ಭಾರತೀಯ ಸಂಪ್ರದಾಯ ಮೆಚ್ಚುವ ಸಂಸ್ಥೆಗಳನ್ನು ಜರಿಯುವುದೇ ಜಾತ್ಯತೀತತೆಯಾಗಿದೆ: ಎಸ್‌.ಎಲ್‌. ಭೈರಪ್ಪ

ಭಾರತೀಯ ಸಂಪ್ರದಾಯ ಮೆಚ್ಚುವ ಸಂಸ್ಥೆಗಳನ್ನು ಜರಿಯುವುದೇ ಜಾತ್ಯತೀತತೆಯಾಗಿದೆ: ಎಸ್‌.ಎಲ್‌. ಭೈರಪ್ಪ

ನವದೆಹಲಿ: ಭಾರತೀಯ ಸಂಪ್ರದಾಯವನ್ನು ಮೆಚ್ಚುವ ಜನರು ಹಾಗೂ ಸಂಸ್ಥೆಗಳನ್ನು ಕೋಮುವಾದಿಗಳು ಎಂದು ಜರಿಯುವುದನ್ನೇ ಜಾತ್ಯತೀತತೆ ಎಂದು ಎಡಪಂಥೀಯ ಬರಹಗಾರರು ಬಣ್ಣಿಸುತ್ತಿದ್ದಾರೆ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅಭಿಪ್ರಾಯಪಟ್ಟರು.

ಕೇಂದ್ರ ಸಾಹಿತ್ಯ ಅಕಾಡೆಮಿಯ 70ನೇ ವರ್ಷಾಚರಣೆ ಅಂಗವಾಗಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ‘ವ್ಯಾಸಗುಹೆಯ ಆರೋಹಣ’ ಕುರಿತ ಸಂವತ್ಸರ ಉಪನ್ಯಾಸ ನೀಡಿದರು.

ಭಾರತದಲ್ಲಿನ ಬಹುಸಂಖ್ಯಾತರು ಮಾತ್ರ ಕೋಮುವಾದಿಗಳು. ಅಲ್ಪಸಂಖ್ಯಾತರು ಎಂದಿಗೂ ಕೋಮುವಾದಿ ಆಗಿರುವುದಿಲ್ಲ ಎಂದು ನಿರಂತರವಾಗಿ ದೊಡ್ಡದನಿಯಲ್ಲೇ ಹೇಳುವ ಮೂಲಕ ಸುದ್ದಿಯಾಗುತ್ತಿದ್ದಾರೆ ಎಂದು ದೂರಿದರು.

ಮಹಿಳೆಯರ ಮೇಲಿನ ದೌರ್ಜನ್ಯ, ಜಾತಿ ವ್ಯವಸ್ಥೆ, ವರದಕ್ಷಿಣೆ ಪಿಡುಗು ಮತ್ತು ಸಹಾನುಭೂತಿಯ ಕೊರತೆಯ ಬಗ್ಗೆ ಪ್ರಸ್ತಾಪಿಸುತ್ತ, ಹಿಂದುತ್ವ ಮಾತ್ರವೇ ಆನುವಂಶಿಕವಾಗಿ ಈ ದೌರ್ಜನ್ಯ ಎಸಗುತ್ತಿರುವ ಧರ್ಮ ಎಂದು ಹಳಿಯುತ್ತಾರೆ ಎಂದರು, ಮುಕ್ತ ಮಾರುಕಟ್ಟೆಯನ್ನು ಟೀಕಿಸುವ ಇವರು, ಸೋವಿಯತ್‌ ಒಕ್ಕೂಟದಲ್ಲಿ ಕಮ್ಯುನಿಸ್ಟ್‌ ಆರ್ಥಿಕತೆಯ ವೈಫಲ್ಯ ಹಾಗೂ ಚೀನದ ಇಂದಿನ ಸ್ಥಿತಿಗತಿಯ ಕುರಿತು ಪ್ರಸ್ತಾಪಿಸುವುದಿಲ್ಲ. ಮೇಲಾಗಿ, ಭಾರತದಲ್ಲಿ ಸಾಮಾಜಿಕ ಚಳವಳಿಯ ಸುವರ್ಣ ಯುಗ ಬರುತ್ತಿವೆ ಎಂಬ ಕನಸನ್ನು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಜಾಗತಿಕ ದೌರ್ಜನ್ಯ ಮತ್ತು ಅನ್ಯಾಯಕ್ಕೆ ಅಮೆರಿಕವೇ ಕಾರಣ ಎಂದು ಬಲವಾಗಿ ನಂಬಿರುವ ಎಡಪಂಥೀಯರು, ಭಾರತದೊಂದಿಗಿನ ಚೀನದ ಆಕ್ರಮಣಕಾರಿ ಸಂಬಂಧದ ಕುರಿತು ಮೌನ ವಹಿಸಿದ್ದಾರೆ. ತಮ್ಮ ಎಲ್ಲ ದೃಷ್ಟಿಕೋನಗಳನ್ನು ಬಲಪಂಥೀಯ ಹಾಗೂ ಎಡಪಂಥೀಯ ಎಂದು ವಿಭಜಿ
ಸುತ್ತ, ಬಲಪಂಥೀಯರು ಸದಾ ತಪ್ಪೆಸಗುತ್ತಾರೆ ಹಾಗೂ ಎಡಪಂಥೀಯರು ಸ್ವಾಭಾವಿಕವಾಗಿ ನೈತಿಕತೆಯನ್ನು ಬೆಂಬಲಿಸುವವರು ಎಂದೇ ಭಾವಿಸಿದ್ದಾರೆ ಎಂದರು.

ನೈಜ ಸೃಜನಶೀಲ ಬರಹಗಾರ ಎಲ್ಲ ಪೂರ್ವಗ್ರಹಿತ ಪರಿಕಲ್ಪನೆಯ ಎಲ್ಲೆಗಳನ್ನು ದಾಟಿರುವುದಲ್ಲದೆ, ತನ್ನ ಸುತ್ತಲ ಸಮಾಜಕ್ಕೆ ಮತ್ತು ಸಮುದಾಯದ ಒಟ್ಟಂದದ ಮನಸ್ಥಿತಿಗೆ ಅಂಧನಾಗಿರುವುದಿಲ್ಲ. ವಾಸ್ತವವಾಗಿ ಆತ ಎಡಪಂಥೀಯ ಚಳವಳಿಗಾರನಿಗಿಂತ ಹೆಚ್ಚು ಮುಕ್ತಮನಸ್ಸಿನವನೂ, ವಸ್ತುನಿಷ್ಠನೂ ಆಗಿರುತ್ತಾನೆ ಎಂದರು.

ಅಂತಹ ಚಳವಳಿಗಾರರು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವುದಕ್ಕೆ ಬಿಹಾರ ವಿಧಾನಸಭೆ ಚುನಾವಣೆಯ ಸಂದರ್ಭ ನಡೆದ ಪ್ರಶಸ್ತಿ ವಾಪಸ್‌ ಆಂದೋಲನವೇ ಸಾಕ್ಷಿ ಎಂದು ಅವರು ಹೇಳಿದರು.

ಪುಣ್ಯಕ್ಷೇತ್ರವಾದ ಬದರೀನಾಥದಲ್ಲಿ ‘ವ್ಯಾಸ ಗುಹೆ’ ಇದೆ. ಸ್ಥಳ ಪುರಾಣದ ಪ್ರಕಾರ, ಮಹಾಭಾರತದ ಕರ್ತೃ ಈ ಗುಹೆಯಲ್ಲಿ ವಾಸಿಸುತ್ತ, ಮಹಾಕಾವ್ಯ ರಚಿಸಿದ. ಇದು ಐತಿಹಾಸಿಕ ಸತ್ಯವೋ ಅಥವಾ ಈ ಯಾತ್ರಾ ಸ್ಥಳದ ಪಾವಿತ್ರ್ಯ ಹೆಚ್ಚಿಸುವ ಮಿಥ್ಯೆಯೋ ಎಂಬುದು ತಿಳಿಯದು. ಅದು ಮಿಥ್ಯೆಯೇ ಆಗಿದ್ದರೂ ಸಾಹಿತ್ಯಿಕ ಬರಹಗಾರರಿಗಾಗಿ ತನ್ನೊಳಗೆ ಉದಾತ್ತ ಪಾಠವನ್ನು ಅಡಗಿಸಿಕೊಂಡಿದೆ.

ವ್ಯಾಸ ಮಹರ್ಷಿಯು ಮಹಾಭಾರತದಲ್ಲಿ ಸಕ್ರಿಯ ಪಾತ್ರಧಾರಿ ಅಲ್ಲವಾದರೂ ಧೃತರಾಷ್ಟ್ರ, ಪಾಂಡು ಮತ್ತು ವಿದುರರ ಜನನಕ್ಕೆ ಕಾರಣವಾದ ‘ನಿಯೋಗ’ವನ್ನು ಏರ್ಪಡಿಸಿದ.

ನೂರರ ವಯಸ್ಸು ದಾಟಿದ್ದರೂ ಕಾವ್ಯ ರಚಿಸಲು ಅಥವಾ ಉಕ್ತ ಲೇಖನ ನೀಡಲು 10,000 ಅಡಿಗಳಿಗಿಂತಲೂ ಎತ್ತರದ ಶೀತಲ ಪ್ರದೇಶಕ್ಕೆ ಅವರು ಹೋದದ್ದಾದರೂ ಏಕೆ? ಈ ಮಿಥ್ಯೆಯ ಅರ್ಥವೇನೆಂದರೆ, ಘಟನಾವಳಿಗಳು ಕೆಳಗಿನ ಬಯಲು ಪ್ರದೇಶದಲ್ಲಿ ನಡೆದರೂ ಕಥೆ ಮತ್ತು ಪಾತ್ರಧಾರಿಗಳನ್ನು ನಿರ್ಲಿಪ್ತವಾಗಿ, ಸಹಾನುಭೂತಿ ಮತ್ತು ಸಹೃದಯತೆಯಿಂದ ನೋಡಲು ಹಾಗೂ ‘ಖಳ’ ಪಾತ್ರಗಳನ್ನು ತಿಳಿಯಲು ಹಾಗೂ ಅನಾವರಣವಾದ ಬದುಕಿನ ನಿಗೂಢ ದೃಷ್ಟಿಕೋನವನ್ನು ಅರಿಯಲು ಹಿಮಾಲಯದ ಎತ್ತರವನ್ನು ಏರಿದರು.

ಈ ಮಿಥ್ಯೆಯ ಸಂಪೂರ್ಣ ಅರ್ಥವನ್ನು ಅರಿಯಲು ವಿಫಲನಾದ ಬರಹಗಾರ ವ್ಯಾಸಗುಹೆಯ ಬುಡವನ್ನೂ ತಲುಪಲು ವಿಫಲನಾಗುತ್ತಾನೆ ಎಂದು ಭೈರಪ್ಪ ಹೇಳಿದರು.

ಕಪಟತನದ ಹೇಳಿಕೆ
‘ಯಾರಾದರೂ ತಾನು ಎಡಪಂಥೀಯನೂ ಅಲ್ಲ ಬಲಪಂಥೀಯನೂ ಅಲ್ಲ’ ಎಂದು ಕರೆದುಕೊಂಡರೆ, ಅದನ್ನು ಕಪಟತನದಿಂದ ಕೂಡಿದ ಹೇಳಿಕೆ ಎಂದು ಜರಿಯುತ್ತಾರೆ. ನಕ್ಸಲ್‌, ಮಾವೋ ಅಥವಾ ಜೆಹಾದಿ ಉಗ್ರರು ಪೊಲೀಸರಿಂದ ಬಂಧನಕ್ಕೆ ಒಳಗಾದಾಗ, ಹತ್ಯೆಗೀಡಾದಾಗ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಮಾಡುತ್ತಾರೆ. ಯುವ ಸಮೂಹ ಏಕೆ ಇಂಥ ಸಂಘಟನೆಗಳನ್ನು ಸೇರುತ್ತಿದೆ ಎಂದು ಪ್ರಶ್ನಿಸಿ ಪೊಲೀಸರ ಮತ್ತು ಸೇನಾ ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತಾರೆ ಎಂದು ಭೈರಪ್ಪ ಅವರು ಆರೋಪಿಸಿದರು.

Courtesy : Prajavani.net

http://www.prajavani.net/news/article/2018/02/14/553966.html

Leave a Reply