ಸಂಶೋಧನಾ ಸಂಸ್ಕೃತಿ ಮಹಿಮೆ
ಸಂಶೋಧನೆಯ ಕೆಲಸ ಸಂಸ್ಕೃತಿಯ ಭಾಗ. ಈ ಸಮಕಾಲೀನ ಜಗತ್ತಿನಲ್ಲಿ ಆಗಬಹುದೇ, ಸಾಧ್ಯವೇ ಅನ್ನುವ ಪ್ರಶ್ನೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಯಾವಾಗಲೂ ಕಾಡುತ್ತಿರುತ್ತದೆ. ಏಕೆಂದರೆ ನಾವೆಲ್ಲಾ ಸಮಕಾಲೀನರು ನಮ್ಮ ಹಿಂದಿನ 3-4 ತಲೆಮಾರುಗಳೆಲ್ಲ ಒಂದಿಲ್ಲಾ ಒಂದು ರೀತಿಯಾಗಿ ಮ್ಯಾಕುಲೆನ ಸಂತತಿಯೇ. ಬ್ರಿಟಿಷರು ನಮಗಾಗಿ ಹೆಣೆದ ವಿನ್ಯಾಸಿಸಿದ ಶಿಕ್ಷಣ ಪದ್ಧತಿಯ ಬಲೆಗೆ ಬಹಳ ವ್ಯವಸ್ಥಿತವಾಗಿ ಸಿಕ್ಕಿಬಿದ್ದು ಹೊರಗೆ ಬರಲೂ ಆಗದೇ, ಹೊಸದನ್ನು ಏನೂ ಕಂಡುಹಿಡಿಯಲಾಗದೆ, ಸಂಶೋಧನೆಯ ದೃಷ್ಟಿಯಿಂದ ಭೂಮಿ ಬಂಜರು ಮಾಡುವ ಸಕಲ ಹುನ್ನಾರಗಳಿಂದ ತುಂಬಿದ್ದ ಕೇವಲ ಅಜ್ಞಾಧಾರಕರು. ಕಾರಕೂನರಾಗಿ ಬರೆಯುವುದು. ಇಂಗ್ಲಿಷ್ ಭಾಷೆಯ ವ್ಯವಹಾರಿಕ ಜ್ಞಾನವಿರುವಂತಹ ಕೆಲಸಗಾರ ಭಾರತೀಯರು ಈಸ್ಟ್ ಇಂಡಿಯಾ ಕಂಪನಿ ಮತ್ತು ಬ್ರಿಟಿಷ್ ಸರಕಾರಕ್ಕೆ ಬೇಕಾಗಿತ್ತು. ಅದಕ್ಕಾಗಿ ಮೆಕಾಲೆ ಬಹಳ ಚಾಣಾಕ್ಷತನದಿಂದ ಶಿಕ್ಷಣ ವ್ಯವಸ್ಥೆ ರೂಪಿಸಿದ. ಅದರಲ್ಲಿ ಆಗಿನ ಕಾಲದಿಂದಲೂ ಸಂಶೋಧನೆಗೆ ಸ್ಥಳವಿರಲಿಲ್ಲ. ಆಗಲೂ ಇಲ್ಲ. ಈಗಲೂ ಇಲ್ಲ ಬದಲಾಗಿ ಬ್ರಿಟಿಷರ ಬಳುವಳಿಯಾಗಿ ಬಂದ ಬ್ಯುರೋಕ್ರೆಟ್ ಗಳು ಮತ್ತು ಬ್ಯುರೋಕ್ರಸಿ ಎಲ್ಲರನ್ನು ಲೆಕ್ಕಾಚಾರ ರೂಪದಲ್ಲಿ ನಿಯಂತ್ರಿಸುವುದು. ಅವರ ಕೈಯಲ್ಲಿ ಸಿಕ್ಕರೂ ಸಂಶೋಧನ ಕ್ಷೇತ್ರ ಲೆಕ್ಕಿಗರ ಕೈಯಲ್ಲಿ –ಅಡಿಟರ್ಗಳ ಕೈಯಲ್ಲಿ- ಸಿಕ್ಕು ಅದೇ ಚಿಂತನೆಯ ಮರಿಗಳಾದ ಆಫೀಸರ್ ಕೈಗಳಲ್ಲಿ ಸಿಕ್ಕು ಸೊರಗುತ್ತಿದೆ. ಸಂಶೋಧನಯಲ್ಲಿ ವೈಫಲ್ಯ, ಸೋಲು, ಹಾನಿ ಅನಿವಾರ್ಯ. ಎಡಿಸನ್ ಒಂದು ಬಲ್ಬ್ ಕಂಡು ಹಿಡಿಯಲು 1999 ಬಲ್ಬ್ ಗಳನ್ನು ಸುಟ್ಟರೂ ಅದು ಅವನದೇ ಫ್ಯಾಕ್ಟರಿ ಆಗಿತ್ತು. ಅವನಿಗೆ ಲೆಕ್ಕದಲ್ಲಿ ಹಿಡಿಯುವವರು ಯಾರೂ ಇರಲಿಲ್ಲ. ಸರ್ಕಾರದಲ್ಲಿ ಹಾಗಾಗುವುದಿಲ್ಲ. ಅದಕ್ಕೆ ಅದರದೇ ಸಂಸ್ಕೃತಿ. ಬ್ರಿಟಿಷರ ಬ್ಯುರೋಕ್ರಸಿಯ ಸಂಸ್ಕೃತಿಯ ಬಳುವಳಿ ಯಾವುದಕ್ಕೂ ಬಿಡುವುದೇ ಇಲ್ಲ. ಹೀಗಾಗಿ ಸಂಶೋಧನೆ ಮಾಡದೇ, ಆಗದೇ ಇರುವ, ಕೇವಲ ಪಠ್ಯಕ್ರಮ ಕಲಿಸುವ, ಕಲಿಸಿದ್ದನ್ನು ಪರಿಶೀಲಿಸುವ ಅಂತಹ ಕಾರಕೂನರು ಮತ್ತೊಬ್ಬರ ಸಲುವಾಗಿ ಅವರ ತಂತ್ರಜ್ಞಾನ ಅಭಿವೃದ್ಧಿಯ ಚಕ್ರದ ಪೆಡಲ್ ತುಳಿಯುತ್ತಿರುವ ನಮ್ಮ ಪದವೀಧರ ವೃಂದ. ಹೀಗೆ ಶೋಧನೆ ಇಲ್ಲದ ಹಣ ಸಂಪಾದನೆಯ ಹೊಟ್ಟೆಪಾಡಿಗಾಗಿ ಒಂದು ದೊಡ್ಡ ಬೌದ್ಧಿಕ ಕೆಲಸಗಾರರನ್ನು ಇಂದು ನಮ್ಮ ವಿಶ್ವವಿದ್ಯಾಲಯಗಳು, ಕಾಲೇಜುಗಳು ನಿರ್ಮಾಣ ಮಾಡುತ್ತಿವೆ. ನಮ್ಮ ಯುವವೃಂದದ ಬೆವರು ಹನಿಗಳನ್ನು ನದಿಯಾಗಿ ಆಣೆಕಟ್ಟು ಕಟ್ಟಿ ತಮ್ಮ ಹೊಲಗಳ ನೀರಾವರಿ ಮಾಡುತ್ತಿರುವ ಒಂದು ಕೆಟ್ಟ ಸನ್ನಿವೇಶದ ಸ್ಥಿತಿಯಲ್ಲಿ ಇಂದು ನಾವಿದ್ದೇವೆ. ನಮ್ಮ ಪರಿಸ್ಥಿತಿಯಲ್ಲಿ ಸಂಶೋಧನೆಗೆ ಬಂಡವಲು ಹೂಡಿದ, ನಮ್ಮ ಉದ್ದಿಮೆಗಳಲ್ಲಿ ಲಾಭ ಲೋಲುಪತೆಗಳು, ಕಾಲೇಜು ಕಾರ್ಖಾನೆಗಳಿಂದ ಪದವೀಧರರನ್ನು ಹೊರಹಾಕುತ್ತ ಅವರಿಗೆ ಕೆಲಸ ದೊರಕಿಸಿಕೊಟ್ಟರೆ ನಮ್ಮ ಜೀವನ ಸಾರ್ಥಕ ಅನ್ನುವ ವಿಧ ವಿಧ ಫೀಗಳನ್ನು ತೆಗೆದುಕೊಳ್ಳುತ್ತ ಇರುವ ಆಡಳಿತ ಮಂಡಳಿ, ಸರ್ಕಾರ, ಸಾಮಾಜಿಕ ಜವಾಬುದಾರಿ ಎನ್ನುತ್ತ ಶ್ರೇಷ್ಠ ಕಾರಕೂನರನ್ನು ಹುಟ್ಟಿಸದೇ, ಮೆಡಿಯೋಕರ್ ಪದವೀಧರರನ್ನು ಹೊರಡಿಸುತ್ತ ಅದೊಂದು ಅಪಸವ್ಯದ ಕಾರ್ಯವೆಂಬತೆ ಪ್ರತಿ ಬಾರಿ ಎಡ-ಬಲದಂತೆ ಜನಿವಾರ ಬದಲಿಸುವ ಹಾಗೆ ಮಾಡುವ ಕಾನೂನುಗಳು, ಹಾಗೂ ಚಟುವಟಿಕೆಗಳು ಯಾವ ಸಂಶೋಧನ ಸಂಸ್ಕೃತಿ ಹುಟ್ಟಿಸಲು ಶಕ್ಯ?
ಸಂಸ್ಕೃತಿ ಎಂದರೆ ನೋಡಿ. ತಿಳಿಯುವ ವಿಧವಿಧವಾದ ಪಠ್ಯಕ್ರಮ. ಅಲಿಖಿತವಾಗಿ ತಲೆಯಿಂದ ತಲೆಮಾರಿನವರಿಗೆ ಜೀವನದಲ್ಲಿ ಹಾಸುಹೊಕ್ಕಾಗಿ ಇರುವ ಚಿಂತನಶೈಲಿ. ಜೀವನಶೈಲಿ ರೂಪಿಸುತ್ತ ಉತ್ತಮ ನಾಗರಿಕತೆಯ ಕುರುಹಾಗಿರುವುದು. ಸಂಶೋಧನೆ ಅಂದರೆ ಏನು? ‘ಶೋಧನೆ’ ಎಂದರೆ ಹುಡುಕುವುದು. ಹುಡುಕಾಟ. ಹುಡುಕಾಟ ಕ್ರಿಯೆ. ತೃಪ್ತಿ ಸಿಗುವುದು ಹುಡುಕುವುದು ಸಿಕ್ಕಾಗ. ಹೇಗೆ ಹುಡುಕುವುದು? ಯಾವ ವಿಧಾನಗಳನ್ನು ಹುಡುಕಾಟಕ್ಕೆ ಉಪಯೋಗಿಸುವುದು. ಇಲ್ಲಿಯವರೆಗೆ ನಮ್ಮ ಹುಡುಕಾಟದ ವಿಷಯವಾಗಿ ಯಾರು ಯಾರು, ಏನು ಏನು, ಎಲ್ಲಿ, ಹೇಗೆ ಮಾಡಿದ್ದಾರೆ ಅನ್ನುವ ಜ್ಞಾನದ ಬೆಳಕಿನಲ್ಲಿ ಕಲ್ಪನೆಯ ಕೂಸಾದ ಎಲ್ಲ ವಿಚಾರಗಳನ್ನು ಹುಡುಕಾಟದ ಸತತ ಪ್ರಯತ್ನಗಳ ಮೂಲಕ ಸಾಕಾರಗೊಳಿಸಿಕೊಳ್ಳುವುದು. ‘ಶೋಧನೆ’ ಸಂಶೋಧನೆಯಾಗುವುದು ಯಾವಾಗ. ಸುಸಂಬದ್ಧವಾಗಿ, ಸುಸಂಸ್ಕೃತವಾಗಿ, ಸುರಕ್ಷಿತವಾಗಿ, ಸರಿಯಾದ ಮಾರ್ಗದಲ್ಲಿ ಶೋಧನೆ ಮಾಡಿದಾಗ ಅದು ಸಂಶೋಧನೆ. ಇನ್ನೊಂದು ಅರ್ಥದಲ್ಲಿ ಹೇಳಬಹುದಾದರೇ ಸತ್ಯದ ಸಾಕಾರತೆ, ಸತ್ಯದ ಶೋಧ, ಸತ್ಸಂಗದ ಶೋಧ, ಸಂಶೋಧನೆಯಾಗುವುದು. ಇಂತಹ ಅರ್ಥದ ವ್ಯಾಪ್ತಿಯಲ್ಲಿ ಹುಡುಕಾಟ ಒಂದು ಸಂಸ್ಕೃತಿಯಾಗುವುದು. ಅಂದರೆ ಸತ್ಯದ ಅನ್ವೇಷಣೆ ಅಥವಾ ಸತ್ಯಾನ್ವೇಷಣೆ ಸಂಶೋಧನೆಯಾಗುವುದು. ಇದು ಸಂಸ್ಕೃತಿಯಾಗಿ ಹೇಗೆ ಪರಿವರ್ತನವಾಗುವುದು ಅನ್ನುವ ಯಕ್ಷ ಪ್ರಶ್ನೆಗೆ ಉತ್ತರಗಳನ್ನು ನಾವು ಹುಡುಕಿಕೊಳ್ಳಬೇಕಾಗಿದೆ ಇಂದು.
ನಾಗರಿಕತೆಯ ಉಗಮದಿಂದ ಹಿಡಿದು ಇಂದಿನವರೆಗೂ ಮಾನವನ ನಿರಂತರ ಹುಡುಕಾಟ, ಶೋಧನೆ ನಡೆದೆ ಇದೆ. ಒಂದಿಲ್ಲೊಂದು ರೀತಿಯಲ್ಲಿ ನಾವು ಕಾಣಬಹುದಾಗಿದೆ. ನದಿಕೊಳ್ಳಗಳ ಪ್ರದೇಶದಲ್ಲಿ ನಾಗರಿಕತೆಯೇಕೆ ಬಂತು. ಬದುಕಲು ಕಾರಣವಾಗುವ, ಬದುಕಲು ಬೇಕಾಗುವ ಎಲ್ಲ ಅವಶ್ಯಕತೆಗಳ ಹುಡುಕಾಟದ ಫಲವಾಗಿ ನದಿಕೊಳ್ಳಗಳ ಪ್ರದೇಶದಲ್ಲಿ ನಾಗರಿಕತೆ ಹುಟ್ಟುವಂತಾಯಿತು. ಮನೆ ಕಟ್ಟುವದನ್ನು ಮಾನವ ಹೇಗೆ ಕಂಡುಹಿಡಿದ. ಗಾಲಿಯನ್ನು ಕಂಡುಹಿಡಿದವರು ಯಾರು? ಬೆಂಕಿ-ನೀರು, ವಾಯು, ನೆಲಗಳ ಹಲವು ಉಪಯೋಗ ಕಂಡು ಹಿಡಿದವರು ಯಾರು? ಅವೆಲ್ಲವುಗಳು ಮಾನವನ ದಿವ್ಯವಾದ ಹುಡುಕಾಟ, ಶೋಧನೆಯ ಫಲವಾಗಿವೆ. ಈ ಹುಡುಕಾಟಗಳು ತಲೆಯಿಂದ ತಲೆಗೆ, ಬಾಯಿಂದ ಬಾಯಿಗೆ ವರ್ಗಾಯಿಸುತ್ತ ಹೋಗಿ, ಶೋಧನೆ, ಹುಡುಕಾಟ, ಅಲೆದಾಟ ಎಲ್ಲವೂ ಗೊತ್ತಿಲ್ಲದೆಯೆ ಜೀವನದ ಅವಿಭಾಜ್ಯ ಅಂಗವಾಗಿ ಸಂಸ್ಕೃತಿಯಾಗಿ ರೂಪುಗೊಳ್ಳುತ್ತ ಹೋಯಿತು. ನಮ್ಮ ಭಾರತೀಯರನ್ನು ತೆಗೆದುಕೊಂಡರೆ ರಾಮಾಯಣ ಮಹಾಭಾರತಗಳು ನಿಜವಾಗಿಯೂ ನಡೆದಿದ್ದೆ ಆದರೆ ಅಂತಹದೊಂದು ಕಥೆಯ ಘಟನೆ ಎಲ್ಲ ಸಂಶೋಧನೆಗಳನ್ನು ಪುಷ್ಟೀಕರಿಸುತ್ತದೆ. ಅದರಲ್ಲಿ ಇರುವ ಎಲ್ಲ ರಮ್ಯತೆ ಊಹಾಪೋಹ ಅಳಿಸಿಹೋದರೂ ಅದೊಂದು ದಿವ್ಯ ಜ್ಞಾನದ ಹುಡುಕಾಟ. ಸತ್ಯದ ಅನ್ವೇಷಣೆಯಾದ ಕಾರಣಕ್ಕಾಗಿಯೇ ಅವು ಮಹಾ ಕಾವ್ಯ ಗ್ರೇಟ್ ಎಪಿಕ್ ಆಗಿರುವುದು. ಅಲ್ಕೆಮಿ ರಸಶಾಸ್ತ್ರ. ಯಾವುದೇ ಲೋಹವನ್ನು ಬಂಗಾರವನ್ನಾಗಿಸುವ ರಸದ ಶೋಧನೆ ನಮ್ಮ ಇತಿಹಾಸದುದ್ದಕ್ಕೂ ಕಂಡುಬರುವುದು. ಸುಖದ, ಸತ್ಯದ ಪರಮ ಅನ್ವೇಷಣೆಗಾಗಿ ವೇದ, ಉಪನಿಷತ್ತು, ಆಗಮ, ಶೃತಿ, ಸಂಹಿತೆ ಎಲ್ಲವೂ ನಮ್ಮ ಸಂಶೋಧನೆ ಸಂಸ್ಕೃತಿಯ ಅಂಗವಾಗಿದ್ದವು. ಅಶೋಕಸ್ತಂಭದ ರಾಸಾಯನ ಸೂತ್ರ. ಮಾನಸಾರನ ಶಿಲ್ಪಶಾಸ್ತ್ರ, ವಾತ್ಸಾಯನನ ಕಾಮಸೂತ್ರ, ಶೂನ್ಯ ಸಂಪಾದನೆ ಶೂನ್ಯದ ಪರಿಕಲ್ಪನೆ ಹೀಗೆ ಒಂದೆ-ಎರಡೇ. ಹಲವಾರುಗಳನ್ನು ಪಟ್ಟಿ ಮಾಡಬಹುದು. ಇಷ್ಟೊಂದು ಶ್ರೀಮಂತ ಸಂಶೋಧನೆ ಸಂಸ್ಕೃತಿ ಹೊಂದಿದ ನಮ್ಮ ದೇಶ ಯಾಕೆ ಹೀಗೆ ಮುಗ್ಗರಿಸಿತು. ಅಂದರೆ ಮುಖ್ಯ ಕಾರಣ ಬ್ರಿಟಿಷರ ಇಂಗ್ಲಿಷ್ ಮಾಧ್ಯಮದ ಕಾರಕೂನರ ತಯಾರಿಕೆಯ ಶಿಕ್ಷಣ ವ್ಯವಸ್ಥೆ. ಈಗ ಅತ್ತಲೂ ಇಲ್ಲ. ಇತ್ತಲೂ ಇಲ್ಲ ಅನ್ನುವ ಬೌದ್ಧಿಕ ಗುಲಾಮಗಿರಿಯ ಅಂತಸ್ತು ನಮ್ಮದಾಗಿದೆ. ಇದರ ಮೂಲವನ್ನೇ ಬದಲಿಸಬೇಕೆಂದರೆ ಶಿಕ್ಷಣ ವ್ಯವಸ್ಥೆ ಆಮೂಲಾಗ್ರವಾಗಿ ಇವತ್ತಿನ ದಿನಮಾನಕ್ಕೆ ತಕ್ಕಂತೆ ಮಾತೃಭಾಷೆ, ಇಂಗ್ಲಿಷ್ ಚೌಕಟ್ಟಿನಾಚೆ ನೋಡುವ ವಿಂಡೋ ದೃಷ್ಟಿಕೋನ ರೂಪಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಕೆಲವು ಉಪಾಯ/ಸಲಹೆಗಳನ್ನು ನೀಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಇವು ಅಂತಿಮ ಅಂತಾ ಅಲ್ಲ, ಯಾರಾದರು ಸತ್ಯದ ಅನ್ವೇಷಣೆಗಾಗಿ ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಳ್ಳಬಹುದಾಗಿದೆ.
ಮನೆಯೇ ಮೊದಲ ಪಾಠಶಾಲೆ. ಮನೆಯಲ್ಲಿ ಮಕ್ಕಳಿಗೆ ಪ್ರಶ್ನೆ ಕೇಳುವ ಪ್ರವೃತ್ತಿ ಬೆಳೆಸುವುದು. ಹಿರಿಯರಾದವರು ಗೊತ್ತಿದ್ದರೆ ಇಲ್ಲವೆ ಗೊತ್ತು ಮಾಡಿಕೊಂಡಾದರೂ ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡುವುದು ಮತ್ತು ಪುನರಾವೃತ್ತಿ ಮಾಡುವುದು. ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸುವ ವಿಧಾಯಕ, ಪ್ರೋತ್ಸಾಹದಾಯಕ ಚಟುವಟಿಕೆಗಳನ್ನು ಪುಷ್ಟೀಕರಿಸುವುದು. ನೋಡಿ ಕಲಿ, ಕಲಿ-ನಲಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು.
ಹೊಸದನ್ನು. ಹೊಸ ವಿಚಾರಗಳು ಬರುವಂತೆ ಆ ರೀತಿ ಯೋಚಿಸಲು ಪ್ರೇರೇಪಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿಕೊಳ್ಳುವುದು. ಕೌಶಲ್ಯಗಳ ಅಭಿವೃದ್ಧಿ ಮೂಲಕ ಹೊಸ ಹೊಸ ವಸ್ತುಗಳು ಹೊಸ ವಿನ್ಯಾಸಗಳಿಗೆ ಪೂರಕ ವಾತಾವರಣ ನಿರ್ಮಾಣ. ಎಲ್ಲಿಯಾದರೂ ತಪ್ಪಿದಲ್ಲಿ ಅದಕ್ಕೆ ಬೇಕಾಗುವ ತಾಳ್ಮೆ tolerance ಬೆಳೆಸಿಕೊಳ್ಳುವುದು. ಎಲ್ಲವನ್ನು ಲೆಕ್ಕಾಚಾರದಲ್ಲಿ ನೋಡಬಾರದು ಎನ್ನುವ ಚಿಂತನೆಯಲ್ಲಿ ಯಾವುದನ್ನು ಅಳೆಯಲು ಬರುವ, ಅಳೆಯಲು ಬಾರದ ಲಾಭಗಳನ್ನು ಹೇಗೆ ಪರಿಗಣಿಸುವುದರ ಬಗ್ಗೆ ಚಿಂತನೆಗೆ ಹಚ್ಚುವುದು. ಶಿಕ್ಷಣದ ಪ್ರತಿ ಹಂತದಲ್ಲೂ ಸಂಶೋಧನೆಯ ಬುದ್ಧಿ ಉದ್ದೀಪನಗೊಳಿಸುವ ಪೂರಕ ವಾತಾವರಣ ಕಲ್ಪಿಸುವುದು. ಯಾವುದು ಲಾಭ, ಯಾವುದು ಹಾನಿ, ಸಮಾಜಮುಖಿ ಚಿಂತನೆಗೆ ಪ್ರೇರೇಪಿಸುವುದು. ನೌಕರಿಶಾಹಿಯಲ್ಲಿ ಸಹ ಸಂಶೋಧನೆಯ ಹಲವು ಹೊಸತರ ಅಳವಡಿಕೆ ಮತ್ತು ಚಿಂತನಶೀಲತೆಗೆ ಪ್ರೋತ್ಸಾಹ. ಸಂಶೋಧನೆಯಲ್ಲಿ ತಪ್ಪಿಗೆ ಶಿಕ್ಷೆಯಿಲ್�� ಎಂಬ ಭಾವನೆ ರೂಪುಗೊಳ್ಳುವಂತೆ ಮಾಡುವುದು. ಸಮಸ್ಯೆ ಪರಿಹಾರ ಬೋಧನೆ ಕ್ರಮ, ಯೋಜನೆಯ ಬೋಧನೆ ಎಲ್ಲ ಹಂತದಲ್ಲಿ ಅನುಷ್ಠಾನ. ಎಲ್ಲ ಪ್ರಯತ್ನಗಳ ದಾಖಲೀಕರಣ ಮತ್ತು ಪ್ರಕಾಶನ ಮಾಹಿತಿ ಹಂಚಿಕೊಳ್ಳುವ ಪ್ರಕ್ರಿಯೆಗಳು. ಹೊಸತನ್ನು ಪ್ರೋತ್ಸಾಹಿಸುವ, ಗುರುತಿಸುವ ಕ್ರಿಯೆಗಳು.
ಕೃಪೆ : ಸಂಯುಕ್ತ ಕರ್ನಾಟಕ