ಬಂಗಾಳದ ಬೆಂಕಿಚೆಂಡು, ಮೊದಲ ಮಹಿಳಾ ಬಲಿದಾನಿ: ಪ್ರೀತಿಲತಾ ವಡ್ಡೆದಾರ್
ಪ್ರೀತಿಲತಾ ವಡ್ಡೆದಾರ್ : ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸಿಡಿದೆದ್ದು ಕ್ರಾಂತಿ ಚಟುವಟಿಕೆ ನಡೆಸಿ ಆತ್ಮಾರ್ಪಣೆಗೈದ ಬಂಗಾಳದ ಮೊದಲ ಮಹಿಳಾ ಬಲಿದಾನಿ ಪ್ರೀತಿಲತಾ ವಡ್ಡೆದಾರ್. ಚಿತ್ತಗಾಂಗ್ ನ ಪಹರ್ತಳಿಯ ಯೂರೋಪಿಯನ್ ಕ್ಲಬ್ ನಲ್ಲಿ ಹಾಕಲಾಗಿದ್ದ ‘ನಾಯಿಗಳಿಗೆ ಮತ್ತು ಭಾರತೀಯರಿಗೆ ಇಲ್ಲಿ ಪ್ರವೇಶವಿಲ್ಲ’ ಎಂಬ ಅವಮಾನಕರ ಬೋರ್ಡ್ ಕಂಡು ಸಿಡಿದುಬಿದ್ದ ಈ ಬೆಂಕಿಚೆಂಡಿನಂತಹ ಹೆಣ್ಣುಮಗಳು ಕ್ರಾಂತಿಕಾರಿಗಳ ದಂಡಿನೊಂದಿಗೆ ಕ್ಲಬ್ ಗೆ ನುಗ್ಗಿ ಬ್ರಿಟಿಷರ ಎದೆನಡುಗಿಸಿ ಪ್ರತ್ಯುತ್ತರ ನೀಡಿದವಳು. ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಚಿತ್ತಗಾಂಗ್ ನಲ್ಲಿ ಹುಟ್ಟಿದ ಪ್ರೀತಿಲತಾ ಎಳವೆಯಿಂದಲೇ ದೇಶಭಕ್ತರ ಕುರಿತು ಕೇಳುತ್ತಾ ಬೆಳೆದವಳು. ಝಾನ್ಸಿ ರಾಣಿಲಕ್ಷ್ಮಿಬಾಯಿಯ ಕುರಿತು ಓದುತ್ತಾ ಅವಳ ಜೀವನ ಮತ್ತು ಹೋರಾಟದಿಂದ ಪ್ರಭಾವಿತಳಾದ ಪ್ರೀತಿಲತಾ ತಾನೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು ಬ್ರಿಟಿಷರನ್ನು ಭಾರತದಿಂದ ಓಡಿಸುವ ಕನಸು ಕಂಡಿದ್ದಳು. ಪ್ರೀತಿಲತಾ ತತ್ತ್ವಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಕಲ್ಕತ್ತಾ ವಿಶ್ವವಿದ್ಯಾಲಯದ ಬ್ರಿಟಿಷ್ ಆಡಳಿತ ಅವಳ ಪದವಿಯನ್ನು ತಡೆಹಿಡಿಯಿತು. ಚಿತ್ತಗಾಂಗ್ ಗೆ ಮರಳಿದ ಪ್ರೀತಿ ಶಾಲಾ ಶಿಕ್ಷಕಿಯಾಗಿ ಕಾರ್ಯ ಆರಂಭಿಸಿದಳು ಮತ್ತು ಸ್ವಾತಂತ್ರ್ಯ ಚಳುವಳಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದಳು. ಅದೇ ಸಮಯಕ್ಕೆ ಸರಿಯಾಗಿ ಕ್ರಾಂತಿಕಾರಿಗಳ ವಲಯದಲ್ಲಿ ‘ಮಾಸ್ಟರ್ ದಾ’ ಎಂದೇ ಪ್ರಸಿದ್ಧರಾಗಿದ್ದ ಸೂರ್ಯ ಸೇನ್ ರ ಸಂಪರ್ಕಕ್ಕೆ ಬಂದಳು. ಸೂರ್ಯ ಸೇನ್ ನೇತೃತ್ವದ ಇಂಡಿಯನ್ ರಿಪಬ್ಲಿಕನ್ ಆರ್ಮಿ 1930 ರ ಸಮಯದಲ್ಲಿ ತನ್ನ ಕ್ರಾಂತಿಚಟುವಟಿಕೆಗಳ ಮೂಲಕ ಮನೆಮಾತಾಗಿತ್ತು ಮತ್ತು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿತ್ತು.ಮೊದಲಿಗೆ ಪ್ರೀತಿಲತಾರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸೂರ್ಯ ಸೇನ್ ನಿರಾಕರಿಸಿದರು. ಆದರೆ ಪ್ರೀತಿಲತಾರ ಬ್ರಿಟಿಷರನ್ನು ಒದ್ದೋಡಿಸಲೇ ಬೇಕೆಂಬ ಕೆಚ್ಚು ಹಾಗೂ ಅದಮ್ಯ ದೇಶಪ್ರೇಮವನ್ನು ಕಂಡು ಆಕೆಗೆ ತಂಡದಲ್ಲಿ ಅವಕಾಶ ನೀಡಲಾಯಿತು. ಯಾವುದೇ ಕ್ರಾಂತಿಕಾರಕ ದಾಳಿಗಳಲ್ಲಿ ಸ್ಫೋಟಕವನ್ನು ಪೂರೈಸುವುದರಲ್ಲಿ ಪ್ರೀತಿಲತಾ ಪಳಗಿದ್ದಳು. ಜಲಾಲಾಬಾದ್ ನಲ್ಲಿ ನಡೆದ ದಾಳಿಯಲ್ಲಿ ಆಕೆಯ ಸಾಹಸ, ಶೌರ್ಯಗಳು ಪ್ರಶಂಸೆಗೆ ಪಾತ್ರವಾಯಿತು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುಪ್ರಸಿದ್ಧವಾದ ಹಾಗೂ ಬ್ರಿಟಿಷ್ ಸಾಮ್ರಾಜ್ಯವನ್ನು ಬೆಚ್ಚಿಬೀಳಿಸಿದ ಚಿತ್ತಗಾಂಗ್ ಶಸ್ತ್ರಾಗಾರ ದಾಳಿ ಹಾಗೂ ಲೂಟಿ ಪ್ರಕರಣದಲ್ಲಿ ಪ್ರೀತಿಲತಾ ಸೂರ್ಯ ಸೇನ್ ರ ತಂಡದ ಭಾಗವಾಗಿದ್ದಳು. ಪಹರ್ತಳಿಯ ಯೂರೋಪಿಯನ್ ಕ್ಲಬ್ ನಲ್ಲಿ ಹಾಕಲಾಗಿದ್ದ ‘ನಾಯಿಗಳಿಗೆ ಹಾಗೂ ಭಾರತೀಯರಿಗೆ ಪ್ರವೇಶವಿಲ್ಲ’ ಎಂಬ ಬೋರ್ಡ್ ಕ್ರಾಂತಿಕಾರಿಗಳನ್ನು ಕೆರಳಿಸಿತು. ಭಾರತೀಯರನ್ನುಅವಮಾನಿಸಿದ ಬ್ರಿಟಿಷರಿಗೆ ಬುದ್ಧಿಕಲಿಸಲು ಕ್ಲಬ್ ಮೇಲೆ ದಾಳಿ ಮಾಡಲು ನಿರ್ಧರಿಸಿ ಪ್ರೀತಿಲತಾರಿಗೆ ತಂಡದ ನೇತೃತ್ವ ನೀಡಲಾಯಿತು. 1932 ರ ಸೆಪ್ಟೆಂಬರ್ 23 ರಂದು ಪುರುಷನಂತೆ ವೇಷಧರಿಸಿ 12 ಜನರ ಕ್ರಾಂತಿಕಾರಿಗಳ ತಂಡದೊಂದಿಗೆ ಕ್ಲಬ್ ಗೆ ನುಗ್ಗಿದ ಪ್ರೀತಿ ಅಲ್ಲಿ ಕ್ರಾಂತಿಯೆಬ್ಬಿಸಿ ಬ್ರಿಟಿಷ್ ಆಡಳಿತಕ್ಕೆ ಸವಾಲು ಹಾಕಿದಳು. ಅಲ್ಲಿ ಬ್ರಿಟಿಷರೊಂದಿಗೆ ನಡೆದ ಕಾದಾಟದಲ್ಲಿ ವೀರಸೇನಾನಿಯಂತೆ ಹೋರಾಡಿದಳು. ಕೊನೆಗೆ ಬ್ರಿಟಿಷರಿಗೆ ಸಿಕ್ಕುಬೀಳುವಂತಾದಾಗ ಸೆರೆಯಾಗಲೊಪ್ಪದೆ ತಾನೇ ಸಯನೈಡ್ ನುಂಗಿ ಪ್ರಾಣಾರ್ಪಣೆ ಮಾಡಿದಳು. ಬಲಿದಾನ ಮಾಡಿದಾಗ ಪ್ರೀತಿಲತಾಗೆ ಕೇವಲ 21 ವರ್ಷ. ಭಾರತಕ್ಕೆ, ಭಾರತೀಯರಿಗೆ ಅವಮಾನವಾದರೆ ಈ ದೇಶದ ಮಕ್ಕಳು ಎಂದಿಗೂ ಸಹಿಸುವುದಿಲ್ಲ ಎಂಬುದನ್ನು ಪ್ರೀತಿಲತಾ ಮತ್ತೆ ನಿರೂಪಿಸಿ ತೋರಿಸಿದಳು. ಈ ಸಾಹಸೀ ಹೆಣ್ಣುಮಗಳ ಬಲಿದಾನ ಲಂಡನ್ನಿನವರೆಗೆ ಸದ್ದು ಮಾಡಿತು. ಪ್ರೀತಿಲತಾ ಬಲಿದಾನಮಾಡಿದ ಜಾಗದಲ್ಲಿ ಅವಳ ಪುತ್ಥಳಿ ನಿರ್ಮಿಸಿ ಅವಳಿಗೆ ಗೌರವ ಅರ್ಪಿಸಲಾಗಿದೆ.
ಬ್ರಿಟಿಷರು ತಡೆಹಿಡಿದಿದ್ದ ಅವಳ ಪದವಿಯನ್ನು 82 ವರ್ಷಗಳ ನಂತರ 2012 ರಲ್ಲಿ ಕಲ್ಕತ್ತಾವಿಶ್ವವಿದ್ಯಾಲಯ ಮರಣೋತ್ತರ ಪದವಿ ಪ್ರದಾನ ಮಾಡಿ ಗೌರವಿಸಿತು.