“ಜೆಂಗಿಸ್ ಖಾನನ ಪ್ರತಿಮೆ”,

ಮಂಗೋಲಿಯಾದ ರಾಜಧಾನಿ ಉಲಾನ್ ಬಟೊರ್‌ನಿಂದ 54 ಕಿ.ಮೀ ದೂರದ ಸೊಂಜಿನ್‌ ಬಲ್ಡಾಗ್‌ನ ಟೂಲ್‌ ನದಿಯ ದಂಡೆಯ ಮೇಲೆ ಒಂದು ಬೃಹತ್ ಪ್ರತಿಮೆ ಇದೆ. ಅದು ಜೆಂಗಿಸ್‌ ಖಾನ್ ಕುದುರೆಯ ಮೇಲೆ ಕುಳಿತಿರುವ ಪ್ರತಿಮೆ. 250 ಟನ್ ಉಕ್ಕು ಬಳಸಿ ಇದನ್ನು ನಿರ್ಮಿಸಲಾಗಿದೆ. ಇದು 40 ಮೀಟರ್‌ ಎತ್ತರವಾಗಿದೆ. ವ್ಯಕ್ತಿಯೊಬ್ಬ ಕುದುರೆಯ ಮೇಲೆ ಕುಳಿತಿರುವ ಪ್ರತಿಮೆಗಳ ಪೈಕಿ ಇದು ವಿಶ್ವದಲ್ಲೇ ಅತ್ಯಂತ ಎತ್ತರದ್ದು. ಇತಿಹಾಸ ಕಂಡ ಅತ್ಯಂತ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾದ ಮಂಗೋಲ್‌ ಸಾಮ್ರಾಜ್ಯಕ್ಕೆ 800 ವರ್ಷಗಳು ತುಂಬಿದ ನೆನಪಿನಲ್ಲಿ ಹಾಗೂ ಅದರ ಸ್ಥಾಪನ ಜೆಂಗೀಸ್‌ ಖಾನನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಇದನ್ನು 2008ರಲ್ಲಿ ಸ್ಥಾಪಿಸಲಾಯಿತು. ಇದಕ್ಕಾಗಿ ಅಂದಾಜು ₹ 28 ಕೋಟಿ ವೆಚ್ಚ ಮಾಡಲಾಗಿದೆ. ಮೂರ್ತಿಯನ್ನು ನಿರ್ಮಿಸಿದ್ದು ಶಿಲ್ಪಿ ಡಿ. ಎರ್ಡೆನ್‌ಬಿಲೆಗ್‌ ಮತ್ತು ವಾಸ್ತುಶಿಲ್ಪಿ ಜೆ. ಎಂಕ್‌ಜಾರ್ಗಲ್‌. ಜೆಂಗಿಸ್‌ ಖಾನನಿಗೆ ಕುದುರೆ ಓಡಿಸಲು ಚಿನ್ನದ ಚಾಟಿಯೊಂದು ಸಿಕ್ಕಿದ್ದು ಸೊಂಜಿನ್‌ ಬಲ್ಡಾಗ್‌ನಲ್ಲಿ ಎಂಬ ಕಥೆ ಇದೆ. ಹಾಗಾಗಿ, ಅಲ್ಲಿ ಪ್ರತಿಮೆ ಸ್ಥಾಪಿಸಲಾಗಿದೆ. ಪ್ರತಿಮೆಯು ಜೆಂಗಿಸ್‌ ಖಾನನ ಜನ್ಮ ಸ್ಥಳದ ಕಡೆ – ಅಂದರೆ, ಪೂರ್ವ ದಿಕ್ಕಿನ ಕಡೆ – ಮುಖ ಮಾಡಿದೆ. ಪ್ರತಿಮೆಯು ‘ಜೆಂಗಿಸ್ ಖಾನ್ ಪ್ರತಿಮೆ ಸಂಕೀರ್ಣ’ದ ಮೇಲೆ ನಿಂತಿದೆ. ಇದು ಕೂಡ ಪ್ರವಾಸಿಗರನ್ನು ಸೆಳೆಯುತ್ತಿದೆ. ಇದರ ಎತ್ತರ 10 ಮೀಟರ್‌, ಇದು 36 ಕಂಬಗಳನ್ನು ಹೊಂದಿದೆ. ಜನ ಪ್ರತಿಮೆಯ ಒಳಗೆ ಹೋಗಬಹುದು. ಕುದುರೆಯ ತಲೆಯ ಭಾಗಕ್ಕೆ ಹೋಗಿ, ಅಲ್ಲಿಂದ ಸುತ್ತಲಿನ ವಿಹಂಗಮ ನೋಟವನ್ನು ಸವಿಯಬಹುದು. ಅಮಿತಾವ್ ಘೋಷ್ 1956ರಲ್ಲಿ ಕೋಲ್ಕತ್ತದಲ್ಲಿ ರಾಜತಾಂತ್ರಿಕರ ಕುಟುಂಬದಲ್ಲಿ ಜನಿಸಿದ ಅಮಿತಾವ್ ಘೋಷ್, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಇರಾನ್ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ವಾಸಿಸಿದರು. ದೆಹಲಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಅಮಿತಾವ್, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರದಲ್ಲಿ ಪಿಎಚ್‌.ಡಿ ಪಡೆದರು. ನಂತರ ದೆಹಲಿಯ ಪತ್ರಿಕೆಯೊಂದರ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ಭಾರತದಲ್ಲೂ ಅಮೆರಿಕದಲ್ಲೂ ವಾಸಿಸುತ್ತಿದ್ದ ಅಮಿತಾವ್, ಎರಡೂ ದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿ ಕೆಲಸ ಮಾಡಿದರು. ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಕೆಲವು ಕಾಲ ಕೆಲಸ ಮಾಡಿದ ನಂತರ, ಪೂರ್ಣಾವಧಿ ಬರಹಗಾರ ಆದರು. ತಮ್ಮ ಮೊದಲ ಕಾದಂಬರಿ ‘ದಿ ಸರ್ಕಲ್‌ ಆಫ್‌ ರೀಸನ್‌’ಅನ್ನು 1986ರಲ್ಲಿ ಪ್ರಕಟಿಸಿದರು. ದಿ ಶ್ಯಾಡೊ ಲೈನ್ಸ್‌, ದಿ ಕಲ್ಕತ್ತಾ ಕ್ರೊಮೋಸೋಮ್‌, ದಿ ಗ್ಲಾಸ್‌ ಪ್ಯಾಲೇಸ್ ಮತ್ತು ಸೀ ಆಫ್‌ ಪೊಪೀಸ್‌ ಇವು ಅಮಿತಾವ್ ಅವರ ಕೆಲವು ಪ್ರಮುಖ ಕೃತಿಗಳು. ಅವರ ಮಹತ್ವದ ಕೃತಿಗಳು ಇತಿಹಾಸ, ವಿಜ್ಞಾನದಂತಹ ವಿಷಯಗಳನ್ನು ಒಳಗೊಂಡಿವೆ. ಅವು ಅಮಿತಾವ್ ಅವರ ಬುದ್ಧಿಮತ್ತೆ ಮತ್ತು ಆಳವಾದ ಅಧ್ಯಯನವನ್ನೂ ಸಂಕೇತಿಸುತ್ತವೆ. ಅವರ ಕೃತಿಗಳನ್ನು ಪ್ರವಾಸ ಮತ್ತು ಹೊರ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯವನ್ನು ಒಳಗೊಳ್ಳುವಂತೆ ಹೆಣೆಯಲಾಗಿದೆ. ಅಮಿತಾವ್ ಅವರು ಸೃಜನೇತರ ಕೃತಿಗಳನ್ನೂ ಬರೆದಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ಯುತ್ತಮ ವಿಜ್ಞಾನ ಫಿಕ್ಷನ್ ಬರಹಕ್ಕಾಗಿ ಅರ್ಥುರ್ ಸಿ. ಕ್ಲಾರ್ಕ್‌ ಪ್ರಶಸ್ತಿ, ಮ್ಯಾನ್ ಏಷ್ಯಾ ಸಾಹಿತ್ಯ ಪ್ರಶಸ್ತಿ ಕೂಡ ಇವರಿಗೆ ಸಂದಿದೆ. ಅಲ್ಲದೆ, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಸಂದಿದೆ. ಈ ಪ್ರಶಸ್ತಿ ಪಡೆದ ಮೊದಲ ಇಂಗ್ಲಿಷ್ ಬರಹಗಾರ ಅವರು. 2007ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಸಂಜಯ ಈತ ಹಸ್ತಿನಾಪುರದ ರಾಜ ಧೃತರಾಷ್ಟ್ರನ ಆಸ್ಥಾನಿಕ. ಮಹಾಭಾರತ ಯುದ್ಧದ ಸಂದರ್ಭದಲ್ಲಿ, ಯುದ್ಧಭೂಮಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಧೃತರಾಷ್ಟ್ರನಿಗೆ ವಿವರವಾಗಿ ಹೇಳಿದವ ಸಂಜಯ. ಯುದ್ಧ ನಡೆಯುತ್ತಿರುವ ಜಾಗದಲ್ಲಿ ಏನಾಗುತ್ತಿದೆ ಎಂಬುದನ್ನು ಅರಮನೆಯಲ್ಲಿ ಕುಳಿತೇ ನೋಡುವ ಶಕ್ತಿಯನ್ನು ವ್ಯಾಸ ಮಹರ್ಷಿಗಳು ಸಂಜಯನಿಗೆ ನೀಡಿದ್ದರು. ಮಹಾಭಾರತ ಮಹಾಕಾವ್ಯದಲ್ಲಿ ಇಡೀ ಯುದ್ಧವು ಸಂಜಯ ಕಂಡಂತೆ ಮತ್ತು ಸಂಜಯ ಧೃತರಾಷ್ಟ್ರನಿಗೆ ವರದಿ ಮಾಡಿದಂತೆ ಚಿತ್ರಿತವಾಗಿದೆ.

courtsey:prajavani.net

https://www.prajavani.net/artculture/article-features/genghis-khan-652289.html