ಈಚಿನ ಕನ್ನಡ ಕಥಾ ಸಾಹಿತ್ಯದಲ್ಲಿ ವಿವೇಕ ಶಾನಭಾಗ ಅವರ ಕಥೆಗಳು ತಮ್ಮ ಒಂದು ವಿಶಿಷ್ಟ ಲಕ್ಷಣದಿಂದ ಗಮನ ಸೆಳೆಯುತ್ತಿವೆ. ಇದುವರೆಗೂ ನಮ್ಮ ಕಥನ ಸಾಹಿತ್ಯವು ಹಳ್ಳಿ-ಪೇಟೆ, ಬಾಲ್ಯ-ಯೌವನ, ಸಮುದಾಯ-ವ್ಯಕ್ತಿ, ಧರ್ಮ-ವಿಜ್ಞಾನ, ವಸಾಹತೀಕರಣ – ಇಂಥ ವಸ್ತುಗಳನ್ನೇ ಹೆಚ್ಚಾಗಿ ಕೇಂದ್ರೀಕರಿಸಿಕೊಂಡಿದ್ದರೆ ವಿವೇಕರ ಈಚಿನ ಕಥೆಗಳಲ್ಲಿ ಜಾಗತೀಕರಣಗೊಂಡ ಉದ್ಯಮಲೋಕವೊಂದರ ಚಿತ್ರವು ಅನಾವರಣಗೊಳ್ಳಲು ಆರಂಭವಾಗಿದೆ. ಆ ಲೋಕವನ್ನು ಗ್ರಹಿಸಲು ಹೊಸ ದಾರಿಗಳನ್ನು ಹುಡುಕುವುದು ಈ ಕಥನದ ಹಿಂದಿರುವ ಒಂದು ಸ್ಥಾಯಿ ಉದ್ದೇಶವಾಗಿ ನಮಗೆ ಕಾಣುತ್ತದೆ. ಪ್ರಸ್ತುತ ನಾಟಕವು ಅಂಥ ಒಂದು ಉದ್ದೇಶದ ಇನ್ನೊಂದು ಹೆಜ್ಜೆ ಎಂದು ಕಾಣಿಸಲು ಸಾಧ್ಯವಿದೆ.
…’ಸಕ್ಕರೆ ಗೊಂಬೆ’ ಪೂರ್ಣವಾಗಿ ಇಂಥ ಉದ್ಯಮಲೋಕದ ಕೇಂದ್ರದಲ್ಲಿಯೇ ಘಟಿಸುವ ಒಂದು ನಾಟಕ. ಎನ್‌ಕೆ ಎಂದು ಪರಿಚಿತನಾಗಿರುವ ನಂದಕಿಶೋರ ಬಹುದೊಡ್ಡ ಕೈಗಾರಿಕೋದ್ಯಮಿ; ಗೋಮತಿ ಗ್ರೂಪ್ ಎಂದು ಪ್ರಸಿದ್ಧವಾದ ಸಮುಚ್ಚಯದ ಮಾಲಿಕ. ಈತನ ಮಗ ಸಿದ್ಧಾರ್ಥ ಚಿತ್ರಕಾರ; ಆತ ತಂದೆಯ ಪ್ರಭಾವ-ಪ್ರಭಾವಳಿಯ ಪಾಶದಿಂದ ಬಿಡುಗಡೆಯಾಗಬೇಕೆಂದು ಹವಣಿಸುತ್ತಿದ್ದಾನೆ. ಅದಕ್ಕಾಗಿ ಆತ ಈ ನಾಟಕದ ಆರಂಭದಲ್ಲಿಯೇ ಮನೆ ಬಿಟ್ಟು ಬಂದಿದ್ದಾನೆ; ‘ದಿವ್ಯ’ದ ಹುಡುಕಾಟದಲ್ಲಿ ತೊಡಗಿದ್ದಾನೆ. ಇಲ್ಲಿ ಆತನಿಗೆ ಸಿಗುವ ಒಂದು ಸಂದೇಶ ಮತ್ತೆ ಆತನನ್ನು ಮನೆಯ ಕಡೆ ಮುಖಮಾಡಿಸುತ್ತದೆ; ಅಲ್ಲಿ ಆತನನ್ನು ತನ್ನ ತಂದೆಯನ್ನು ಅರಿಯಲು ತೊಡಗುವ ಮನೋಯಾತ್ರೆಯೊಂದರಲ್ಲಿ ನಡೆಸುತ್ತದೆ. ಇಂಥ ಯಾತ್ರೆಯೊಂದರ ತುಣುಕು ನೋಟಗಳೇ ಈ ನಾಟಕದ ದೃಶ್ಯಾವಳಿ…