ಶಿಶಿರನಪ್ಪುಗೆಯಲ್ಲಿ
ನಲುಗಿ
ನಭದೆಡೆಗೆ
ಕೈಚಾಚಿದ್ದೆ
ದ್ರುಪದೆಯಂತೆ.
ನಾನು ಪ್ರಕೃತಿ
ಸೃಷ್ಟಿಗನುಕೂಲೆ.
ಬತ್ತಲಾಗುವುದು
ನನ್ನ ಋತುಧರ್ಮ
ಸಹಜವದೆನಗೆ.
ಸುತ್ತ ಕೋಗಿಲೆಯ
ಕೂಜನ, ಕಣ್ತೆರೆದೆ
ನಾಚಿ ನೀರಾದೆ.
ನೀನು ಹೊದಿಸಿದ್ದೆ
ಹಸಿರ ಪತ್ತಲ ಮೈತುಂಬ.
ಮೊಗ್ಗಾಗಿದ್ದವಳು
ಅರಳಬೇಕೆಂಬ ತವಕ
ಮೈಯ್ಯಲ್ಲೇನೋ ಪುಳಕ,
ಕಂಡದ್ದು ಕನಸಲ್ಲ
ನಾನು ಪುಷ್ಪವತಿ.
ಗಂಧ ಸುಗಂಧ
ಎದೆ ತುಂಬ ಆಸೆ
ಕಾಮನಬಿಲ್ಲು.
ಮುಂದೆ ಮಾತಿಲ್ಲ
ನನ್ನ ನಿನ್ನ ಮಿಲನ.
ರಂಗೇರಿದ್ದೇನೆ
ನಾಚಿ ನೀರಾಗಿದ್ದೇನೆ.
ನಿನ್ನಂಗ ಸಂಗದಲಿ
ಕಳೆದ ದಿನಗಳ ಲೆಕ್ಕವಿದೆ
ನನ್ನ ಬಳಿಯಲ್ಲಿ.
ನಾನು ಋತು ವಲ್ಲಭೆ
ದ್ರುಪದೆಯನ್ನೂ
ಮೀರಿ ನಿಂತವಳು.
ಪ್ರತಿ ಸಲವು ತವಕ
ನವ ರೂಪ, ಅನುಭವ.
ಬಾ ಗೆಳೆಯ ಹತ್ತಿರ,
ಭಾರವಾಗಿದೆ ಮೈಮನ.
ವಿದಾಯದ ಮೊದಲು
ಪಿಸು ಮಾತೊಂದಿದೆ
ನಾನೀಗ ಫಲವತಿ.
-ದಿವಾಕರ ಡೋಂಗ್ರೆ ಎಂ.
1 Comment
ಸ್ಥಿರ ಪ್ರಕೃತಿ
ಚಂಚಲ ಕವಿಮನ
ಭೂರಮೆಯಾಟವು
ಕವನಕೆ ಕಾರಣ