ಮಗನ ಬಿಲ್ಲು ತಾಯಿಯದೂ ಒಂದು ಬಿಲ್ಲು
ಅಮ್ಮಾ ನಿನಗೊಂದು ನನ್ನ ಬಿಲ್ಲು
ತುಂಬಿಲ್ಲ ನಾ ಈ ತಿಂಗಳ ಕರೆಂಟು ಬಿಲ್ಲು
ಕಾರಣ, ನೀ ಉರಿಸುವ ಟಿವಿ, ಫ್ಯಾನು
ಜಳಕಕ್ಕೆ ಪ್ರತಿನಿತ್ಯ ಕಾದ ಬಿಸಿನೀರು
ನೀನೂ ಮನೆಯಲ್ಲೊಬ್ಬಳು
ನಿನಗೂ ಪಾಲು ಇದರಲಿ ಸರಿ ಅಲ್ಲವೇ ಹೇಳು?
ಅಮ್ಮಾ ನಿನ್ನ ನೋಡಲು ಬರುವ ಮಂದಿ ಬಹಳ
ತಿಂಡಿ, ಚಹಾದ ಖರ್ಚು ಬರುತಿರೆ ಹೇರಳ
ದುಡಿದ ಹಣ ಸಾಲದೆ ಸಾಲ ತೀರಿಸಲಾರೆ
ನಿನ್ನ ವೃದ್ಧಾಪ್ಯ ವೇತನದಲಿ ಸ್ವಲ್ಪ ಪಾಲನು ತಾರೆ.
ತಿಂಗಳಿಗೊಂದು ಇಂಜೆಕ್ಷನ್, ಗುಳಿಗೆ
ಕೆಮ್ಮಲು ಔಷಧ ಪ್ರತಿನಿಮಿಷ ಘಳಿಗೆ
ನನಗೂ ಮಕ್ಕಳ ಖರ್ಚು ಇರುತಿರೆ ನಿತ್ಯ
ದಿನಂ ಪ್ರತಿ ನನ್ನಾಕೆಯೊಡನೆ ಜಗಳ ಇದೂ ಸತ್ಯ.
ನಡೆದಾಡಲು ಇಂದು ಆಗದಿರೆ ನಿನಗೆ
ಹಾಕುವೆ ನಾ ದಂಡ ಪೆಟ್ರೋಲ್ ಗಾಡಿಗೆ
ಸಮಯವು ನಿನಗಾಗಿ ನನಗೆಲ್ಲಿದೆ ಹೇಳು
ಕಿರಿಕಿರಿ ಎಲ್ಲರಿಗಾಗದಿರುವುದೇ ನೀನೇ ಕೇಳು
ನಿನ್ನಲಿ ಬಿನ್ನಹವು ಎದುರು ನಾ ನುಡಿಯಲಾರೆ
ಪತ್ರ ಬರೆದಿರುವೆ ಓದಿ ಉತ್ತರ ನೀ ನೀಡಲು ಮರೆಯದಿರೆ
ತಪ್ಪಿದ್ದರೆ ಕ್ಷಮಿಸವೆಯಾ?
ಉತ್ತರವೂ ಕೊಡುವೆಯಾ? ಹೇಳು.
ನಿನಗಾಗಿ ನಿರುತ್ತರ ಇಲ್ಲ ಮಗನೆ ನನ್ನಲ್ಲಿ
ನನ್ನ ಬಿಲ್ಲು ತೀರಿಸುವ ಗುಂಡಿಗೆ ಇದೆಯಾ ನಿನ್ನಲ್ಲಿ
ನೀ ಗರ್ಭದೊಳಿಳಿದಾ ಘಳಿಗೆಯಿಂದ
ನನ್ನ ರಕ್ತ ನರನಾಡಿಗಳಿಗೆ ಕಳಿಸಿದ್ದಕ್ಕಿದೆಯಾ ಬಿಲ್ಲು?
ನವ ಮಾಸವೂ ನಿನ್ನ ಭಾರ ಹೊತ್ತು.
ಬಿಟ್ಟ ನಿಟ್ಟುಸಿರುಗಳದೆಷ್ಟೊ?
ನೀ ಉದರದಲಿ ಅಲುಗಾಡಿ ಒದ್ದಾಗ
ಆದ ನೋವುಗಳದೆಷ್ಟೋ!
ಅದ ನಾ ಸಂತಸದಿ ಸವಿದೆ ಅದಕೆ ಎಲ್ಲಿದೆ ಬಿಲ್ಲು?
ನಿನಗಾಗಿ ಖರೀದಿಸಿ ತಿಂದ ಆ
ಖರ್ಜೂರಾ, ಬಾದಾಮಿ, ಪಿಸ್ತ
ನಿನ ದೇಹ ಶಕ್ತಿಯಿಂದ ಆಗಿಲ್ಲವೆ ದಷ್ಟಪುಷ್ಟ
ಉಂಡಿದ್ದು ನಾನು ರಸ ಹೀರಿದ್ದು ನೀನು
ಅದಕೆಲ್ಲಿದೆ ಬಿಲ್ಲು.
ನಿನ್ನ ಜನ್ಮ ನೀಡಿದ ಆ ಘಳಿಗೆ
ಜೀವ ಪಣಕಿಟ್ಟು ಹೋರಾಡಿದ ಆ ನಿಮಿಷ
ನೀ ಧರೆಗಿಳಿದಾಗ ನಿತ್ರಾಣದಲ್ಲೂ ನಿನ್ನ ಅಳುವ
ಕೇಳಿ ನೀ ಸಖ್ಯವಿರುವ ಖಾತ್ರಿಯಲಿ ಮೂರ್ಛೆ
ಹೋಗಿ ಪಡೆದ ಪುನರ್ಜನ್ಮಕ್ಕೆಲ್ಲಿದೆ ಬಿಲ್ಲು.
ಎಚ್ಚರವಾದೊಡೆ ನೋವಲ್ಲೂ ಮೊಲೆ ಉಣಿಸಿ
ನಿನ ಬಿಗಿ ಮುಷ್ಠಿಯ ಬಿಡಿಸಿ ಸೆರಗಲ್ಲಿ ಮಣ್ಣ ಒರೆಸಿ
ಮಾಂಸ ಮುದ್ದೆಯ ನಿನ ದೇಹ ಕಂಡು
ಹಿರಿಹಿರಿಹಿಗ್ಗಿದ್ದಕ್ಕೆಲ್ಲಿದೆ ಬಿಲ್ಲು.
ನಿದಿರೆಯು ಬಾರದಿರೆ ಕರಾಳ ರಾತ್ರಿಯಲಿ
ನೀ ಅಳುತಿರೆ ನಾ ಕಂಗೆಟ್ಟು ನಿದಿರೆಗೆಟ್ಟು
ಹೆಗಲಿಗೆ ಹಾಕಿ ನಿನ್ನ ಬೀದಿಬೀದಿ ಸಂಚರಿಸಿ
ನೀ ಉಣದಿರಲು ನಾ ಚಂದಿರನ ತೋರಿಸಿ ಉಣಿಸಿ
ನಾ ಹಸಿವೆಯಲಿ ಕಳೆದ ರಾತ್ರಿಗಳದೆಷ್ಟೋ
ಅದಕೆ ಇದೆಯಾ ಮಗು ಬಿಲ್ಲು.
ನಿನ ಶಾಲೆ, ನೌಕರಿಯ ಕರುಣಿಸಲು
ನಾ ಮಾರಿದ ಒಡವೆ, ತ್ಯಜಿಸಿದ ಸೌಖ್ಯ
ಸವಿಸಿದ ದೇಹ ಅದಕೆಲ್ಲಿದೆ ಬಿಲ್ಲು
ಮಡಚಿಟ್ಟಳು ಕುರ್ಚಿ ಬಳಿ ಕಾಗದದ ಬಿಲ್ಲು.
ಮಗನಿಂದು ಹರ್ಷದಿ ಅಮ್ಮ ಬಿಲ್ಲು
ಕೊಡುವಳು ಎಂದು ಎತ್ತಿದ ತಾಯ ಕಾಗದದ ಬಿಲ್ಲು
ಮರುಕ್ಷಣದಿ ಧಾರಾಕಾರ ಕಂಬನಿ
ಹೃದಯವೇ ಬಿರಿದಂತೆ ಮಹಾಪರಾಧದಲಿ
ಪಶ್ಚಾತಾಪದಿ ತಲೆ ಬಾಗಿ ನಮಿಸುತೆ
ಏಳು ಜನ್ಮಕೂ ನಿನ್ನ ಋಣ ತೀರಿಸಲು
ಇಲ್ಲ ಯಾವುದೇ ಬಿಲ್ಲು, ಅಮ್ಮ ಇಲ್ಲ ಯಾವುದೇ ಬಿಲ್ಲು.
ನಿನಗಾಗೇ ಇರುವ ಜೀವವೆನುತಲಿ
ತಾಯಿ ಕರುಳು ನುಡಿಯಿತು
ತೀರಿಸುವೆ ನಿನ್ನೆಲ್ಲ ಬಿಲ್ಲು
ಮಾಡುವುದು ಬೇಡ ಗುಲ್ಲು
ನಿನ್ನಾತಂಕ, ಅಡಚಣೆ ಸಹಿಸೆನು ನಾ
ನೀನೆನ್ನ ಜೀವ ತೀರಿಸುವೆ
ಮಗುವೆ ನಿನ್ನೆಲ್ಲಾ ಬಿಲ್ಲು
ತೀರಿಸುವೆ ಮಗುವೆ ನಿನ್ನೆಲ್ಲಾ ಬಿಲ್ಲು.