ಪಂಡಿತರಿಗೆ ರಂಗಭೂಮಿಯು ನಟ ನಾಟಕದ (ಮೂಲ ಪಾಠದ) ಸಾಲುಗಳನ್ನು ಹಾಡುವ, ಅವುಗಳನ್ನು ಮತ್ತಷ್ಟು ಚೆನ್ನಾಗಿ ಅರ್ಥ ಮಾಡಿಸಲು ಚಲನೆಯ ಸರಮಾಲೆಯಲ್ಲಿ ಚಿತ್ರಿಸುವ ಒಂದು ಸ್ಥಳ.
ಈ ರೀತಿಯಿಂದ ನೋಡಿದಾಗ ರಂಗಭೂಮಿಯು ನಾಟಕ ಸಾಹಿತ್ಯಕ್ಕೆ ತುಂಬ ಉಪಯುಕ್ತ ಸಹಾಯಕ. ಬೌದ್ಧಿಕ ರಂಗಭೂಮಿಯು ಇದೇ ಕಲ್ಪನೆಯ ಇನ್ನೊಂದು ರೂಪ. ಇದರ ಪ್ರತಿಪಾದಕರಿಗೆ ರಂಗಭೂಮಿಯು ವಾದ ವಿವಾದಗಳನ್ನು ನಡೆಸಲು ಇರುವ ಒಂದು ವೇದಿಕೆ. ಇಲ್ಲೂ ಕೂಡ ಮೂಲ ಪಾಠಕ್ಕೇ ಹೆಚ್ಚಿನ ಪ್ರಾಧಾನ್ಯ. ರಂಗಭೂಮಿ ಎಂದರೆ ಈ ಬೌದ್ಧಿಕ ಚರ್ಚೆಗಳನ್ನು ವೇದಿಕೆಯ ಮೇಲೆ ತಂದು ಅವುಗಳಿಗೆ ವಾದ-ಪ್ರತಿವಾದ ಹೂಡಿಸುವಂಥದ್ದು. ಮಧ್ಯಯುಗದ ವಾಗ್ ದ್ವಂದ್ವದ ಪುನರುಜ್ಜೀವನ ಇದು. ಸಾಮಾನ್ಯ ಪ್ರೇಕ್ಷಕನ ದೃಷ್ಟಿಯಿಂದ ರಂಗಭೂಮಿಯು ಮೊತ್ತಮೊದಲನೆಯದಾಗಿ ಮನರಂಜನೆಯನ್ನು ನೀಡುವ ಸ್ಥಳ. ಅವನು ಹಾಡುಗಳನ್ನು ಕೇಳಲು ಬಂದವನಾದರೆ ಮೂಲ ಪಾಠವೂ ಅವನಿಗೆ ರುಚಿಸುವುದಿಲ್ಲ. ಅವನಿಗೆ ತುಂಬ ಇಷ್ಟವಾಗುವುದೆಂದರೆ ‘ಹಾಸ್ಯ ಪ್ರಸಂಗಗಳು’ ಎಂದು ಕರೆಯುತ್ತೇವಲ್ಲ ಅದು. ಮೂಲ ಪಾಠದಲ್ಲೇ ಇರುವ ದ್ವಂದ್ವಾರ್ಥ ಕೊಡುವ ಶಬ್ದಗಳು ಮತ್ತು ವಿನೋದಾವಳಿಗಳು ಅವನಿಗೆ ಹಿಡಿಸುತ್ತವೆ. ಆಕರ್ಷಣೆಯ ಕೇಂದ್ರವಾಗಿ ನಟ ಅವನನ್ನು ಸೆಳೆಯುತ್ತಾನೆ. ಸಾಕಷ್ಟು ಕಡಿಮೆ ಬಟ್ಟೆ ಹಾಕಿಕೊಂಡ ಯುವ ನಟಿ ತನ್ನಷ್ಟಕ್ಕೇ ಒಂದು ಆಕರ್ಷಣೆಯಾಗಬಹುದು. ಏಕೆಂದರೆ ಬಹಳಷ್ಟು ಪ್ರೇಕ್ಷಕರು ಅವಳ ಪ್ರದರ್ಶನವನ್ನು ತಮ್ಮ ಸಂಸ್ಕೃತಿಯ ಮಾನದಂಡಗಳಿಂದಲೇ ವೀಕ್ಷಿಸುತ್ತಿರುತ್ತಾರೆ. ಆದರೆ ಹೀಗೆ ಮಾಡುವುದು ವೈಯಕ್ತಿಕ ಹತಾಶೆಯನ್ನು ತುಂಬಿಕೊಳ್ಳುವ ಪ್ರಯತ್ನಗಳೇ ಆಗಿರುತ್ತವೆ.
ಸಾಂಸ್ಕೃತಿಕ ಆಕಾಂಕ್ಷೆಗಳನ್ನು ಹಮ್ಮಿಕೊಂಡಿರುವ ಪ್ರೇಕ್ಷಕ ಸ್ವಲ್ಪ ಗಂಭೀರ ಪ್ರದರ್ಶನವನ್ನು ತೋರುವ ಕಂಪೆನಿಗಳಿಗೆ ಹೋಗುವುದುಂಟು. ದುರಂತ ನಾಟಕಗಳನ್ನೂ ಅವನು ಇಷ್ಟಪಡುತ್ತಾನೆ. ಆದರೆ ಅವುಗಳಲ್ಲಿ ಕೊಂಚವಾದರೂ ಮೆಲೊಡ್ರಾಮಾ ಇದ್ದೇ ಇರಬೇಕು. ಇಲ್ಲಿ ಅವನ ನಿರೀಕ್ಷೆಗಳೂ ಕೊಂಚ ಭಿನ್ನವಾಗಿಯೇ ಇರುತ್ತವೆ. ಮೊದಲನೆಯದಾಗಿ ಅವನಿಗೆ ‘ಕಲೆ’ಯನ್ನು ಪ್ರದರ್ಶಿಸುವ ಕಂಪೆನಿಗಳಿಗೆ ತಾನೂ ಹೋಗುತ್ತಾನೆ ಎಂದು ತೋರಿಸಿಕೊಳ್ಳುವುದು ಬೇಕು. ಎರಡನೆಯದಾಗಿ ಆತ್ಮಸಂತೃಪ್ತಿಯ ಭಾವವನ್ನುಂಟುಮಾಡುವ ಭಾವನೆಗಳನ್ನು ಅನುಭವಿಸಲು ಅವನು ಇಚ್ಛಿಸುತ್ತಾನೆ. ಅವನಲ್ಲಿ ಅಂತಿಗೊನೆಯ ಬಗ್ಗೆ ಕರುಣೆಯಾಗಲೀ, ಕ್ರೆಯಾನನ ಬಗ್ಗೆ ತಿರಸ್ಕಾರವಾಗಲೀ ಹುಟ್ಟದಿದ್ದರೂ, ನಾಯಕಿಯ ವಿಧಿಯನ್ನಾಗಲೀ, ತ್ಯಾಗವನ್ನಾಗಲೀ ಅವನು ಹಂಚಿಕೊಳ್ಳದಿದ್ದರೂ, ನೈತಿಕವಾಗಿ ತಾನು ಅವಳಿಗೆ ಸಮಾನ ಎಂದು ಅವನು ಭಾವಿಸುತ್ತಾನೆ. ಅವನಿಗೆ ಇದೊಂದು “ಉದಾತ್ತವಾಗಿ” ಭಾವಿಸುವ ಸಾಧ್ಯಾಸಾಧ್ಯತೆಯ ಪ್ರಶ್ನೆ ಅಷ್ಟೆ.
ಇಂಥ ಭಾವನೆಯ ಬೋಧನಾತ್ಮಕ ಗುಣಗಳು ಸಂಶಯಾಸ್ಪದವಾದವು. ಪ್ರೇಕ್ಷಕವರ್ಗ – ಎಲ್ಲರೂ ಕ್ರೆಯಾನ್ ಗಳೇ – ಪ್ರದರ್ಶನದುದ್ದಕ್ಕೂ ಅಂತಿಗೊನೆಯ ಪಕ್ಷವನ್ನೇ ವಹಿಸಿದ್ದರೂ ಅದು ಅವರು ಪ್ರದರ್ಶನದ ನಂತರ ಕ್ರೆಯಾನ್ ನಂತೆಯೇ ವರ್ತಿಸುವುದಕ್ಕೇನೂ ಅಡ್ಡಿಯನ್ನುಂಟುಮಾಡುವುದಿಲ್ಲ. ಅಸಂತೋಷಕರ ಬಾಲ್ಯವನ್ನು ಮುಂದಿಡುವ ನಾಟಕಗಳು ಯಾಕೆ ಜಯಭೇರಿ ಹೊಡೆಯುತ್ತವೆ ಎಂಬುದು ಗನಿಸಬೇಕಾದ ವಿಷಯ. ಒಂದು ಮುಗ್ಧ ಶಿಶುವಿನ ಅಳಲನ್ನು ರಂಗದ ಮೇಲೆ ನೋಡುವ ಪ್ರೇಕ್ಷಕನಿಗೆ ಅದರ ಬಗ್ಗೆ ಕರುಣೆ ತಾಳಲು ಇನ್ನಷ್ಟು ಸುಲಭವಾಗುತ್ತದೆ. ಹೀಗಾಗಿ ಅವನಿಗೆ ತನ್ನ ನೈತಿಕ ಮೌಲ್ಯಗಳ ಉನ್ನತ ಮಟ್ಟದ ಬಗ್ಗೆ ತನಗೇ ಖಾತರಿಯಾಗುತ್ತದೆ.
ರಂಗಭೂಮಿಯಲ್ಲಿರುವವರಿಗೇ ರಂಗಭೂಮಿಯನ್ನು ಕುರಿತ ಸ್ಪಷ್ಟ ಕಲ್ಪನೆಗಳಿರುವುದಿಲ್ಲ. ಒಬ್ಬ ಸಾಮಾನ್ಯ ನಟನಿಗೆ ರಂಗಭೂಮಿಯೆಂದರೆ ಮೊಟ್ಟ ಮೊದಲನೆಯದಾಗಿ “ತಾನೇ”; ತನ್ನ ಕಲಾತ್ಮಕ ಶೈಲಿಯಿಂದ ತಾನೇನು ಸಾಧಿಸಬಲ್ಲೆ ಎನ್ನುವುದಲ್ಲ. ಅವನೇ-ಅವನ ವೈಯಕ್ತಿಕ ಜೈವಿಕ ವ್ಯವಸ್ಥೆ – ರಂಗಭೂಮಿ. ಇಂಥ ಒಂದು ಧೋರಣೆ ಅವನಲ್ಲಿ ಒಂದು ರೀತಿಯ ಸೊಕ್ಕನ್ನೂ, ಆತ್ಮ ಸಂತೃಪ್ತಿಯನ್ನೂ ಹುಟ್ಟು ಹಾಕುತ್ತದೆ. ನಡೆದಾಡುವುದು, ಏಳುವುದು, ಕುಳಿತುಕೊಳ್ಳುವುದು, ಸಿಗರೇಟ್ ಹಚ್ಚುವುದು, ಜೇಬುಗಳಲ್ಲಿ ಕೈ ಹಾಕಿಕೊಳ್ಳುವುದು ಮುಂತಾದ ತೀರಾ ಸಾಮಾನ್ಯ, ಅಪಕ್ವ, ಯಾವ ವಿಶಿಷ್ಟ ತಿಳುವಳಿಕೆಯನ್ನೂ ಬೇಡದ ಕ್ರಿಯೆಗಳಲ್ಲಿ ಮಾತ್ರ ತೊಡಗುವಂತೆ ಮಾಡುತ್ತವೆ. ನಟನ ಅಭಿಪ್ರಾಯದಲ್ಲಿ ಈ ಕ್ರಿಯೆಗಳು ಇನ್ನೇನನ್ನೋ ಹೇಳುವುದಕ್ಕಾಗಿರದೆ ತಮ್ಮಷ್ಟಕ್ಕೆ ತಾವು ಇರುತ್ತವೆ. ಏಕೆಂದರೆ ನಟನೇ ರಂಗಭೂಮಿಯಾಗಿರುತ್ತಾನಲ್ಲ! ಪ್ರೇಕ್ಷಕನನ್ನು ಖುಷಿಪಡಿಸುವ ಒಂದು ಅಂಶ ನಟನಲ್ಲಿತ್ತೋ ಅವನ ನಂಬಿಕೆಗಳು ಇನ್ನಷ್ಟು ಭದ್ರಗೊಳ್ಳುತ್ತವೆ.
Reviews
There are no reviews yet.