ವರ್ತಮಾನದ ರಾಜಕೀಯಕ್ಕೆ ಹಿಡಿದ ಕೈಗನ್ನಡಿ ಡಾ. ಲೋಹಿತ್ ನಾಯ್ಕರ ಅವರ ಉಮೇದುವಾರರು ಎಂಬ ಶೀರ್ಷಿಕೆಯ ಈ ಕಾದಂಬರಿಯು ನಾವು ವರ್ತಮಾನದಲ್ಲಿ ಕಾಣುತ್ತಿರುವ ರಾಜಕೀಯದ ಎಲ್ಲಾ ಮಗ್ಗಲುಗಳನ್ನು ತೆರೆದಿಡುವ ಅಪರೂಪದ ಕಥಾವಸ್ತುವಿನಿಂದ ಗಮನ ಸೆಳೆಯುತ್ತದೆ. ಡಾ. ಲೋಹಿತ್ ನಾಯ್ಕರ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದರಿಂದ ರಾಜಕೀಯದ ಒಳಹೊರಗನ್ನು ಬಲ್ಲವರಾಗಿದ್ದಾರೆ. ಹಾಗಾಗಿ ಅವರ ಅನುಭವದ ಮೂಸೆಯಿಂದ ಹೊರಬಂದಿರುವ ಈ ಕಾದಂಬರಿಯ ಕಥಾವಸ್ತುವಿಗೆ ಮತ್ತು ಇಲ್ಲಿನ ಪಾತ್ರಗಳಿಗೆ ಅಧಿಕೃತತೆ ದಕ್ಕಿರುವುದರಿಂದ ಕೃತಿಯ ಘನತೆಯನ್ನು ಹೆಚ್ಚಿಸಿದೆ.
ಹೈದರಾಬಾದ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಎರಡು ರಾಜಕೀಯ ಕುಟುಂಬಗಳಲ್ಲಿ ನಡೆಯುವ ಹಗ್ಗಜಗ್ಗಾಟದ ಜೊತೆಗೆ ಮಧ್ಯ ಕರ್ನಾಟಕದಲ್ಲಿ ಹಣ, ಹೆಂಡ ಮತ್ತು ಸಾರಾಯಿ ಇವುಗಳ ಜೊತೆಗೆ ಜಾತಿವ್ಯವಸ್ಥೆ ಹೇಗೆ ರಾಜಕೀಯ ದಾಳಗಳಾಗಬಲ್ಲವು ಎಂಬುದನ್ನು ಅತ್ಯಂತ ನವಿರಾದ ಹಾಗೂ ಲವಲವಿಕೆಯ ಭಾಷೆಯಲ್ಲಿ ಲೋಹಿತ್ ಹಿಡಿದಿಟ್ಟಿದ್ದಾರೆ. ಈ ಕಾದಂಬರಿಯನ್ನು ಓದುವಾಗ ನಮ್ಮ ಕಣ್ಣೆದುರು ಈಗಾಗಲೇ ಘಟಿಸಿ ಹೋಗಿರುವ ಹಲವು ಪ್ರತಿಷ್ಠಿತ ರಾಜಕೀಯ ಕುಟುಂಬಗಳ ದುರಂತ ಕಥನಗಳ ಚಿತ್ರಣ ಮನಸ್ಸಿನ ಪರದೆಯ ಮೇಲೆ ಹಾಯ್ದು ಹೋಗುತ್ತದೆ. ಇಲ್ಲಿ ಕಾದಂಬರಿಯ ಓದಿನ ವೇಗಕ್ಕೆ ಅನುಕೂಲವಾಗುವಂತೆ ರೋಚಕತೆ ಹಾಗೂ ಅನೇಕ ಅನಿರೀಕ್ಷಿತ ತಿರುವುಗಳು ಇವೆಲ್ಲವನ್ನೂ ಲೇಖಕರು ಹದವಾದ ಪಾಕದಂತೆ ಮಿಶ್ರಣ ಮಾಡಿರುವುದರಿಂದ ಓದುಗರ ಮನಸ್ಸನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಆಧುನಿಕ ವರ್ಗಕ್ಕೆ ಸಲ್ಲುವಂತಹ ಕಥಾವಸ್ತುವನ್ನು ಮತ್ತು ತಂತ್ರವನ್ನು ಡಾ. ಲೋಹಿತ್ ನಾಯ್ಕರ ಈ ಕಾದಂಬರಿಯಲ್ಲಿ ಬಳಸಿರುವುದು ವಿಶೇಷವಾಗಿದೆ. ರಾಜಕೀಯ ವಸ್ತುಗಳಿಲ್ಲದ ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಈ ಕಾದಂಬರಿಯನ್ನು ಕೊಡುಗೆಯನ್ನಾಗಿ ನೀಡಿರುವ ಲೋಹಿತ್ ನಾಯ್ಕರ ನಿಜಕ್ಕೂ ಅಭಿನಂದನಾರ್ಹರು.
– ಡಾ. ಎನ್. ಜಗದೀಶ್ ಕೊಪ್ಪ
Reviews
There are no reviews yet.