‘ಕಣ್ಣಾ ಮುಚ್ಚೆ… ಕಾಡೇ ಗೂಡೇ…’ ಒಂದು ಯಶೋಗಾಥೆ; ಕಲಾವಿದೆಯೊಬ್ಬಳ ಯಶಸ್ಸಿನ ಹಿಂದಿನ ಅಗ್ನಿದಿವ್ಯಗಳ ಅನಾವರಣ. ಇಲ್ಲಿ ಬದುಕು ಒಂದು ಸಮುದ್ರದ ಘನತೆ ಪಡೆದುಕೊಂಡಿದೆ. ಅದನ್ನು ಮೊಗೆಯಲು ಬೊಗಸೆಯನ್ನು ನಂಬಿ ಹೊರಟ ಪ್ರೀತಿ ನಾಗರಾಜರು ತಮ್ಮ ಪುಟ್ಟ ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಾದಷ್ಟನ್ನು ನಮಗೂ ಹಂಚಿದ್ದಾರೆ. ಪದ್ಮಶ್ರೀ ಡಾ. ಬಿ. ಜಯಶ್ರೀ ಈ ನಾಡು ಕಂಡ ಅಸಾಧಾರಣ ಕಲಾವಿದೆ.
ಬಾಲ್ಯವೆಲ್ಲ ರಂಗದ ಮೇಲೆಯೇ ಕಳೆದ ಬಾಲೆ ಆ ದಿನಗಳನ್ನು ನೆನಪಿಸಿಕೊಳ್ಳುವ ಪರಿಯಲ್ಲೇ ನಾಡಿನ ಶ್ರೀಮಂತ ಕಲಾಪರಂಪರೆಯೊಂದು ತನ್ನೊಂದಿಗೇ ನೂರಾರು ಕುಟುಂಬಗಳನ್ನು ಬದುಕಿಸುತ್ತ ಜಾತಿ, ಮತ, ಭೇದವಿಲ್ಲದ ಸಮಸಮಾಜದ ಪರಿಕಲ್ಪನೆಗೆ ಮಾದರಿಯೋ ಎಂಬಂತೆ ಬೆಳೆದುಬಂದ ಬಗೆಯೊಂದು ತೆರೆದುಕೊಳ್ಳುತ್ತದೆ.
ಕಲಾವಿದರ ಬದುಕಿನಲ್ಲಿ ವೈಯಕ್ತಿಕ ಬದುಕಿನ ನೋವು, ಸಂಕಟ, ಸಾವು, ಕಡೆಗೆ ವಿವಾಹ, ಸಂಸಾರ ಎಲ್ಲವೂ ಹೇಗೆ ವ್ಯಕ್ತಿಯ ಪರಿಧಿಯನ್ನು ಮೀರಿ ಕೇವಲ ಕಲೆಗಾಗಿ ಸಾರ್ವತ್ರಿಕವಾಗಿ ಬಿಡುತ್ತದೆಂಬುದನ್ನು ಜಯಶ್ರೀ ತಮ್ಮ ತಾಯಿಯ ವಿವಾಹ, ಮರುವಿವಾಹ, ವಿದ್ಯುತ್ ಶಾಕ್ನಿಂದಾಗಿ ಸಂಭವಿಸಿದ ದುರಂತ ಆಕೆಯ ಕಲಾಜೀವನವನ್ನೇ ಕಸಿದುಕೊಂಡ ಬಗೆಯ ವಿವರಣೆಗಳಲ್ಲಿ ಕಟ್ಟಿಕೊಡುತ್ತಾರೆ. ಒಂದೊಂದು ಪ್ರಸಂಗವೂ ಬದುಕಿನ ಒಂದೊಂದು ದೊಡ್ಡ ಮೌಲ್ಯವನ್ನು ಯಾವ ಉಪದೇಶದ ಪೋಜûೂ ಇಲ್ಲದೆ ಅರ್ಥಮಾಡಿಸುತ್ತದೆ.
ಜಯಶ್ರೀ ವೃತ್ತಿರಂಗಭೂಮಿಯ ಕಲಾವಿದೆಯಾಗಿ ತನ್ನ ತಾತನ ಕಂಪನಿಯನ್ನೆ ಮುಂದುವರಿಸಿಕೊಂಡು ಹೋಗುವುದು ಆಕೆ ಮನಸ್ಸು ಮಾಡಿದ್ದರೆ ಅಸಾಧ್ಯದ ಮಾತೇನಲ್ಲ, ಆದರೆ ಹತ್ತರ ಜೊತೆಗೆ ಒಂದು ಸೇರಿ ಹನ್ನೊಂದಾಗುವ ಜಾಯಮಾನದವರಲ್ಲ ಜಯಶ್ರೀ. ಆಕೆಯ ತುಡಿತ ಸದಾ ಹೊಸತರ ಕಡೆಗೆ. ನಾಟಕವಾಗಲೀ, ಸಂಗೀತವಾಗಲೀ, ಕಂಠದಾನವಾಗಲೀ, ಅಭಿನಯವಾಗಲೀ, ನಿರ್ದೇಶನವಾಗಲೀ, ಪ್ರದರ್ಶನವಾಗಲೀ, ಕಡೆಗೆ ತಾನು ಅಭಿವ್ಯಕ್ತಿಸುವ ವಸ್ತುವಾಗಲೀ ಎಲ್ಲದರಲ್ಲೂ ಹೊಸದನ್ನು ಕಟ್ಟುವ ಕ್ರಿಯೆಯೇ ಆಕೆಗೆ ಬಹುಮುಖ್ಯ. ಅಂತೆಯೇ ಅವರು “ನಾಟಕ ನಿರ್ದೇಶನ ಅಲ್ಲ; ಪ್ರದರ್ಶನ ಅಲ್ಲ… ಅದು ಕಟ್ಟುವ ಕ್ರಿಯೆ. ಅಲ್ಲಿ ಒಂದು ಕ್ರಿಯಾತ್ಮಕ ದನಿ ಇದೆ. ಗರ್ಭ ಕಟ್ಟಿದರೆ ಮಗು ಜನಿಸುತ್ತದೆ; ನಾಟಕ ಕಟ್ಟಿದರೆ ದೃಶ್ಯಕಾವ್ಯವಾಗುತ್ತದೆ” ಅನ್ನುತ್ತಾರೆ.
ಈ ಮಹಾನ್ ಸಾಧಕಿಯ ಬದುಕನ್ನು, ಸಾಧನೆಯನ್ನು ಆಕೆಯ ಮಾತುಗಳಲ್ಲೇ ಕಟ್ಟಿಕೊಡುವ ಸಾಹಸ ಮಾಡಿದ್ದಾರೆ ಪ್ರೀತಿ ನಾಗರಾಜ್. ಇದು ಜಯಶ್ರೀ ಅವರ ಬಹುದೊಡ್ಡ ರಂಗ-ಬದುಕಿನ ಪಯಣದ ಒಂದು ಪುಟ್ಟ ಝಲಕ್. ಜಯಶ್ರೀ ವ್ಯಕ್ತಿತ್ವದ ಅಸ್ಮಿತೆಗಾಗಿ ತುಡಿಯುವ ಹೆಣ್ಣು. ಎಂಥ ನೋವಿನಲ್ಲೂ ಅಳಿಯದ ಆತ್ಮಗೌರವ ಆಕೆಯದು.
-ವಿಜಯಾ (ಮನ್ನುಡಿಯಿಂದ)
Reviews
There are no reviews yet.