ಸಾಂಸ್ಕೃತಿಕವಾಗಿ ಜೀವಿಸುವ ಸಮುದಾಯಗಳ ಆಚರಣೆಗಳು ಕವಿತೆಗೆ ಬಳಸುವ ಭಾಷೆಯ ಹಾಗೆ. ಅದರ ಅರ್ಥ ವಿಸ್ತಾರವಾಗುತ್ತಲೇ ಹೋಗುತ್ತದೆ. ಅಂತೆಯೇ ಊಟ, ಊಟದ ಉಪಯುಕ್ತತೆ, ಮತ್ತು ಅದರ ಅರ್ಥ. ಅವು ಸಂಕೇತಗಳಾಗಿ, ರೂಪಕ ಶಕ್ತಿಯನ್ನು ಪಡೆದು, ಅನಂತ ಅರ್ಥ ಸಾಧ್ಯತೆಗಳನ್ನು ಸೂಚಿಸುತ್ತಾ ಹೋಗುತ್ತದೆ.
ಆಹಾರದ ಪರಿಕಲ್ಪನೆ ತೈತ್ರೇಯ ಉಪನಿಷತ್ತಿನಲ್ಲಿ ಸ್ವಾರಸ್ಯಕರವಾಗಿದೆ. ಈ ಭೂಮಿಯ ಮೇಲೆ ಜೀವಿಸುವ ಪ್ರತಿ ಜೀವಿಯ ಮೂಲವೂ ಆಹಾರ, ಬದುಕು ನಡೆವುದು ಆಹಾರದಿಂದ, ಕಡೆಗೆ ಮರಳುವುದು ಆಹಾರವಾಗಿ. ಹಾಗಾಗಿ ಆಹಾರವೇ ಈ ಪೃಥ್ವಿಯ ಅತ್ಯಂತ ಹಳೆಯ ಜೀವಿ. ಬೈಬಲ್ ಮತ್ತು ವೇದಗಳು ಹೇಳುವಂತೆ, ಊಟವೆನ್ನಿ, ಆಹಾರವೆನ್ನಿ, ಈ ಪ್ರಾಚೀನ ಜೀವಿ ಇರುವುದು ದೇವರನ್ನು ಸಂತುಷ್ಟಗೊಳಿಸುವುದಕ್ಕಾಗಿ. ಅವನಿಗೆ ಅರ್ಪಿಸಿದ್ದೇವೆ ಎನ್ನುವ ಭಾವದಿಂದ ಸೇವಿಸುವ ಎಲ್ಲವೂ ಪ್ರಸಾದವೆಂದೂ, ಅದು ನಮ್ಮೊಳಗಿಳಿಯುವ ದೇವರ ಅಂಶವೆಂದೂ, ಮತ್ತು ಪ್ರಸಾದ ಭಾವವೊಂದೇ ದೇಹಕ್ಕೆ ಪೋಷಣೆ ನೀಡಲು ಸಾಧ್ಯ ಎನ್ನುವುದು ಇದರ ವಿವರಣೆ.
ಹೀಗೆ ಭಾರತದ ಸಾಂಸ್ಕೃತಿಕ ಸಮುದಾಯಗಳು ಬೆಸೆದಿರುವುದು ಆಹಾರದಿಂದ, ಆಹಾರ ಪರಂಪರೆಗಳಿಂದ, ದೇವರುಗಳಿಂದ. ಈ ಪರಂಪರೆಗಳು ಕಾಣದ ದೈವಕ್ಕೆ ನೈವೇದ್ಯವನ್ನು ಅರ್ಪಿಸಿ ಪ್ರಸಾದಾನುಗ್ರಹಿಗಳಾಗುವುದು ಒಂದು ರೀತಿಯಾದರೆ, ಪರಂಪರೆಯಿಂದಲೇ ಪ್ರಸಾದಾನುಗ್ರಹಿಗಳಾಗುವುದೂ ಸಾಧ್ಯವಲ್ಲವೇ? ಅಡುಗೆಯ ಕ್ರಮಗಳು, ಪಾಕ ನಿಘಂಟುಗಳು, ಪಾತ್ರೆಗಳು, ಆವರಣಗಳು, ಇವೆಲ್ಲವೂ ಇಹ-ಪರಗಳನ್ನು ಬೆಸೆಯುವ ಪ್ರಕ್ರಿಯೆಗಳಲ್ಲವೇ? ಅಮ್ಮ ನಿತ್ಯ ತನ್ನ ತಾಯಿಯನ್ನೋ, ಸೋದರತ್ತೆಯನ್ನೋ, ಬಾಲಮ್ಮಾಮಿಯನ್ನೋ ನೆನೆಸಿ ಮಾಡುವ ಅಡುಗೆ, ಕಾಣದ ದೈವಕ್ಕಿಡುವ ನೈವೇದ್ಯದಂತೆಯೇ ಅಲ್ಲವೇ? ಭೌತಿಕ ಆವರಣವನ್ನು ಮೀರಿ ಭಾವವಾಗುವ ಈ ಲಂಘನ, ರುಚಿಯು ರಸವಾಗುವ ಅನುಭವದಂತೆ. ಈ ಸ್ಮೃತಿಕೋಶಗಳನ್ನು ಪ್ರತಿನಿತ್ಯವೂ ಸೃಜನಶೀಲವಾಗಿ ಪುನರ್ಭವಿಸಲು ಸಾಧ್ಯವಾದುದರಿಂದಲೇ ಪರಂಪರೆಗಳು ಜೀವಂತವಾಗಿ ಉಳಿದು, ಹೊಸಹೊಸ ರೂಪದಲ್ಲೂ, ಬಣ್ಣದಲ್ಲೂ, ವಾಸನೆಯಲ್ಲೂ ಅವತರಿಸುತ್ತಲೇ ಇವೆ. ಸಮುದಾಯಗಳನ್ನು ಬೆಸೆಯುವ ದೇವರು, ತನ್ನ ಧರ್ಮದ ಸಂಕೋಲೆಗಳನ್ನು ಮೀರಿ, ತನ್ನ ರೂಪವನ್ನು ಮೀರಿ, ಸಂತ ಜ್ಞಾನೇಶ್ವರನು ಹೇಳುವಂತೆ, ಅನ್ನ ಬ್ರಹ್ಮನಾಗುತ್ತಾನೆ. ಈ ಅನ್ನ ಬ್ರಹ್ಮನ ಸೇವೆಯಲ್ಲಿದ್ದ ಅಮ್ಮ-ಅಜ್ಜಿಯರನ್ನು ನೆನೆಯುತ್ತಲೇ, ತಮ್ಮತಮ್ಮ ಊರು, ಊಟೋಪಚಾರಗಳು, ಕಥೆಗಳನ್ನು ಕಾಪಿಟ್ಟುಕೊಂಡ ಎಲ್ಲ ಅಮ್ಮಂದಿರನ್ನೂ ಇಲ್ಲಿ ನೆನೆಯುತ್ತೇನೆ.
ಆಹಾರ-ರುಚಿ-ಅಡುಗೆ ಇವೆಲ್ಲವೂ ನಾಲಿಗೆಯ ಚಪಲವನ್ನು ತೀರಿಸುವ ಸಾಧನಗಳಾಗದೇ, ಒಂದು ಇಡೀ ಸಮುದಾಯವನ್ನು, ಸಮಾಜವನ್ನು, ವ್ಯಕ್ತಿಗಳನ್ನು, ಜೀವನಕ್ರಮಗಳನ್ನು ಒಟ್ಟುಗೂಡಿಸುವ ದೊಡ್ಡ ತತ್ವವೆಂದು ಅಡುಗೆಯ ಮೂಲಕ, ಅಡುಗೆ ಮನೆಯ ಮೂಲಕ ತೋರಿಸಿಕೊಟ್ಟ ಈ ವರ್ಗದ ಇನ್ನೊಂದು ದೊಡ್ಡ ಸಾಧನೆಯೆಂದರೆ, ಆಹಾರದ ಆಧುನಿಕ ರಾಜಕಾರಣಕ್ಕೆ ಅವರ ಅಲಕ್ಷ್ಯವೇ ಪ್ರತಿರೋಧವಾಗಿದ್ದು.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.