ಈ ಪುಸ್ತಕ ನನ್ನ ಆತ್ಮಕಥೆಯಲ್ಲ. ಬಹುಕಾಲದಿಂದ ನನ್ನ ಮಿತ್ರರು ನನ್ನ ಜೀವನದ ಇತಿಹಾಸವನ್ನು ಬರೆಯಬೇಕೆಂದು ನನಗೆ ಹೇಳುತ್ತಿದ್ದರು. ಆದರೆ ನನಗೆ ಅದೇನೂ ಇಷ್ಟವಿರಲಿಲ್ಲ. ಇತ್ತೀಚೆಗೆ ನನ್ನ ಆಪ್ತಮಿತ್ರರಾದ ಶ್ರೀ ಎಚ್. ಕೆ. ರಂಗನಾಥ್‌ರವರು ಮತ್ತು ಪ್ರಿಸಮ್ ಪ್ರಕಟನಾಲಯದ ಶ್ರೀ ಪ್ರಾಣೇಶರವರು ನನ್ನ ಆತ್ಮಕಥೆ ಅಲ್ಲದಿದ್ದರೂ ನನ್ನ ಜೀವಿತ ಕಾಲದ ಅನುಭವಗಳೂ ಮತ್ತು ನಾನು ಸಂಧಿಸಿದ ಅನೇಕ ಗಣ್ಯವ್ಯಕ್ತಿಗಳೂ ಮತ್ತು ಘಟನೆಗಳೂ, ನಮ್ಮ ನಾಡಿನ ಇತಿಹಾಸದ ದೃಷ್ಟಿಯಿಂದ ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯವಾದ್ದರಿಂದ ಅವುಗಳನ್ನು ಒಳಗೊಂಡ ವಿಷಯಗಳನ್ನು ಕುರಿತು ಬರೆಯಬೇಕೆಂದು ಹೇಳಿದರು. ಅವರ ಅಕ್ಕರೆಯ ಒತ್ತಾಯದ ಮೇಲೆ ನನಗೂ ಹಾಗೆ ಮಾಡಬಹುದೆಂದು ಅನಿಸಿತು. ಆದರೆ ನನಗೆ ಬರೆಯುವ ಶ್ರಮ ತಪ್ಪಿಸಿ ಶ್ರೀ ಎಚ್. ಕೆ. ರಂಗನಾಥ್, ಶ್ರೀ ಎಂ. ಎಚ್. ಕೃಷ್ಣಯ್ಯ ಮತ್ತು ಶ್ರೀ ಜಿ. ಅಶ್ವತ್ಥನಾರಾಯಣ ಅವರು ನಾನು ಹೇಳಿದುದನ್ನು ಟೇಪ್‌ಗಳಲ್ಲಿ ಒಕ್ಕಣಿಸಿ ಅದನ್ನು ಬರೆವಣಿಗೆಗೆ ರೂಪಾಂತರಿಸಿದ್ದಾರೆ. ಹಾಗೆ ಸಂಪಾದಿಸುವುದರಲ್ಲಿ ಕೇವಲ ವೈಯಕ್ತಿತವಾದ ಭಾಗವನ್ನು ಬಿಟ್ಟು ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಅಂಶಗಳನ್ನು ಮಾತ್ರ ಉಳಿಸಬೇಕಾಗಿ ಕೋರಿದೆ. ಹಾಗೆ ಪ್ರಯತ್ನಪಟ್ಟಿದ್ದಾರೆಂಬ ಭರವಸೆ ನನಗಿದೆ. ಆದರೆ ಹಾಗೆ ಬೇರ್ಪಡಿಸುವುದು ಅಷ್ಟು ಸುಲಭವಲ್ಲವೆಂದು ನನಗೆ ಗೊತ್ತಿದೆ. ಆದರೂ ಒಟ್ಟಿನ ಮೇಲೆ ನಾನು ಕೇಳಿಕೊಂಡ ರೀತಿ ಸಂಪಾದಿಸಿದ್ದಾರೆಂದು ನನಗೆ ಭರವಸೆ ಉಂಟು.
-ನಿಟ್ಟೂರು ಶ್ರೀನಿವಾಸರಾವ್
Reviews
There are no reviews yet.