ನನ್ನ ಆಸೆ
ಅಮ್ಮ ನನಗೂ ಒಂದು ಆಸೆ ಕಣೆ
ಹೇಳುವೆ ಕೇಳದೆ ಹೋದರೆ ನನ್ನಾಣೆ
ಹಕ್ಕಿಯಂತೆ ಹಾರಬೇಕು
ರೆಕ್ಕೆ ಮಾಡುವುದೆಂತು?
ಆಕಾಶಕ್ಕೆ ಹಾರುವುದಾದರು ಎಂತು?
ಕೋಗಿಲೆಯಂತೆ ಕೂಗ ಬೇಕು
ಕಂಠಕ್ಕೇನು ಮಾಡ್ಲಿ
ಬೇಗ ನೀನು ಹೇಳು?
ಏಳು ಬಣ್ಣದ ಕಾಮನ ಬಿಲ್ಲಲಿ
ಜೋಕಾಲಿ ಜೀಕುವುದಿಷ್ಟ
ಕಟ್ಟುವುದೇ ಬಲು ಕಷ್ಟ
ಓಡುತ್ತಿರುವ ಚಂದಪ್ಪನ ಹಿಡಿದು
ಸರದ ಪದಕ ಮಾಡುವ ಹಿಗ್ಗು
ಕೈಗೆ ಸಿಗದೆ ಓಡುವನಮ್ಮಾ ತಂದು ಕೊಡು ನೀನು
ಮಿಣು ಮಿಣು ಮಿಣುಕುದ ಶುಕ್ರನ ತಂದು
ಮನೆಯ ಆಕಾಶ ಬುಟ್ಟಿ ಮಾಡುವಾಸೆ
ಏಣಿ ತಂದರೆ ಸಿಗುವನೆ ಅವನು
ಹೇಳ ಬಲ್ಲೆಯ ನೀನು?
ಗಿಡಗಳ ಹಸಿರು ಎಲೆಗಳ ಬಣ್ಣ
ಹಳದಿ ಇದ್ದರೆ ಚೆಂದ
ತಂದು ಹಚ್ಚುವುದ್ಯಾವಾಗ ಬಣ್ಣ
ಕೆಂಪು ಸೂರ್ಯನ ಮೆಲ್ಲನೆ ತಂದು
ನಿನ್ನ ಹಣೆಗೆ ಹಚ್ಚುವುದು ಬಲು ಸೊಗಸು
ತರಲು ಹೋಗುವರಾರು ಅದನು?
ಪುಟ್ಟು ನಾನು ಹೇಳುವೆ ಕೇಳು
ದೈವದ ನಿಯಮದು ಇಂದು
ಸೃಷ್ಟಿಯ ಕರ್ತನು ಕೊಟ್ಟನು ಎಲ್ಲಕೆ
ಅದರದೆ ಅಂದದ ಚೆಂದದ ಬೆಡಗು
ಕೊಡುವೆ ಬಾರಲೆ ಬಾಲೆ ಅಂಥದೆ
ಕೊಡುಗೆಯ ಆಡುವೆಯಂತೆ ನೀನು
ಪಕ್ಕದ ಉದ್ಯಾನವನದಲ್ಲೆ ಇದೆ ಬಾ
ಆಡುವೆಯಂತೆ ನೀನು.