ಸಂಗೀತ ವಿಶಾರದ ಆರ್. ಟಿ. ಹೆಗಡೆ
ಆಧ್ಯಾತ್ಮಿಕ ಶಕ್ತಿಯ ತಪೋಭೂಮಿ ಶೀಗೇಹಳ್ಳಿಯಲ್ಲಿ ಜನಿಸಿ ಸಂಗೀತ ಸಾಧಕರಾಗಿ ಬೆಳೆದವರು ಆರ್.ಟಿ.ಹೆಗಡೆ. ತಾನು ಬೆಳೆಯುತ್ತ ತನ್ನ ಸುತ್ತ ಸಂಗೀತದ ಹೊಸ ತಲೆಮಾರು ಬೆಳೆಸಿದವರು. ಇತ್ತಿಚಿಗೆ ಇಹಲೋಕ ತ್ಯಜಿಸಿದ ಶ್ರೀಯುತರ ಸಾಧನೆಯ ಅವಲೋಕನ ಇಲ್ಲಿದೆ
ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆ ಬಸವಳಿದ ಕಾಲವದು, ೬೦ರ ದಶಕದಲ್ಲಿಯೂ ನಮ್ಮ ಹಳ್ಳಿಗಳಿಗೆ ರಸ್ತೆ, ಸೇತುವೆ, ವಾಹನ, ವಿದ್ಯುತ್ ಸೌಕರ್ಯವಿರಲಿಲ್ಲ. ಶಾಲೆಗಳು ಆಗಷ್ಟೇ ಆರಂಭವಾಗಿದ್ದವು. ಎತ್ತಿನಗಾಡಿ ಅವಲಂಬಿತ ಜನಜೀವನ. ಕಾಲದ ಕಷ್ಟ ಏನೇ ಇರಲಿ, ಬದುಕಿಗೆ ಖುಷಿ ಕೊಡುವ ಕಲೆ, ಸಂಗೀತ ಪರಂಪರೆಗಳು ನಮ್ಮ ಕಗ್ಗಾಡಿನ ಕೊಳ್ಳಗಳಲ್ಲಿ ಚಿಗುರುತ್ತಿದ್ದವು. ಕೃಷಿ ಕಾಯಕದಲ್ಲಿ ತಲ್ಲೀನರಾಗಿರುತ್ತಿದ್ದ ಹಳ್ಳಿಗರು ಎಣ್ಣೆದೀಪ, ಗ್ಯಾಸ್ ಲೈಟ್ ಬೆಳಕಿನಲ್ಲಿ ನಾಟಕ, ಯಕ್ಷಗಾನ, ತಾಳಮದ್ದಲೆ, ಭಜನೆ, ಕೀರ್ತನೆ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದರು. ನಾಟಕ ನಿರ್ದೇಶಕರು, ಕಲಾವಿದರು, ಸಾಹಿತಿಗಳು ಉದಯಿಸಿ ಜನಮನ ಗೆದ್ದರು. ಆದರೆ ಇವರನ್ನು ಗುರುತಿಸುವ ಸರಕಾರ, ಸಂಘಟನೆಗಳಿಲ್ಲ. ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವವರಿಲ್ಲ. ಸಾಮಾಜಿಕವಾಗಿ ಆರ್ಥಿಕವಾಗಿ ಬಹಳ ಕಷ್ಟಗಳವು. ಸ್ವಯಂ ಪ್ರಭೆಯಲ್ಲಿ ಅಲ್ಲೊಂದು ಇಲ್ಲೊಂದು ಕಲಾದೀಪಗಳು ಬೆಳಗತೊಡಗಿದವು. ಸಂಗೀತ ಕಾರ್ಯಕ್ರಮ ಸಂಘಟನೆ, ಕಲಾ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತ್ತ ಸಂಗೀತ ವಿದ್ವಾಂಸರಾಗಿ ರೂಪುಗೊಂಡವರು ನಮ್ಮ ಶಿರಸಿಯ ಶೀಗೇಹಳ್ಳಿಯ ರಂಗನಾಥ ತಿಮ್ಮಯ್ಯ ಹೆಗಡೆ, ಎಲ್ಲರ ಅಕ್ಕರೆಯ ಆರ್, ಟಿ, ಹೆಗಡೆ. ಸಂಗೀತ ದಿಗ್ಗಜರಾದ ಬೆಳಗಾವಿಯ ಮೃತ್ಯುಂಜಯ ಪುರಾಣಿಕಮಠ, ಆರ್, ಎನ್, ಜೋಶಿ, ಬಿ.ಡಿ.ಜೋಶಿ, ಧಾರವಾಡದ ಚಂದ್ರಶೇಖರ ಪುರಾಣಿಕಮಠರ ಗುರುಪರಂರೆಯಲ್ಲಿ ಬೆಳಕಿಲ್ಲದ ನೆಲೆಯಲ್ಲಿ ಹೆಗಡೆ ಬೆಳೆದು ಬಂದವರು.
ಕಲಾವಿದ ಎಂದರೆ ವೇದಿಕೆ ಏರಿ ಕಾರ್ಯಕ್ರಮ ನೀಡುವುದಷ್ಟೇ ಆ ಕಾಲದ ದಾರಿಯಲ್ಲ. ಊರಿಗೆ ಸಂಗೀತ ಪರಿಚಯಿಸಬೇಕು, ವಿದ್ವಾಂಸರನ್ನು ಒಟ್ಟಿಗೆ ಸೇರಿಸಿ ಕಾರ್ಯಕ್ರಮ ಸಂಘಟಿಸಬೇಕು, ಆಸಕ್ತ ಯುವ ಗಾಯಕರಿಗೆ ಸಂಗೀತ ಶಾಲೆ ಆರಂಭಿಸಬೇಕು. ನಾಟಕಗಳಲ್ಲಿ ಹಿನ್ನಲೆ ಗಾಯಕರಾಗಿ ನಿಲ್ಲಬೇಕು. ಜನರ ಮಧ್ಯೆ ಸಂಗೀತ ರಥ ಎಳೆಯುತ್ತ ಆರ್.ಟಿ.ಹೆಗಡೆ ಶಿರಸಿಯಲ್ಲಿ ೧೯೫೫ರಿಂದ ಏಳೆಂಟು ವರ್ಷ ಕಾಲ ಉತ್ತರ ಕನ್ನಡ ಜಿಲ್ಲಾ ಕಲಾ ಮಂಡಳದ ಸದಸ್ಯರಾಗಿ, ಸಂಗೀತ ಮಹೋತ್ಸವ, ಸಂಗೀತ ಸಮ್ಮೇಳನದ ಸಂಘಟಕರಾಗಿ ಹಂತ ಹಂತವಾಗಿ ಬೆಳೆದರು. ೧೯೬೦-೭೦ರ ಕಾಲದಲ್ಲಂತೂ ಸಂಗೀತ ಕಾರ್ಯಕ್ರಮವೆಂದರೆ ಆರ್.ಟಿ,ಹೆಗಡೆ ಹಾಜರಿಲ್ಲದಿದ್ದರೆ ಅದು ಅಪೂರ್ಣವೆನ್ನುವ ಸಂದರ್ಭವಿತ್ತು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಂಗೀತ ಶಾಲೆಗಳಿಗೆ ಶ್ರೀಗಣ ಹಾಕಿ ಸಮಾಜವನ್ನು ಹೊಸ ಸಂಸ್ಕಾರಕ್ಕೆ ತೆರೆದರು.
ಶಿರಸಿಯ ಶೀಗೇಹಳ್ಳಿ ಪರಮಾನಂದಮಠ ಆಧ್ಯಾತ್ಮಿಕ ಶಕ್ತಿಯ ನೆಲೆ. ಶ್ರೀ ಶ್ರೀಧರಸ್ವಾಮಿಗಳು, ಶ್ರೀ ಶಿವಾನಂದಸ್ವಾಮಿಗಳ ತಪೋಭೂಮಿ. ಕ್ರಿ,ಶ ೧೯೩೩ರ ಮಾರ್ಚ್ ೧೧ರಂದು ಇದೇ ಶೀಗೇಹಳ್ಳಿಯ ಕೃಷಿಕ ಕುಟುಂಬದಲ್ಲಿ ರಂಗನಾಥರು ಜನಿಸಿದರು. ಓದಿದ್ದು ಎಸ್.ಎಸ್.ಸಿ. ಕರ್ನಾಟಕ ಪ್ರಾಥಮಿಕ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸಂಗೀತ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮುಂಬೈಯ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಪರೀಕ್ಷೆಯಲ್ಲಿ ೧೯೬೨ರಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿ’ ಸಂಗೀತ ವಿಶಾರದ’ ರಾದರು. ಧಾರವಾಡ ಆಕಾಶವಾಣಿಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿಭಾಗದ ಆಯ್ಕೆ ಮಂಡಳಿಯ ಸದಸ್ಯರಾಗಿ ೧೯೯೦-೯೨ರ ಸಮಯದಲ್ಲಿ ಸೇವೆ ಸಲ್ಲಿಸಿದರು. ಶ್ರೀಯುತರ ಸಂಗೀತ ಸೇವೆಯನ್ನು ಗುರುತಿಸಿ ೨೦೦೧ರಲ್ಲಿ ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ‘ ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಶಿರಸಿಯ ಶ್ರೀ ಸಾಯಿ ಸಂಗೀತ ವಿದ್ಯಾಲಯ ಇವರ ಪ್ರತಿಭೆ ಗುರುತಿಸಿ ಪುರಸ್ಕರಿಸಿದೆ. ೨೦೧೨ರಲ್ಲಿ ಹೊನ್ನಾವರ ಶರಾವತಿ ಸಾಂಸ್ಕೃತಿಕ ವೇದಿಕೆ ಸಂಘಟಿಸಿದ ಶರಾವತಿ ಉತ್ಸವದಲ್ಲಿ ಸಾಧನಾ ಸನ್ಮಾನ, ೨೦೧೩ರಲ್ಲಿ ಬಂಗಾರಮಕ್ಕಿ ಶ್ರೀವೀರಾಂಜನೇಯ ಸೃಜನಶೀಲ ರಾಜ್ಯಮಟ್ಟದ ಪ್ರಶಸ್ತಿ, ಶಿರಸಿಯ ರಾಗಮಿತ್ರ ಪ್ರತಿಷ್ಠಾನದಿಂದ ‘ರಾಗ-ರತ್ನ’ ಪ್ರಶಸ್ತಿ, ೨೦೧೪ರಲ್ಲಿ ಪಂ. ಜಿ.ಎಸ್.ಹೆಗಡೆ ಬೆಳ್ಳೇಕೇರಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ದೊರಕಿವೆ. ಶ್ರೀಯುತರ ಸಂಗೀತ ಗರಡಿಯಲ್ಲಿ ಕಳವೆಯ ಜಿ.ಜಿ.ದೀಕ್ಷಿತ್, ಚಂದ್ರಶೇಖರ ಹೆಗಡೆ ಸಂಪಿಗೆಮನೆ, ಆಕಾಶವಾಣಿ ಕಲಾವಿದ ಎಂ.ಪಿ.ಹೆಗಡೆ ಪಡಗೇರಿ, ಎಂ.ಜಿ.ಹೆಗಡೆ ಉದ್ದೇಮನೆ, ಜಿ.ವಿ.ಕುಂಬ್ರಿ, ವಿಶ್ವೇಶ್ವರ ಹೆಗಡೆ ಕಾನಳ್ಳಿ ಮುಂತಾದವರು ಬೆಳೆದು ಬಂದಿದ್ದಾರೆ.
ಅಪೂರ್ವ ಸಂಗೀತ ಗ್ರಂಥ ಭಂಡಾರ ಆರ್, ಟಿ,ಹೆಗಡೆಯವರ ದೊಡ್ಡ ಆಸ್ತಿ. ಸಂಗೀತ ಶಾಸ್ತ್ರ ಹಾಗೂ ಕ್ರಿಯಾತ್ಮಕ ಗಾಯನದ ಬಗ್ಗೆ ಅಧಿಕಾರಯುತವಾಗಿ ಮತನಾಡುವ ತಾಕತ್ತು ಇವರದು. ಶೀಗೇಹಳ್ಳಿಯಲ್ಲಿ ಹತ್ತು ಹನ್ನೆರಡು ಸದಸ್ಯರನ್ನೊಳಗೊಂಡ ಭಜನಾ ಮಂಡಳಿ ಆರಂಭಿಸಿ ಅದಕ್ಕೆ ಸಂಗೀತ ಸ್ವರ್ಶ ನೀಡಿ ಭಕ್ತಿ ರಚನೆಗಳನ್ನು ಹಾಡುವುದಕ್ಕೆ ಆರಂಭಿಸಿದರು. ರಾಗ ಸಮಯ ಚಕ್ರವನ್ನು ಸುಲಭವಾಗಿ ಅಭ್ಯಾಸಿಗಳಿಗೆ ಅರ್ಥವಾಗುವಂತೆ ರೂಪಿಸಿದ್ದರು, ಇದು ವೈಜ್ಞಾನಿಕ ಆಧಾರವಾಗಿತ್ತು. ಬೆಳಗಿನ ಪೂವಾಂಗ ಪ್ರಧಾನ ರಾಗಗಳಾದ ತೋಡಿ, ಬಿಲಾಸ್ಖಾನಿ ತೋಡಿ, ಲಲಿತ, ಭೈರವ ಬಿಹಾರ, ಮಧ್ಯಾಹ್ನದ ಗೌಡ ಸಾರಂಗ, ಲಂಕಾದಹನ ಸಾರಂಗ, ಮುಲ್ತಾನಿ, ರಾತ್ರಿಯ ದಾರ್ಬಾರಿ ಕಾನ್ಹಡಾ ಹಾಗೂ ಕಾನಡಾ ಪ್ರಾಕಾರಗಳು ಇವರಿಗೆ ಅತ್ಯಂತ ಪ್ರಿಯವಾಗಿದ್ದವು. ಪ್ರಾಥಮಿಕ ಸಂಗೀತ ಅಭ್ಯಾಸಿಗಳಿಗೆ ಹಲವಾರು ರಾಗಗಳಲ್ಲಿ ಸ್ವರಗೀತೆ, ಲಕ್ಷಣಗೀತೆ, ದೇಸಿ ದರ್ಬಾರಿ ರಾಗ ರಚಿಸಿ ಅದರಲ್ಲಿ ಬಂದಿಶ್ ಕೂಡ ಸಿಗುವಂತೆ ಮಾಡಿದ್ದಾರೆ. ೧೯೮೮ರಲ್ಲಿ ಶಿರಸಿಯ ಶ್ರೀಮಾರಿಕಾಂಬಾ ದೇಗುಲದ ತ್ರಿಶತಮಾನೋತ್ಸವ ಸಮನ್ವಯ ಗೋಷ್ಠಿಯಲ್ಲಿ ಹಾಗೂ ೧೯೯೬ರ ಸಾರ್ವಜನಿಕ ಸನ್ಮಾನ ಸಂದರ್ಭದಲ್ಲಿನ ಇವರ ಹಾಡುಗಾರಿಗೆ ಇಂದಿಗೂ ನೆನಪಿಡುವ ಕಾರ್ಯಕ್ರಮವಾಗಿದೆ.
ನಾಡಿಗೆ ಪರಿಚಿತ ಸಾಧಕರಾಗಿ ಬೆಳೆದ ಆರ್.ಟಿ.ಹೆಗಡೆ ಇಳಿವಯಸಿನಲ್ಲೂ ಸಂಗೀತದ ಒಡನಾಟ ಉಳಿಸಿಕೊಂಡವರು. ಬದುಕಿನ ಕಟ್ಟಡೆಯ ದಶಕಗಳಿಂದ ಅನಾರೋಗ್ಯದಲ್ಲಿ ಬಳಲಿದರು, ಇವರನ್ನು ಅಕ್ಕರೆಯಲ್ಲಿ ನಿತ್ಯ ಸೇವೆಗೈದ ಶ್ರೀಯುತರ ಪತ್ನಿ ಯಮುನಕ್ಕ ಹಾಗೂ ಮನೆಯವರೆಲ್ಲರ ಪರಿಶ್ರಮ ಎಲ್ಲರಿಗೂ ಆದರ್ಶವಾದುದು. ೮೨ ವರ್ಷಪರ್ಯಂತ ನಾಡಿನ ಸಂಗೀತಲೋಕದ ತಾರೆಯಾಗಿ ನಮಗೆ ಸಂಗೀತ ಸವಿ ಒದಗಿಸಿದ ರಂಗನಾಥರು ಇಂದು ನಮ್ಮೊಂದಿಗಿಲ್ಲ, ಅಭಿಮಾನಿ ಲೋಕ ಅನಾಥವಾಗಿದೆ. ಇವರು ಸಂಗೀತಾರಾಧಕರಾದ ಕಾಲಕ್ಕೆ ರಾಗ ಕೇಳಿ ಮೆಚ್ಚುವುದೇ ದೊಡ್ಡ ಪ್ರೋತ್ಸಾಹ, ಸಂಗೀತ ಜ್ಞಾನವಿದ್ದವರೂ ಬಹಳ ಕಡಿಮೆ. ಸಾಧನೆ ದಾರಿಯಲ್ಲಿರುವಾಗ ಗುರುತಿಸಿ ಪ್ರೋತ್ಸಾಹಿಸುವವರಿಗಿಂತ ಟೀಕಿಸುವವರೇ ಜಾಸ್ತಿ. ಹಳ್ಳಿ ಪ್ರತಿಭೆಗಳಿಗೆ ಗುರಿ ತಲುಪುವದು ಕಷ್ಟದ ಕೆಲಸ. ಗೆಲ್ಲುವುದಕ್ಕಿಂತ ಮುಂಚೆ ಸಮಾಜಕ್ಕೂ ಇವರ್ಯಾರೆಂದು ಗುರುತು ಹತ್ತುವುದಿಲ್ಲ. ಸಂಗೀತ ವಾತಾವರಣ ರೂಪಿಸಿಕೊಂಡು ಒಂದೊಂದು ಹೆಜ್ಜೆ ಮುಂದಕ್ಕೆ ಹೋಗುವದಕ್ಕೆ ಸಂಯಮ ಬೇಕು, ಸವಾಲು ಎದುರಿಸುವ ಧೈರ್ಯ ಬೇಕು. ಹಳ್ಳಿಗಾಡಿನಲ್ಲಿದ್ದೂ ಬದುಕಿನಲ್ಲಿ ಎತ್ತರದ ಸಾಧನೆ ಹೇಗೆ ಸಾಧ್ಯವೆಂಬುದಕ್ಕೆ ಆರ್.ಟಿ.ಹೆಗಡೆ ಶೀಗೇಹಳ್ಳಿಯವರ ಜೀವನ ನಮಗೆಲ್ಲ ಪ್ರೇರಕವಾಗಿದೆ. ಶ್ರೀಯುತರ ಕಿರಿಯ ಪುತ್ರ ಭಾರ್ಗವ ಹೆಗಡೆ ಸಿತಾರ್ ವಾದನದಲ್ಲಿ ಯುವ ಸಾಧಕರಾಗಿ ಇಂದು ಬೆಳೆಯುತ್ತಿರುವುದು ಕುಟುಂಬದ ಸಂಗೀತ ಪರಂಪರೆ ಮುಂದುವರಿದ ಸಾಕ್ಷಿಯಾಗಿದೆ. ( ಲೇಖಕರು ಆರ್.ಟಿ.ಹೆಗಡೆ ಶಿಷ್ಯಪರಂಪರೆಯಲ್ಲಿ ಬೆಳೆದ ಸಾಧಕರು)
– ಎಂ.ಪಿ.ಹೆಗಡೆ ಪಡಿಗೇರಿ
1 Comment
ಬಹಳ ಚೆನ್ನಾಗಿದೆ..