ಮನುಷ್ಯ ತನ್ನ ಕನಸುಗಳನ್ನು ನನಸು ಮಾಡಲು ಅನೇಕ ರೀತಿಯ ಪ್ರಯತ್ನವನ್ನು ಮಾಡುತ್ತಾ ಹೋಗುತ್ತಾನೆ. ಒಬ್ಬ ವ್ಯಕ್ತಿಯ ಗುಣವನ್ನು ವಿವರಿಸಿ ಹೇಳುವುದು ತುಂಬಾ ಕಷ್ಟ. ಇಂದಿನ ದಿನಗಳಲ್ಲಿ ಮನುಷ್ಯನ ವ್ಯಕ್ತಿತ್ವ ತುಂಬಾ ಕೆಲಸ ಮಾಡುತ್ತದೆ. ಮನುಷ್ಯ ತನ್ನ ವ್ಯಕ್ತಿತ್ವವನ್ನು ಅರಿತುಕೊಂಡಲ್ಲಿ ಬದುಕು ಮೇರುಕೃತಿಗೆ ಸೇರುವುದು.
ವ್ಯಕ್ತಿಯ ವ್ಯಕ್ತಿತ್ವವನ್ನು ಬಾಹ್ಯ ಚಹರೆಯಿಂದ ಅಳೆಯಲು ಸಾಧ್ಯವಿಲ್ಲ. ಬದಲಾಗಿ ಅವರ ಗುಣ, ಇನ್ನೊಬ್ಬರೊಂದಿಗೆ ನಡೆದುಕೊಳ್ಳುವ ರೀತಿ, ಅವರಲ್ಲಿರುವ ಸಹನಶೀಲತೆ, ಸಾಮರ್ಥ್ಯ, ಬದ್ಧತೆ, ಶಿಸ್ತು, ಪ್ರಾಮಾಣಿಕತೆಯಿಂದ ಅಳೆಯಬಹುದು. ಸಾಮರ್ಥ್ಯ ಎನ್ನುವುದು ಪ್ರತಿಯೊಂದು ವ್ಯಕ್ತಿಯಲ್ಲಿ ಹುದುಗಿರುವ ವಜ್ರ. ಪ್ರತಿಯೊಬ್ಬ ವ್ಯಕ್ತಿ ತನ್ನಲ್ಲಿರುವ ಶಕ್ತಿ, ಸಾಮರ್ಥ್ಯವನ್ನು ಕಂಡುಕೊಂಡಲ್ಲಿ ಸುಂದರವಾದ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಎರೆಡು ಮಾತಿಲ್ಲ.
ಹಾಗಿದ್ದರೆ ಸಾಮರ್ಥ್ಯವನ್ನು ಗುರುತಿಸುವುದು ಹೇಗೆ..? ಸಾಮರ್ಥ್ಯವನ್ನು ಗುರುತಿಸಲು ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮಲ್ಲಿರುವ ಆಸಕ್ತಿಗಳೇನು? ಎಂಬುದನ್ನು ಸ್ವಯಮ ಮೌಲ್ಯಮಾಪನ ಮಾಡಿಕೊಂಡರೆ ನಮ್ಮಲ್ಲಿರುವ ಆಸಕ್ತಿಯನ್ನು ತಿಳಿದುಕೊಳ್ಳಬಹುದು. ಒಮ್ಮೆ ಮನುಷ್ಯನಿಗೆ ತನ್ನ ಬಗ್ಗೆ ವಿಶ್ವಾಸ ಬಂದರೆ, ಗೆಲುವು ಶತಸಿದ್ಧ. ಸಾಮರ್ಥ್ಯ ಮನುಷ್ಯನನ್ನು ಗೆಲ್ಲಿಸಲು ಬೇಕಾಗುವ ಸೇತುವೆಯಂತೆ ಕೆಲಸಮಾಡುತ್ತದೆ.
ನಮ್ಮನ್ನು ಅರಿದುಕೊಳ್ಳಲು ಇನ್ನೊರ್ವ ವ್ಯಕ್ತಿ ಬೇಕಾಗಿಲ್ಲ. ನಮ್ಮ ಅಂತರಂಗದಲ್ಲಿರುವ ಬಲ, ಬಲಹೀನತೆಗಳು ನಮಗಿಂತ ಬೇರೆಯವರಿಗೆ ಗೊತ್ತಿರಲಾರವು. ಸಕಾರಾತ್ಮಕ ವಿಚಾರಗಳನ್ನು ಬಳಸಿಕೊಂಡು ಸುಂದರವಾದ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ ಮನುಷ್ಯ ಜೀವನದಲ್ಲಿ ಉನ್ನತ ಶಿಖರವನ್ನು ಏರುವುದರಲ್ಲಿ ಸಂದೇಹವಿಲ್ಲ.
– ವಿಜಯಕುಮಾರ. ಸತ್ತೂರ