ನಿಜ ರಾಮಾಯಣದ ಅನ್ವೇಷಣೆ:
ರಾಮಾಯಣಗಳ ಸಂಖ್ಯೆ ಮುನ್ನೂರಕ್ಕೂ ಹೆಚ್ಚು ಎನ್ನುವುದನ್ನು ಜಾನಪದ ಕಥೆಗಳ ಬೆನ್ನು ಹತ್ತಿದ ಎ ಕೆ ರಾಮಾನುಜನ್ ನಮ್ಮ ಮುಂದೆ ಇಟ್ಟು ಸಾಕಷ್ಟು ಕಾಲವಾಗಿದೆ. ರಾಮಾಯಣಗಳು ಹೇಗೆಲ್ಲಾ ವೈವಿಧ್ಯಮಯ ರೂಪ ತಾಳಿದೆ ಎನ್ನುವುದನ್ನು ಕಾಣಬೇಕಾದರೆ ಪೌಲಾ ರಿಚ್ಮನ್ ಅವರ `ಮೆನಿ ರಾಮಾಯಣಾಸ್’ ಕೃತಿಯನ್ನು ಓದಬೇಕು. ಗಂಡಿಗೊಂದು ರಾಮಾಯಣವಾದರೆ, ಹೆಣ್ಣಿಗೆ ಅವಳದ್ದೇ ಒಂದು ರಾಮಾಯಣವಿದೆ, ಮಕ್ಕಳು ರಾಮಾಯಣವನ್ನು ತಮ್ಮ ಕಣ್ಣುಗಳಿಂದಲೂ ಪುನರ್ರಚಿಸಿಕೊಂಡಿದ್ದಾರೆ. ಆಳುವವನಿಗೆ ಒಂದು ರಾಮಾಯಣವಾದರೆ, ಉಳುವವನ ರಾಮಾಯಣ ಹೇಳುವುದೇ ಬೇರೆ, ಜಾನಪದರ ರಾಮಾಯಣ ಓದಿದವರು ಶಿಷ್ಟ ರಾಮಾಯಣ ಹೊಕ್ಕರೆ ಅಲ್ಲಿರುವುದೆಲ್ಲಾ ಬೇರೆ ಬೇರೆ. ಇಷ್ಟೊಂದು ವೈವಿಧ್ಯಮಯ ರಾಮಾಯಣಗಳು ಇರುವಾಗ `ವಾಲ್ಮೀಕಿ ರಾಮಾಯಣ’ವನ್ನು ಮಾತ್ರವೇ ರಾಮಾಯಣ ಎನ್ನುವುದನ್ನು ಹೇರಬೇಕು ಏಕೆ? ಒಂದು ಸಂಸ್ಕೃತಿ, ಒಂದು ಆಹಾರ, ಒಂದು ಧಿರಿಸು, ಒಂದು ಭಾಷೆ ಎನ್ನುವಂತೆ ಒಂದು ಆಲೋಚನೆ, ಒಂದು ವಿಚಾರ ಎನ್ನುವ ಬೇಲಿಗಳನ್ನೂ ಸದ್ದಿಲ್ಲದಂತೆ ಎಬ್ಬಿಸುತ್ತಿರುವುದರ ಸೂಚನೆ ಇದು.
ಜಿ ಎನ್ ನಾಗರಾಜ್ ಅವರ `ನಿಜ ರಾಮಾಯಣದ ಅನ್ವೇಷಣೆ’ ಜಗತ್ತಿನ ಎಲ್ಲೆಡೆ ಹರಡಿರುವ ನೂರಾರು ರಾಮಾಯಣಗಳನ್ನು ಮುಂದಿಟ್ಟುಕೊಂಡು ಅದರ ಮೂಲಕ ಆಯಾ ಸಮಾಜದ ನೋಟವನ್ನು ಕಟ್ಟಿಕೊಡುವ ಕೃತಿ. ರಾಮಾಯಣಗಳು ಬದಲಾದದ್ದರ ಹಿಂದೆ ಇರುವ ಹುನ್ನಾರಗಳನ್ನು ಹುಡುಕಲು ಪ್ರಯತ್ನಿಸಿದ ಕೃತಿ ಇದು.
Reviews
There are no reviews yet.