ಕನ್ನಡ ಸಂಸ್ಕೃತಿಯ ಸಾಕಾರಮೂರ್ತಿ ಡಾ|| ರಾಜ್ಕುಮಾರ್
ಮುತ್ತಿನ ಕಥೆಯ ಮೊದಲೊಂದು ಮಾತು :
ಜೇನಿನ ಹೊಳೆಯೋ, ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿನುಡಿಯೋ
ವಾಣಿಯ ವೀಣೆಯ ಸ್ವರ ಮಾಧುರ್ಯವೋ
ಸುಮಧುರ ಸುಂದರ ನುಡಿಯೋ… ಆಹಾ !
– ಕನ್ನಡ ಸಿರಿನುಡಿಯ ಸೊಬಗು, ಸೊಗಡು, ಸೊಗಸುಗಳನ್ನೆಲ್ಲ ಸುಂದರವಾಗಿ ಸೆರೆ ಹಿಡಿದಿಟ್ಟಿರುವ ಹಾಡು ಇದು. ಅಂತಹ ಗೀತೆ – ಮಾತುಗಳನ್ನು ಅಷ್ಟೇ ಸುಮಧುರವಾಗಿ ಉಲಿಯುತ್ತಿದ್ದ ನಾಲಿಗೆ ಆ ‘ಗಾನಗಂಧರ್ವ’ನದು. ಅಪ್ರತಿಮ ನಟನೆ-ನರ್ತನ ಕೌಶಲ್ಯದಿಂದಲೂ ಕನ್ನಡ ಜನಕೋಟಿಯ ಹೃದಯಕ್ಕೇ ಲಗ್ಗೆ ಹಾಕಿದ್ದ ‘ನಟಸಾರ್ವಭೌಮ’ನೂ ಆತನೇ. ಈ ಕಲಾವಿದ ನುಡಿದರೆ-ಗುನುಗಿದರೆ ಸಾಕು, ಅದು ಮುತ್ತಿನ ಮಾಲೆ-ಸ್ಫಟಿಕದ ಶಲಾಕೆ-ಮಾಣಿಕ್ಯದ ದೀಪ್ತಿಯ ಹಾಗೆ ಸ್ಫುಟವೂ, ಸುಶ್ರಾವ್ಯವೂ ಆಗಿ ಆಲಿಸಿ-ನಲಿದ ಜನ ಮೆಚ್ಚಿ ಅಹುದಹುದೆನ್ನುತ್ತಿತ್ತು, ತಲೆದೂಗಿ ಅಭಿನಂದಿಸುತ್ತಿತ್ತು, ತಲೆಬಾಗಿ ಅಭಿವಂದಿಸುತ್ತಿತ್ತು.
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ (೧೯೨೯-೨೦೦೬) ನಮಗೆಲ್ಲ ರಾಜ್ಕುಮಾರ್ ಎಂದು ಪರಿಚಿತರು. ಅವರ ಸಮಕಾಲೀನ ಅಭಿಮಾನಿಗಳಿಗೆ ಅವರು ರಾಜಣ್ಣ ! ಉಳಿದವರಿಗೆ ಅಣ್ಣಾವ್ರು ! ೨೨೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅವರು ‘ನಟ ಸಾರ್ವಭೌಮ’ರು ! ಭಾರತೀಯ ಚಲನಚಿತ್ರ ರಂಗವು ಅವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ ಘನ ಸರ್ಕಾರವು ಪದ್ಮಭೂಷಣ ನೀಡಿ ಸನ್ಮಾನಿಸಿದೆ. ರಾಜ್ಯ ಸರ್ಕಾರವು ‘ಭಾರತರತ್ನ’ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಿದೆ. ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಕನ್ನಡಕ್ಕೆ ಮತ್ತೊಂದು ಹೆಸರು ರಾಜ್ಕುಮಾರ್ ! ಅವರಿಗೆ ಸಂದಷ್ಟು ಪ್ರಶಸ್ತಿಗಳು, ಬಿರುದುಗಳು ಸನ್ಮಾನಗಳು ಯಾವ ಕನ್ನಡ ನಟನಿಗೂ ದೊರೆತಿಲ್ಲ
Reviews
There are no reviews yet.