ಬೆಳಗುವ ಹಣತೆಗಳು
ಹಣತೆ ಸೂರ್ಯನಷ್ಟು ಚಂದ್ರನಷ್ಟು ಗಾತ್ರ ಇಲ್ಲದಿದ್ದರೂ ತನ್ನ ಸುತ್ತಲೂ ಬೆಳಕನಿತ್ತು, ಇನ್ನೊಬ್ಬರಿಗೆ ಸಹಾಯಮಾಡುವುದು. ಹೀಗೆ ಪ್ರತಿಯೊಬ್ಬ ಮನುಷ್ಯರು ತನ್ನ ಸಾಮರ್ಥ್ಯವನ್ನು ಬೆಳೆಸಿಕೊಂಡು ಸಮಾಜಕ್ಕೆ ಸೇವೆಯನ್ನು ಸಲ್ಲಿಸಬಹುದು.
ಮನುಷ್ಯನ ಬದುಕಿನಲ್ಲಿ ಸುಖ-ದುಃಖಗಳು ನಾಣ್ಯದ ಎರಡು ಬದಿಗಳು ಇದ್ದಂತೆ. ಇವು ಒಂದಾದ ಮೇಲೆ ಒಂದರಂತೆ ಮರುಕಳಿಸುತ್ತಿರುತ್ತವೆ. ಇವುಗಳನ್ನು ನಿಭಾಯಿಸಿಕೊಂಡು ಮುನ್ನುಗ್ಗುವುದೇ ದೊಡ್ಡ ಸಾಧನೆ. ಆದರೆ ಸಮಸ್ಯೆಗಳಿಗೆ ಹೆದರಿ ಇಟ್ಟ ಹೆಜ್ಜೆಗಳನ್ನು ಒಮ್ಮೆ ಹಿಂದಕ್ಕೆ ಮತ್ತೆ ಮುಂದುವರಿಯುವುದು ಬಹಳ ಕಷ್ಟ.
ಜೀವನದಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕಷ್ಟ ಅಥವಾ ಸಮಸ್ಯೆಗಳು ಬಂದೇ ಬರುತ್ತವೆ. ಅಂತಹ ಸಂದರ್ಭಗಳಲ್ಲಿ ಸಾಧಕರ ಜೀವನ ಮತ್ತು ಸಾಧನೆಗಳನ್ನು ಆದರ್ಶವಾಗಿ ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ ಜೀವನ ವ್ಯರ್ಥವಾಗುತ್ತದೆ.
ಬೆಂಗಳೂರಿನಲ್ಲಿ ‘ಬೆಳಕು ಅಕ್ಯಾಡೆಮಿ’ಯ ಕಾರ್ಯದರ್ಶಿಗಳಾದ ಕುಮಾರಿ ಅಶ್ವಿನಿ ಅಂಗಡಿ ಅವರನ್ನು ನಾನು ಹಾಗೂ ನನ್ನ ಸೋದರ ಸಂನ್ಯಾಸಿಗಳು ಮಾಗಡಿ ರಸ್ತೆಯಲ್ಲಿರುವ ಅವರ ಶಾಲೆಯಲ್ಲಿ ಭೇಟಿ ಮಾಡಿದ್ದೆವು.
ಅಶ್ವಿನಿ ಅಂಗಡಿ ಮೂಲತಃ ಗದಗ ಜಿಲ್ಲೆಯವರು. ಅವರಿಗೆ 26-27 ವಯಸ್ಸು, ಕಣ್ಣಿಲ್ಲ. ಅವರು 25 ಅಂಧ ಮಕ್ಕಳ ಶಾಲೆ ಮತ್ತು ಉಚಿತ ವಿದ್ಯಾರ್ಥಿ ನಿಲಯ ನಡೆಸುತ್ತಾರೆ. ಸದ್ಯಕ್ಕೆ ಒಂದು ಬಾಡಿಗೆ ಕಟ್ಟಡದಲ್ಲಿದ್ದಾರೆ. ಅವರು ಬಿ.ಕಾಂ. ಮುಗಿಸಿ ಒಂದು ಕಂಪನಿಯಲ್ಲಿ 60ಸಾವಿರ ರೂಪಾಯಿಗಳ ಸಂಬಳ ಬಿಟ್ಟು ಬಂದು ಇದನ್ನು ನಡೆಸುತ್ತಿದ್ದಾರೆ. ನಾವು ಇದನ್ನು ನೋಡಿ ಮೂಕವಿಸ್ಮಿತರಾದೆವು. ನಾವು ಸ್ವಲ್ಪ ಹೊತ್ತು ಅವರೊಂದಿಗೆ ಹಾಗೂ ಆ ಮಕ್ಕಳೊಂದಿಗೆ ಸಂಭಾಷಣೆ ಮಾಡಿದಾಗ, ಅವರ ವಿಚಾರಧಾರೆ, ಕತೃತ್ವಶಕ್ತಿ ಆತ್ಮವಿಶ್ವಾಸ ಭಿನ್ನವಾಗಿಯೇ ಕಂಡವು. ಅವರು ಉತ್ತಮ ವಾಗ್ಮಿಗಳು. ಅವರಿಗೆ ಪ್ರೇರಣಾಶಕ್ತಿಗಳು ಶ್ರೀಸ್ವಾಮಿ ವಿವೇಕಾನಂದರು. ಶ್ರೀರಾಮಕೃಷ್ಣರು ಹಾಗೂ ಶ್ರೀ ಶಾರದಾದೇವಿಯವರಂತೆ.
ಅವರು ಇಷ್ಟು ಚಿಕ್ಕವಯಸ್ಸಿನಲ್ಲಿ ಮಾಡುತ್ತಿರುವ ಸೇವೆಯನ್ನು ಗುರುತಿಸಿ, ಇಂಗ್ಲೆಂಡಿನ ಮಹಾರಾಣಿ, ಅಮೇರಿಕದ ಸಂಸತ್ತಿನ ಅಧ್ಯಕ್ಷರು ಮತ್ತು ಭಾರತದ ಇನ್ಫೋಸಿಸ್ಸಿನ ನಾರಾಯಣಮೂರ್ತಿಯವರಂತಹ ಗಣ್ಯರು ಗೌರವಿಸಿ ಅಭಿನಂದಿಸಿದ್ದಾರೆ.
ಅಶ್ವಿನಿ ಅಂಗಡಿಗೆ ಎರಡು ಕಣ್ಣುಗಳಿಲ್ಲದಿರಬಹುದು. ಆದರೆ ಲಕ್ಷಾಂತರ ಕಣ್ಣುಗಳು ಅವರ ಕಾರ್ಯವನ್ನು ನೋಡಿ ಮೆಚ್ಚುವಂತೆ ಅವರು ಬದುಕುತ್ತಿದ್ದಾರೆ.
ಮತ್ತೊಬ್ಬರು ಕುಮಾರಿ ಅರುಣಿಮಾ ಸಿಂಹ ಎಂಬ ಮಧ್ಯಪ್ರದೇಶದ ಕ್ರೀಡಾಪಟುವನ್ನು ರೈಲು ದರೋಡೆಕೋರರು ಮಧ್ಯರಾತ್ರಿ ರೈಲಿನಿಂದ ಹೊರಗೆ ಎಸೆದು ಬಿಟ್ಟಾಗ ಅವರು ಪ್ರಜ್ಞೆ ತಪ್ಪಿಬಿದ್ದರು. ಆಗ ಅವರ ಒಂದು ಕಾಲು ಹಳಿಯ ಮೇಲೆ ಇತ್ತು. ಆ ಕಾಲಿನ ಮೇಲೆ ರೈಲು ಹರಿದು ಕಾಲು ಕಟ್ಟಾಗಿ ಜೀವ ಉಳಿದಿದ್ದೇ ಹೆಚ್ಚು. ತಿಂಗಳಾನುಗಟ್ಟಲೆ ಆಸ್ಪತ್ರೆಯಲ್ಲಿದ್ದು ಆಗೋ-ಹೀಗೋ ಮಾಡಿ ಸುಧಾರಿಸಿಕೊಂಡರು. ಈ ಮಧ್ಯೆ ಅವರು ಮಾಡಿದ ಸಂಕಲ್ಪವೆಂದರೆ ಹಿಮಾಲಯದ ಗೌರಿಶಂಕರ ಶಿಖರವನ್ನು ಏರುತ್ತೇನೆ ಎಂದು. ಇದು ಎಂಥಾ ಹುಚ್ಚು ಹಿಡಿದಾಗಲೇ ಏನಾದರೂ ಸಾಧಿಸಲು ಸಾಧ್ಯ. ಇಂತಹ ಸಾಧಕರು ಜಗತ್ತಿನಲ್ಲಿ ಬಹಳಷ್ಟು ಜನರಿದ್ದಾರೆ. ಆದರೆ ಎಲ್ಲ ಅನುಕೂಲಗಳು ಇದ್ದವರಿಗೆ ಹೆದರಿಕೆ, ಭಯ, ನಿರುತ್ಸಾಹ, ಯಾಕೆ? ಇಲ್ಲಿ ಸಾಧಕರಿಗೂ ಮತ್ತು ಇವರಿಗೂ ಆ ವ್ಯತ್ಯಾಸ ಗಮನಿಸಬೇಕು. ಸಾಧಕರು ಶ್ರದ್ಧೆ ಹಾಗೂ ಆತ್ಮಸ್ಥೈರ್ಯ ಉಳ್ಳವರಾಗಿರುತ್ತಾರೆ. ಇವು ಸಾಧನೆಯ ಕೀಲಿ ಕೈಗಳಿದ್ದಂತೆ.
ಒಂದು ದಿನ ಒಬ್ಬ ಕುರುಡ ತನ್ನ ಸ್ನೇಹಿತನ ಮನೆಗೆ ಹೋಗಿದ್ದನು. ಮರಳಿ ಹೊರಡುವಷ್ಟರಲ್ಲಿ ಕತ್ತಲಾಯಿತು. ಆದರೂ ಹೊರಟು ನಿಂತ. ಸ್ನೇಹಿತ ಹಾಗಾದರೆ ಒಂದು ಲಾಟೀನನ್ನು ಹಿಡಿದುಕೊಂಡು ಹೋಗು ಎಂದಾಗ ಅವನು ನನಗೆ ಕಣ್ಣೇ ಕಾಣದಿದ್ದಾಗ ಅದರಿಂದ ಪ್ರಯೋಜನ ಏನು? ಎಂದ. ಸ್ನೇಹಿತ ‘ನಿನಗೆ ಕಣ್ಣು ಕಾಣುವುದಿಲ್ಲ, ನಿಜ ಆದರೆ ನಿನ್ನ ಎದುರುಗಡೆ ಬಂದವರಿಗೆ ನೀನು ಬರುವುದು ಗೊತ್ತಾಗುತ್ತದೆ. ಕುರುಡ ಲಾಟೀನನ್ನು ತೆಗೆದುಕೊಂಡು ಹೊರಟನು. ಒಂದು ಮೈಲು ಹೋದ, ಕಗ್ಗತ್ತಲು ಯಾರೋ ಒಬ್ಬ ಬಂದು ಡಿಕ್ಕಿ ಹೊಡೆದೇ ಬಿಟ್ಟ. ಕುರುಡ ಅವನನ್ನು ‘ಏನು ನನ್ನ ಕೈಯಲ್ಲಿ ಲಾಟೀನ ಇರುವುದು ಕಾಣಲಿಲ್ಲವೆ ಎಂದು ಬೈದನು, ಆಗ ಡಿಕ್ಕಿ ಹೊಡೆದವನು ಹೇಳಿದ, ಸ್ವಾಮಿ ನೀನು ಲಾಟೀನು ಹಿಡಿದಿರುವುದು ನಿಜ, ಅದರೊಳಗಿರುವ ದೀಪ ಯಾಕೆ ಹಚ್ಚಲಿಲ್ಲ ಎಂದ. ಆಗ ಕುರುಡನಿಗೆ ತಿಳಿಯಿತು ತಾನು ಒಳಗೆ ದೀಪ ಹಚ್ಚಿಲ್ಲ ಎಂಬುದು. ಈ ಕತೆಯಲ್ಲಿ ಅಡಗಿರುವ ಗೂಡಾರ್ಥ ನಮ್ಮೊಳಗಿರುವ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಬೇಕು, ಅದನ್ನು ನಂಬಬೇಕು, ಆಗ ಮಾತ್ರ ಅದು ನಮಗೆ ಸಹಾಯ ಮಾಡುತ್ತದೆ.
ಸ್ವಾಮಿ ವಿವೇಕಾನಂದರು ‘ನನ್ನ ಭಾವನೆ, ಯಾರು ತನ್ನ ಕೈಯಲ್ಲಿ ಏನೂ ಆಗುವುದಿಲ್ಲ. ತಾನೊಬ್ಬ ಅಶಕ್ತ ಎಂದು ಭಾವಿಸಿದ್ದರೆ, ಅದಕ್ಕಿಂತ ದೊಡ್ಡ ಪಾಪ ಮತ್ತೊಂದಿಲ್ಲ, ಎಂದು. ದೈಹಿಕವಾಗಿ ಅಂಗವಿಕಲತೆ ಇದ್ದರೂ ಮನುಷ್ಯ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಜೀವಂತ ನಿದರ್ಶನಗಳು ಸಾಕಷ್ಟು ಇವೆ. ಮನಸ್ಸಿಗೆ ಕತ್ತಲು ಆವರಿಸಿ, ಮುಂದಿನ ಗುರಿ ಕಾಣದಿದ್ದಾಗ, ಅಲ್ಲಲ್ಲಿ ಬೆಳಗುತ್ತಿರುವ ಹಣತೆಗಳಂತೆ ಇರುವ ಸಾಧಕರ ಜೀವನ ಹಾಗೂ ಸಾಧನೆಗಳನ್ನು ಸ್ಮರಣೆಮಾಡಿ ಸ್ಫೂರ್ತಿಯನ್ನು ಪಡೆಯಬೇಕು.
1857ರ ಸಿಪಾಯಿ ದಂಗೆಯನ್ನು ಹತ್ತಿಕ್ಕಲು ಈಸ್ಟ್ ಇಂಡಿಯಾ ಕಂಪನಿ ಶತಪ್ರಯತ್ನ ಮಾಡುತ್ತಿತ್ತು. ಬ್ರಿಟಿಶ್ ಸಿಪಾಯಿಗಳು ದಂಗೆಕೋರರನ್ನು ಸೆರೆಹಿಡಿಯುವುದು, ಕೊಲ್ಲುವುದು ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಬಿಹಾರದ ರಾಜಕುವರಸಿಂಗ್ ಎಂಬುವವನು ಬ್ರಿಟಿಷರಿಗೆ ಸಿಂಹಸ್ವಪ್ನನಾಗಿದ್ದನು. ಅವನನ್ನು ಕೊಲ್ಲುವ ಪ್ರಯತ್ನ ನಡೆಸಿ ಅವನ ಕಡೆಗೆ ಗುಂಡುಹಾರಿಸಿದರು. ಗುಂಡು ಅವನ ಬಲಗೈ ಒಳಗಡೆ ತೂರಿತು. ಕುವರಸಿಂಗ್ ನೋವಿನಿಂದ ಒದ್ದಾಡುವುದನ್ನು ತಪ್ಪಿಸಲು ಬಲಗೈಯನ್ನು ಕತ್ತರಿಸಿ ಗಂಗೆಗೆ ಅರ್ಪಿಸಿದನು. ತದನಂತರ ಅನೇಕ ಬಾರಿ ಎಡಗೈಯಿಂದ ಬ್ರಿಟಿಷರ ವಿರುದ್ಧ ಹೋರಾಡಿದನು. ಅವನ ಹೋರಾಟಕ್ಕೆ ಒಂದು ಕೈ ಇಲ್ಲದೆ ಇರುವುದು ಒಂದು ನೆಪವಾಗಲಿಲ್ಲ. ಅವನು ಹೋರಾಟ ಮುಂದುವರೆಸುವುದಕ್ಕೆ ಅವನು ಬೆಳೆಸಿಕೊಂಡಿದ್ದ ಆತ್ಮಸ್ಥೈರ್ಯವೇ ಕಾರಣವಾಗಿತ್ತು.
ಯಾರೇ ಆಗಲಿ ಒಳಗಡೆ ಇರುವ ಆತ್ಮಜ್ಯೋತಿಯನ್ನು ಬೆಳಗಿಸಿಕೊಂಡರೆ ಸಮಾಜಕ್ಕೆ ಬೆಳಕಾಗಬಹುದು, ಮಾದರಿಯಾಗಬಹುದು. ಆಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ.