ಶ್ರಮ

ಶ್ರಮ

ಹಾಡುತ ಕುಣಿಯುತ ನಲಿಯುತ
ಪರಿಚಯ ನಮ್ಮಯ ಮಾಡುತಾ
ಸಮಾನತೆಯನು ಸಾರುತ
ವೃತ್ತಿಯ ಪರಿಚಯ ಮಾಡುವೆವು
ಶ್ರಮದಲಿ ಮೇಲು ಕೀಳಿಲ್ಲ
ಭೇದಭಾವವು ಹತ್ತಿರ ಸುಳಿಯಲ್ಲ
ಎಂಬುದ ಇಂದೇ ತೋರುವೆವು.

ಹಗಲು ರಾತ್ರಿ ಚಳಿಬಿಸಿಲೆನ್ನದೆ
ದುಡಿದು ದುಡಿದು ದಣಿಯುವೆನು
ಗೋಧಿ, ಸಜ್ಜೆ, ನವಣೆ, ರಾಗಿ, ಜೋಳ
ಬೆಳೆದು ನಿಮಗೆ ಹಂಚುವೆನು
ಹಸಿದವರಿಗೆ ನಾ ಅನ್ನವ ಕೊಡುವೆನು
ಹಣ್ಣು, ಹೂವು, ತರಕಾರಿಯಲಿ ಪುಷ್ಠಿ ತುಂಬಿ ತರುವೆನು
ನಾನೇ ನಿಮ್ಮಯ ರೈತನು ಆಪ್ತನು
ನಿಮ್ಮಯ ಪ್ರೀತಿಯ ನೇಗಿಲಯೋಗಿಯ ಮಗನು
‘ದುಡಿಮೆಯೆ ದುಡ್ಡಿನ ತಾಯಿ ಎಂಬುದ ಸಾರುವೆನು’

ಕುರ್ಚಿ, ಬೆಂಚು ಮಾಡಲು ಜಾಣ
ಕೂಡುವ ಮಣೆಗಳ ಮಾಡುವೆ ಸಣ್ಣ
ದೊಡ್ಡನೆಯ ಮಂಚ, ಉದ್ದನೆ ಬಾಗಿಲು
ಬಗೆಬಗೆ ಕಿಟಲಿಯ ಮಾಡುವೆನಾ
ನನ್ನಯ ಹೆಸರೇ ಬಡಿಗ
ಗರಗಸ ನನ್ನಯ ಸಂಗಡಿಗ
‘ಶ್ರಮ ಜೀವನದಲಿ ನಮ್ಮಯ ಗೆಲುವು’
ಎಂಬುದ ಸಾರುತಲಿರುವೆನಾ…

ಮಣ್ಣನು ಮಾಡುವೆ ಬೆಣ್ಣೆಯ ಹಾಗೆ
ಚಕ್ರವ ಗರಗರ ತಿರುಗಿಸಿ ನಾ
ಮಾಡುವೆ ಮಡಕೆ, ಕುಡಿಕೆಯ ಬಗೆಬಗೆ
ಹೂಜಿ, ಪಿಪಾಯಿ, ಭರಣಿಯು ನಿಮಗೆ
ನಾನೇ ಕುಂಬಾರ ಕೊಳ್ಳಿರಿ ಕೈಯಾರ
ಕೈಕೆಸರಾದರೆ ಬಾಯಿ ಮೊಸರೆಂಬುದ ಸಾರುವೆ ನಾ

ಕಿವಿಯಲಿ ಚೆಂದದ ಕಿವಿಯೋಲೆ
ಕೈಯಲಿ ಚಿನ್ನದ ಉಂಗುರ, ಬಳೆ
ಕತ್ತಲಿ ಹಾರ, ಕಾಳಿಗೆ ಗೆಜ್ಜೆ
ಮಾಡುತ ತೋರುವೆ ಕೈಚಳಕವು ಬಾಲೆ
ಅಕ್ಕಸಾಲಿಗ ನಾ ಬಂದಿಹೆ ಬಾರೆ,
‘ಉದ್ಯಮದಿಂದ ಕಾರ್ಯವು ಸಿದ್ಧಿ’ ಎಂಬುದ
ಹೇಳುವೆ ನಾ…

ಬೆಣ್ಣೆಯಂತ ಹತ್ತಿಯ ನಾನು
ನೂಲನಾಗಿ ಮಾಡುವೆನು
ನಿತ್ಯವು ಜಿಕ್ ಜಿಕ್ ಶಬ್ದವ ಮಾಡಿ
ನೇಯುತ ದಿನವಿಡಿ ಪಡುತಲಿ ಕಷ್ಟ
ಬಿಸಿಲಲಿ ತಂಪು, ಚಳಿಯಲಿ ಬೆಚ್ಚಗೆ
ಖಾದಿಯ ಬಟ್ಟೆ ಕೊಡುವೆನು ನಿಮಗೆ
ನಾನೇ ನಿಮ್ಮಯ ನೇಕಾರ, ನಿಮ್ಮಯ ನೆಚ್ಚಿನ ಗೆಳೆಕಾರ
‘ಕಾಯಕದೊಳು ಕೈಲಾಸವು’ ಎಂದು ಹೇಳುವವ.

ಕೂಡುವ ಚಾಪೆ, ರೊಟ್ಟಿಯ ಬುಟ್ಟಿ
ಹೆಣೆಯುವೆ ನಾ ತರತರ ಕಟ್ಟಿ
ಕಬ್ಬಿಣ ಕರಗಿಸೊ ಗಟ್ಟಿಗ ನಾನು
ಉರಿಯದು ಹೊತ್ತಿಸಿ ದಿಗಿ ದಿಗಿ ನಾನು
ಕರಗಿಸಿ ಬಡಿದು ಸಾಣೆಯ ಹಿಡಿದು
ಇಳಿಗೆ, ಕತ್ತಿ, ಕೊಡಲಿ, ಗುರಾಣಿ
ಎದುರಿಗೆ ಇಡುವ ಕಮ್ಮಾರ
ನಾನೇ ಗಟ್ಟಿಗ ರಾಜಕುಮಾರ

Leave a Reply