ಹೆಚ್. ಆರ್. ಸುಜಾತಾ ಮಣ್ಣಿನ ನುಡಿಯ ಪರಿಮಳ ‘ನೀಲಿ ಮೂಗಿನ ನತ್ತು’ ಕನ್ನಡ ಕಥನ ಸಾಹಿತ್ಯಕ್ಕೆ ಹೊಸ ಆಯಾಮ ವನ್ನು ತಂದುಕೊಡುವ ಅಪೂರ್ವ ಕೃತಿ. ನೆನಪುಗಳು ಮಾತು ಆಗುವುದು, ಮಾತುಗಳು ಕಥನವಾಗುವುದು, ಕಥನಗಳು ನಿಜದ ಬೆನ್ನೇರಿ ಸಂಕಥನವಾಗುವುದು-ಹೀಗೆ ಬದುಕು ಭ್ರಮೆ ಭಾಷೆ ಮತ್ತು ಬೆರಗು ಸುಜಾತ ಅವರ ನೆನಪಿನ ಓಣಿಯಲ್ಲಿ ಜೊತೆ ಜೊತೆಗೆ ಪಯಣ ಮಾಡುವ ವಿನ್ಯಾಸವಿದೆ. ಹಾಸನದ ಹಸನು ಮಣ್ಣಿನ ನುಡಿಯ ಪರಿಮಳದಲ್ಲಿ ಮಾತು ಕಥೆ ಕಥೆಯಾಗುತ್ತದೆ, ನೆಲದ ನೆಲೆಯ ಗುಟ್ಟುಗಳು ಬಿಚ್ಚಿಕೊಳ್ಳುತ್ತಾ ಬರುತ್ತದೆ. ಮೂಗುಬಸವನ ದೆವ್ವ ಸತ್ಯದ ಕಥೆಗಳನ್ನು ಹೇಳುತ್ತದೆ. ಮೌನಿಯನ್ನು ಮಾತಾಡಿಸುತ್ತದೆ, ಹೊಲ ಉಳುವ ರೈತನ ಮಗನಿಗೆ ಉಳುವ ಸಂಗಾತಿಯಾಗುತ್ತದೆ. ಸುಜಾತಾ ಅವರು ತಮ್ಮ ‘ಊರನ್ನು ಬಗೆಯುವ ಬಗೆ’ ಅದ್ಬುತವಾದುದು. ಊರು ತನ್ನ ದೇಸಿ ಗುಣವನ್ನು ಕಳೆದುಕೊಳ್ಳುವ ಮೂಲಕ ಅನಿಷ್ಠ ಮಾರಿಗಳನ್ನು ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
‘ಹೊನ್ನಳ್ಳಿ ಅಮ್ಮ’ ಅಂತಹ ಅನಿಷ್ಠ ಮಾರಿಗೆ ಒಂದು ಪ್ರತಿರೋಧ ದ ರೂಪಕ.ವಾಟೆಹೊಳೆ ಡ್ಯಾಮ್ ಮತ್ತು ಹೊನ್ನಳ್ಳಿ ಅಮ್ಮನ ಮುಖಾಮುಖಿಯೇ ಜಾಗತೀಕರಣದ ಎದುರು ಜನಪದ ಪ್ರತಿರೋಧ ದ ಜನಪರ ನೆಲೆಯ ವಸ್ತು ಪ್ರತಿರೂಪ. ಹಳ್ಳಿಯ ಭಾಷೆಯ ಸೂಕ್ಷ್ಮ ಅರ್ಥದ ಪದರುಗಳ ಮೂಲಕ ಹಳ್ಳಿಯ ನಂಬಿಕೆ ಆಚರಣೆಗಳ ಮೂಲಕ ಹಳ್ಳಿಯ ದೆವ್ವ ದೈವಗಳ ರೂಪಕಗಳ ಮೂಲಕ ಸುಜಾತಾ ಅವರು ತಮ್ಮ ಹಳ್ಳಿಯ ಬದುಕನ್ನು ಅನಾವರಣ ಮಾಡುತ್ತಾ ‘ಜನಪದ ತಾತ್ವಿಕತೆಗೆ ಹೊಸ ನೋಟವನ್ನು ತಂದುಕೊಟ್ಟಿದ್ದಾರೆ. ಆಧುನಿಕತೆಯ ಬೃಹತ್ ಮತ್ತು ಏಕರೂಪದ ಉತ್ಪನ್ನಗಳಾದ ವಸ್ತು ಮತ್ತು ವಿಚಾರಗಳ ಪೊಳ್ಳುತನ ಮತ್ತು ಸುಳ್ಳುತನಗಳನ್ನು ಬಯಲುಮಾಡಿದ್ದಾರೆ. ಸಂಸ್ಕೃತಿಯ ಸೂಕ್ಷ್ಮಗಳನ್ನು ಶಕ್ತಿಗಳನ್ನು ಮತ್ತು ದೌರ್ಬಲ್ಯಗಳನ್ನು ಸಹಜ ಭಾಷೆಯ ಒಳಗಿನಿಂದಲೇ ಅನಾವರಣ ಮಾಡುವ ಅವರ ಈ ಕೃತಿಯು ಕನ್ನಡ ದ ಸಿದ್ಧ ಸಾಹಿತ್ಯ ಪ್ರಕಾರಗಳನ್ನು ಮತ್ತು ಸುದ್ಧ ಚಿಂತನ ಮಾದರಿಗಳನ್ನು ಮೀರುವ ಹೊಸ ಫಸಲು.
Reviews
There are no reviews yet.