ಕಳೆದ ಏಳೆಂಟು ವರ್ಷಗಳ ಈಚೆಗೆ ನಾನು ಬರೆಯುತ್ತ ಬಂದ ಬರಹಗಳು ಈ ಸಂಕಲನದಲ್ಲಿ ಒಟ್ಟಯಿಸಿವೆ. ಇದರಲ್ಲಿ ಕೆಲವನ್ನು ನಿರ್ದಿಷ್ಟ ಸಂದರ್ಭದ ಪ್ರಚೋದನೆಯಿಂದಲೋ ಅಥವಾ ನಿಶ್ಚಿತ ಬೇಡಿಕೆಯೊಂದಕ್ಕೆ ಉತ್ತರವಾಗಿಯೋ ಬರೆದದ್ದು; ಉಳಿದ ಹೆಚ್ಚಿನ ಬರಹಗಳು ಹೊರಗಿನ ಯಾವ ಕಾರಣವೂ ಇಲ್ಲದೆ ಮನಸ್ಸಿನಲ್ಲಿ ಆಗಾಗ ಹುಟ್ಟಿ ಬೆಳೆದಂಥವು; ಸಾಂದರ್ಭಿಕವಾಗಿ ಬಿಡಿಬಿಡಿ ಪ್ರಕಟವೂ ಆದಂಥವು. ಇಷ್ಟರಮೇಲೆ, ಇದರಲ್ಲಿ ಕೆಲವು ದೀರ್ಘವಾದವು, ಕೆಲವು ಚುಟುಕು; ಕೆಲವು ಅಡಿಟಿಪ್ಪಣಿಗಳ ಸಮೇತ ಸಹಾಭ್ಯಾಸಿಗಳನ್ನು ಉದ್ದೇಶಿಸಿದ್ದು, ಬಹಳಷ್ಟು ಇವತ್ತಿನ ಪತ್ರಿಕೆಯ ಓದುಗರ ಜತೆಗೆ ನಡೆಸಿದ ಸಾರ್ವಜನಿಕ ಸಂವಹನಗಳು. ಆದ್ದರಿಂದ ಸಹಜವಾಗಿಯೇ ಈ ಬರಹಗಳ ನಡುವೆ ವಿಷಯ ಅಥವಾ ರೂಪದ ಏಕಸೂತ್ರತೆ ಇಲ್ಲ.
ಆದರೆ, ಈ ಬರಹಗಳನ್ನು ಪ್ರಸ್ತುತ ಸಂಕಲನಕ್ಕಾಗಿ ಸಂಗ್ರಹಿಸುತ್ತಿದ್ದಾಗ, ಅಚಾನಕ್ಕಾಗಿ ಈ ಬರಹಗಳ ಹಿಂದೊಂದು ಚಿಂತನಧಾತುವಿನ ಸಾತತ್ಯವಿದೆ ಎಂದು ನನಗೆ ಅನ್ನಿಸತೊಡಗಿತು. ಇದು ನಾನು ಪ್ರಜ್ಞಾಪೂರ್ವಕವಾಗಿ ಯೋಜಿಸಿಕೊಂಡದ್ದಾಗಲೀ ರೂಢಿಸಿಕೊಂಡದ್ದಾಗಲೀ ಅಲ್ಲ. ಬದಲು, ಈ ಕಾಲಾವಧಿಯಲ್ಲಿ ನಡೆದ ಲೋಕದ ವಿದ್ಯಮಾನಗಳು ಮತ್ತು ಅದಕ್ಕೆ ನಾನು ಪ್ರತಿಸ್ಪಂದಿಸಿಕೊಂಡ ಕ್ರಮಗಳು — ಇವುಗಳ ಸಂಬಂಧದಲ್ಲಿ ತಾನಾಗಿ ರೂಪಿತವಾದದ್ದು. ಇಂಥ ಯೋಚನಾಕ್ರಮದ ಚಹರೆಯನ್ನು ನಿಖರವಾಗಿ ಹೇಳುವುದಕ್ಕೆ ಈಗಲೂ ನನಗೆ ಸಾಧ್ಯವಿಲ್ಲ. ಆದರೆ, ಅಂಥದೊಂದು ಚಿಂತನಧಾತುವು ನಾನು ಇದೇ ಕಾಲಾವಧಿಯಲ್ಲಿ ಅಚಾನಕ್ಕಾಗಿ ಬರೆದ ಒಂದು ಕವಿತೆಯಲ್ಲಿ ಅವ್ಯಕ್ತವಾಗಿ ಅಭಿವ್ಯಕ್ತವಾಗಿದೆ — ಎಂದೂ ನನಗೆ ಅನ್ನಿಸಿತು. ಹಾಗಾಗಿ, ಆ ಕವಿತೆಯ ತಲೆಬರಹವನ್ನೇ ಈ ಪುಸ್ತಕಕ್ಕೆ ಹೆಸರಾಗಿ ಮಾಡಿದ್ದೇನೆ. ಮತ್ತು, ಅಂಥ ಸಂಬಂಧ ಯಾರಿಗಾದರೂ ಗಮ್ಯವಾಗುವುದಾದರೆ ಆಗಲಿ ಎಂಬ ಆಲೋಚನೆಯಿಂದ ಆ ಕವಿತೆಯನ್ನೂ ಇಲ್ಲಿ ಕೊಡುತ್ತಿದ್ದೇನೆ —
ಚಿತ್ರದ ಕುದುರೆ
ಹೀಗೊಂದು ರಾತ್ರಿಯಲಿ
ಹಾಗೊಂದು ಅರೆಗನಸು:
ಗೋಡೆ ಮೇಲಿದ್ದಂಥ ಕಟ್ಟು ಹಾಕಿದ ಚಿತ್ರ
ಹುಲ್ಲು ಮೇಯುತ್ತಿದ್ದ ಕುದುರೆ ಕತ್ತನು ಚಾಚಿ
ಬೀರುವಿನ ಮೇಲಿದ್ದ ಪತ್ರಿಕೆಯ ಹಿಡಿದೆಳೆದು
ಪೇಪರಿನ ಚಿತ್ರದಿಂದಿಳಿದ ಒಂದಿಷ್ಟು ಜನ
ಚೂರಿಚೈನನು ಹಿಡಿದು ಜಲ್ಲಿಕಲ್ಲುಗಳೆತ್ತಿ
ಒಗೆದಾಡತೊಡಗಿದರೆ ನಮ್ಮ ಕಿಟಕಿಯ ಗಾಜು
ಪುಡಿಯಾಗಿ ಸಿಡಿಸಿಡಿದು ಕಿಡಿಹೊತ್ತಿ ಉರಿವಾಗ
ಮೈಬೆವರಿ ಉಬ್ಬರಿಸಿ ಉಸಿರು ನಿಂತಂತಾಗಿ
ಹೊರಗೋಡಲೆಂಬಂತೆ ಬಾಗಿಲೊಳು ಹೊಕ್ಕಾಗ
ಮೂಗು ಗೋಡೆಗೆ ಬಡಿದು ಅದು ಬಾಗಿಲಿನ ಚಿತ್ರ
ಮಾತ್ರವೆಂಬುದು ತಿಳಿದು ಕಿರುಚಿದ್ದು ಸತ್ಯ;
ಕುದುರೆ ಸುಳ್ಳಿರಬಹುದು, ತಿಂದದ್ದು ಸುಳ್ಳಲ್ಲ
ಬೆಂಕಿ ಕಿಡಿ ಸುಳ್ಳು ನಿಜ; ಬೆವರಿದ್ದು ಸುಳ್ಳಲ್ಲ
ಮಾತು ಸುಳ್ಳಿದ್ದೀತು ಅದರರ್ಥ ಸುಳ್ಳಲ್ಲ
ಕಥೆಯಾದರೇನಂತೆ ಕಥನವಿದು ಸುಳ್ಳಲ್ಲ —
ಅಂದುಕೊಳ್ಳುತ್ತಲೇ ಮರಮರಳಿ ಮಲಗಿದೆ;
ಜೈ ಹಿಂದ್
ಜೈ ಕರ್ನಾಟಕ…
Ebook
ಚಿತ್ರದ ಕುದುರೆ
₹160.00
About this Ebook
Information
Additional information
Category | |
---|---|
Publisher | |
Language | Kannada |
Book Format | Ebook |
Reviews
Only logged in customers who have purchased this product may leave a review.
Reviews
There are no reviews yet.