ಕಾವ್ಯವೆಂಬುದು ಶಾಲೆಗಳಲ್ಲಿ ಪರೀಕ್ಷೆಗಾಗಿ ಕಲಿಯುವ ಪಠ್ಯಕ್ರಮವಾಗಿ ಬದಲಾಗಿದೆ. ನಮ್ಮ ಎಳೆಯರು, ತರುಣ ತರುಣಿಯರು, ಕಾವ್ಯಸಂಸ್ಕಾರದಿಂದ (ಅದರಲ್ಲೂ ಕನ್ನಡ ಕಾವ್ಯಸಂಸ್ಕಾರದಿಂದ) ಸಹಜವಾಗಿಯೇ ದೂರ ಉಳಿಯುತ್ತಿದ್ದಾರೆ. ಆಸಕ್ತಿ ಉಳ್ಳ ಕೆಲವರಲ್ಲಾದರೂ ಆಸಕ್ತಿಯನ್ನು ಬೆಳೆಸುವ ಪ್ರಯತ್ನ ಈವತ್ತಿನ ತುರ್ತು ಅಗತ್ಯವಾಗಿದೆ. ನಾನು `ತಾವರೆಯ ಬಾಗಿಲು’ ಎಂಬ ಈ ಲೇಖನ ಮಾಲೆಯನ್ನು ಬರೆಯಲು ತೊಡಗಿದ್ದು ಕಾವ್ಯಸಂಸ್ಕಾರದ ದೀಕ್ಷೆಯನ್ನು ಓಲುವೆ ಉಳ್ಳ ಕೆಲವರಿಗಾದರೂ ದೊರಕಿಸಬೇಕು ಎಂಬ ಉದ್ದೇಶದಿಂದ. ನಾನು ಗಮಕ ವಾಚನ, ಕಾವ್ಯ ಗಾಯನದ ಪಕ್ಷಪಾತಿಯಾಗಿರುವುದೂ ಕೂಡ ಇದೇ ಕಾರಣಕ್ಕೆ.
ಕಾವ್ಯವು ತನ್ನ ಮಾತಾಗಿ ಭಾಷೆಯನ್ನು ಬಳಸುತ್ತದೆ. ಆದರೆ ನಾವು ನಿತ್ಯವ್ಯವಹಾರದಲ್ಲಿ ಮಾತಾಡುವ ಭಾಷೆಯೇ ಬೇರೆ; ಕಾವ್ಯವು ಸತತ ಪರಿಶ್ರಮದಿಂದ ತನ್ನ ಸ್ವಂತಕ್ಕಾಗಿ ರೂಢಿಸಿಕೊಳ್ಳುವ ಭಾಷೆಯೇ ಬೇರೆ. ಆ ಭಾಷೆಗೆ ಅದರದ್ದೇ ಆದ ವ್ಯಾಕರಣವಿದೆ. ಆ ವ್ಯಾಕರಣವನ್ನು ಕುರಿತು ನಡೆಸುವ ಚಿಂತನೆಯೇ ಕಾವ್ಯ ಮೀಮಾಂಸೆ. ಬೆಳಗಾಯಿತು ಎಂದರೆ ವ್ಯವಹಾರದ ಭಾಷೆ ತೃಪ್ತವಾದೀತು. ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ-ಎನ್ನದೆ ಕಾವ್ಯ ಭಾಷೆ ತೃಪ್ತವಾಗಲಾರದು. ಪ್ರತಿಯೊಂದು ಸಾಮನ್ಯವೆನ್ನಿಸುವ ಸಂಗತಿಯನ್ನೂ ವಿಶೇಷವಾದ ಸಂಗತಿಯನ್ನಾಗಿ ಪರಿವರ್ತಿಸಿ ಬದುಕಿನ ಸೌಭಾಗ್ಯವನ್ನು ಕಾವ್ಯಹಿಗ್ಗಿಸುತ್ತದೆ. ಈ ಅಂಶ ಭಾವಲೋಕಕ್ಕೆ ಸಂಬಂಧಿಸಿಯೂ ನಿಜ.
Reviews
There are no reviews yet.