“ಸೂಫಿ ಕಡಲ ನಾವಿಕ”

ರಾಜಸ್ಥಾನಿ ಜಾನಪದ ಮಟ್ಟುಗಳನ್ನೂ, ಶಾಸ್ತ್ರೀಯ ಸಂಗೀತದ ಆಲಾಪಗಳನ್ನೂ ಅದ್ಭುತವಾಗಿ ಬೆಸೆದು ಹಾಡುವ 47 ವರ್ಷದ ಮೀರ್ ಮುಕ್ತಿಯಾರ್ ಅಲಿ, ಸೂಫಿಯಾನಾ ಸಂಗೀತ ಪ್ರಕಾರವನ್ನು ಜನಪ್ರಿಯಗೊಳಿಸುತ್ತಿರುವ ವಿಶಿಷ್ಟ ಗಾಯಕ. ಕೇಳುವವರು ತಾವೂ ಲಯಗೊಳ್ಳದೆ, ತಲೆದೂಗದೇ ಇರಲು ಸಾಧ್ಯವಿಲ್ಲವೆನ್ನುವಂತೆ ಮೈಯೆಲ್ಲ ದನಿಯಾಗಿ, ದನಿಯೆಲ್ಲ ತಾನೇ ಆಗಿ ಹಾಡುವ; ಕಣ್ಣಗೊಂಬೆಗಳಲ್ಲಿ ಪ್ರೀತಿ ಸ್ಫುರಿಸುವಂತೆ ಹಾಡುವ; ಗುಂಗು ಹಿಡಿಯುವಂತೆ ಹಾಡುವ ಗಾಯಕ ಮುಕ್ತಿಯಾರ್.ರಾಜಸ್ಥಾನದ ಬಿಕನೇರ್ ಬಳಿ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಪುಗಲ್ ಎಂಬ 80 ಕುಟುಂಬಗಳ ಪುಟ್ಟ ಊರಿನ ಮುಕ್ತಿಯಾರ್, ಭಾರತದ ಬಹುತೇಕ ರಾಜ್ಯಗಳನ್ನು, ಹತ್ತಾರು ದೇಶಗಳನ್ನು ಸುತ್ತಿ ಸೂಫಿಯಾನಾ ಕಲಾಮಿನ ಬನಿಯನ್ನು ಹರಡುತ್ತಿದ್ದಾರೆ. ರಾಮನನ್ನೂ, ಮೌಲಾ ಅಲಿಯನ್ನೂ ಕೃಷ್ಣ, ಮೀರಾ, ಕಬೀರ, ತುಳಸಿ, ಬುಲ್ಲೇಶಾ, ಗೋರಖನಾಥ, ಸಖರಾಮರಂಥ ಸಂತಜೀವಗಳ ನುಡಿಗಳನ್ನೂ ಎದೆಯಲ್ಲಿ ತುಂಬಿಕೊಂಡು ಹಾಡುವ ಮುಕ್ತಿಯಾರ್, ಏಳೆಂಟು ಶತಮಾನಗಳ ಸೂಫಿ ಸಂಗೀತ ಪರಂಪರೆಯ ಹಿನ್ನೆಲೆಯಿರುವ ಕುಟುಂಬದವರು. ಸೂಫಿ ಗಾಯಕ ವಾಸಯೆ ಖಾನರ ಮಗ. ಆ ಕುಟುಂಬದ 26ನೇ ತಲೆಮಾರಿನ ಗಾಯಕ. ‘ನಾನು ಸಣ್ಣ ಹಳ್ಳಿಯೊಂದರ ಹಾಡುಗಾರ, ಸಂಗೀತ ಕಲಿತವನಲ್ಲ. ರಾಗ-ಸ್ವರ ಎಲ್ಲಾದರೂ ತಪ್ಪಿದಲ್ಲಿ ಕ್ಷಮೆಯಿರಲಿ’ ಎಂಬ ವಿನಯದ ಮಾತಿನಿಂದಲೇ ಶುರುಮಾಡಿ ಅಪೂರ್ವ ಧ್ವನಿ ಏರಿಳಿತಗಳೊಂದಿಗೆ ದಣಿವಿರದೆ ಹಾಡುತ್ತಾರೆ.ಮೌಖಿಕ ಸೂಫಿಯಾನಾ ಕಲಾಮಿನ ಮಾಧುರ್ಯ, ಶೈಲಿಗಳನ್ನೆಲ್ಲ ಮೈಗೂಡಿಸಿಕೊಂಡ ಮುಕ್ತಿಯಾರ್, ಹಾಡುಗಳ ಮೂಲಕ ಸೂಫಿ ಪ್ರೇಮತತ್ವವನ್ನು ಜನರ ಎದೆಗೆ ಬೆಸೆಯುವವರು. ಶಬ್ನಮ್ ವೀರಮಾನಿ ಚಿತ್ರಿಸಿದ ‘ಹದ್ ಅನ್‍ಹದ್’ ಸಾಕ್ಷ್ಯಚಿತ್ರದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟರು. ಸೂಫಿ ಕವಿತೆಯಂತೆಯೇ ಮಾತನಾಡುವ ಮುಕ್ತಿಯಾರ್, ಮೇ ಸಾಹಿತ್ಯ ಮೇಳದ ಸಲುವಾಗಿ ಶಿಶುನಾಳ ಶರೀಫರ ನಾಡಾದ ಗದಗಿಗೆ ಬಂದು ‘ವಾಙ್ಮನಕ್ಕತೀತ’ ಆನಂದಾನುಭವ ಉಂಟು ಮಾಡಿದರು.ನೀಳ ಕಾಯವನ್ನು ಆಚೀಚೆ ತೂಗುತ್ತಾ, ಹಾರ್ಮೋನಿಯಂ ನುಡಿಸುತ್ತಾ, ಹಾಡುವುದೊಂದೇ ತನಗೆ ಗೊತ್ತಿರುವುದೆಂಬಂತೆ ಕಾಲಾತೀತ ಮುಖಭಾವದಲ್ಲಿ ಕಣ್ಮುಚ್ಚಿ ಅವರು ಹಾಡತೊಡಗಿದರೆ ಭಕ್ತಿ, ವಿನೀತತೆ, ಆತ್ಮವಿಶ್ವಾಸ, ಲವಲವಿಕೆ, ಮತ್ತೆಲ್ಲಕ್ಕಿಂತ ಹೆಚ್ಚಾಗಿ ಪ್ರೀತಿ ತುಂಬಿದ ಮಧುರ ಸ್ವರ ಕೇಳುಗರನ್ನು ಕರಗಿಸುತ್ತದೆ. ಅಕ್ಷರಗಳನ್ನು ಉಸಿರ ತುಂಬ ತುಂಬಿಕೊಂಡು, ಅದರ ಸುತ್ತ ಹತ್ತಾರು ಸ್ವರ ಪ್ರಸ್ತಾರದ ಮಟ್ಟುಗಳನ್ನು ನೇಯುವ ಅವರ ದನಿಯು ತಾನು ರೆಕ್ಕೆ ಬಿಚ್ಚಿ ಗಂಟಲಿನಿಂದ ಬಿಡುಗಡೆಗೊಂಡು ಹಾರುವುದಲ್ಲದೆ, ಕೇಳುಗರಿಗೂ ರೆಕ್ಕೆಯಂಟಿಸಿ ಹಾರಿಸುತ್ತದೆ.ವೇಗದ ದಿನಚರಿಯ, ರೂಕ್ಷ ಸುದ್ದಿಗಳ ನಡುವೆ ಮುಳುಗಿಹೋಗಿರುವ ನಮಗೆ ಕವಿತೆ, ಹಾಡು, ಗುಂಗು ಮೊದಲಾದುವು ಅನುಭವಿಸಲಾಗದ ಪವಾಡಗಳಾದವೇ ಎಂಬ ಅನುಮಾನ ಸುಳಿಯತೊಡಗಿರುವಾಗ ಮುಕ್ತಿಯಾರರ ಧ್ವನಿ ಪರವಶಗೊಳಿಸಿ ಮರುಜೀವ ನೀಡುತ್ತದೆ. ಹಸಿ ಮಡಕೆಯಂತೆ ನಾವು…ಮಡಿಕೆ ಹಿಸಿಯದಂತೆ ಸುಟ್ಟು ಕಾಪಿಡುವ ಅಂತರಂಗ ಜ್ಞಾನದ ಪದಗಳು. ಅದನ್ನು ಹಾಡುಗಳ ಮೂಲಕ ನಮ್ಮೆದೆಗೆ ಮುಟ್ಟಿಸಬಲ್ಲ ಮಾಂತ್ರಿಕ ಧ್ವನಿಯ ಮುಕ್ತಿಯಾರ್.ದೇಶಕಾಲ ಮರೆತು ಅವರ ಹಾಡಿನ ಮಳೆಯಲ್ಲಿ ತೋಯುತ್ತ ಕುಳಿತರೆ, ‘ನಿನ್ನಾಂಗ ಆಡಾಕ/ನಿನ್ನಾಂಗ ಹಾಡಾಕ/ಪಡೆದುಬಂದವ ಬೇಕೋ ಗುರುದೇವಾ’ ಎಂಬ ಬೇಂದ್ರೆಯವರ ಮಾತು ನೆನಪಾಗುತ್ತದೆ.ಓದಿರುವುದು ಎರಡೂವರೆ ಅಕ್ಷರ ಮಾತ್ರದೋಹೆ, ಕವಿತೆಗಳನ್ನು ಗಮಕ ಶೈಲಿಯಲ್ಲಿ ಪ್ರಸ್ತುತಪಡಿಸುತ್ತಾ ಹಾಡುವ ಮುಕ್ತಿಯಾರರಿಗೆ ಕಬೀರ ಬಹುಇಷ್ಟದ ಸಂತ. ‘ನಾನು ಇದ್ದಾಗ ಹರಿ ಇರಲಿಲ್ಲ/ಈಗ ಹರಿ ಇದ್ದಾನೆ, ನಾನಿಲ್ಲ/ಕಿರಿದು ಪ್ರೇಮದ ರಸ್ತೆ, ಇಬ್ಬರು ಹೋಗಲಾಗದು/ಒಬ್ಬರೇ ಒಬ್ಬರಿಗಲ್ಲಿ ಜಾಗವಿರುವುದು ಎನ್ನುತ್ತಾನೆ ಕಬೀರ. ‘ಭಕ್ತನಾಗುವುದೆಂದರೆ ಸಂಪೂರ್ಣ ‘ನನ್ನ’ನ್ನು ಕಳೆದುಕೊಂಡು ಅಹಂನಾಶ (ಫನಾ) ಆಗುವುದು. ಹಾಗೆಯೇ ಹಾಡುವಾಗಲೂ ‘ನಾನು’ ಅಳಿಸಿ ಹಾಡಬೇಕು. ಭಕ್ತಿ, ಸಂಗೀತ, ಪ್ರೀತಿ ಇವೆಲ್ಲವನ್ನು ಸಾಧಿಸಲು ಒಂದೇ ಮಾರ್ಗ- ‘ಅಹಂನಾಶ’ ಎನ್ನುತ್ತಾರೆ.ಅಂದು ಮುಕ್ತಿಯಾರರ ಜೊತೆ ಮಾತನಾಡುತ್ತ, ಅವರು ಮನಬಿಚ್ಚಿ ಹೇಳಿದ ಕೆಲವು ಸಂಗತಿಗಳು ಕಾಲದ ಅಗ್ನಿಪರೀಕ್ಷೆ ಹಾದುಬರಬೇಕಾದ ನಾವೆಲ್ಲ ಮನನ ಮಾಡಿಕೊಳ್ಳುವಂತಿವೆ. ಅವರ ಮಾತುಗಳಲ್ಲೇ ಹೇಳುವುದಾದರೆ:ನಾನು ಅನಪಢ್. ಓದಿರುವುದು ಢಾಯಿ ಅಕ್ಸರ್. ಆ ಎರಡೂವರೆ ಅಕ್ಷರಗಳೇ ‘ಪ್ರೇಮ’. ಕಬೀರನ ಪ್ರಕಾರ ಪಂಡಿತರಾಗಲು ಓದಬೇಕಾಗಿರುವುದು ಅಷ್ಟನ್ನೇ. ನನ್ನ ಭಾಷೆ ಸಂಗೀತದ ಭಾಷೆ. ಅಲ್ಲಿ ಅಕ್ಷರಗಳೆಲ್ಲ ಒಂದೇ. ಭಕ್ತಿಯಿಂದ ಹಾಡುವವರಿಗೆ ಹರಿ, ಬಿಸ್ಮಿಲ್ಲಾ, ಓಂ, ಮೌಲಾ ನಡುವೆ ಏನು ವ್ಯತ್ಯಾಸವಿದೆ? ಎದೆತುಂಬಿ ಹಾಡಬೇಕು. ಸಂಪೂರ್ಣ ಮನಬಿಚ್ಚಿ ಹಾಡಬೇಕು. ಸಂತರೊಡನೆ ಲೀನವಾಗಿ ಅವರು ಬಂದು ಕುಣಿವ ಹಾಗೆ ಹಾಡಬೇಕು.ಮಸೀದಿಯುರುಳಿಸು/ಮಂದಿರವ ಬೀಳಿಸು/ನಿನ್ನಷ್ಟ ಬಂದದ್ದನ್ನೆಲ್ಲ ಕೆಡವು/ಆದರೆ ಮನುಜ ಹೃದಯವ ಮಾತ್ರ ಒಡೆಯದಿರು/ ದೇವರು ನೆಲೆಸಿರುವ ತಾವು ಅದು ಎನ್ನುತ್ತಾನೆ ಬುಲ್ಲೇಶಾ. ಗಂಗಾ ಗಯಾ ರಬ್ ಮಿಲತಾ ನಾಯ್/ಮಕ್ಕೇ ಗಯಾ ರಬ್ ಮಿಲತಾ ನಾಯ್/ಗಯೆ ಗಯಾ ರಬ್ ಮಿಲತಾ ನಾಯ್ ಎನ್ನುತ್ತ ಮನುಷ್ಯ ಹೃದಯದೊಳಗೆ ದೇವರಿರುವುದೆನ್ನುತ್ತಾನೆ. ಎಲ್ಲಕ್ಕಿಂತ ದೊಡ್ಡದು ಮನುಷ್ಯರ ಹೃದಯ. ಕೆಟ್ಟದು ಮಾಡಿದರೆ ಹೇಳಿಬಿಡುತ್ತದೆ. ಅದರ ಮಾತು ಕೇಳಿಸಿಕೊಳ್ಳಬೇಕಷ್ಟೇ.ಸೂಫಿಯಾನಾ ಕಲಾಮ್ ಅತ್ಯಮೂಲ್ಯವಾದುದು. ಅದರ ಮೇಲೆ ಯಾವುದೇ ಒಂದು ಧರ್ಮದ ಹಕ್ಕು ಇಲ್ಲ. ಅದಕ್ಕೇ ನಮ್ಮ ಹಾಡುಗಾರಿಕೆಗೆ ನಾವು ಯಾವುದೇ ನಿರ್ಬಂಧ ಹಾಕಿಕೊಂಡಿಲ್ಲ. ದರ್ಗಾಗಳ ಉರುಸುಗಳಲ್ಲಿ ಅಲ್ಲಾಹೂ ಹಾಡುವಂತೆ ಹರಿ ಮೌಲಾವನ್ನೂ ಹಾಡುತ್ತೇನೆ. ಶಿವರಾತ್ರಿ ಜಾಗರಣ್, ಹನುಮಾನ್ ಜಾಗರಣ್, ರಾಮ್ ಜಾಗರಣ್, ಕಬೀರ್ ಸತ್ಸಂಗ್, ಅರೋವಿಲ್ಲೆ, ಗುರುದ್ವಾರಗಳಲ್ಲೂ ಹರಿ-ಮೌಲಾರನ್ನು ಒಟ್ಟೊಟ್ಟಿಗೆ ಸ್ಮರಿಸುತ್ತೇನೆ. ಭಾಷೆ- ಧರ್ಮ ಮೀರಿದ ದೇವರನ್ನು ಜನರಿಗೆ ಪರಿಚಯಿಸಲು ಸಂಗೀತದಿಂದ ಸಾಧ್ಯವಾಗಿದೆ.ದೇವರೆಂಬ ಪ್ರತ್ಯೇಕ ಅಸ್ತಿತ್ವವಿಲ್ಲ. ನನಗೆ ಖಾತ್ರಿಯಾಗಿದೆ. ಮನುಷ್ಯರೇ ದೇವರನ್ನು ಸೃಷ್ಟಿ ಮಾಡಿದ್ದು. ಮೊದಲು ಭಾಷೆ ಇರಲಿಲ್ಲ, ದೇವರೂ ಇರಲಿಲ್ಲ. ಭಾಷೆ ಕಲಿತೆವು, ದೇವರನ್ನು ವರ್ಣಿಸಿದೆವು. ದೇವರು ನಮ್ಮೆದೆಯಲ್ಲಿದೆ. ನಮ್ಮ ಸ್ವರದಲ್ಲಿದೆ. ಪ್ರತಿ ಅಕ್ಷರದಲ್ಲೂ ದೇವರಿದೆ.ಒಮ್ಮೆ ಯಾರೋ ನಮ್ಮೂರಿಗೆ ಬಂದರು. ಕಬೀರ ತನ್ನ ಗುರು. ತಾನು ಕಬೀರ್ ಪಂಥಿ ಎಂದರು. ಕಬೀರನದೆಂದು ಒಂದಷ್ಟು ಪುಸ್ತಕ ತಂದು ತಪ್ಪು ವಿಚಾರಗಳನ್ನು ಜನರ ತಲೆಗೆ ತುಂಬಿ ಹೋದರು. ಕಬೀರ ಯಾರು ಹಾಗಾದರೆ? ಸಂತ ಕಬೀರನೋ? ದಾಸ ಕಬೀರನೋ?;ರಾಮಕೃಷ್ಣ ಮಿಷನ್‌ನಲ್ಲಿ ನನ್ನನ್ನೊಮ್ಮೆ ಮಾತಾಡಲು ಕರೆದರು. ಮಾತಾಡಲು ಬರುವುದಿಲ್ಲ ಎಂದರೂ ಕೇಳಲಿಲ್ಲ. 20 ನಿಮಿಷ ಕೊಟ್ಟರು. ‘ಗ್ರಾಮೀಣ ಸೂಫಿ ಹಾಡುಗಾರನ ದೃಷ್ಟಿಕೋನದಲ್ಲಿ ಸೌಹಾರ್ದ’ ಅಂತೇನೋ ವಿಷಯ. ಮಾತನಾಡದೇ ಬಿಸ್ಮಿಲ್ಲಾ, ಹರಿಓಂ, ಖಂದಾ (ಸಿಖ್ ಸಂಕೇತ), ಚಿರು (ಕ್ರೈಸ್ತ ಸಂಕೇತ), ಸಂತರನ್ನೆಲ್ಲ ಒಟ್ಟುತಂದು ಹಾಡಿದೆ. ಎಲ್ಲರಿಗೂ ಇಷ್ಟವಾಯಿತು.ನಿಜಹೇಳಬೇಕೆಂದರೆ ಸೂಫಿಯಾನಾದಲ್ಲಿ ರಾಮನೂ ಇಲ್ಲ. ಅಲ್ಲಾನೂ ಇಲ್ಲ. ಕಬೀರನೂ ಇಲ್ಲ, ಬುಲ್ಲೇಶಾನೂ ಇಲ್ಲ. ಅಲ್ಲಿರುವುದು ಪ್ರೀತಿಯ ಸಂಬಂಧ. ಪ್ರೇಮ ಸಂಬಂಧ. ಸೂಫಿಯಾನಾ ಎಂದರೆ ದೇವರೊಡನೆ ನೇರ ಸಂಬಂಧ. ಯಾವ ಮಧ್ಯವರ್ತಿಯೂ ಬೇಡದ ಡೈರೆಕ್ಟ್, ಹಾಟ್‍ಲೈನ್ ಸಂಬಂಧ. ದೇವರೊಡನೆ ಒಂದುತನ.ಪ್ರೇಮದ ದಾರಿಯೇ ದೇವರ ದಾರಿ. ಪ್ರೇಮಿಯಂತಲ್ಲದಿದ್ದರೆ ದೇವರನ್ನು ಪ್ರೀತಿಸಲು ಸಾಧ್ಯವೇ ಇಲ್ಲ. ದೇವರ ದಲ್ಲಾಳಿಗಳಂತಿರುವ ಪುರೋಹಿತಶಾಹಿಗಳು ಡಾಂಭಿಕ, ಪೊಳ್ಳು ಆಚರಣೆಗಳನ್ನೇ ಧರ್ಮವೆನ್ನುತ್ತಾರೆ. ಅದಕ್ಕೇ ಧರ್ಮಪಂಡಿತರ ಒಂದೂ ಸಭೆಗೆ ಹೋಗುವುದಿಲ್ಲ ನಾನು.ಮೇಲೆ ಹಾರುವ ಹಕ್ಕಿಗಳನ್ನು ನೋಡಿ, ಈ ದನಕರುಗಳನ್ನು ನೋಡಿ, ಅವರಾರೂ ಧರ್ಮ- ದೇವರ ಬಗೆಗೆ ಯೋಚಿಸಬೇಕಿಲ್ಲ. ಅವರಿಗೆ ‘ಮಾಲೀಕ್’ ಬಗೆಗೆ ಸಂಪೂರ್ಣ ವಿಶ್ವಾಸ, ಭಯವೇ ಇಲ್ಲ. ಅವರು ನಿಜಕ್ಕೂ ಸ್ವತಂತ್ರರು. ಸಂಪೂರ್ಣ ಸ್ವತಂತ್ರರು. ನಾವೂ ಹಾಗೆ ಆಗಬೇಕಲ್ಲವೇ?ಹೀಗೆ ಕೇಳುತ್ತ ಇರಬೇಕೆನಿಸುವಂತೆ ಮಾತನಾಡುತ್ತಾ ಹೋದ ಮುಕ್ತಿಯಾರರ ಕಣ್ಣ ಹೊಳಪಿನಲ್ಲಿ ಶಿಶುನಾಳ ಶರೀಫ ಕಾಣಿಸಿದ. ಯೇಸುದಾಸ್, ಮಹಮದ್ ರಫಿ, ಯಕ್ಷಗಾನ ಕಲಾವಿದರಾದ ಮಹಮದ್ ಗೌಸ್, ಜಬ್ಬಾರ್ ಸುಮೊ, ಮಹಮದ್ ಅಶ್ಫಾಕ್ ಕಂಡರು. ಮುಕ್ತಿಯಾರರ ಮಕ್ಕಳಿಬ್ಬರೂ ಹಾಡುತ್ತಾರೆ. ಕುಟುಂಬದಲ್ಲಿ ಮಹಿಳಾ ಹಾಡುಗಾರರಿನ್ನೂ ಬಂದಿಲ್ಲ. ಎರಡು ವರ್ಷದ ಅವರ ಮೊಮ್ಮಗಳು ಗಾಯಕಿಯಾಗಲೆಂದು ಹಾರೈಸುತ್ತಾ ಬೀಳ್ಕೊಡುವಾಗ ಹೇಳಿದರು. ‘ನನಗೆ ಕರ್ನಾಟಕದ ಮೇಲೆ, ಇಲ್ಲಿನ ಸಂಗೀತ- ಜಾನಪದ- ಸೌಹಾರ್ದ ಪರಂಪರೆಯ ಮೇಲೆ ವಿಶೇಷ ಪ್ರೀತಿ. ಈಶ್ವರನ ಇಚ್ಛೆಯಿದ್ದರೆ ಕರ್ನಾಟಕಕ್ಕೇ ಬಂದು ನೆಲೆಸುವ ಯೋಚನೆಯಿದೆ’!ಮಿರಾಶಿ: ಅಲೆಮಾರಿ ಹಾಡುಗಾರರುಮುಕ್ತಿಯಾರರು ಭಾರತ, ಪಾಕಿಸ್ತಾನಗಳಲ್ಲಿ ಹರಡಿಕೊಂಡಿರುವ ಅರೆಅಲೆಮಾರಿ ಮಿರಾಶಿ ಸಮುದಾಯದವರು. ಅದು ಹಿಂದೂ-ಸಿಖ್- ಇಸ್ಲಾಂ ಮೂರೂ ಧರ್ಮದ ಅನುಯಾಯಿಗಳನ್ನು ಹೊಂದಿರುವ ಪಾರಂಪರಿಕ ಹಾಡುಗಾರರ ಸಮುದಾಯವಾಗಿದೆ. ಪುಗಲ್ ಮತ್ತು ಪಾಕಿಸ್ತಾನದ ಮುಲ್ತಾನ್ ನಡುವೆ ಹರಡಿಕೊಂಡ (ಹಳೆಯ ಸಿಂಧ್) ಪ್ರದೇಶದಲ್ಲಿ ಮಿರಾಶಿ ಹಾಡುಗಾರರು ವಿಪುಲವಾಗಿದ್ದಾರೆ. ಹಾಡುವವರಂತೆಯೇ ಡೋಲಕ್, ತಬಲಾ, ಸಾರಂಗಿ ಮೊದಲಾದ ವಾದ್ಯ, ವಾದನಗಳ ಕಲಾವಿದರಿದ್ದಾರೆ. ಪಕ್ವಾಜ್ ಎಂಬ ಚರ್ಮವಾದ್ಯ ಬಾರಿಸುವುದರಿಂದ ಪಕ್ವಾಜಿಗಳೆಂಬ ಹೆಸರೂ ಅವರಿಗಿದೆ. ಗ್ರಾಮದ ಪ್ರತಿ ಕುಟುಂಬದ ವಂಶವೃಕ್ಷವನ್ನು ನೆನಪಿನಲ್ಲಿಟ್ಟುಕೊಂಡು ದಾಖಲಿಸುವವರೂ ಹೌದು.ಮಿರಾಶಿಗಳಿಗೆ ಅವರವರ ಕೌಟುಂಬಿಕ ಪರಂಪರೆಯೇ ಘರಾಣೆಯಾಗಿರುತ್ತದೆ. ಅವರ‍್ಯಾರೂ ಶಾಸ್ತ್ರೀಯ ಸಂಗೀತವನ್ನು ಕಲಿತವರಲ್ಲ. ಹಾಡುಗಾರಿಕೆಯ ಒಳಸುಳಿಗಳೆಲ್ಲ. ಮೀನಿಗೆ ಈಜು ಬಂದಷ್ಟೇ ಸಹಜವಾಗಿ ಬಂದಿರುತ್ತದೆ. 2013ರಲ್ಲಿ ತೀರಿಕೊಂಡ ‘ಲಂಬೀ ಜುದಾಯಿ’ ಖ್ಯಾತಿಯ ಪಾಕಿಸ್ತಾನಿ ಸೂಫಿ ಗಾಯಕಿ ರೇಶ್ಮಾ, ಮುಕ್ತಿಯಾರರ ಸಂಬಂಧಿ. ದೇಶ ವಿಭಜನೆಯ ವೇಳೆ ರೇಶ್ಮಾ ಕುಟುಂಬ ಗಡಿದಾಟಿ ಆಚೆ ಹೋಗಿತ್ತು.ಮುಘಲ್ ಆಸ್ಥಾನದ ಕವಿ, ಸಂಗೀತ ವಿದ್ವಾಂಸ, ಸೂಫಿಸಂತ ಅಮೀರ್ ಖುಸ್ರೂನಿಂದ 13ನೇ ಶತಮಾನದಲ್ಲಿ ರಾಜಸ್ಥಾನದ ಮಿರಾಶಿಗಳು ಇಸ್ಲಾಮಿಗೆ ಮತಾಂತರವಾದರು. ಆದರೂ ಹೆಚ್ಚಿನ ಮಿರಾಶಿಗಳು ತಾವು ಹಿಂದೂ ತಳಜಾತಿಯವರು. ಆದರೆ ಮುಸ್ಲಿಂ ಧರ್ಮದವರು ಎನ್ನುತ್ತಾರೆ! ಮಿರಾಶಿ ಸಮುದಾಯದವರು ಈಗ ಹಲವು ಆತಂಕಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಅನುಭವವನ್ನು ಮುಕ್ತಿಯಾರರು ಹೀಗೆ ಮುಂದಿಡುತ್ತಾರೆ:ಇಂದಿರಾಗಾಂಧಿ ಕಾಲುವೆ ಬಂದ ನಂತರದ ಬದಲಾವಣೆಗಳು, 92ರ ಘಟನೆ ಹಾಗೂ ರಾಜಸ್ಥಾನದ ನಿರಂತರ ಬರ ಮಿರಾಶಿಗಳನ್ನು ಅನಾಥರನ್ನಾಗಿಸಿ, ಬಡವರನ್ನಾಗಿಸಿದೆ. ಬಿಕನೇರ್ ತನಕ ನಿತ್ಯ ಓಡಾಡುತ್ತ, ಸಿಕ್ಕಸಿಕ್ಕ ಕೆಲಸ ಮಾಡುತ್ತ ನನ್ನ ಓರಗೆಯ ಗಾಯಕರು ಹೊಟ್ಟೆಪಾಡಿನ ದಿನಗೂಲಿಯಲ್ಲಿ ಕಳೆದುಹೋಗಿದ್ದಾರೆ. ಅವರೊಡನೆ ಹಾಡು, ಭಾಷೆ, ಸಂತರೂ ಕಳೆದುಹೋಗುತ್ತಿದ್ದಾರೆ. ರಿಯಾಜಿಗಾಗಿ ಬರಲು ಕನಿಷ್ಠ ಪುರುಸೊತ್ತು, ಒಂದಷ್ಟು ಆದಾಯ ಸಿಗಬೇಕಲ್ಲವೆ? ನನ್ನ ತಂದೆ ನಾನು ಗಾಯನ ಮಾಡುವುದು ಬೇಡವೆಂದಿದ್ದರು. ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಸೂಫಿಯಾನಾಗೆ ಮನ್ನಣೆಯಿದೆ.ಬೇರೆಬೇರೆ ಜಾತಿ, ಧರ್ಮಗಳ ಗಾಯಕರು ಪ್ರತಿದಿನ ಸೇರುತ್ತೇವೆ. ರಾತ್ರಿ ಹನ್ನೆರಡರ ತನಕ ಹಾಡು, ಭಜನೆ ಮುಂದುವರಿಯುತ್ತದೆ. ನಂತರ ಸಂತರ ಬಗೆಗೆ ಮಾತು, ಚರ್ಚೆ, ಹಾಡುಗಳ ಅರ್ಥ ವಿವರಣೆ ಶುರುವಾಗುತ್ತದೆ. ಒಂದೊಂದು ಹಾಡಿಗೆ ತಾಸುಗಟ್ಟಲೆ ಚರ್ಚೆ ನಡೆಯುತ್ತದೆ ಎನ್ನುತ್ತಾರೆ.

courtsey:prajavani.net

https://www.prajavani.net/artculture/art/sufi-641107.html

Leave a Reply