಿದ್ದೇನೆ. ಈ ವಾದದವರಿಗೆ ಯಾವುದೂ ನಿತ್ಯಸತ್ಯವಲ್ಲವಾದರೂ, ತಮ್ಮದು ಮಾತ್ರ ನಿತ್ಯಸತ್ಯ ಎಂಬ ಭ್ರಮೆ ಇರಬಹುದೇನೋ ಎಂದು ನನಗೆ ಗುಮಾನಿ. ದುಷ್ಟರು ಜಯಗಳಿಸಿದರೆ, ನಮ್ಮ ‘ಸ್ಯಾದ್ವಾದಿ’ಗಳು ಇದೂ ಇನ್ನೊಂದು ಬಗೆಯ ‘ಕಟ್ಟಿಕೊಂಡಿರುವ’ ಸತ್ಯವೆಂದು ಹುಷಾರಾಗಿ ಒಪ್ಪಿಕೊಂಡುಬಿಡಬಹುದು. ಬಹುರಾಷ್ಟ್ರೀಯ ಕಂಪನಿಗಳ ಜಾಗತೀಕರಣವನ್ನು ಒಪ್ಪಿಕೊಂಡವರು ಏನನ್ನಾದರೂ ಸಕಾರಣವಾಗಿಯೇ ಒಪ್ಪಿಕೊಂಡಾರು.
ನಾನು ಬರೆಯಲು ಪ್ರಾರಂಭಿಸಿದ ದಿನಗಳಲ್ಲಿ ಲೋಹಿಯಾರ ಮಾತು ನನಗೆ ಬಹಳ ಮುಖ್ಯವಾಗಿತ್ತು. ಸತ್ಯ ಬಹುಮುಖೀ ಎನ್ನುವುದು ಹೌದು; ಆದರೆ ಅದರ ಬಹುಮುಖೀ ಗುಣದ ಔದಾರ್ಯಕ್ಕೆ ಅಪಚಾರವಾದರೂ ಸರಿಯೇ – ಏನೂ ಊರಿಕೊಳ್ಳದ ಈ ಕೆಸರು ಜೌಗಿನಲ್ಲಿ ಒಂದು ಅತಿಗೆ ಹೋಗಿಯಾದರೂ, ನನಗೆ ತ್ರಿಕರಣಶುದ್ಧಿಯಲ್ಲಿ ಕಂಡ ಸತ್ಯವನ್ನು ಆಳವಾಗಿ ಊರುವಂತೆ ಹಠ ಮಾಡಬೇಕು – ಎಂದು ಲೋಹಿಯಾ ತಿಳಿದಿದ್ದರು. ಅರವತ್ತರ ದಶಕದಲ್ಲಿ ಬೆಳೆದಿದ್ದ ನಮ್ಮ ಮನಸ್ಸು ಈ ಬಗೆಯ ತೀವ್ರತೆಯನ್ನು ಪಡೆದಿತ್ತು.
ಹೊಸಕಾಲದ ಅಕ್ಷರನಿಗೆ ‘ಕೂಲ್‌’ ಆಗಿ ಯೋಚಿಸುವುದು ಸಾಧ್ಯವಾಗಿದೆ. ಇದನ್ನು ಮೆಚ್ಚುತ್ತಲೇ ನಾನು ನಮ್ಮ ಕಾಲದ ಆಹ್ವಾನವನ್ನು ನೆನೆದು, ಅಕ್ಷರನ ಆಕರ್ಷಕವಾದ ಉದಾರ ಚಿಂತನಾಕ್ರಮವನ್ನು ಅನುಮಾನಿಸುತ್ತೇನೆ.
‘ಜನಸಾಮಾನ್ಯರ ಆವಾಹನೆ’ ಬಗ್ಗೆಯೋ, ‘ಋ’ಕಾರದ ಬಗ್ಗೆಯೋ, ‘ಆತ್ಮಹತ್ಯೆ ವರ್ಸಸ್ ವಿಜ್ಞಾನ’ ಮತ್ತು ‘e-ನರಕ e-ಪುಲಕ’ದ ಬಗ್ಗೆಯೋ, ಅವನೇ ಇಷ್ಟಪಡುವ ಅಡಿಕೆಯ ಬಗ್ಗೆಯೋ ಬರೆಯುವ ಅಕ್ಷರನಿಗೂ ತಾನು ಕಂಡದ್ದನ್ನು ನೆಡುವಷ್ಟು ಆಳವಾಗಿ ಊರುವಂತೆ ಮಾತಾಡುವ ಆಸೆಯಿರುವುದನ್ನು ನಾನು ಗುರುತಿಸಿದ್ದೇನೆ. ಆದರೆ ಇವು ನಮ್ಮನ್ನು ಒದೆಯುತ್ತಿರುವ ವಿದ್ಯಮಾನಗಳಲ್ಲ.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.