ಸಂಗೀತ ಸುಧೆಯಲ್ಲಿ ಮಿಂದೆದ್ದ ಜನಸಾಗರ

ಸಂಗೀತ ಸುಧೆಯಲ್ಲಿ ಮಿಂದೆದ್ದ ಜನಸಾಗರ

ಸಂಗೀತ ಸಂಜೆಯೆಂದರೆ ಅಲ್ಲಿ ಭರಪೂರ ರಂಜನೆಗೆ ಯಾವುದೇ ಬರವಿಲ್ಲ. ಅದರಲ್ಲೂ ಸಂಗೀತ ದಿಗ್ಗಜೆ, ಬಹುಭಾಷಾ ಪ್ರವೀಣೆ, ಮಾದಕ ಕಂಠದಿಂದಲೇ‍ ಪ್ರೇಕ್ಷಕರನ್ನು ಹಿಡಿದಿಡುವ ಉಷಾ ಉತ್ತಪ್ಪ ಅವರ ಗಾಯನ ಎಂದರೆ ಕೇಳಬೇಕೆ? ಅಕ್ಷರಶಃ ಸಂಗೀತ ಪ್ರಿಯರ ಸ್ವರ್ಗವದು.

ಬಾನಂಗಳದಲ್ಲಿ ಅದಾಗಲೇ ಚಂದಿರ ವಿರಾಜಮಾನನಾಗಿದ್ದ. ಬಹುಬಣ್ಣದ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದ ವೇದಿಕೆ, ಬಹುಭಾಷಾ ಗಾಯಕಿ ಉಷಾ ಉತ್ತಪ್ಪ ಅವರ ಸ್ವಾಗತಕ್ಕೆ ಸಜ್ಜಾಗಿತ್ತು. ಕ್ಯಾಮೆರಾಗಳೂ ಕಾತರಿಸಿದ್ದವು. ವೇದಿಕೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದು ಉಷಾ ಅವರ ವೇದಿಕೆ ಪ್ರವೇಶ. ಫೀನಿಕ್ಸ್‌ ಮಾರ್ಕೆಟ್‌ಸಿಟಿ ಶನಿವಾರ ಆಯೋಜಿಸಿದ್ದ ಉಷಾ ಉತ್ತಪ್ಪ ಸಂಗೀತ ಸಂಜೆ ಕಾರ್ಯಕ್ರಮದ ನೋಟವಿದು.

ಕೇಸರಿ ಹಾಗೂ ಕಪ್ಪು ಬಣ್ಣದ ಸೀರೆ ಅದಕ್ಕೊಪ್ಪುವ ಬಳೆ, ಎದ್ದು ಕಾಣುವ ಹಣೆಯ ಬೊಟ್ಟು ಎಂದಿನಂತೆ ತಮ್ಮ ವಿಭಿನ್ನ ಶೈಲಿಯ ಉಡುಗೆ, ತೊಡುಗೆಯೊಂದಿಗೆ ಮೈಕ್‌ ಹಿಡಿದು, ಮಂದಸ್ಮಿತರಾಗಿ ವೇದಿಕೆ ಪ್ರವೇಶಿಸಿದ ಉಷಾ ಅವರನ್ನು ಸ್ವಾಗತಿಸಿದ್ದು ಪ್ರೇಕ್ಷಕರ ಕಿವಿಗಡಚಿಕ್ಕುವ ಕರತಾಡನ, ಶಿಳ್ಳೆಯ ನಿನಾದ.

‘ಐ ಲವ್‌ ಮ್ಯೂಸಿಕ್‌, ಐ ಲವ್‌ ಪೀಪಲ್ಸ್‌’ ಎನ್ನುತ್ತಾ ತಮ್ಮ ಮಾದಕ ಕಂಠದೊಂದಿಗೆ ಮೊದಲ ಹಾಡಿಗೆ ದನಿಯಾದ ಉಷಾ ಅವರ ಉತ್ಸಾಹ ಪ್ರೇಕ್ಷಕರನ್ನು ಬೆರಗುಗೊಳಿಸಿತು. ಬೆಂಗಳೂರಿನ ಸಂಚಾರ ದಟ್ಟಣೆಗೆ ಶಪಿಸುತ್ತಾ ಉಷಾ ಅವರು ಕಾರ್ಯಕ್ರಮದ ಸ್ಥಳಕ್ಕೆ ತಲುಪುವಾಗ ನಿಗದಿತ ಸಮಯಕ್ಕಿಂತ 2 ಗಂಟೆ ತಡವಾಗಿತ್ತು. ಆದಾಗ್ಯೂ ಅಭಿಮಾನಿಗಳ ಉತ್ಸಾಹದಲ್ಲಿ ಕಿಂಚಿತ್ತೂ ಕೊರತೆ ಕಾಣಲಿಲ್ಲ. ಕಾಯುವಿಕೆಯ ಬೇಸರ ಕಾಡದಂತೆ ಉಷಾ ತಮ್ಮ ಸಂಗೀತ ಸುಧೆಯಿಂದ ನೆರೆದಿದ್ದವರನ್ನು ರಂಜಿಸಿದರು.

ವೇದಿಕೆಯ ಹಿಂಭಾಗದಲ್ಲಿ ಕಾಲುನೋವಿನಿಂದ ಬಳಲುತ್ತಿದ್ದ ಉಷಾ ಅವರನ್ನು ನೋಡಿದವರಿಗೆ ವೇದಿಕೆಯಲ್ಲಿನ ಅವರ ಪ್ರದರ್ಶನ ಆಶ್ಚರ್ಯವ‌ನ್ನು ಮೂಡಿಸುತ್ತಿತ್ತು. ಯಾವ ಶಕ್ತಿ ಅವರಿಗೆ ಈ ಸ್ಫೂರ್ತಿ ತುಂಬಿತು ಎಂಬ ಪ್ರಶ್ನಾರ್ಥಕವೊಂದು ಕಾಡುವಂತಿತ್ತು.

ಉಷಾ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿದ ‘ಹರೇ ಕೃಷ್ಣ, ಹರೇ ರಾಮ್‌’ ಹಾಡು ಸಂಗೀತ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಹಾಡಿನ ನಡುವಿನಲ್ಲಿಯೇ ಪ್ರೇಕ್ಷಕರನ್ನು ಹುರಿದುಂಬಿಸಲು ಅವರಿಗೂ ಹಾಡಲು ಅವಕಾಶ ನೀಡುತ್ತಿದ್ದರು. ಮಧ್ಯಮಧ್ಯದಲ್ಲಿಯೇ ತಾವು ಸಂಗೀತ ಕ್ಷೇತ್ರ ಪ್ರವೇಶಿಸಿದ ದಿನಗಳನ್ನು ನೆನೆಯುತ್ತಾ ತಿಳಿಸಂಜೆಯ ತಂಪು ವಾತಾವರಣದಲ್ಲೊಂದು ತಣ್ಣನೆ ನಿಶಬ್ದವನ್ನು ಸೃಷ್ಟಿಸುತ್ತಿದ್ದರು.

ಕರ್ನಾಟಕದೊಂದಿಗಿನ ಸಂಬಂಧವನ್ನು ಹೊಗಳುತ್ತಾ, ನಗರದ ಬಹುಸಂಸ್ಕೃತಿಯ ಪ್ರೇಕ್ಷಕರನ್ನು ಶ್ಲಾಘಿಸಿದರು. ರಾಜ್‌ಕುಮಾರ್ ಅವರೊಂದಿಗಿನ ಒಡನಾಟವನ್ನು ನೆನೆದು ಹಾಡಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ಪ್ರೇಕ್ಷಕರೂ ದನಿಗೂಡಿಸಿದರು.

‘ರಾಜ್‌ ಅವರ ಎದುರಿನಲ್ಲಿ ಈ ಹಾಡನ್ನು ಹಾಡಿದ್ದ ರಸಗಳಿಗೆ ಎಂದೂ ಮರೆಯಾಲಾಗದು. ವಿಶ್ವದೆಲ್ಲೆಡೆ ನೀಡಿದ ಸಂಗೀತ ಕಾರ್ಯಕ್ರಮಗಳಲ್ಲಿ ಕನಿಷ್ಟ ಐದು ಜನ ಕನ್ನಡಿಗರಿದ್ದರೂ ಈ ಹಾಡನ್ನು ಹಾಡುವಂತೆ ಕೇಳುತ್ತಾರೆ. ಅಕ್ಕ ಸಮ್ಮೇಳನ ಸೇರಿದಂತೆ ವಿಶ್ವದ ವಿವಿಧೆಡೆಗಳಲ್ಲಿ ಕನ್ನಡಿಗರು ಆಯೋಜಿಸುವ ಕಾರ್ಯಕ್ರಮದಲ್ಲಿ ಈ ಹಾಡು ಮೇಳೈಸಿರುತ್ತದೆ’ ಎಂದಾಗ ಚಪ್ಪಾಳೆಯ ಸದ್ದು ಮುಗಿಲು ಮುಟ್ಟಿತ್ತು.

ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು ಹಾಡುಗಳನ್ನು ತಮ್ಮದೇ ವಿಶಿಷ್ಟ ಶೈಲಿಯೊಂದಿಗೆ ಹಾಡುತ್ತಾ, ವಿವಿಧ ವಾದ್ಯಗಳನ್ನು ನುಡಿಸುತ್ತಾ ಗಮನ ಸೆಳೆದರು. ನೋಡುಗರನ್ನು ವೇದಿಕೆಗೆ ಆಹ್ವಾನಿಸಿ ಹಾಡನ್ನು ಹಾಡಿಸಿ, ನೃತ್ಯಕ್ಕೆ ಹೆಜ್ಜೆಹಾಕುವಂತೆ ಉಷಾ ಹುರಿದುಂಬಿಸಿದರು.

‘ವೈ ದಿಸ್‌ ಕೊಳವರಿ ಡಿ’ ಹಾಡಿಗೆ ಹುಚ್ಚೆದ್ದ ಪ್ರೇಕ್ಷಕರು ವೇದಿಕೆ ಮುಂಭಾಗಕ್ಕೆ ಮುಗಿಬಿದ್ದರು. ಮೊದಲ ಸಾಲನ್ನು ಉಷಾ ಹಾಡುತ್ತಿದ್ದರೆ, ಎರಡನೇ ಸಾಲನ್ನು ಅನಾಯಾಸವಾಗಿ ಪ್ರೇಕ್ಷಕರೇ ಹಾಡುತ್ತಿದ್ದರು. ಕೆಲವು ಹಾಡುಗಳನ್ನಂತೂ ಆರಂಭಿಸುವುದಷ್ಟೇ ಉಷಾ ಅವರಾಗಿತ್ತು ಸಂಗೀತ ಪ್ರಿಯರೇ ಅದನ್ನು ಪೂರ್ಣಗೊಳಿಸುತ್ತಿದ್ದರು.

‘ನನ್ನ ಬತ್ತಳಿಕೆಯಲ್ಲಿ ಇನ್ನೂ ಸಾವಿರಾರು ಹಾಡುಗಳಿವೆ. ಆದರೆ ಹಾಡಲು ಈಗ ಸಮಯವಿಲ್ಲ. ಮತ್ತೊಮ್ಮೆ ನನ್ನನ್ನು ಕರೆಸಿ’ ಎನ್ನುತ್ತಾ ಕಾರ್ಯಕ್ರಮಕ್ಕೆ ವಿದಾಯ ಹೇಳಿದರು.

ವೇದಿಕೆ ಸುತ್ತಲಿನ ಎಲ್ಲ ಅಲಂಕಾರಿಕ ದೀಪಗಳನ್ನು ಆರಿಸಿ ನೆರೆದಿದ್ದ ಪ್ರೇಕ್ಷಕವರ್ಗ ತಮ್ಮ ಮೊಬೈಲ್‌ ಬ್ಯಾಟರಿಯನ್ನು ಹೊತ್ತಿಸಿ ವೇದಿಕೆಯ ಮೇಲಿದ್ದ ಎಲ್‌ಇಡಿ ಪರದೆಗೆ ಬೆಳಗಿಸಿ ಉಷಾ ಅವರಿಗೆ ಪ್ರೀತಿ ಪೂರ್ವಕ ವಿದಾಯ ಹೇಳಿದ ದೃಶ್ಯ ಅಮೋಘವಾಗಿತ್ತು.

Courtesy : Prajavani.net

http://www.prajavani.net/news/article/2018/05/07/571225.html

Leave a Reply