“ಭಾರತೀಯತೆ ಮತ್ತು ದ್ರಾವಿಡರ ಆತ್ಮಗೌರವ”

ತ್ರಿಭಾಷಾ ಸೂತ್ರದ ವಿವಾದದ ಬೆಂಕಿ ಈಗ ನಂದಿದಂತೆ ತೋರಿದರೂ ಬೂದಿ ಮುಚ್ಚಿದ ಕೆಂಡವಾಗಿದೆ. ಭಾಷಾವಾರು ಪ್ರಾಂತ್ಯಗಳ ವಿಂಗಡನೆಯೇ ನಮ್ಮ ಬಹುತ್ವದ ರಾಜಕೀಯವನ್ನು ಸ್ಪಷ್ಟವಾಗಿ ಸೂಚಿಸುತ್ತಿರುವಾಗ ದಖನ್ನಿನ ಜನರ ಮೇಲೆ ಹಿಂದಿ ಹೇರಿಕೆ ಏಕೆ ಎಂಬ ಪ್ರಶ್ನೆಯನ್ನು ಈ ಬರಹ ಎತ್ತಿದೆ. ದಕ್ಷಿಣದ ರಾಜ್ಯಗಳು ಲಾಗಾಯ್ತಿನಿಂದ ಅನುಭವಿಸುತ್ತಾ ಬಂದಿರುವ ತರತಮದ ಮೇಲೂ ಬೆಳಕು ಚೆಲ್ಲಿದೆ…‘ಭಾರತೀಯತೆ’ ಎನ್ನುವುದು ಉಪಖಂಡದ ನೂರಾರು ಪ್ರಾದೇಶಿಕ ಅಸ್ಮಿತೆಗಳ ಒಟ್ಟು ಮೊತ್ತವೇ ಹೊರತು ಅದೇ ಒಂದು ಅಖಂಡವಾದ ಪರಿಕಲ್ಪನೆಯಲ್ಲ. ಹಾಗಾಗಿಯೇ ಸಂವಿಧಾನದ ಪೀಠಿಕೆಯಲ್ಲಿ ನಮ್ಮನ್ನು ‘ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂದು ಘೋಷಿಸಿಕೊಂಡಿದ್ದೇವೆ. ಈ ಪ್ರಾದೇಶಿಕ ಅಸ್ಮಿತೆಗಳು ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯದ ಹಲವು ನೆಲೆಗಳನ್ನು ಹೊಂದಿದ್ದರೂ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿಸುವಾಗ ನುಡಿಯ ಹಿನ್ನೆಲೆಯಲ್ಲಿ ನಮ್ಮನ್ನು ವಿಂಗಡಿಸಿ ಗುರುತಿಸಿಕೊಂಡಿದ್ದೇವೆ. ಈ ಭಾಷಾವಾರು ಪ್ರಾಂತ್ಯ ವಿಂಗಡನೆಯೇ ನಮ್ಮ ಬಹುತ್ವದ ರಾಜಕೀಯವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಹಾಗಾಗಿ, ಕನ್ನಡತನದಿಂದ ಭಾರತೀಯತೆಯ ಸಾರ್ವಭೌಮತ್ವ ನಿಲ್ಲುತ್ತದೆಯೇ ಪರಂತು ‘ಬರಿಯ ಭಾರತೀಯತೆ’ ಎನ್ನುವುದರಿಂದಲ್ಲ.ಇದನ್ನೂ ಓದಿ:-ಹಿಂದಿ: ಹಿಂದೆ ಸರಿದ ಕೇಂದ್ರ​ಕನ್ನಡ ಅಥವಾ ತಮಿಳು ಭಾಷೆ ಅನ್ನುವ ದೃಷ್ಟಿಯ ಯೋಚನೆ ಇದಲ್ಲ. ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಒಬ್ಬ ನಾಗರಿಕನ ಹಾಗೆಯೇ ಒಂದು ನೆಲದ ಭಾಷೆಗೂ ಅದರದೇ ಗೌರವ ಸಿಗಬೇಕು ಎನ್ನುವ ಯೋಚನೆ. ವ್ಯಕ್ತಿ ಇರುವವರೆಗೂ ಭಾಷೆ ಇದ್ದೇ ಇರುತ್ತದೆ. ಭಿನ್ನ ಭಾಷೆಯಾದ ಕಾರಣಕ್ಕೆ ಅದು ನಿರ್ಲಕ್ಷ್ಯಕ್ಕೆ ಒಳಗಾಗಬೇಕಾದ ಅಗತ್ಯ ಇಲ್ಲ. ಸ್ವಾತಂತ್ರ್ಯ ನಂತರದ ಇಷ್ಟು ದಿನಗಳ ನಂತರವೂ ಉಪಖಂಡದ ನೂರಾರು ಭಾಷೆಗಳನ್ನು ಸಂವಿಧಾನದ ಪರಿಚ್ಛೇದದಲ್ಲಿ ಸೇರಿಸಲು ಸಾಧ್ಯವಾಗಿಲ್ಲ. ರಾಜಕೀಯ ಇಚ್ಛಾಶಕ್ತಿಗಳಿಗೆ ಚುನಾವಣೆ ಸಂದರ್ಭ ಬಿಟ್ಟರೆ ಉಳಿದಾಗ ಇಂತಹದ್ದು ಬೇಕಾಗಿಯೂ ಇಲ್ಲ.ಇದನ್ನೂ ಓದಿ‘ಹಿಂದಿ ಹೇರಿಕೆ’ಗೆ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ವಿರೋಧದಿನ ಕಳೆದಂತೆ ಈ ಭಾರತೀಯತೆಯು ನಮ್ಮ ಸ್ಥಳೀಯ ಅಸ್ಮಿತೆಗಳನ್ನು ನುಂಗಿಹಾಕುವ ಹೆಬ್ಬಾವಿನಂತೆ ಅಧಿಕಾರ, ಕಾನೂನಿನ ಮಾನ್ಯತೆ ಹೊತ್ತು ನಮ್ಮತ್ತ ಬರುತ್ತಿದೆ. ಇಷ್ಟು ದಿನಗಳವರೆಗೆ ಅದೇನು ಮಲಗಿರಲಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಸಣ್ಣದಾಗಿ ಬೆಳೆಯುತ್ತಲಿತ್ತು. ಇವಾಗ ಮತ್ತಷ್ಟು ಕಾನೂನುಗಳ ಪುಷ್ಟಿಯಿಂದ ಕೊಬ್ಬಿ ದಕ್ಷಿಣದತ್ತ ಬರುತ್ತಿದೆ. ಇತ್ತೀಚೆಗೆ ಒಕ್ಕೂಟ ಸರ್ಕಾರವು ಪ್ರಕಟಿಸಿದ ‘ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಪ್ರಸ್ತಾವ’ವನ್ನು ಗಮನಿಸಿದರೆ ಇದರ ಅರಿವು ಸ್ಪಷ್ಟವಾಗುತ್ತದೆ.ದಕ್ಷಿಣದ ಇತಿಹಾಸ, ಬದುಕು, ಸಮಾಜ ಯಾವುದಕ್ಕೂ ಸಂಬಂಧಿಸದ ‘ಹಿಂದಿ’ ಭಾಷೆಯನ್ನು ಹೊಸ ಕಾಯ್ದೆಯ ಮೂಲಕ ದೇಶದಾದ್ಯಂತ ಒಂದು ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸಲು ಹೊರಟಿದ್ದನ್ನು (ತದನಂತರದಲ್ಲಿ ದಕ್ಷಿಣದ ರಾಜಕೀಯ ನಾಯಕರು, ಜನರ ದೊಡ್ಡಮಟ್ಟದ ವಿರೋಧವನ್ನು ಕಂಡು ಒಕ್ಕೂಟ ಸರ್ಕಾರವು ಅದನ್ನು ಐಚ್ಛಿಕವಾಗಿರಿಸಿದೆ) ಒಮ್ಮೆ ದೀರ್ಘವಾಗಿ ಗಮನಿಸಿದರೆ ಸ್ವತಂತ್ರ ಭಾರತದ ಉದ್ದಕ್ಕೂ ಇಂತಹ ತಾರತಮ್ಯದ ಬದುಕನ್ನೇ ದಖನ್ನಿನ ದ್ರಾವಿಡರು ಅನುಭವಿಸುತ್ತ ಬಂದಿರುವುದು ಎದ್ದು ಕಾಣುತ್ತದೆ. ಅದಕ್ಕೆ ಸಾವಿರಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ದೊಡ್ಡದಾಗಿಯೇ ಇವೆ. ಮತ್ತು ಇಂಥದೇ ತಾರತಮ್ಯವನ್ನು ಈಶಾನ್ಯ ಭಾರತವೂ ಅನುಭವಿಸಿದೆ.ಇದನ್ನೂ ಓದಿ:ಹಿಂದಿ ಕಲಿಕೆ ಕಡ್ಡಾಯವಲ್ಲ, ಹಿಂದಿ ಭಾಷೆ ಆಯ್ಕೆ ಮಾತ್ರ-ಕೇಂದ್ರ ಸರ್ಕಾರ​ಹಾಗಿದ್ದರೆ ಯಾವುದು ಇವರುಗಳ ಪ್ರಕಾರ ನಿಜವಾದ ಭಾರತ?! ಕಾಶ್ಮೀರ, ಉತ್ತರಪ್ರದೇಶ, ಬಿಹಾರ, ದೆಹಲಿ, ಹರಿದ್ವಾರ, ಗಂಗೆಯ ಮುಖಜಭೂಮಿ ಇಷ್ಟು ಮಾತ್ರವೇ? ವರುಷದ ಉದ್ದಕ್ಕೂ ಇದೇ ಪ್ರದೇಶಗಳ ಅಭಿವೃದ್ಧಿ, ಅನುದಾನದ ಚರ್ಚೆಗಳು ಸಂಸತ್ತಿನ ಪಡಶಾಲೆಗಳಿಂದ ಹಿಡಿದು ಸುದ್ದಿ ಮಾಧ್ಯಮಗಳ ಪರದೆಗಳವರೆಗೆ ನಡೆಯುತ್ತಲೇ ಇರುತ್ತವೆ. ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಾಗಿಟ್ಟು ಖರ್ಚು ಮಾಡಲಾಗುತ್ತದೆ. ಆದರೆ, ಅಂತಹ ಸಾವಿರಾರು ಕೋಟಿ ರೂಪಾಯಿಯನ್ನು ಆದಾಯವಾಗಿಸಿಕೊಟ್ಟ ದಕ್ಷಿಣಕ್ಕೆ ಸಿಕ್ಕ ಪ್ರತಿಫಲ ಜನಾಂಗೀಯ ಭೇದ, ನೀತಿ ನಿರೂಪಣೆಗಳಲ್ಲಿ ತಾರತಮ್ಯ ಮತ್ತು ನಿಧಿ ಹಂಚಿಕೆಯಲ್ಲಿ ಮಲತಾಯಿ ಧೋರಣೆ.ಮೊದಲಿಗೆ ಜನಾಂಗೀಯ ಭೇದrಉತ್ತರದವರ ದೃಷ್ಟಿಯಲ್ಲಿ ಮದರಾಸಿಗಳು, ಮೈವಾಸನೆಯ ಕಪ್ಪುಜನರು ಎಂಬ ನಾನಾ ದೂಷಣೆಗಳ ಜನಾಂಗೀಯ ನಿಂದೆಯನ್ನು ನಾವು ಕೇಳಬೇಕು. ವರ್ಷದ ಹಿಂದೆ ಬಿಜೆಪಿ ಸಂಸದರೊಬ್ಬರು ಕಪ್ಪುಜನರ ಕುರಿತ ಹೇಳಿಕೆಯೊಂದರಲ್ಲಿ ‘ನಾವು ದಕ್ಷಿಣದ ಜನರೊಂದಿಗೆ ಬದುಕುತ್ತಿಲ್ಲವೇ’ ಎಂಬರ್ಥದ ಮಾತುಗಳನ್ನಾಡಿದ್ದರು. ಉತ್ತರದ ಜನರೊಂದಿಗಿನ ಮಾತುಕತೆ ಮತ್ತು ಅಲ್ಲಿಗೆ ನಾವು ಹೋದಾಗಲೆಲ್ಲಾ ಈ ತರದ ಮುಜುಗರ, ಅವಮಾನಗಳನ್ನು ಸಹಿಸಿಕೊಳ್ಳಬೇಕಾಗಿದೆ. ಇಲ್ಲಿ ಭಾರತೀಯತೆ ಯಾಕೆ ಗೌಣವಾಗಿದೆ?! ಇದಕ್ಕೆ ಉತ್ತರ ಸಿಕ್ಕುವುದಿಲ್ಲ. ಯಾಕೆಂದರೆ ಅದು ಬರಿಯ ಪರಿಕಲ್ಪನೆಯಲ್ಲಿದೆ. ಜನಮಾನಸದಲ್ಲಿ ಅಲ್ಲಇದನ್ನೂ ಓದಿ: ಹಿಂದಿ ಹೇರಿಕೆ: ಕಾವು ಏರಿಕೆ​ಎರಡನೆಯದು ನೀತಿ ನಿರೂಪಣೆಗಳಲ್ಲಿ ತಾರತಮ್ಯ. ಅದರಲ್ಲೂ ಆಡಳಿತ, ಶಿಕ್ಷಣಗಳಲ್ಲಿ ಹಿಂದಿ ಭಾಷೆಯನ್ನು ಉಪಖಂಡದ ಎಲ್ಲಾ ರಾಜ್ಯಗಳಲ್ಲೂ ಬಲವಂತವಾಗಿ ಹೇರುವುದು. ‘ಹಿಂದಿ ರಾಷ್ಟ್ರಭಾಷೆ’ ಎಂದು ಸುಳ್ಳು ಹೇಳುವುದು. ಆದರೆ, ಇದುವರೆಗೂ ಸಂವಿಧಾನದಲ್ಲಾಗಲಿ, ಒಕ್ಕೂಟ ಸರ್ಕಾರದ ಅಧಿಕೃತ ದಾಖಲೆಯಲ್ಲಾಗಲಿ ‘ರಾಷ್ಟ್ರ ಭಾಷೆ’ಯ ಉಲ್ಲೇಖವೇ ಇಲ್ಲ. ಸಾವಿರಾರು ಸಂಪನ್ನ ಭಾಷೆಗಳನ್ನು ಹೊಂದಿರುವ ಒಂದು ಉಪಖಂಡದಲ್ಲಿ ‘ರಾಷ್ಟ್ರಭಾಷೆ’ ಅನ್ನುವುದೇ ತಮಾಷೆಯಾಗಿರುವಾಗ ಪ್ರಜಾಪ್ರಭುತ್ವ ಸರ್ಕಾರವು ಹಿಂದಿಯನ್ನು ‘ರಾಜಭಾಷೆ’ ಎಂದು ಪುರಸ್ಕರಿಸುವುದರ ಜೊತೆಗೆ ಅದರ ಪ್ರಚಾರ ಮತ್ತು ಪ್ರಸಾರಕ್ಕಾಗಿ ಸಾವಿರಾರು ಕೋಟಿ ಹಣವನ್ನು ಇದುವರೆಗೂ ಖರ್ಚು ಮಾಡಿದೆ. ಸಾವಿರಾರು ಜನ ಅಧಿಕಾರಿಗಳನ್ನು ಹಿಂದಿ ಭಾಷಾ ಅಧಿಕಾರಿಗಳಾಗಿ ನೇಮಿಸಿದೆ. ಹಿಂದಿ ಪ್ರಚಾರ ದಿನ, ಸಪ್ತಾಹ, ಹೆಚ್ಚು ಹೆಚ್ಚು ಹಿಂದಿ ಅನುಷ್ಠಾನಗೊಳಿಸಿದ ಸರ್ಕಾರಿ ಸಂಸ್ಥೆಗಳಿಗೆ ‘ರಾಜಭಾಷಾ ಪುರಸ್ಕಾರ’ಗಳನ್ನು ನೀಡುತ್ತಾ ಬಂದಿದೆ. ಆದರೆ, ಉಳಿದ ದೇಶ ಭಾಷೆಗಳಿಗೆ ಈ ಮಟ್ಟದ ಪ್ರಾಮುಖ್ಯತೆ ಏಕಿಲ್ಲ. ಅದೂ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಸಮುದಾಯಗಳನ್ನು ಹೊಂದಿರುವ ಭಾಷೆಗಳಿಗೆ?-ದಿ ಹೇರಿಕೆ ಸಹಿಸಲಾಗದು: ಸಿದ್ದರಾಮಯ್ಯrಶಾಸ್ತ್ರೀಯ ಸ್ಥಾನಮಾನ’ ಎನ್ನುವುದೊಂದು ಕಳೆದೆರಡು ದಶಕಗಳಲ್ಲಿ ಕಂಡುಬಂದ ಮೂಗಿಗೆ ತುಪ್ಪ ಸವರುವ ಯೋಜನೆಯಷ್ಟೇ ಆಗಿದೆ. ಈಚೆಗಂತೂ ಪ್ರಧಾನಿಯವರು ದೇಶದ ಒಳಿತಿಗಾಗಿ ಎಲ್ಲ ಜನರು ದೇವನಾಗರಿ ಲಿಪಿಯನ್ನು ಬಳಸುವುದು ಒಳಿತು ಎಂಬ ಹೇಳಿಕೆಯನ್ನೂ ನೀಡಿದ್ದರು.ಕೇವಲ 5–6 ರಾಜ್ಯಗಳ ಜನರ ನಿತ್ಯ ಬಳಕೆಯ ಭಾಷೆಯನ್ನು ಉಳಿದ 20ಕ್ಕೂ ಹೆಚ್ಚು ರಾಜ್ಯಗಳು ಬಳಸಬೇಕು ಮತ್ತು ಬಳಸಲು ಮುಂದಾಗಬೇಕು ಎಂಬುದು ಯಾವ ನ್ಯಾಯ ಎಂಬುದು ಇವತ್ತಿಗೂ ನಮಗೆ ಅರ್ಥವಾಗಿಲ್ಲ. ಇದಕ್ಕೆ ದ್ರಾವಿಡ ಮುನ್ನೇತ್ರ ಕಳಗಂನ ಪ್ರತಿನಿಧಿಗಳು ಈ ಹಿಂದೆ ಸಂಸತ್ತಿನಲ್ಲಿ ಕೊಟ್ಟ ‘ಭಾರತದಲ್ಲಿ ಹೆಚ್ಚು ಕಾಣಸಿಗುವ ಪಕ್ಷಿಯಾಗಿದ್ದರಿಂದ ಕಾಗೆ ಯಾಕೆ ರಾಷ್ಟ್ರಪಕ್ಷಿಯಾಗಬಾರದು’ ಎಂಬ ತಿರುಗುಬಾಣದ ಮಾತು ಇಂದೂ ಮುಟ್ಟಿ ನೋಡಿಕೊಳ್ಳುವ ಹಾಗಿದೆ-ಭಾಷೆಯನ್ನು ಹೇರಬಾರದು: ತ್ರಿಭಾಷಾ ಸೂತ್ರದ ಬಗ್ಗೆ ಸಿಎಂ ಟ್ವೀಟ್‌ಇನ್ನು ದಕ್ಷಿಣದ ರಾಜ್ಯಗಳು ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಸಾಮಾಜಿಕವಾಗಿ, ಆರ್ಥಿಕವಾಗಿ ಬಹಳ ಮುಂದುವರಿದಿವೆ. ನಂದನ್ ನಿಲೇಕಣಿಯವರು ಟೆಡ್‌ಟಾಕ್‌ನಲ್ಲಿ ಮಾತನಾಡುತ್ತಾ, ದಕ್ಷಿಣ ಭಾರತೀಯರ ತಲಾದಾಯವು (per capital income) ಯೂರೋಪಿನ ಜನರ ತಲಾದಾಯಕ್ಕೆ ಸಮನಾಗಿರುವುದನ್ನು ಪ್ರಸ್ತಾಪಿಸಿದ್ದರು. ಆದರೆ, ಒಟ್ಟು ಭಾರತದ ತಲಾದಾಯ ಇದಕ್ಕೆ ಹೋಲಿಸಿದರೆ ಬಹಳ ಕಡಿಮೆಯಾಗುತ್ತದೆ. ಅಲ್ಲದೆ ಈ ರಾಜ್ಯಗಳಿಂದ ಒಕ್ಕೂಟದ ಸರ್ಕಾರಕ್ಕೆ ಹೋಗುವ ತೆರಿಗೆ ಹಣದ ಮೊತ್ತ ತುಂಬಾ ದೊಡ್ಡದಿದೆ. ಆದರೆ, ಮರಳಿ ಬರುವ ಅನುದಾನ ಮಾತ್ರ ಎಳ್ಳಿನಷ್ಟು! ಈ ಕುರಿತು ಈಚೆಗಂತೂ ಹಲವು ಸುದ್ದಿ ಮಾಧ್ಯಮಗಳು ರಾಜ್ಯಗಳ ಶೇಕಡವಾರು ತೆರಿಗೆ ಸಂಗ್ರಹ ಮತ್ತು ಅನುದಾನಗಳ ಕುರಿತ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿವೆ. ಅವುಗಳಲ್ಲಿ ಈ ತಾರತಮ್ಯದ ನಿಧಿಯ ಹಂಚಿಕೆ ಸ್ಪಷ್ಟವಾಗಿ ಕಾಣುತ್ತಿದೆ.ಇದನ್ನೂ ಓದಿ:ಹಿಂದಿ ಹೇರಿಕೆಯ ಹಿಂದೆ ಮುಂದೆ…​ಕಡೆಯದಾಗಿ ಅಧಿಕಾರದ ದೃಷ್ಟಿಯಿಂದ ನೋಡಿದರೆ ದಕ್ಷಿಣದವರಿಗೆ ಪ್ರಬಲ ಮಂತ್ರಿಗಿರಿಗಳು ಸಿಗುವುದಿಲ್ಲ. ಸಿಕ್ಕರೂ ಅವೆಲ್ಲಾ ಹೈಕಮಾಂಡ್‌ಗಳ ರಬ್ಬರ್‌ ಸ್ಟಾಂಪುಗಳು. ಪ್ರಧಾನಿ ಹುದ್ದೆಯಂತೂ ಉತ್ತರ ಭಾರತೀಯರಿಗೆ ಅಘೋಷಿತವಾಗಿ ಮೀಸಲಿರಿಸಲಾಗಿದೆ. ಯೋಚಿಸಿ ನೋಡಿ ಇದುವರೆಗಿನ ಭಾರತದ 15 ಜನ ಪ್ರಧಾನಿಗಳಲ್ಲಿ ದಕ್ಷಿಣ ಭಾರತ ಮೂಲದ ಇಬ್ಬರೇ ಪ್ರಧಾನಿಗಳು ಸಿಗುವುದು. ಅದರಲ್ಲೂ ಒಬ್ಬರು ಒಂದು ವರ್ಷ ಕೂಡ ಪೂರ್ತಿ ಮಾಡಲಿಲ್ಲ. ಹಿಂದಿ ಮತ್ತು ಇಂಗ್ಲಿಷ್ ಭಾಷಾ ಮಾಧ್ಯಮಗಳ ಮೂಲಕವೇ ಕೇಂದ್ರ ಸರ್ಕಾರದ ಹುದ್ದೆಗಳ ಆಯ್ಕೆಗೆ ಪರೀಕ್ಷೆಗಳು ನಡೆಯುವುದರಿಂದ ಅಧಿಕಾರದಲ್ಲೂ ದಕ್ಷಿಣದವರು ಸೇರಿದಂತೆ ಇನ್ನಿತರ ಭಾಷಿಕ ಸಮುದಾಯದ ಪಾತ್ರ ಕಿರಿದಾಯಿತು. ಇದೆಲ್ಲವೂ ಈಗ ಇನ್ನಷ್ಟು ಕಟ್ಟುನಿಟ್ಟಾದ ಕಾನೂನುಗಳೊಂದಿಗೆ ಮುಂದುವರಿಯುತ್ತಿದೆ.ಆಡಳಿತ ಕಚೇರಿಯಲ್ಲಿದ್ದ ಹಿಂದಿ ಭಾಷೆಯ ಹೇರಿಕೆಯು ಬ್ಯಾಂಕ್‌, ಉದ್ಯಮ, ಜಾಹೀರಾತು, ನೌಕರಿ ಪ್ರವೇಶ ಪರೀಕ್ಷೆಗಳು, ರೈಲ್ವೆ ನಿಲ್ದಾಣಗಳು, ಉನ್ನತ ಶಿಕ್ಷಣ ಪ್ರವೇಶ ಮತ್ತು ವಾರ್ಷಿಕ ಪರೀಕ್ಷೆಗಳು (CA, ICMAI ಇತ್ಯಾದಿ) ಸೇರಿದಂತೆ ಬಹುತೇಕ ಸಾರ್ವಜನಿಕ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದೆ. ದಕ್ಷಿಣದ ದ್ರಾವಿಡರು ತಮ್ಮ ಸಾವಿರಾರು ವರ್ಷಗಳ ಅಪೂರ್ವ ಭಾಷೆ, ಸಮಾಜ, ವಿಜ್ಞಾನ, ವಾಸ್ತುಶಿಲ್ಪ, ಇತಿಹಾಸಗಳನ್ನ ‘ಭಾರತೀಯತೆ’ ಎಂಬುದಕ್ಕೆ ಅಡವಿಟ್ಟು ಉತ್ತರದ ರಾಜಕಾರಣವು ನಿರ್ದೇಶಿಸುವ ‘ಹೇರಿಕೆ’ಗಳನ್ನು ಯಾಕೆ ಹೊರಬೇಕು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ತಮ್ಮ ಆತ್ಮಗೌರವದ ಚಳವಳಿಯನ್ನು ಪುನರ್‌ ಸ್ಥಾಪಿಸಿಕೊಳ್ಳಬೇಕಿದೆ.ಪೆರಿಯಾರರು ಹುಟ್ಟುಹಾಕಿದ ಆತ್ಮಗೌರವದ ಚಳವಳಿ ಇಂದು ತುಕ್ಕು ಹಿಡಿದು ನಿಂತಿರುವುದು ಕಾಲದ ದೃಷ್ಟಿಯಿಂದ ಸಹಜ. ಆದರೆ, ಅದೇ ಕಾಲಪ್ರಜ್ಞೆಯ ನೆರವಿನಿಂದ ಮರುಹುಟ್ಟು ಪಡೆಯಬೇಕಿರುವುದು ಅನಿವಾರ್ಯ. ಆ ಹುಟ್ಟಿನ ಮೂಲಕವೇ ಜಡಗೊಂಡಿರುವ ಪ್ರಜಾಪ್ರಭುತ್ವದ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಬೇಕು. ಇಲ್ಲವಾದರೆ ಹಿಂದಿ ಮತ್ತು ಹಿಂದಿಯನ್ನರ ಆಧುನಿಕ ದಾಸ್ಯದಲ್ಲಿ ದ್ರಾವಿಡ ರಾಜ್ಯಗಳ ಜನ ಬದುಕಬೇಕಾಗುತ್ತದೆ. ಹಾಗೆಂದು ಉತ್ತರ ಭಾರತದ ಜೊತೆಗಿನ ಸಾಮರಸ್ಯವನ್ನು ಕೆಡಿಸಿಕೊಳ್ಳಬೇಕಿಲ್ಲ. ಅದನ್ನು ಉಳಿಸಿಕೊಳ್ಳುವುದರ ಜೊತೆಗೆ ನಮ್ಮ ಭಾಷೆ, ನಮ್ಮ ತೆರಿಗೆ ಆದಾಯದ ಸರಿಯಾದ ಹಂಚಿಕೆ, ನಮ್ಮ ಅಧಿಕಾರವನ್ನು ನಾವು ಕಾಪಾಡಿಕೊಳ್ಳಬೇಕಿದೆ. ಈ ವಿಷಯದಲ್ಲಿ ಹೆಚ್ಚು ದಿನ ನಿರ್ಲಕ್ಷ್ಯ ಸಲ್ಲದು.

courtsey:prajavani.net

https://www.prajavani.net/artculture/art/hindi-three-language-642533.html