ಸೋಮಣ್ಣನ ಸೆಕೆಂಡ್ ಹ್ಯಾಂಡ್ ಲಾರಿ!

ಸೋಮಣ್ಣನ ಸೆಕೆಂಡ್ ಹ್ಯಾಂಡ್ ಲಾರಿ!

ನಾನು ಮತ್ತು ಗೋಪಾಲಕೃಷ್ಣ ಗಾಂಧೀಪಾರ್ಕಿನ ಕಟ್ಟೆಯ ಮೇಲೆ ಕೂತು, ಸುಮಾರು ಇಪ್ಪತ್ತು ವರುಷಗಳ ಹಿಂದಿನ ಸಂಜೆಗಳನ್ನು ಮೆಲುಕುಹಾಕುತ್ತಿರುವ ಹೊತ್ತಿಗೇ, ಸೋಮಣ್ಣ ಏದುಸಿರುಬಿಡುತ್ತಾ ಓಡಿ ಬರುವುದು ಕಾಣಿಸಿತು. ಇಲ್ಲಿಂದ ಪಾರಾಗೋಣ, ಬಾ. ಸೋಮಣ್ಣನ ಕೈಗೆ ಸಿಕ್ಕಿಹಾಕ್ಕೊಂಡರೆ ಜೀವ ತಿಂತಾನೆ ಎಂದು ಎದ್ದುಹೋಗುವ ವ್ಯರ್ಥ ಪ್ರಯತ್ನ ಮಾಡಿದ ಗೋಪಾಲಕೃಷ್ಣ. ಆದರೆ, ಸೋಮಣ್ಣನ ಗುರಿ ಅವನೇ ಆಗಿದ್ದರಿಂದ ತನ್ನ ಕುಂಟುಕಾಲನ್ನು ಬೀಸ ಬೀಸ ಹಾಕುತ್ತಾ ಸೋಮಣ್ಣ ಸಮೀಪಿಸಿಯೇ ಬಿಟ್ಟ.
ಸೋಮಣ್ಣನಿಗೆ ನನ್ನ ಗುರುತು ಹತ್ತಲಿಲ್ಲ. ಅವನು ನನ್ನನ್ನು ನೋಡಿ ಇಪ್ಪತ್ತು ವರ್ಷ ಕಳೆದಿರಬೇಕು. ನಾನು ಉಪ್ಪಿನಂಗಡಿ ಬಿಡುವ ಹೊತ್ತಿಗೆ ಅವನು ಗಾಂಧೀಪಾರ್ಕಿನಿಂದ ಸರ್ಕಾರಿ ಕಾಲೇಜಿಗೆ ಹೋಗುವ ರಸ್ತೆಯಲ್ಲೊಂದು ಸ್ಕೂಟರ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ. ಅವನನ್ನು ನಮ್ಮೂರಿನ ಯಾರೂ ಮೆಕ್ಯಾನಿಕ್ ಎಂದು ಪರಿಗಣಿಸಿರಲಿಲ್ಲ. ಹೀಗಾಗಿ ಹಳೆಯ ಬಜಾಜ್ ಸ್ಕೂಟರಿನ ಪ್ಲಗ್ ಕ್ಲೀನ್ ಮಾಡುವುದಕ್ಕೋ ಕಿತ್ತುಹೋದ ಕ್ಲಚ್ ಕೇಬಲ್ ಹಾಕಿಸುವುದಕ್ಕೋ ಮಾತ್ರ ಅವನಲ್ಲಿಗೆ ಬರುತ್ತಿದ್ದುದು. ಮೇಜರ್ ರೀಪೇರಿ ಇದ್ದರೆ ಅವರೆಲ್ಲ ದೂರದ ಪುತ್ತೂರಿಗೆ ಹೋಗುತ್ತಿದ್ದರು. ಹೇಗಾದ್ರೂ ಪುತ್ತೂರು ತನಕ ಹೋಗೋ ಹಾಗೆ ಮಾಡ್ಕೊಡೋ ಮಾರಾಯ, ಅಲ್ಲಿ ರಿಪೇರಿ ಮಾಡಿಸ್ತೀವಿ ಅಂತ ಅವನ ಹತ್ತಿರವೇ ಹೇಳಿ ಹೋಗುತ್ತಿದ್ದರೂ ಅವನಿಗೇನೂ ಅದರಿಂದ ಬೇಸರ ಆಗುತ್ತಿರಲಿಲ್ಲ. ಎಲ್ಲಾದರೂ ಮಾಡಿಸ್ಕೊಳ್ಳಲಿ ಬಿಡಿ,ಊರಿನವರು ಅಂದ್ರೆ ಎಲ್ಲರಿಗೂ ಸಸಾರ. ನಮ್ಮ ಬೆಲೆ ಗೊತ್ತಾಗಬೇಕಿದ್ರೆ ಬೇರೆ ಊರಿಗೆ ಹೋಗಬೇಕು ಅಂತ ತನ್ನ ಹತಾಶೆಯನ್ನು ಇಡೀ ಊರಿನ ಮೇಲೆ ಕಾರಿಕೊಂಡು ಸೋಮಣ್ಣ ಸುಮ್ಮನಾಗುತ್ತಿದ್ದ.
ನನಗೂ ಫಕ್ಕನೆ ಸೋಮಣ್ಣನ ಗುರುತು ಹತ್ತಲಿಲ್ಲ. ನಾನು ಊರು ಬಿಡುವ ಹೊತ್ತಿಗೆ ಅವನು ನೀಲಗಪ್ಪು ಬಣ್ಣದ ಪ್ಯಾಂಟು ಅದೇ ಕಲ್ಲರಿನ ಶರ್ಟು ಹಾಕಿಕೊಂಡು ಜೋಬಲ್ಲಿ ಸದಾ ಕಟಿಂಗ್ ಪ್ಲೇಯರ್,ಸ್ಕ್ರೂಡ್ರೈವರ್ ಇಟ್ಟುಕೊಂಡು ಓಡಾಡುತ್ತಿದ್ದ. ಮೆಕ್ಯಾನಿಕ್ ಆಗಿರುವುದು ಎಂದರೆ ಕೈಗೆ ಬಟ್ಟೆಗೆ ಗ್ರೀಸ್ ಮೆತ್ತಿಕೊಂಡು ಸಾಧ್ಯವಾದಷ್ಟೂ ಕೊಳಕಾಗಿರುವುದು ಎಂದು ಅವನೇ ನಿರ್ಧಾರ ಮಾಡಿದಂತಿತ್ತು. ಅವನ ಶರ್ಟು ಮುಟ್ಟಿದರೆ, ಆಗ ತಾನೇ ಪ್ರಿಂಟಾದ ಪೇಪರ್ ಮುಟ್ಟಿದಂತೆ ಕೈಯೆಲ್ಲ ಕಪ್ಪಾಗುತ್ತಿತ್ತು.
ಆದರೆ, ಆ ಸಂಜೆ ನಮ್ಮಮುಂದೆ ಹಾಜರಾದ ಸೋಮಣ್ಣ ಹಾಗಿರಲಿಲ್ಲ. ಬಿಳಿ ಪ್ಯಾಂಟು, ಬಿಳಿ ಶರ್ಟು,ಬೆಳ್ಳಗಿನ ಚಪ್ಪಲಿ, ಎಡಗೈಯಲ್ಲಿ ನಾಲ್ಕು , ಬಲಗೈಯಲ್ಲಿ ಎರಡು ಉಂಗುರ ಹಾಕಿಕೊಂಡಿದ್ದ. ಅವನ ಮಾತೂ ಬದಲಾಗಿತ್ತು.
‘ಒಂದು ಅನಾಹುತ ಆಗಿದೆ. ನೀವೇ ಏನಾದ್ರೂ ಮಾಡಬೇಕು’ ಎಂದು ಸೋಮಣ್ಣ ನನ್ನ ಮುಂದೆ ಹೇಳಲೋ ಬೇಡವೋ ಅಂತ ಅನುಮಾನಿಸಿದ. ಗೋಪಿ ನನ್ನ ಪರಿಚಯ ಮಾಡಿಕೊಡುತ್ತಾನೆ ಎಂದು ನನಗೆ ಖಾತ್ರಿಯಾಗುತ್ತಿದ್ದಂತೆ ನಾನು ‘ ನೀವು ಮಾತಾಡಿಕೊಳ್ಳಿ, ನಾನೀಗ ಬಂದೆ’ ಎಂದು ವಜ್ರನ ಅಂಗಡಿಯತ್ತ ಕಾಲು ಹಾಕಿದೆ.
‘ಅಯ್ಯೋ, ಅವನ ಸಮಸ್ಯೆಗೆ ಪರಿಹಾರವೇ ಇಲ್ಲ, ಮಾರಾಯ. ಯಾವತ್ತೂ ಇದೇ ರಗಳೆ’ ಅನ್ನುತ್ತಾ ಗೋಪಿ ಬೇಸರದ ಮುಖ ಮಾಡಿಕೊಂಡು ಸಿಗರೇಟು ಸೇದುತ್ತಾ ನಿಂತ ನನ್ನ ಹತ್ತಿರ ಬರುವ ಹೊತ್ತಿಗೆ ಪೂರ್ತಿ ಕತ್ತಲಾಗಿತ್ತು. ಸೋಮಣ್ಣ ಮತ್ತೆ ಮತ್ತೆ ಗೋಪಿಗೆ ಕೈ ಸನ್ನೆ ಮಾಡುತ್ತಾ ಶಿವಕೀರ್ತಿ ಹೊಟೆಲಿನ ಪಕ್ಕದಲ್ಲಿದ್ದ ಬಾರಿನೊಳಗೆ ಕಣ್ಮರೆಯಾದ. ಸೋಮಣ್ಣನ ಸಮಸ್ಯೆ ಏನು ಎಂದು ಕೇಳುವ ಉತ್ಸಾಹವೂ ನನ್ನಲ್ಲಿರಲಿಲ್ಲ. ನಮ್ಮ ಸಂಜೆಯನ್ನು ಹಾಳು ಮಾಡಿದವನ ಬಗ್ಗೆ ಸಿಟ್ಟು ಉಕ್ಕುತ್ತಿತ್ತು.
ಸುರೇಂದ್ರನ ಪುಟ್ಟ ಗೂಡಲ್ಲಿ ನಾವು ಸ್ಥಾಪಿತರಾಗಿ, ಅವನು ಬಹಳ ದಿನಗಳಿಂದ ನನಗೋಸ್ಕರ ಅಂತ ತಂದಿಟ್ಟಿದ್ದ ವಿಸ್ಕಿಗೆ ತುಟಿಯಿಟ್ಟಾಗ ಸೋಮಣ್ಣನ ಕತೆ ಮತ್ತೆ ಬಿಚ್ಚಿಕೊಂಡಿತು. ಆ ದಿನಗಳಲ್ಲಿ ಸೋಮಣ್ಣ ನಮ್ಮ ತಮಾಷೆಗೆ ವಸ್ತುವಾಗಿದ್ದವನು. ಅವನನ್ನು ನಾವೆಲ್ಲ ಆಕ್ಸಿಡೆಂಟ್ ಸೋಮಣ್ಣ ಅಂತಲೇ ಕರೆಯುತ್ತಿದ್ದದ್ದು. ಅವನು ವಿಧವಿಧವಾಗಿ ಅಪಘಾತಕ್ಕೆ ತುತ್ತಾಗುತ್ತಿದ್ದ.
ಅವನು ತಲೆಯೊಡೆದುಕೊಂಡು ಆಸ್ಪತ್ರೆಯಲ್ಲಿ ಮಲಗಿದ್ದಾಗ ಒಂದು ಸ್ವಾರಸ್ಯಕರ ಕತೆ ಹಬ್ಬಿತ್ತು. ಆಗಷ್ಟೇ,ಸೋಮಣ್ಣ ನಮ್ಮೂರ ಶಾನುಭೋಗರ ಆಸ್ಟಿನ್ ಆಫ್ ಇಂಗ್ಲೆಂಡ್ ಕಾರನ್ನು ರಿಪೇರಿ ಮಾಡುವುದಾಗಿ ಹೇಳಿ ತಂದಿಟ್ಟುಕೊಂಡಿದ್ದ.ಅವರಿಗೆ ಯಾವುದೋ ಕಾಲದಲ್ಲಿ ಯಾರೋ ಬ್ರಿಟಿಷ್ ಅಧಿಕಾರಿ ಬಳುವಳಿಯಾಗಿ ಕೊಟ್ಟ ಕಾರದು. ನಮ್ಮೂರಿನ ದೇವಸ್ಥಾನದ ಜಾತ್ರೆಗೆ ಅದೇ ಕಾರಲ್ಲಿ ಅವರು ಬರಬೇಕು. ಆ ದಿನ ಬಿಟ್ಟರೆ ಆ ಕಾರು ಓಡಿದ್ದನ್ನು ಯಾರೂ ಕಂಡಿಲ್ಲ. ಉಳಿದ ದಿನಗಳಲ್ಲಿ ಅದು ರಿಪೇರಿಯಲ್ಲಿರುತ್ತಿತ್ತು. ಅದರ ಸ್ಪೇರ್ ಪಾರ್ಟುಗಳೂ ಸಿಗುತ್ತಿರಲಿಲ್ಲ.
ಅದನ್ನು ರಿಪೇರಿ ಮಾಡುವ ಗುರುತರ ಜವಾಬ್ದಾರಿ ಹೊತ್ತುಕೊಂಡು ಉಪ್ಪಿನಂಗಡಿ ಪೇಟೆಗೆ ತಂದ ಸೋಮಣ್ಣ ಅದರಿಂದಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಅವನ ಎರಡು ತಿಂಗಳ ಸತತ ಪ್ರಯತ್ನದಿಂದ ಒಂದು ಮುಂಜಾನೆ ಆ ಕಾರು ಅಂತೂ ಸ್ಟಾರ್ಟಾಯಿತು. ಆ ಖುಷಿಯಲ್ಲಿ ಅವನು ಅದನ್ನು ಶಾನುಭೋಗರ ಮನೆಗೆ ತಲುಪಿಸಲು ಹೊರಟಿದ್ದ. ವೇಗ ಕಮ್ಮಿಮಾಡಿದರೆ ಇಂಜಿನ್ನಿಗೆ ಪೆಟ್ರೋಲು ಸರಬರಾಜಾಗದೇ ಬಂದ್ ಬೀಳುತ್ತಿತ್ತು. ಹೀಗಾಗಿ ಅವನು ಒಂದು ವೇಗವನ್ನು ಮೇಂಟೇನ್ ಮಾಡಲೇಬೇಕಿತ್ತು.
ಹಾಗೆ ಒಂದೇ ವೇಗದಲ್ಲಿ ತನ್ನ ಮನೆಯಿಂದ ಮುಖ್ಯರಸ್ತೆಗೆ ಬರುತ್ತಿದ್ದ ಸೋಮಣ್ಣನ ಮುಂದೆ ಸೊಸೈಟಿಗೆ ಹಾಲು ಒಯ್ಯುತ್ತಿದ್ದ ಸೀನ ಸೈಕಲ್ಲಿನಲ್ಲಿ ಹೋಗುತ್ತಿದ್ದ. ಅವನ ವೇಗಕ್ಕೂ ಸೋಮಣ್ಣನ ವೇಗಕ್ಕೂ ತಾಳೆಯಾಗುತ್ತಿರಲಿಲ್ಲ. ಸೋಮಣ್ಣ ಎಷ್ಟು ಹಾರ್ನ್ ಮಾಡಿದರೂ ಸೀನ ಸೈಡ್ ಬಿಟ್ಟುಕೊಡಲಿಲ್ಲ. ಸೋಮಣ್ಣನ ಪಿತ್ಥ ನೆತ್ತಿಗೇರಿ, ಮತ್ತಷ್ಟು ಹಾರ್ನ್ ಮಾಡಿದರೂ ಸೀನ ತಿರುಗಿಯೂ ನೋಡಲಿಲ್ಲ. ಹಾವಿನ ಹಾಗೆ ರಸ್ತೆತುಂಬ ಹರಿದಾಡುತ್ತಾ ತನ್ನ ವೇಗದಲ್ಲೇ ಸಾಗುತ್ತಿದ್ದ. ಕೊನೆಗೆ ಸೋಮಣ್ಣ ಕ್ಲಚ್ ಮೇಲೆ ಕಾಲಿಟ್ಟು ಅನಗತ್ಯವಾಗಿ ಆಕ್ಸಲರೇಟರ್ ತುಳಿದು ಕಾರೋಡಿಸಬೇಕಾಗಿ ಬಂತು.
ಮುಖ್ಯರಸ್ತೆಗೆ ಬರುತ್ತಿದ್ದಂತೆ ಸೋಮಣ್ಣ ಕೆಂಡಾಮಂಡಲವಾಗಿದ್ದ. ಸೀನನನ್ನು ಓವರ್ ಟೇಕ್ ಮಾಡಿಕೊಂಡು ಹೋಗಿ, ಅವನ ಸೈಕಲ್ಲಿನ ಮುಂದೆ ಕಾರು ನಿಲ್ಲಿಸಿ, ‘ಕೊಲ್ತೀನಿ ನಿನ್ನ, ಫಟಿಂಗ’ ಎಂದು ಅವಡುಗಚ್ಚಿ ಕಾರಿಂದ ಹೊರಗೆ ತಲೆ ಅಪ್ಪಳಿಸಿ ಅಬ್ಬರಿಸಿದ.
ಅವನಿಗೆ ಎಚ್ಚರವಾದದ್ದು ಕೆ ಜಿ ಭಟ್ಟರ ಆಸ್ಪತ್ರೆಯಲ್ಲೇ. ಸಿಟ್ಟಿನ ಭರದಲ್ಲಿ ಕಾರಿನ ಗಾಜು ಏರಿಸಿದ್ದನ್ನೂ ಮರೆತು ಸೋಮಣ್ಣ ತಲೆಯನ್ನು ಬಲವಾಗಿ ಹೊರಗೆ ಹಾಕಿ, ಸೀನನತ್ತ ಆರ್ಭಟಿಸಿದ್ದ. ಆ ರಭಸಕ್ಕೆ ಕಾರಿನ ಗಾಜು ಪುಡಿಪುಡಿಯಾಗಿ ಸೋಮಣ್ಣನ ಹಣೆ ಒಡೆದುಹೋಗಿತ್ತು. ಹೊರಗೆ ಸೈಕಲ್ಲಿಗೆ ಕತ್ತರಿಕಾಲು ಹಾಕಿ ನಿಂತಿದ್ದ ಸೀನನಿಗೆ ಸೋಮಣ್ಣ ತನ್ನ ಮುಂದೆ ಕಾರು ನಿಲ್ಲಿಸಿ ಗಾಜಿಗೆ ತಲೆ ಚಚ್ಚಿಕೊಂಡದ್ದು ಯಾಕೆ ಅನ್ನುವುದು ಗೊತ್ತೇ ಆಗಿರಲಿಲ್ಲ.
ಅಂಥ ಸೋಮಣ್ಣನಿಗೆ ಇದ್ದಕ್ಕಿದ್ದಂತೆ ಲಾರಿ ಕೊಳ್ಳುವ ಹುಚ್ಚು ಹಿಡಿಯಿತಂತೆ. ‘ಸುಬ್ರಹ್ಮಣ್ಯದ ಇಸ್ಮಾಯಿಲ್ ಸಾಹೇಬರು ಇವನ ತಲೆ ಕೆಡಿಸಿದ್ದು. ಒಳ್ಳೇ ಬಾಡಿಗೆ ಸಿಗುತ್ತೆ, ಲಾರಿ ತಗೊಳ್ಳಿ ಅಂತ ಇಸ್ಮಾಯಿಲ್ ಸಾಹೇಬರಿಗೆ ದುಬೈಯಲ್ಲಿರುವ ಅವರ ಅಣ್ಣನ ಮಗ ಬಹಳ ವರ್ಷಗಳಿಂದ ಹೇಳುತ್ತಾ ಬಂದಿದ್ದನಂತೆ. ಅದಕ್ಕೆ ಬೇಕಾದ ದುಡ್ಡನ್ನೂ ಅವನೇ ಕಳಿಸಿಕೊಟ್ಟಿದ್ದನಂತೆ.
ಕೊನೆಗೂ ಇಸ್ಮಾಯಿಲ್ ಸಾಹೇಬರು ಮನಸ್ಸು ಮಾಡಿ ಸೆಕೆಂಡ್ ಹ್ಯಾಂಡ್ ಲಾರಿಯೊಂದನ್ನು ಕೊಂಡು ತಂದರು. ಅದನ್ನು ಓಡಿಸುವುದಕ್ಕೆ ಕೇರಳದಿಂದ ಹಮೀದ್ ಎಂಬ ತಾರುಣ್ಯ ಉಕ್ಕುವ ಡ್ರೈವರನನ್ನೂ ಗೊತ್ತು ಮಾಡಿಕೊಂಡರು.
ಅವನು ಸಾಹೇಬರ ಮನೆಯಲ್ಲಿದ್ದದ್ದು ಮೂರೇ ವಾರ. ಒಂದು ಬೆಳಗ್ಗೆ ಎದ್ದು ನೋಡುವ ಹೊತ್ತಿಗೆ ಸಾಹೇಬರ ಮೂರನೇ ಹೆಂಡತಿ ಜಲೀಲಳೂ ಇರಲಿಲ್ಲ. ಹಮೀದನೂ ಇರಲಿಲ್ಲ. ತನ್ನನ್ನು ಈ ಸಂಕಟಕ್ಕೆ ತಳ್ಳಿದ್ದು ಲಾರಿಯೇ ಎಂದು ನಿರ್ಧರಿಸಿದ ಸಾಹೇಬರು ಲಾರಿ ಮಾರಲು ನಿರ್ಧಾರ ಮಾಡಿಬಿಟ್ಟಿದ್ದರು. ೨೦೦೫ ಮಾಡೆಲ್ ಲಾರಿ, ಐದೇ ಲಕ್ಷ, ಎಲ್ಲ ಚೆನ್ನಾಗಿ ಆದರೆ ಎರಡೇ ವರ್ಷಕ್ಕೆ ದುಡಿಯಬಹುದು,ಬ್ಯಾಂಕ್ ಲೋನ್ ಕೂಡ ಸಿಗುತ್ತೆ ಅಂತ ಇಸ್ಮಾಯಿಲ್ ಸಾಹೇಬರು ಆಕರ್ಷಕವಾಗಿ ಹೇಳಿದ್ದನ್ನು ಕೇಶವ ಮಣಿಯಾಣಿ ಸೋಮಣ್ಣನಿಗೆ ಹೇಳಿ ತಲೆಕೆಡಿಸಿದ. ಸೋಮಣ್ಣ ಸಿಂಡಿಕೇಟ್ ಬ್ಯಾಂಕಲ್ಲಿ ಐದು ಲಕ್ಷ ಸಾಲ ಮಾಡಿ ಲಾರಿ ಕೊಂಡುಕೊಂಡೇ ಬಿಟ್ಟ.
ಚಿಕ್ಕನಾಯಕನ ಹಳ್ಳಿಯಿಂದ ಮಂಗಳೂರಿಗೆ ಅದಿರು ಸಾಗಿಸುವ ಲಾರಿಗಳ ಸಾಲಿಗೆ ಸೋಮಣ್ಣನ ಲಾರಿಯೂ ಸೇರಿಕೊಂಡಿತು. ಮೂರು ತಿಂಗಳು ಒಳ್ಳೆಯ ಲಾಭವೂ ಬಂತು. ಸೋಮಣ್ಣ ಊರವರ ಹತ್ತಿರ ಈ ತೋಟ, ಹೈನುಗಾರಿಕೆ, ಕೃಷಿ ಎಲ್ಲಾ ವೇಶ್ಟು. ಒಂದು ಲಾರಿ ಇಟ್ಟುಕೊಂಡ್ರೆ ಆರಾಮಾಗಿ ಬದುಕಬಹುದು. ನಾನು ಇಷ್ಟರಲ್ಲೇ ಇನ್ನೊಂದು ಲಾರಿ ತಗೋತೀನಿ’ ಅಂತೆಲ್ಲ ಹೇಳುತ್ತಿದ್ದ. ಎಲ್ಲರೂ ಅಸೂಯೆ ಪಡುವ ಹಾಗೆ ಹೊಸ ಅವತಾರದಲ್ಲಿ ಕಂಗೊಳಿಸತೊಡಗಿದ.
ಆದರೆ, ಒಮ್ಮೆ ಮಾರನಹಳ್ಳಿ ಚೆಕ್‌ಪೋಸ್ಟಿನ ಹತ್ತಿರ ಲಾರಿ ಕೆಟ್ಟು ನಿಂತಿತು. ಡ್ರೈವರ್ ಮೋನಪ್ಪ ಇಂಜಿನ್ ಆಯಿಲ್ ಚೆಕ್ ಮಾಡಿರಲಿಲ್ಲ ಎಂದು ಸೋಮಣ್ಣ ಅವನ ಮೇಲೆ ಕೂಗಾಡಿದ. ಲಾರೀನ ಸರ್ವೀಸೇ ಮಾಡಿಸ್ತಿರಲಿಲ್ಲ. ಈ ಸ್ಕೂಟರ್‌ನ ಸ್ಪಾರ್ಕ್ ಪ್ಲಗ್ ಕ್ಲೀನ್ ಮಾಡುವವ ಲಾರಿ ಸರ್ವೀಸ್ ಮಾಡ್ತೀನಿ ಅಂದ್ರೆ ಹೀಗೇ ಆಗೋದು ಅಂತ ಮೋನಪ್ಪ ಎಲ್ಲರ ಹತ್ತಿರವೂ ಸೋಮಣ್ಣನೇ ಲಾರಿ ರಿಪೇರಿ ಮಾಡುತ್ತಿದ್ದದ್ದನ್ನು ಗುಟ್ಟಾಗಿ ಹೇಳಿಕೊಂಡು ಬಂದ. ಹೀಗೆ ಎರಡು ಮೂರು ಸಾರಿ ಆಗುವಷ್ಟರಲ್ಲಿ ಚಿಕ್ಕನಾಯ್ಕನಹಳ್ಳಿಯಲ್ಲಿ ಗ್ರಾಮಸ್ಥರೆಲ್ಲ ದಂಗೆಯೆದ್ದು ಗಣಿಗಾರಿಕೆ ನಿಂತೇ ಹೋಯಿತು. ಸೋಮಣ್ಣನ ಲಾರಿ ಅವನ ಮನೆ ಮುಂದಿನ ರಸ್ತೆ ಬದಿಯಲ್ಲಿ ಠಿಕಾಣಿ ಹೂಡಿತು.
ಏನಾದ್ರೂ ಬಾಡಿಗೆ ಇದ್ರೆ ಹೇಳಿ ಅಂತ ಸೋಮಣ್ಣ ಅಡಕೆ ತೋಟದವರ ಹತ್ತಿರ ಕೇಳಿನೋಡಿದ. ಅವರೆಲ್ಲ ಮಾರುತಿ ಓಮ್ನಿ ಕೊಂಡುಕೊಂಡು, ಅದರ ಹಿಂದಿನ ಸೀಟು ಕಿತ್ತುಹಾಕಿ, ಅದರಲ್ಲೇ ಅಡಕೆ ಸಾಗಿಸುವ ಉಪಾಯ ಕಂಡುಕೊಂಡಿದ್ದರು. ಲಾರಿಯಲ್ಲಿ ಸಾಗಿಸುವಷ್ಟು ಅಡಕೆ ಯಾರ ಬಳಿಯೂ ಇರಲಿಲ್ಲ. ಉಪ್ಪಿನಂಗಡಿಯಿಂದ ಮಂಗಳೂರಿಗೆ ನೇತ್ರಾವತಿ ನದಿಯಿಂದ ಮರಳು ಸಾಗಿಸಿ ದುಡ್ಡು ಮಾಡಬಹುದು ಅನ್ನುವ ಉಪಾಯವನ್ನು ಮೋನಪ್ಪನೇ ಸೂಚಿಸಿದ. ಆದರೆ ಉಪ್ಪಿನಂಗಡಿ ಮಂಡಲ ಪಂಚಾಯತ್‌ನವರು ಆ ವರ್ಷದ ಮರಳು ತೆಗೆಯುವ ಕಂಟ್ರಾಕ್ಟನ್ನು ಇನ್ಯಾರಿಗೋ ಕೊಟ್ಟುಬಿಟ್ಟಿದ್ದರು.
ಈ ಮಧ್ಯೆ ಬ್ಯಾಂಕಿನವರು ಸೋಮಣ್ಣನಿಗೆ ಕಂತು ಕಟ್ಟುವಂತೆ ಪೀಡಿಸತೊಡಗಿದರು. ಒಂದು ರಾತ್ರಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅದರ ಹಿಂಭಾಗ ಸೊಟ್ಟಗಾಯಿತು.
******

ಸೋಮಣ್ಣನ ದುರಾದೃಷ್ಟ ಶುರುವಾದದ್ದೇ ಆಮೇಲೆ ಎಂದ ಗೋಪಾಲಕೃಷ್ಣ. ಅವನ ಲಾರಿಯನ್ನು ಕೇಳಿಕೊಂಡು ಸಕಲೇಶಪುರದಿಂದ ಇಬ್ಬರು ವ್ಯಾಪಾರಿಗಳು ಬಂದಿದ್ದರಂತೆ. ಸಕಲೇಶಪುರದ ಹತ್ತಿರ ರೆಸಾರ್ಟ್ ಕಟ್ಟುತ್ತಿದ್ದೇವೆ. ಮರಮಟ್ಟು ಸಾಗಿಸೋದಕ್ಕೆ ಬೇಕು ಎಂದವರು ಲಾರಿಯನ್ನು ಬಾಡಿಗೆಗೆ ಕೇಳುವುದಕ್ಕೆ ಬಂದಿದ್ದರು. ಬಾಡಿಗೆಗೆ ಕೊಡೋದಿಲ್ಲ, ಬೇಕಿದ್ರೆ ಮಾರ್ತೀನಿ ಅಂದ ಸೋಮಣ್ಣ. ಐದು ಲಕ್ಷಕ್ಕೆ ಮಾತಾಗಿ, ಮೂರೂವರೆ ಲಕ್ಷಕ್ಕೆ ಲಾರಿ ಮಾರಾಟವೂ ಆಯ್ತು.
ಈಗ ಸೋಮಣ್ಣನ ಸಮಸ್ಯೆ ಏನು ಅನ್ನುವುದು ಅರ್ಥವಾಗಲಿಲ್ಲ. ಗೋಪಾಲಕೃಷ್ಣ ವಿವರಿಸಿದ ಬ್ಯಾಂಕ್ ಲೋನ್ ತೀರಿಸದೇ ಲಾರಿ ಅವರ ಹೆಸರಿಗೆ ಟ್ರಾನ್ಸ್‌ಫರ್ ಮಾಡುವ ಹಾಗಿರಲಿಲ್ಲ. ಅವರೂ ಆರ್‌ಸಿ ಬುಕ್ ಆಮೇಲೆ ಕೊಡ್ತೀನಿ
ಅಂದದ್ದಕ್ಕೆ ಒಪ್ಪಿಕೊಂಡಿದ್ದರಂತೆ. ಹೀಗಾಗಿ ಲಾರಿ ಅವರ ಕೈಲಿತ್ತು, ಮಾಲೀಕತ್ವ ಸೋಮಣ್ಣನ ಹೆಸರಲ್ಲಿತ್ತು.
ಆ ಲಾರಿ ಬಿಸಲೆ ಘಾಟಿಯಲ್ಲಿ ಕಳ್ಳನಾಟ ಸಾಗಿಸುವಾಗ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿತ್ತು. ಡ್ರೈವರ್ ಲಾರಿಯಿಂದ ಜಿಗಿದು ಪರಾರಿಯಾಗಿದ್ದ. ಮೂಲ ಹುಡುಕಿದ ಪೊಲೀಸರು ಸೋಮಣ್ಣನ ಮನೆಗೆ ಬಂದು ಬೆದರಿಕೆ ಹಾಕಿ ಹೋಗಿದ್ದರು. ಈ ಮಧ್ಯೆ ಬ್ಯಾಂಕಿನವರು ಸಾಲ ತೀರಿಸದೇ ಲಾರಿ ಮಾರಿದ್ದು ಅಪರಾಧ ಎಂದು ಅವನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೆದರಿಸಿದ್ದರು. ಲಾರಿ ಉಪ್ಪಿನಂಗಡಿ ಸ್ಟೇಷನ್ನಿನ ಮುಂದೆ ಕಳ್ಳನಾಟ ತುಂಬಿಕೊಂಡು ನಿಂತಿತ್ತು. ಅದನ್ನು ಬಿಡಿಸಿಕೊಡಿ ಅಂತ ಕೇಳಿಕೊಳ್ಳುವುದಕ್ಕೆ ಆ ಸಂಜೆ ಸೋಮಣ್ಣ ಗಾಂಧೀಪಾರ್ಕಿಗೆ ಬಂದದ್ದು. ಅವನು ಈ ಸಮಸ್ಯೆಯಿಂದ ಪಾರಾಗುವುದು ಸಾಧ್ಯವೇ ಇಲ್ಲ ಅನ್ನಿಸಿತು ನನಗೆ.
******

ಅದಾದ ನಾಲ್ಕು ತಿಂಗಳ ನಂತರ ನಾನು ಮತ್ತೊಮ್ಮೆ ನಮ್ಮೂರಿಗೆ ಹೋದೆ. ಗೋಪಾಲಕೃಷ್ಣ,ಸುರೇಂದ್ರನ ಜೊತೆ ಮಾತಾಡುವ ಹೊತ್ತಿಗೆ ಸೋಮಣ್ಣ ನೆನಪಾದ. ಅವನಿಗೇನಾಗಿದೆ, ಆರಾಮಾಗಿ ಓಡಾಡಿಕೊಂಡಿದ್ದಾನೆ. ಮೂರೂವರೆ ಲಕ್ಷ ಹೊಡ್ಕೊಂಡು ಬಿಟ್ಟ’ ಅಂದ ಗೋಪಾಲಕೃಷ್ಣ.
ಆವತ್ತು ಗೋಪಾಲಕೃಷ್ಣ ಅದ್ಯಾರಿಗೋ ಮಾತಾಡಿ, ಹಳೇ ತಾರೀಖಿಗೆ ಲಾರಿ ಕಳುವಾಗಿದೆ ಎಂದು ಪೊಲೀಸ್ ಕಂಪ್ಲೇಂಟ್ ರಿಜಿಸ್ಟರ್ ಮಾಡಿಸಿಕೊಟ್ಟನಂತೆ. ಅಲ್ಲಿಗೆ, ಲಾರಿ ಕದ್ದು, ಕಳ್ಳನಾಟ ಸಾಗಿಸಿದ ಅಪರಾಧ ಇನ್ಯಾರಿಗೋ ವರ್ಗವಾಯಿತು. ಬ್ಯಾಂಕಿನವರಿಗೆ ಕಂತು ಕಟ್ಟೋದಕ್ಕಾಗೋಲ್ಲ, ಲಾರಿ ಮಾರಿಕೊಳ್ಳಿ ಅಂತ ಹೇಳಿ ಸೋಮಣ್ಣ ಬಚಾವಾದ. ಕೇಸು ಮುಗಿಯುವ ತನಕ ಲಾರಿ ಬಿಡುವುದಿಲ್ಲ ಅಂತ ಪೊಲೀಸರು ಪಟ್ಟು ಹಿಡಿದರು.. ಸಕಲೇಶಪುರದವರು ಕೊಟ್ಟ ಮೂರೂವರೆ ಲಕ್ಷ ಸೋಮಣ್ಣನಿಗೆ ಲಾಭ. ಈಗ ಒಂದು ೪೦೫ ಟೆಂಪೋ ತಗೊಂಡಿದ್ದಾನೆ ಎಂದು ಸುರೇಂದ್ರ ಗಹಗಹಿಸಿ ನಕ್ಕ.
ನನಗೆ ಒಂದು ಕ್ಷಣ ನಾನು ಎಲ್ಲಿದ್ದೇನೆ ಅನ್ನುವುದೇ ಮರೆತಂತಾಯಿತು. ಹೊರಗೆ ನಡುರಾತ್ರಿಯ ಕಾಳಗತ್ತಲು. ಧಾರಾಕಾರ ಮಳೆ. ಹೊರಜಗತ್ತಿಗೂ ನಮಗೂ ನಾನಿರುವ ಬೆಂಗಳೂರಿಗೂ ಸೋಮಣ್ಣನಿಗೂ ಏನು ಸಂಬಂಧ ಅನ್ನುವುದೇ ಹೊಳೆಯಲಿಲ್ಲ. ಸೋಮಣ್ಣನ ಇಡೀ ಕತೆ ನನ್ನೊಳಗೆ ಗಾಳಿಯಂತ್ರದ ಹಾಗೆ ಸುತ್ತುತ್ತಿತ್ತು. ಸೋಮಣ್ಣ ನಿಜಕ್ಕೂ ಅದನ್ನೆಲ್ಲ ಯಾವ ಉತ್ಸಾಹದಿಂದ ಮಾಡುತ್ತಿದ್ದಾನೆ. ಮತ್ತೆ ಮತ್ತೆ ಅಪಘಾತಕ್ಕೆ ತುತ್ತಾಗುವ ಅವನನ್ನು ಮತ್ತೂ ಬದುಕುವಂತೆ ಪ್ರೇರೇಪಿಸುವ ಶಕ್ತಿ ಯಾವುದು. ಅದು ಅವನೊಳಗಿನ ಅಜ್ಞಾನದಿಂದ ಹುಟ್ಟಿದ್ದಾ, ಹುಂಬತನದಿಂದ ಬಂದದ್ದಾ,ನಾಚಿಕೆಗೇಡಿತನದಿಂದ ಹುಟ್ಟಿದ್ದಾ ಎಂದು ಯೋಚಿಸುತ್ತಾ ನಾನು ಮಂಕಾಗಿ ಕುಳಿತದ್ದನ್ನು ನೋಡಿ ಸುರೇಂದ್ರ ಉಪ್ಪಿನಕಾಯಿ ತುಂಬಿದ್ದ ಪ್ಲೇಟನ್ನು ಮುಂದಿಟ್ಟು ಒಂಚೂರು ನೆಂಚಿಕೋ, ಎಲ್ಲ ಸರಿಹೋಗುತ್ತೆ’ಅಂದ.

Leave a Reply