ನಾನು, ನಾನೇ? ನಾನು, ನಾನೇ!
(ಪ್ರಯೋಗಾತ್ಮಕ ಸಣ್ಣ ಕಥೆಗಳು)
ಈ ಕಥೆಗಳು ತಮ್ಮ ಉದ್ದೇಶ ಸಾಧನೆಗಾಗಿ ಬೇರೆ ಬೇರೆ ಸಲಕರಣೆಗಳನ್ನು ಬಳಸಿಕೊಂಡಿವೆ. ಅವೆಲ್ಲವೂ ಒಂದು ಬಗೆಯಲ್ಲಿ ವಾಸ್ತವ ನಿರೂಪಣೆಯಿಂದ ತಪ್ಪಿಸಿಕೊಳ್ಳುವ ಉಪಾಯಗಳು. ಉದಾಹರಣೆಗೆ ‘ವ್ಯೂಹ’ ಎನ್ನುವ ಎರಡು ಪುಟಗಳ ಕಥೆಯನ್ನು ತೆಗೆದುಕೊಳ್ಳಿ. ಇದು ಹೆಂಡತಿಗೆ ಕಿವಿ ಸರಿಯಿಲ್ಲವೆಂದು ಅವಳನ್ನು ವೈದ್ಯರ ಬಳಿಗೆ ಕರೆತಂದಿರುವ ಶ್ಯಾಮನ ಕಥೆ. ಆ ಹೆಂಡತಿ ಸಂಪೂರ್ಣ ಮೌನಿ. ಎರಡು ವರ್ಷಗಳ ನಂತರ ಶ್ಯಾಮ ಭೇಟಿಯಾದಾಗ, ಅವಳು ಬೆಂಕಿ ಅಪಘಾತದಲ್ಲಿ ಸತ್ತ ಸುದ್ದಿ ತಿಳಿಯುತ್ತದೆ. ಅಪಘಾತವೋ ಆತ್ಮಹತ್ಯೆಯೋ ತಿಳಿಯದು ಎನ್ನುತ್ತಾನೆ. ‘ಸದ್ಯ ವರದಕ್ಷಿಣೆಯ ಕೇಸು ಬೀಳುವುದು ಶಕ್ಯವಿರಲಿಲ್ಲ.” ಎನ್ನುತ್ತಾನೆ. ಕೊನೆಗೆ ಸ್ವತಃ ಅವನಿಗೇ ಕಿವಿ ಕೇಳುವುದಿಲ್ಲವೆಂಬ ಸತ್ಯ ತಿಳಿಯುತ್ತದೆ. ದಾಂಪತ್ಯದೊಳಗಿನ ಕ್ರೌರ್ಯದ ಸ್ವರೂಪ ಹಾಗೂ ಪರಸ್ಪರ ಸಂಬಂಧದ ಕೊರತೆಗಳನ್ನು ಧ್ವನಿಸುವ ೧೯೮೫ ರ ಈ ಕತೆ ಕೆಲವು ವರ್ಷಗಳ ಹಿಂದೆ ಬಂದ ವಿವೇಕ ಶಾನಭಾಗರ ‘ಘಾಚರ್ ಘೋಚರ್’ ಎಂಬ ಒಳ್ಳೆಯ ಕಥೆಯನ್ನು ನೆನಪಿಗೆ ತಂದಿತು. ಹಾಗೆ ನೋಡಿದರೆ ಸಂವಹನದ ಸೋಲು ಶ್ರೀರಾಮರ ಹಲವು ಕಥೆಗಳ ವಸ್ತು. ‘ದಿಕ್ ಭ್ರಮೆ’ಯೂ ಈ ಸತ್ಯವನ್ನೇ ಹೇಳುತ್ತದೆ. ಇತರರನ್ನು, ನಮ್ಮನ್ನು ಹಾಗೂ ಲೋಕವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಅಗತ್ಯವಾದ ಸಂವೇದನಶೀಲತೆಯ ಕೊರತೆ ಜೀವನದ ದುರಂತಕ್ಕೆ ಮುಖ್ಯ ಕಾರಣ. ಹೀಗೆಯೇ ‘ಊರುಗೋಲು’ ರೀತಿಯ ಕಥೆಗಳು ಪ್ರಶ್ನೆಗಳನ್ನು ಹುಟ್ಟಿಸುವುದರಿಂದಲೇ ಓದುಗನಲ್ಲಿ ವಿಸ್ತರಣೆಯನ್ನು ಪಡೆಯುತ್ತವೆ. ಹಾಗೆ ನೋಡಿದರೆ ಎಲ್ಲ ‘ಅತಿ ಸಣ್ಣ ಕಥೆ’ಗಳನ್ನೂ ದೊಡ್ಡ ಕಥೆಗಳಾಗಿ ಹರಡಿಕೊಳ್ಳುವ ಹೊಣೆಯು ಓದುಗನದೇ ಆಗಿರುತ್ತದೆ. ತಂತ್ರ ಯಾವುದೇ ಇರಲಿ, ಉದ್ದೇಶ ಹಾಗೂ ಪರಿಣಾಮಗಳು ಅವೇ ಇರುತ್ತವೆ.
Reviews
There are no reviews yet.