ಜ್ಞಾನಕ್ಕೆ ಮಿತಿಯಿಲ್ಲ
ಸ್ವಾಮಿ ಶಂಕರಾಚಾರ್ಯರು ಒಮ್ಮೆ ತಮ್ಮ ಶಿಷ್ಯರೊಂದಿಗೆ ಸಮುದ್ರದ ದಂಡೆಯ ಮೇಲೆ ಬಹಳ ದೂರ ನಡೆದಿದ್ದರು. ಮರಳ ದಂಡೆ ಮೇಲೆ ಸ್ವಲ್ಪ ಹೊತ್ತು ಕುಳಿತರು. ಶಿಷ್ಯರು ತಮ್ಮ ಸಂದೇಹಗಳಿಗೆ ಅವರಿಂದ ಉತ್ತರ ಪಡೆದು ತಮ್ಮ ಜ್ಞಾನವನ್ನು ವೃದ್ಧಿಗೊಳಿಸಿಕೊಳ್ಳುತ್ತಿದ್ದರು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಶಿಷ್ಯನೊಬ್ಬನಿಗೆ ಗುರುಗಳನ್ನು ಹೊಗಳುವ ಆಸೆಯಾಯಿತು.
“ತಾವು ಬಹುದೊಡ್ಡ ಜ್ಞಾನಿಗಳು. ಜ್ಞಾನದ ಭಂಡಾರವೇ ನೀವು. ನಿಮ್ಮಂಥ ಜ್ಞಾನಿಗಳು ತುಂಬ ವಿರಳ. ಇದರಿಂದ ನಮಗೆ ತುಂಬ ಹೆಮ್ಮೆಯಾಗಿದೆ. ತಮ್ಮಂಥ ಪ್ರಕಾಂಡ ವಿದ್ವಾಂಸರನ್ನು ಗುರುಗಳಾಗಿ ಪಡೆದಿರುವ ನಾವು ನಿಜಕ್ಕೂ ಧನ್ಯರು” ಎಂದು ಬಹುವಾಗಿ ಪ್ರಶಂಸಿಸಿದ.
ಶಿಷ್ಯನ ಮಾತು ಕೇಳಿ ಶಂಕರರು ಮುಗುಳ್ನಕ್ಕರು. ‘ನೀನು ಯೋಚಿಸುತ್ತಿರುವದು ತಪ್ಪು. ಜ್ಞಾನ ಅನ್ನುವುದು ಕೈಗೆ ನಿಲುಕುವಂಥದ್ದಲ್ಲ. ದಿನೇ ದಿನೇ ಅದು ವೃದ್ಧಿಗೊಳ್ಳಬೇಕು. ಜ್ಞಾನಕ್ಕೆ ಕೊನೆಯೆಂಬುದು ಇಲ್ಲ. ಜ್ಞಾನ ಪಿಪಾಸು ಪ್ರತಿಕ್ಷಣದಲ್ಲಿ ಜ್ಞಾನವನ್ನು ಹುಡುಕುತ್ತಿರುತ್ತಾನೆ. ನಾನು ಜ್ಞಾನಸಾಗರದ ಮುಂದೆ ಒಂದು ಹನಿಯಷ್ಟು ಮಾತ್ರ” ಶಂಕರರು ಇಷ್ಟು ಹೇಳಿ ತಮ್ಮ ದಂಡವನ್ನು ಸಮುದ್ರದ ನೀರಿನಲ್ಲಿ ಅದ್ದಿ ಮತ್ತೆ ಅದನ್ನು ಹೊರಗೆ ತೆಗೆದರು.
ದಂಡದ ಒದ್ದೆಯಾಗಿದ್ದ ಭಾಗವನ್ನು ಶಿಷ್ಯನ ಮುಂದೆ ಹಿಡಿದರು. “ಇಲ್ಲಿ ನೋಡು. ಸಮುದ್ರದ ನೀರು ಎಷ್ಟು ವಿಶಾಲವಾಗಿದೆ. ಈ ದಂಡವನ್ನು ಇದರಲ್ಲಿ ಅದ್ದಿದಾಗ ಒಂದೆರಡು ಹನಿಯಷ್ಟು ನೀರನ್ನು ಮಾತ್ರ ಅದು ಹಿಡಿಯಿತು. ಇದೇ ರೀತಿ ಅಗಾಧವಾದ ಜ್ಞಾನಸಂಪತ್ತು ಯಾರೊಬ್ಬರ ಕೈವಶವಾಗುವುದು ಸಾಧ್ಯವಿಲ್ಲ. ಜ್ಞಾನದ ಒಂದೆರಡು ಹನಿಗಳನ್ನು ಮಾತ್ರ ಹಿಡಿಯುವುದು ಸಾಧ್ಯ. ದಿನವೂ ಜ್ಞಾನಪಿಪಾಸುವಾಗಿ ಅದನ್ನು ಪಡೆಯುವ ಪ್ರಯತ್ನ ನಡೆಸಬೇಕು. ಅವಿರತ ಪ್ರಯತ್ನದಿಂದ ಒಂದಿಷ್ಟು ಜ್ಞಾನವನ್ನು ಹೊಂದಬಹುದು.” ಜ್ಞಾನದ ಆಗಾಧತೆಯ ಅರಿವಾಗಿ ಶಿಷ್ಯ ತಲೆತಗ್ಗಿಸಿದ. ‘ಜ್ಞಾನ ಸಂಪೂರ್ಣವಾಗಿ ಯಾರ ವಶವೂ ಆಗುವುದಿಲ್ಲ. ಅದನ್ನು ಪಡೆಯಲು ಪ್ರಯತ್ನಿಸಿದಂತೆಲ್ಲಾ ಅದರ ಪ್ರಖರತೆ, ಆಳ ಹೆಚ್ಚುತ್ತಾ ಹೋಗುತ್ತದೆ’ ಎಂಬ ಸತ್ಯ ಶಿಷ್ಯನಿಗೆ ಆಗಿತ್ತು.