‘ಯಾವುದು ಸರಿ? ಯಾವುದು ತಪ್ಪು? ಏನು ಮಾಡಿದ್ದರಿಂದ ಏನಾಗುತ್ತದೆ? ಯಾರ ಅಂತರಂಗದಲ್ಲಿ ಯಾವೆಲ್ಲಾ ವಿಷಯ ಹುದುಗಿರುತ್ತದೆ? ಈ ಜಗತ್ತು ಯಾಕೆ ಹೀಗಿದೆ?’ ಇತ್ಯಾದಿ ಪ್ರಶ್ನೆಗಳಿಗೆ ಸರಿ ಉತ್ತರ ಕಂಡುಕೊಳ್ಳಲು ಸತ್ಯ, ವಾಸ್ತವ ಮತ್ತು ತರ್ಕದೊಂದಿಗೆ ಮನದೊಳಗೆ ಮಾಡುವ ವಿಶ್ಲೇಷಣೆಯೇ ಚಿಂತನ. ಚಿಂತೆ ಮನಸ್ಸನ್ನು ಕುಗ್ಗಿಸಿದರೆ ಚಿಂತನೆ ಮನಸ್ಸನ್ನು ಹಿಗ್ಗಿಸಿ ವಿಚಾರಶೀಲರನ್ನಾಗಿಸುತ್ತದೆ.
ಮನುಷ್ಯರ ಗುಣಸ್ವಭಾವಗಳು ವಿಚಿತ್ರ. ನಾವು ನಮ್ಮದು ಸರಿ; ಇನ್ನೊಬ್ಬರದು ತಪ್ಪು ಎನ್ನುತ್ತೇವೆ. ಅವರೂ ಹಾಗೇ ಅನ್ನುತ್ತಾರೆ. ‘ಎಲ್ಲರಲ್ಲಿರುವಂತೆ ನಮ್ಮಲ್ಲೂ ದೋಷಗಳಿರುತ್ತವೆ’ ಎಂಬ ಸತ್ಯ ತಿಳಿಯುವುದು ಒಂದಿಷ್ಟು ಜನಕ್ಕೆ ಮಾತ್ರ! ನಮ್ಮ ಮನಸ್ಸು ತಾನಾಗಿ ಕೆಡುವುದಕ್ಕಿಂತ ಆಚೀಚೆಯವರು ಕೆಡಿಸುವುದೇ ಜಾಸ್ತಿ. ಹುಟ್ಟುಗುಣ ಮತ್ತು ಸಂದರ್ಭಕ್ಕನುಸಾರವಾಗಿ ಯಾರ ಮನಸ್ಸು ಹೇಗೆ ವರ್ತಿಸುತ್ತದೆ? ಎಂದು ತಿಳಿದಿದ್ದರೆ ನಮ್ಮ ಮನಸನ್ನು ಕೆಡಿಸಿಕೊಳ್ಳುವ ಅವಶ್ಯಕತೆ ಬರುವುದಿಲ್ಲ.
ನಾಲ್ಕು ಸಾಲುಗಳ ಈ ಚಿಂತನೆಗಳಲ್ಲಿ ಸರಿ-ತಪ್ಪುಗಳ ವಿಶ್ಲೇಷಣೆ, ಸಾಮಾನ್ಯವಾಗಿ ಜನ ನಡೆದುಕೊಳ್ಳುವ ರೀತಿ, ಅಂತರಂಗದ ನಾನಾ ಭಾವಗಳನ್ನು ಹೊರತೆಗೆದು ನೋಡುವ ಪ್ರಯತ್ನ ಇದೆ. ಜೀವನದ ಸತ್ಯ, ಕಹಿಸತ್ಯ, ಜನರ ವಿಧ ವಿಧವಾದ ಮನಸ್ಸು, ಗುಣ-ಸ್ವಭಾವ, ನಡುವಳಿಕೆಗಳ ಪರಿಚಯ ಮಾಡಿಕೊಡಲು ನನ್ನಿಂದಾದಷ್ಟು ಯತ್ನಿಸಿದ್ದೇನೆ.ಎಲ್ಲಕ್ಕಿಂತ ಮುಖ್ಯವಾಗಿ ಆಷಾಢಭೂತಿಗಳ ಸೋಗನ್ನು ಕಳಚುವ ಸಂಗತಿಗಳಿವೆ. ಹದಿನೆಂಟು ಮಾತ್ರೆಗಳ ನಾಲ್ಕು ಸಾಲುಗಳಲ್ಲಿ ದೊಡ್ಡ ವಿಷಯಗಳನ್ನು ಚಿಕ್ಕದಾಗಿ ಪ್ರಾಸಬದ್ಧವಾಗಿ ಹೇಳುವ ತಂತ್ರ ಅಳವಡಿಸಿದ್ದರಿಂದ ಅವನ್ನು ಎಷ್ಟು ಬೇಕಾದರೂ ಹಿಗ್ಗಿಸಬಹುದು. ಒಳಾರ್ಥ, ವ್ಯಂಗ್ಯ, ಭಾವಾರ್ಥಗಳಿಂದ ಕೂಡಿರುವುದರಿಂದ ನಿಜಾರ್ಥ ಹೊಳೆಯುವಾಗ ನಿಧಾನವಾಗಬಹುದು. ವಿಷಯ, ಓದುಗರನ್ನು ಚಿಂತನೆಗೆ ಹಚ್ಚಿದರೆ ಬರೆದಿದ್ದು ಸಾರ್ಥಕ.
ತಮ್ಮವ
ಗಿರಿಮನೆ ಶ್ಯಾಮರಾವ್
Reviews
There are no reviews yet.