ಮನ್ಸೂರರು ಹಾಡಿದರೆಂದರೆ…!
ಸಂಗೀತ ರತ್ನ ಡಾ. ಮಲ್ಲಿಕಾರ್ಜುನ ಮನ್ಸೂರ್ ರವರು ರಾಷ್ಟ್ರ ಕಂಡ ಪ್ರತಿಭಾವಂತ ಸಂಗೀತ ವಿದ್ವಾಂಸರು. ಬಾಲ್ಯದಿಂದಲೂ ಸಂಗೀತವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು ಬಂದವರು. ಅವರ ಕಂಠತ್ರಾಣ, ಧ್ವನಿಮಾಧುರ್ಯ ನಿರರ್ಗಗಳ ಹಾಡುಗಾರಿಕೆ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತಿತ್ತು. ಸಂಗೀತ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಒಂದು ಮಹತ್ವದ ಸ್ಥಾನವನ್ನು ಕೊಟ್ಟವರು. ಡಾ.ಮನ್ಸೂರ್ ರವರು. ಅವರ ವಿದ್ವತ್ತು, ಪಾಂಡಿತ್ಯ, ಸಂಗೀತ ಜಾಣ್ಮೆಗಳನ್ನು ಮೆಚ್ಚಿ ರಾಜ್ಯ – ರಾಷ್ಟ್ರದ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ.
ಇಂತಹ ಮಹಾಪುರುಷರ ಜೀವನದಲ್ಲಿ ನಡೆದ ಒಂದು ಪುಟ್ಟ ಘಟನೆ, ಅವರ ಸಂಗೀತದ ಶಕ್ತಿಯನ್ನು ನಮಗೆಲ್ಲಾ ಕಾಣಿಸುತ್ತದೆ. ಸಂಗೀತದ ಪ್ರಭಾವದಿಂದ ಉಂಟಾದ ಈ ಅದ್ಭುತ ಘಟನೆಯನ್ನು ಸ್ವತಃ ಮನ್ಸೂರ್ ರವರೇ ತಮ್ಮ ಒಂದು ಸಂದರ್ಶನದಲ್ಲಿ ವಿವರಿಸಿದ್ದಾರೆ. ಆ ಸ್ವಾರಸ್ಯದ ರಸ ಘಳಿಗೆಯ ವರದಿ ಹೀಗಿದೆ; ಇಂಗಳಗಾವಿಯಲ್ಲಿ ಹುಟ್ಟಿದ ಅಥಣಿಯ ಶಿವಯೋಗಿಗಳಲ್ಲಿ ಮನ್ಸೂರ್ ಅವರಿಗೆ ವಿಶೇಷ ಭಕ್ತಿ. ಜೈಪುರದಲ್ಲಿ ವಿಶೇಷವಾಗಿ ತಯಾರಿಸಿ ತಂದ ಆ ಶಿವಯೋಗಿಗಳ ಒಂದು ಶಿಲಾಮೂರ್ತಿ ಜಗಜಿನ್ನಿ ಸ್ವಾಮಿಗಳ ಬಳಿ ಇತ್ತು. ಈ ಪ್ರತಿಮೆಯ ಬಗ್ಗೆ ಮನ್ಸೂರ್ ಅವರಿಗೆ ಅದೇನೋ ಸೆಳೆತ. ಅದನ್ನು ಪಡೆಯಬೇಕೆಂಬುದು ಅವರ ಮಹದಾಸೆ. ಆ ಪ್ರತಿಮೆಯನ್ನು ಅಗಲಲು ಜಗಜಿನ್ನಿ ಸ್ವಾಮಿಗಳವರಿಗೆ ಎಳ್ಳಷ್ಟೂ ಮನಸ್ಸಿಲ್ಲ . ಹಾಗೂ ಅವರ ಬಳಿ ಇದ್ದದು ಅದೊಂದೇ ಪ್ರತಿಮೆ.
ಆ ಪ್ರತಿಮೆಯನ್ನು ಪಡೆಯುವ ಕಾರಣಕ್ಕಾಗಿಯೇ ಬಹಳಷ್ಟು ಪ್ರಯತ್ನ ನಡೆಸಿದರು. ಬೇರೆಯವರ ಮುಖಾಂತರ ಹೇಳಿಸಿ ನೋಡಿದರೆ ಹೇಗೆ ಎಂಬ ಪ್ರಶ್ನೆ ಅವರ ಮನಸಿನಲ್ಲಿ. ಒಮ್ಮೆ ಹಾಗೆ ಹೇಳಿಸಿಯೂ ಅವರು ಕೊಡಲೊಪ್ಪದಿದ್ದರೆ ಎಂಬ ಅನುಮಾನ ಮತ್ತೊಂದೆಡೆ. ಕೊನೆಗೆ ಏನಾದರಾಗಲೆಂದು ಕೆಲವರಿಂದ ಹೇಳಿಸಿಯೂ ನೋಡಿದರು. ಆದರೆ ಸ್ವಾಮಿಗಳದ್ದು ಮಾತ್ರ ಕೊಡಲು ಸಾಧ್ಯವಿಲ್ಲವೆಂಬ ಒಂದೇ ಪಟ್ಟು. ಹಲವಾರು ಪ್ರಯತ್ನದ ನಂತರ ಜಗಜಿನ್ನಿ ಸ್ವಾಮಿಗಳು ಮನಸ್ಸಿಲ್ಲದ ಮನಸ್ಸಿನಿಂದ ಕೊಡಲು ಒಪ್ಪಿದರು. ಜೊತೆಗೊಂದು ಪುಟ್ಟ ಕರಾರು;
ಅದು ಆ ಕಾಲಕ್ಕೆ ಅದರ ಕಿಮ್ಮತ್ತಾದ ಐದು ನೂರು ರೂಪಾಯಿಗಳನ್ನು ಕೊಡಬೇಕೆಂಬುದು. ಮನ್ಸೂರರು ಆ ತಕ್ಷಣಕ್ಕೆ ಅಷ್ಟು ಮೊತ್ತದ ಚೆಕ್ಕನ್ನು ಬರೆದುಕೊಟ್ಟರೇನೋ ಸರಿ. ಆದರೆ ಪ್ರತಿಮೆ ಇನ್ನೇನು ಅವರ ಕೈಗೆ ಬರಬೇಕು, ಅಷ್ಟರಲ್ಲಿ ಅಲ್ಲಿರುವ ಕೆಲವರು ಮನ್ಸೂರರ ಗಾನ ಸುಧೆಯನ್ನು ಕಿವಿ ತುಂಬಿಕೊಳ್ಳುವ ಆಸೆಯಿಂದ, ಸಂಗೀತ ಸೇವೆ ಸಲ್ಲಿಸಿಯೇ ಪ್ರತಿಮೆ ಪಡೆಯಲಿ ಎಂಬ ಅಭಿಪ್ರಾಯ ಮುಂದು ಮಾಡಿದರು. ಸದರಿ ಸ್ವಾಮಿಗಳ ಸಮ್ಮುಖದಲ್ಲೇ ಸಣ್ಣದೊಂದು ಸಂಗೀತ ಕಛೇರಿಯೂ ನಡದೇ ಬಿಟ್ಟಿತು.
ಮನ್ಸೂರರೇನೋ ಭಕ್ತಿ – ಭಾವ ತುಂಬಿ ತನ್ಮಯತೆಯಿಂದ ಹಾಡಿದರು. ಆ ಹಾಡು ಕೇಳಿದವರ ಕಣ್ಣಲ್ಲಿ ನೀರು ಧಾರೆಗಟ್ಟಿ ಹರಿಯುತ್ತಿತ್ತು. ಅವರೆಲ್ಲರೂ ಅಷ್ಟೊಂದು ಭಾವಪರವಶರಾಗಿದ್ದರು . ಅಂತು ಮನ್ಸೂರರು ಸಂಗೀತ ಸೇವೆ ಮುಗಿಸಿ ತಮ್ಮ ಬಹು ದಿನ ಬಯಕೆಯ ಪ್ರತಿಮೆ ಪಡೆದು ಸ್ವಾಮಿಗಳನ್ನು ಬೀಳ್ಕೊಡಬೇಕೆನ್ನುವಾಗ ನಡೆಯಿತೊಂದು ಪವಾಡ ; ‘ಮಹರಾಯ ನಿನ್ನ ಚೆಕ್ಕೂ ಬೇಡಾ , ಏನೂ ಬೇಡಾ. ಈ ನಿನ್ನ ಸಂಗೀತದ ಮುಂದೆ ಇನ್ನೇನೈತಿ’ ಎಂದ ಜಗಜಿನ್ನಿ ಸ್ವಾಮಿಗಳು ಪ್ರತಿಮೆಯನ್ನು ಉಚಿತವಾಗಿಯೇ ಹಸ್ತಾಂತರಿಸಿದರು. ಇಂತಹ ಸಿದ್ಧ ಪುರುಷರ ಸಂಗೀತ ಎಷ್ಟು ಪ್ರಭಾವ ಬೀರಬಲ್ಲದೆಂಬುದಕ್ಕೆ ಬೇರೆ ನಿದರ್ಶನ ಬೇಕೇ…? ಸಂಗೀತದೊಳಗೆ ಪರಿವರ್ತನೆ ಆಗೋ ಹಂಗೆ ಮಾಡುವ ಶಕ್ತಿ ಇದೆ ಎಂಬ ಮಾತು ಎಷ್ಟು ಸತ್ಯ ಅಲ್ಲವೇ ….?
– ಹೊಸಮನೆ ಮುತ್ತು