ತನಗಾಗಿ ಮಾತ್ರವೇ ಬದುಕುವುದು ಪಾಪ
ಮಾಡುವುದೆಲ್ಲವನ್ನೂ ‘ಯಜ್ಞ’ಭಾವದಿಂದ ಮಾಡಿ, ದೇವತಾರ್ಪಣ ಮಾಡಬೇಕು; ದೇವತಾಪ್ರಸಾದವಾಗಿ ಸಿಕ್ಕಿದ ಕರ್ಮಫಲವನ್ನು ಸಹಮಾನವರೊಂದಿಗೆ ಹಂಚಿಕೊಂಡೇ ಭೋಗಿಸಬೇಕು, ಇಲ್ಲದಿದ್ದರೆ ಅದು ‘ಕಳ್ಳತನ’ವೆನಿಸುತ್ತದೆ – ಎನ್ನುವ ಕೃಷ್ಣನ ಉಪದೇಶವನ್ನು ಚರ್ಚಿಸುತ್ತಿದ್ದೆವು.
ಇತರರ ‘ವಸ್ತು’ವನ್ನು ಕದ್ದರೆ ಮಾತ್ರವೇ ಕಳ್ಳತನವಲ್ಲ. ಕೃತಿಚೌರ್ಯ ಕೀರ್ತಿಚೌರ್ಯ ಕೃತಘ್ನತೆಗಳೂ ಕಳ್ಳತನಗಳ ರೂಪಗಳೇ! ನಮ್ಮ ದೇಶದ ಅದೆಷ್ಟೋ ಜ್ಞಾನವಿಜ್ಞಾನಗಳ ಅಸಂಖ್ಯ ಶಾಸ್ತ್ರಗ್ರಂಥಗಳನ್ನು ಕದ್ದೊಯ್ದು, ಅಂಗ್ಲಕ್ಕೆ ತರ್ಜುಮೆ ಮಾಡಿಸಿ ‘ತಮ್ಮದೇ ನೂತನ ಆವಿಷ್ಕಾರ’ವೆಂಬಂತೆ ಮಂಡಿಸಿದ ಅಂದಿನ ಬ್ರಿಟಿಷ್ ‘ವಿದ್ವಾಂಸ’ರೂ ಕಳ್ಳರೇ! ವಸ್ತು, ಸ್ತ್ರೀ, ಆಸ್ತಿ, ಕೀರ್ತಿ, ಅವಕಾಶ ಇತ್ಯಾದಿ ಯಾವುದೇ ಆಗಲಿ, ತನ್ನದಲ್ಲದ್ದನ್ನು ತಿಳಿದೋ ತಿಳಿಯದೆಯೋ ವಶದಲ್ಲಿಟ್ಟುಕೊಳ್ಳುವುದು ‘ಕಳ್ಳತನ’. ಪಡೆದ ಉಪಕಾರಕ್ಕೆ ಪ್ರತ್ಯುಪಕಾರ ಮಾಡದಿರುವುದೂ ಕಳ್ಳತನವೆ! ಹಾಗಾಗಿ, ತಾಯ್ತಂದೆ, ಸಹಮಾನವರು, ನಿಸರ್ಗ, ಪ್ರಾಣಿಪಕ್ಷಿಗಳು, ಗುರುಪರಂಪರೆಯಿಂದ ಉಪಕೃತರಾದ ನಾವು, ನಮ್ಮ ಪುಣ್ಯವನ್ನೂ, ಯಜ್ಞಫಲವನ್ನೂ ಹಂಚಿಕೊಳ್ಳದಿದ್ದರೆ ಅದು ‘ಕಳ್ಳತನ’ವೇ!
ಸಹಬಾಳ್ವೆಯ ಅನಿವಾರ್ಯತೆಯಿರುವ ಈ ಜೀವನಪಥದಲ್ಲಿ ನಡೆಯುವ ಮನುಷ್ಯನಲ್ಲಿ ಈ ಎಚ್ಚರ ಇರಬೇಕಾದದ್ದು ಮುಖ್ಯ. ಆಗಲೇ ಆತ ‘ಧರ್ಮಪರ’ನಾಗುವುದು. ಇಷ್ಟು ಮಾತ್ರ ಪರಿಜ್ಞಾನವಿದ್ದರೆ ಸಾಕು, ರಾಜಕಾರಣಿಯು ಜನರಿತ್ತ ಸ್ಥಾನ-ಮಾನ-ಸವಲತ್ತುಗಳನ್ನು ‘ತಾನು ಮೆರೆಯುವುದಕ್ಕಾಗಿ’ ಬಳಸುವ ಪಾಪ ಮಾಡಲಾರ! ಸಾರ್ವಜನಿಕ ಸವಲತ್ತುಗಳನ್ನು ಜನರು ಅಪಬಳಕೆ ಮಾಡಲಾರರು! ಈ ಸುಂದರ ಭೂಮಿಯ ಮೇಲೆ ಇಷ್ಟೆಲ್ಲ ಅಪರಾಧಗಳೂ, ಹಿಂಸಾಚಾರವೂ, ಲೂಟಿಯೂ ನಡೆಯುತ್ತಲೇ ಇರಲಿಲ್ಲ! ಒಟ್ಟಿನಲ್ಲಿ ಸದಾ ‘ಪ್ರತ್ಯರ್ಪಣಭಾವ’ದಿಂದ ಜೀವಿಸಬೇಕೆನ್ನುವುದೇ ಯಜ್ಞಕರ್ಮದಲ್ಲಿನ ಭಾವಸ್ವಾರಸ್ಯ.
ಕೃಷ್ಣನು, ಯಜ್ಞದ ಫಲಭೋಗಗಳನ್ನು ಹಂಚಿಕೊಂಡಾಗ, ಅದು ‘ಪವಿತ್ರ’ವಾಗುತ್ತದೆ – ಎನ್ನುವ ಸಂದೇಶವನ್ನು ಮುಂದೆ ಕೊಡುತ್ತಾನೆ;
ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ |
ಭುಂಜತೇ ತೇ ತ್ವಘಂ ಪಾಪಂ ಯೇ ಪಚಂತ್ಯಾತ್ಮಕಾರಣಾತ್ || (ಭ.ಗೀ.: 3.13) (ಯಜ್ಞಶೇಷವನ್ನು ತಿನ್ನುವವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ. ಆದರೆ ತನಗಾಗಿ ಮಾತ್ರವೇ ಅಟ್ಟುವವನು, ಪಾಪವನ್ನೇ ತಿನ್ನುತ್ತಾನೆ!)
‘ಯಜ್ಞಶಿಷ್ಟ / ಯಜ್ಞಶೇಷ’ ಎಂದರೆ ‘ಯಜ್ಞಾಂತದಲ್ಲಿ ಮಿಕ್ಕದ್ದು’ / ‘ಪ್ರಸಾದ’ ಎಂದರ್ಥ. ಯಜ್ಞಕರ್ಮವೆಲ್ಲ ಸಂಪನ್ನವಾದ ಮೇಲೆ, ಗುರುಹಿರಿಯರನ್ನೂ ಬಂಧುಮಿತ್ರರನ್ನೂ ಅನ್ನ, ಪಾನ, ವಸ್ತ್ರ, ದ್ರವ್ಯ, ದಕ್ಷಿಣೆಗಳಿಂದ ಉಪಚರಿಸಿ, ಅವರ ಆಶೀರ್ವಾದ ಪಡೆದ ಯಜಮಾನನು ಕೊನೆಯಲ್ಲಿ ಮಿಕ್ಕದ್ದನ್ನು ‘ಪ್ರಸಾದ’ವೆಂದು ಭಾವಿಸಿ, ಕಣ್ಣಿಗೊತ್ತಿಕೊಂಡು ತಿನ್ನುತ್ತಾನಲ್ಲ, ಅದೇ ‘ಯಜ್ಞಶೇಷ’. ಮಾಡುವ ಪ್ರತಿಯೊಂದು ಕರ್ಮವೂ ಒಂದು ‘ಯಜ್ಞ’ವೆಂಬ ಭಾವ ಜಾಗೃತವಾದಾಗ, ಮನುಷ್ಯನು ಪ್ರತಿ ಹಂತದಲ್ಲೂ ತಾನು ಗಳಿಸುವ ಹಣ, ದ್ರವ್ಯ, ಸುಖ, ಭೋಗಗಳನ್ನೂ, ಜ್ಞಾನವನ್ನೂ, ಅನುಭವಾಮೃತವನ್ನೂ ಸಹಮಾನವರೊಂದಿಗೆ ಹಂಚಿಕೊಳ್ಳತೊಡಗುತ್ತಾನೆ. ಅಂತಹ ಕರ್ಮಫಲವು ಧರ್ಮಸಮ್ಮತವೂ, ಪಾಪರಹಿತವೂ ಆಗುತ್ತದೆ. ಆದರೆ, ‘ತನಗಾಗಿ ಮಾತ್ರ ತಾನು ಅಡುಗೆ ಮಾಡುವವನು’ – ಅರ್ಥಾತ್, ತನಗಾಗಿ ಸಂಪಾದಿಸುವವನು, ತಾನೊಬ್ಬನೇ ಭೋಗಿಸುವವನು ‘ಪಾಪವನ್ನೇ ತಿನ್ನುತ್ತಾನೆ’ ಎಂದು ಒತ್ತಿ ಹೇಳುತ್ತಿದ್ದಾನೆ ಕೃಷ್ಣ!
ಆತ್ಮಾನುಸಂಧಾನಕ್ಕಾಗಿ ಮಾಡುವ ಅಂತಮುಖೀ ಸಾಧನಗಳ ಹೊರತು ಬೇರೆಲ್ಲವನ್ನೂ ಮನುಷ್ಯನು ‘ಬಹುಜನ ಹಿತಾಯ ಬಹುಜನ ಸುಖಾಯ’ ಮಾಡಬೇಕೆನ್ನುವುದು ಸನಾತನ ಸಂಸ್ಕೃತಿ. ಮದುವೆ-ಮುಂಜಿ-ನಾಮಕರಣಾದಿ ವೃದ್ಧಿಕರ್ಮಗಳನ್ನೂ, ಗೃಹಪ್ರವೇಶ-ವಿಜಯೋತ್ಸವಾದಿ ಸಾಂರ್ದಭಿಕ ಆಚರಣೆಗಳನ್ನೂ ಗುರುಹಿರಿಯರ-ಬಂಧುಮಿತ್ರರ ಜೊತೆಯಲ್ಲೇ ಆಚರಿಸುವುದು ಅದಕ್ಕಾಗಿಯೇ! ಅಷ್ಟೇ ಅಲ್ಲ, ದೀನದುರ್ಬಲರಿಗೂ ಪ್ರಾಣಿಪಕ್ಷಿಗಳಿಗೂ ಆಗಂತುಕರೆಲ್ಲರಿಗೂ ಭೇದವಿಲ್ಲದೆ ನಮ್ಮ ಯಜ್ಞಫಲಭಾಗವು ಸಲ್ಲಬೇಕು. ಸರ್ವೆ ಭವಂತು ಸುಖಿನಃ ಎಂದು ಮಾನಸಿಕವಾಗಿಯೂ ಯಜ್ಞಫಲವನ್ನು ಸಮಸ್ತ ಜಗತ್ತಿನೊಂದಿಗೂ ಹಂಚಿಕೊಳ್ಳಬೇಕು. ಆಗಲೇ ಅದು ನಿಜಾರ್ಥದಲ್ಲಿ ‘ಯಜ್ಞ’ವೆನಿಸುವುದು!
ಹೀಗೆ ಮಾಡದೆ ಕೇವಲ ‘ತಾನೂ, ತನ್ನ ಪರಿವಾರ, ಕುಲ’ ಎಂಬ ಚೌಕಟ್ಟಿನಲ್ಲೇ ಬದುಕುವವನ ಜೀವನವು ‘ಯಜ್ಞ’ವೆನಿಸದು. ‘ನಾನು-ನನ್ನವರು ಮಾತ್ರ’ ಎಂಬ ಲೆಕ್ಕಾಚಾರದಲ್ಲಿ ಆಚರಿಸುವ ದೇವತಾಕರ್ಮವೂ ಫಲಿಸದೆ ಪಾಪಲಿಪ್ತವಾಗುತ್ತದೆ! ‘‘ಇಷ್ಟೆಲ್ಲ ಶೋಕಿ ಏಕೆ? ಮನದಲ್ಲಿ ಭಕ್ತಿಯಿದ್ದರಾಯ್ತು’’ ಎಂದು ಜಾಣ ವಾದ ಮಾಡಿ, ‘ಏನನ್ನೂ ಮಾಡದೆ’ ಕಳಚಿಕೊಳ್ಳುವ ಜಿಪುಣರೂ ಇರುತ್ತಾರೆ! ಇನ್ನು, ‘‘ಸುಮ್ಮನೆ ಇಷ್ಟು ಖರ್ಚು ಮಾಡುವ ಬದಲು ಬಡಮಕ್ಕಳಿಗೆ ಹಂಚುವುದು ಲೇಸು’’ ಎಂದು ನೀತಿ ಬೋಧಿಸಿ, ಅತ್ತ ಬಡಮಕ್ಕಳಿಗೂ ಕೊಡದೆ, ಇತ್ತ ಬಂಧುಮಿತ್ರರನ್ನೂ ಆದರಿಸದೆ ನುಣುಚಿಕೊಳ್ಳುವ ಜಾಣರೂ ಇರುತ್ತಾರೆ! ಒಟ್ಟಿನಲ್ಲಿ ಇವರೆಲ್ಲ ಸಹಬಾಳ್ವೆಯ ನೀತಿಯನ್ನು ಉಲ್ಲಂಘಿಸಿ ‘ಪಾಪ’ವನ್ನೇ ಬೇಯಿಸಿಕೊಂಡು ತಿನ್ನುವವರೇ ಸರಿ!
ತಾವೇ ಭೋಗಿಸುತ್ತ ಪಾಪಕ್ಕಿಳಿಯದೆ, ಗುರುಹಿರಿಯರೊಡನೆ ಬಂಧುಮಿತ್ರರೊಡನೆ ಹಂಚಿಕೊಳ್ಳುವುದು ಪುಣ್ಯಕರ, ಪಾಪವಿನಾಶಕ. ದೀನದುರ್ಬಲರಿಗೆ ಅನ್ನ-ವಿದ್ಯೆ-ಸಹಾಯಹಸ್ತವನ್ನೀಯುವುದು ಅದಕ್ಕಿಂತ ಶ್ರೇಷ್ಠತರ ಯಜ್ಞ! ಆದರೆ, ‘ತಾನು-ತನ್ನದು-ತನಗೆ’ ಎಂಬ ಲೆಕ್ಕಾಚಾರವನ್ನು ಸಂಪೂರ್ಣವಾಗಿ ಬಿಟ್ಟು ಸರ್ವಜೀವರ ಹಿತಕ್ಕಾಗಿ ತನು-ಮನ-ಧನಗಳನ್ನು ವಿನಿಯೋಗಿಸುವುದಿದೆಯಲ್ಲ, ಅದಂತೂ ಸರ್ವಶ್ರೇಷ್ಠ ಯಜ್ಞ! ಅದು ಮುಕ್ತಿಗೊಯ್ಯುವ ‘ಯೋಗ’ವೇ ಸರಿ! ಮುಂದೆ ಕೃಷ್ಣನು ‘ಸರ್ವಭೂತದಲ್ಲಿ ನಿರತ’ನೇ ನಿಜವಾದ ‘ಭಕ್ತ’ನು (ಸರ್ವಭೂತಹಿತೇ ರತಃ) ಎಂದು ಲಕ್ಷಣೀಕರಿಸುವುದನ್ನು ಹನ್ನೆರಡನೆಯ ಅಧ್ಯಾಯದಲ್ಲಿ ನೋಡಲಿದ್ದೇವೆ.
ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ