ಚಾತುರ್ವರ್ಣ್ಯದಲ್ಲಿ ಪರಕೀಯ ಹಸ್ತಕ್ಷೇಪ
ಪ್ರತಿಯೋರ್ವನೂ ತನ್ನ ಕುಲಕಸುಬುಗಳಲ್ಲಿ ಸ್ವಾಭಿಮಾನ, ನಿಷ್ಠೆ ಹೊಂದಿದ್ದು, ಇತರ ವರ್ಣೀಯರೊಡನೆ ಆರ್ಥಿಕ-ಸಾಂಸ್ಕೃತಿಕ ಸ್ನೇಹ-ಸಂಬಂಧವನ್ನಿಟ್ಟುಕೊಳ್ಳುತ್ತ ಸರ್ವತೋಮುಖ ಏಳ್ಗೆ ಸಾಧಿಸಬೇಕೆಂಬುದು ಚಾತುರ್ವರ್ಣ ವ್ಯವಸ್ಥೆಯ ಮೂಲೋದ್ದೇಶ. ಆದರೆ ಅಲ್ಪಮತಿಗಳು ತಮ್ಮ ಹುಟ್ಟು-ಕಸುಬುಗಳ ಬಗ್ಗೆ ಮೇಲರಿಮೆ-ಕೀಳರಿಮೆಗಳ ಗೋಡೆ ನಿರ್ವಿುಸುತ್ತ, ಈ ವ್ಯವಸ್ಥೆಯಲ್ಲಿ ಆಂತರಿಕ ವಿಕಾರ ತರಲಾರಂಭಿಸಿದ್ದು ದುರ್ದೈವ.
‘ತಾನು ಶ್ರೇಷ್ಠ’ ಎಂದು ವಾದಿಸಿ ಗೆಲ್ಲುವ ಮತ್ತೊಂದು ಬಗೆಯ ದುರಭಿಮಾನ ವಿನಾಶಕಾರಿ! ‘ನಾನು ಶ್ರೇಷ್ಠವಾದ್ದರಿಂದ, ಎಲ್ಲರೂ ನನ್ನ ಮತ-ನಂಬಿಕೆ-ಜೀವನಶೈಲಿಗಳನ್ನೇ ಒಪ್ಪಿ ಅನುಸರಿಸಬೇಕು’ ಎನ್ನುವ ಹುಚ್ಚ ಹಠವಾಗಿ ಭುಗಿಲೇಳುತ್ತದೆ! ಸಹಸ್ರಮಾನಗಳಿಂದ ಜಗತ್ತಿನಾದ್ಯಂತ ಹರಡುತ್ತ, ಜನಾಂಗಗಳನ್ನು ಮತಾಂತರಿಸಿ, ಆರ್ಥಿಕವಾಗಿಯೂ ರಾಜಕೀಯವಾಗಿಯೂ ವೈಚಾರಿಕವಾಗಿಯೂ ಆಳುವ ದುರುತ್ಸಾಹದ ಕೆಲವು Semitic ಮತಗಳಲ್ಲಿ ಈ ದುರಭಿಮಾನವು ವಿಪುಲವಾಗಿ ಕಾಣುತ್ತದೆ. ಶತಶತಮಾನಗಳ ಮಾರಣಹೋಮ, ಅತ್ಯಾಚಾರ, ಲೂಟಿಗಳಿಂದ ರಕ್ತಸಿಕ್ತ ಹಸ್ತಗಳನ್ನು ತೊಳೆದುಕೊಳ್ಳುವ ಬದಲು, ಅದನ್ನೇ ಮುಂದುವರೆಸುತ್ತಿರುವುದು ಇವರ ದುರಭಿಮಾನದ ಅತಿರೇಕವೇ ಸರಿ!
ಭಾರತವನ್ನು ವೈಚಾರಿಕವಾಗಿ ಆಳುವ ಹುನ್ನಾರ ಬ್ರಿಟಿಷ್ ಮಿಷನರಿಗಳು, ಪ್ರಭಾವಶಾಲಿ ಕ್ಷೇತ್ರಗಳಾದ ಶಿಕ್ಷಣ, ಮಾಧ್ಯಮ, ವೈಚಾರಿಕ ವಲಯಗಳನ್ನು ವ್ಯವಸ್ಥಿತವಾಗಿ ವಶಪಡಿಸಿಕೊಳ್ಳುತ್ತ ಬಂದರು. ವೇದ, ವೇದಾಂತ, ಪುರಾಣಾಗಮಗಳ ಮೂಲೋದ್ದೇಶವನ್ನೂ ಇಹಾಸವನ್ನೂ ತಿರುಚಿದರು; ಚಾತುರ್ವರ್ಣ್ಯಾದಿ ಸಾಮಾಜಿಕ ವ್ಯವಸ್ಥೆಗಳನ್ನು ಅಪವ್ಯಾಖ್ಯಾನಕ್ಕೊಳಪಡಿಸಿ, ಜಾತಿವಾದವನ್ನು ಹರಡಿಸಿದರು. ಇವರ ವಿಕೃತವ್ಯಾಖ್ಯಾನಗಳಿಗೆ ಸಿಲುಕಿ ಚಾತುರ್ವರ್ಣವು ‘ಜಾತಿಭೇದ’ವಾಯಿತು, ಶಿಷ್ಟಾಚಾರಗಳು ‘ಮೂಢನಂಬಿಕೆ’ಗಳಾದವು, ವಿಚಾರಸಾಮಗ್ರಿಯೆಲ್ಲ ‘ಗತಕಾಲದ ನಿಷ್ಪ್ರಯೋಜಕ ಕಂತು’ಗಳಾದವು, ಸಂಸ್ಕೃತಭಾಷೆಯು ‘ಮೃತಭಾಷೆ’ಯೆಂಬ ಮೂದಲಿಕೆಗೆ ಒಳಪಟ್ಟಿತು, ಕನ್ನಡ ಮುಂತಾದ ದೇಶಭಾಷೆಗಳು ಆಂಗ್ಲಕ್ಕೆ ಹೆದರಿ ಪಕ್ಕಕ್ಕೆ ನಿಲ್ಲಬೇಕಾಯಿತು, ದೇಶೀಯ ವಸ್ತ್ರಸಂಹಿತೆಯೂ ನಾಚಿ ಮನೆಯೊಳಗೆ ಉಳಿಯಬೇಕಾಯಿತು! ಒಟ್ಟಿನಲ್ಲಿ, ಭಾರತೀಯತೆಯ ಎಲ್ಲ ಆಯಾಮಗಳನ್ನೂ ಹಂತಹಂತವಾಗಿ ಕೀಳಾಗಿ ಚಿತ್ರಿಸಿ, ಜನಮನದಲ್ಲಿ ನಿರಭಿಮಾನವನ್ನು ಮೂಡಿಸಿ, ಮತಾಂತರಿಸುವ ಇವರ ವಿಕೃತವ್ಯಾಖ್ಯಾನಗಳನ್ನು ನಂಬಿ, ‘ಇವರ ಅನುಕರಣೆಯೇ ನಮ್ಮ ಉದ್ಧಾರಕ್ಕೆ ಮಾರ್ಗ’ ಎಂದು ಭ್ರಮಿಸಿದವರು, ತಾಯ್ಬೇರಿನಿಂದ ಬೇರ್ಪಟ್ಟವರೂ ಹೆಚ್ಚುತ್ತ ಹೋದದ್ದು ದುರ್ದೈವ.
ಆಕ್ರಮಣಶಾಹೀ-ಪ್ರವೃತ್ತಿಯಿಂದ ಅಶಾಂತಿ ಸೃಷ್ಟಿಸುವ ಈ ದುರಭಿಮಾನಿಗಳು, ‘ದೇವರ ಕೆಲಸ’ ಮಾಡುತ್ತಿದ್ದೇವೆಂದು ಸಮರ್ಥಿಸಿಕೊಳ್ಳುವುದಲ್ಲದೆ, ‘ಎಲ್ಲ ಸಮಸ್ಯೆಗೂ ವರ್ಣವ್ಯವಸ್ಥೆಯೇ ಕಾರಣ’ ಎಂದು ವರ್ಣವ್ಯವಸ್ಥೆಯ ಮೇಲೆ ಗೂಬೆ ಕೂಡಿಸುತ್ತಾರೆ! ಸ್ವಾತಂತ್ರ್ಯಾನಂತರವೂ ಈ ದುರಭಿಮಾನಿಶಕ್ತಿಗಳು ಸುಮ್ಮನಾಗಲಿಲ್ಲ. ಸ್ವದೇಶಧರ್ಮಗಳಿಗೆ ದ್ರೋಹವೆಸಗುವ ಮನೋಭಾವದವರನ್ನು ಇಲ್ಲಿ ಗುರುತಿಸಿ, ಪೋಷಿಸಿ ಅವರ ಮೂಲಕ ‘ಭಾರತ್ ಕೀ ಬರ್ಬಾದಿ’ಯ ಕಾರ್ಯವನ್ನು ಮುನ್ನಡೆಸಿದ್ದಾರೆ. ‘ನಾನು ಸಮಾಜಕ್ಕಾಗಿ – ನನಗಾಗಿ ಸಮಾಜ’ ಎಂಬ ವರ್ಣವ್ಯವಸ್ಥೆಯ ‘collectivism’ನ ನೀತಿಯನ್ನು ಅಪವ್ಯಾಖ್ಯಾನಕ್ಕೂ ಅಪಾರ ಅಪಕೀರ್ತಿಗೂ ಇಳಿಸಿ, ‘ನನಗಾಗಿ ನಾನು – ನಿನಗಾಗಿ ನೀನು’ ಎಂಬ ಐಛಜಿಡಜಿಛ್ಠಚ್ಝಜಿಠಞನ ಅಪಾಯಕಾರಿ ಸಿದ್ಧಾಂತವನ್ನು ಬಲಗೊಳಿಸಲಾಗುತ್ತಿದೆ. ತತ್ಪರಿಣಾಮವಾಗಿ ಕೂಡುಕುಟುಂಬಗಳು ಒಡೆಯುತ್ತಿವೆ, ಧರ್ವಚರಣೆ, ಸಾಹಿತ್ಯ-ಕಲೆ-ಸಾಮಾಜಿಕ ಶಿಷ್ಟಾಚಾರಗಳಲ್ಲೆಲ್ಲ ಸ್ವೇಚ್ಛಾಚಾರ ಮೊದಲಾಗುತ್ತಿದೆ, ಕರ್ತವ್ಯಕ್ಕಿಂತ ಹಕ್ಕು ಮುಖ್ಯವಾಗುತ್ತಿದೆ!
ಅಂತೂ ಸ್ವವಿವೇಚನೆ ಕಳೆದುಕೊಂಡ ನಿರಭಿಮಾನಿಗಳೂ, ಸಂಕುಚಿತ ಮನೋಭಾವದ ದುರಭಿಮಾನಿಗಳೂ, ಇಂಥವರ ದೌರ್ಬಲ್ಯವನ್ನೇ ಬಂಡವಾಳವಾಗಿಸಿಕೊಂಡ ಆಕ್ರಮಣಕಾರಿ ಪ್ರವೃತ್ತಿಯ ಅತಿರೇಕದ ದುರಭಿಮಾನಿಗಳೂ ಸೇರಿ, ಚಾತುರ್ವಣ ವ್ಯವಸ್ಥೆಯನ್ನು ಬಿಡಿಸಲಾಗದಷ್ಟು ಅಪಾರ್ಥಗಳಲ್ಲಿ ಸಿಕ್ಕಿಸಿಬಿಟ್ಟಿದ್ದಾರೆ!
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ