ವರುಣನ ಕೋಪ!
ವರುಣನಿಗಿಂದು ಬಂದಿದೆ ಕೋಪ!
ಆರ್ಭಟಿಸಿ ತೋರುತಿಹ ತನ್ನ ಪ್ರತಾಪ
ನಲುಗಿದಳು ಭುವನೆ ತಡಿಯದೆ ತಾಪ
ಯಾರು ಕೊಟ್ಟಿರುವರೋ ಇಂಥ ಶಾಪ!
ಸಿಡಿಮಿಡಿಗೊಂಡು ಜಿಟಿಜಿಟಿ ಸುರಿದ
ಏರಲು ಕೋಪ ರಪರಪ ಬಡಿದ
ಹೆಚ್ಚಾಗಲು ಕೆಂಡಮಂಡಲವಾದ
ಬಾನೇ ಹರಿದಂತೆ ರೊಯ್ಯನೇ ಬಿದ್ದ
ಸಿಟ್ಟಿನ ಕೈಯಿಗೆ ಬುದ್ದಿಯ ಕೊಟ್ಟ
ಭುವನೆಯ ಮಡಿಲಿಗೆ ಕೊಳ್ಳಿಯನಿಟ್ಟ
ಪ್ರಾಣ ಮಾನ ಹಾನಿ ಜೀವಜಂತುವಿಗೆ ಇಟ್ಟ
ಎಡೆಬಿಡದೆ ಸುರಿಯುತ ಅಡಿಯಿಟ್ಟ!
ಬಂದರೆ ಹೀಗೆ ಬರುತಾನಿವನು
ಇರದಿದ್ದರೆ ಅಡಗಿ ಎಲ್ಲೋ ಕುಳ್ಳಿರುವವನು
ಬಂದರು ಕಷ್ಟ ಬರದಿರೆ ಕಷ್ಟ
ಏನೇ ಆದರು ಮನುಜನಿಗೆ ನಷ್ಟ.
–ಉಮಾ ಭಾತಖಂಡೆ.