ಗತ ವೈಭವದತ್ತ ಕನ್ನಡ ಸಂಘ

ಗತ ವೈಭವದತ್ತ ಕನ್ನಡ ಸಂಘ

ರಾಜ್ಯದಾದ್ಯಂತ 1959ರಿಂದ 1971ರವರೆಗೆ ಕಾಲೇಜು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮನೆ ಮಾತಾಗಿದ್ದ ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ‘ಕನ್ನಡ ಸಂಘ’ ಮೂರು ವರ್ಷಗಳ ಹಿಂದೆಯಷ್ಟೇ ತನ್ನ ಚಟುವಟಿಕೆಯನ್ನು ಪುನಃ ಆರಂಭಿಸಿದೆ.

ರಾಜ್ಯದಾದ್ಯಂತ 1959ರಿಂದ 1971ರವರೆಗೆ ಕಾಲೇಜು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮನೆ ಮಾತಾಗಿದ್ದ ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ‘ಕನ್ನಡ ಸಂಘ’ ಮೂರು ವರ್ಷಗಳ ಹಿಂದೆಯಷ್ಟೇ ತನ್ನ ಚಟುವಟಿಕೆಯನ್ನು ಪುನಃ ಆರಂಭಿಸಿದೆ.

ನಾಟಕ, ಪುಸ್ತಕ ಪ್ರಕಟಣೆ, ವಿಚಾರ ಗೋಷ್ಠಿ, ಸಂವಾದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿರುವ ಸಂಘ ತನ್ನ ಗತ ವೈಭವವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಸಕ್ರಿಯವಾಗಿದೆ. ಅದರ ಭಾಗವಾಗಿಯೇ ಬುಧವಾರ ಟಿ.ಪಿ.ಕೈಲಾಸಂ ಅವರ ‘ಪೋಲೀ ಕಿಟ್ಟಿ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ಅಲ್ಲದೆ ಗುರುವಾರ ‘ನಾಡಹಬ್ಬ’ವನ್ನೂ ಆಯೋಜಿಸಿದೆ.

ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್‌ (ಈಗಿನ ಪಿಯುಸಿ) ಇದ್ದಾಗ, ಅಂದರೆ 1959ರಲ್ಲಿ ‘ಕನ್ನಡ ಸಂಘ’ ಸ್ಥಾಪನೆಯಾಯಿತು. ಆ ವೇಳೆಗಾಗಲೇ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ’ಕರ್ನಾಟಕ ಸಂಘ’ ಸಕ್ರಿಯವಾಗಿತ್ತು. ಕರ್ನಾಟಕ ಸಂಘದ ಮಾದರಿಯಲ್ಲಿಯೇ ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಾಹಿತಿ ಎಂ.ವಿ.ಸೀತಾರಾಮಯ್ಯ ಅವರು ‘ಕನ್ನಡ ಸಂಘ’ ಸ್ಥಾಪಿಸಿ, ಕನ್ನಡ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ವಿಮರ್ಶಕ ಪ್ರೊ. ಎಂ.ಎಚ್‌.ಕೃಷ್ಣಯ್ಯ, ಸಾಹಿತಿ ಜಿ.ಎಸ್‌.ಸಿದ್ಧಲಿಂಗಯ್ಯ ಸೇರಿದಂತೆ ಹಲವರು ಕನ್ನಡ ಸಂಘವನ್ನು ಬೆಳೆಸಿದರು. 1962ರಲ್ಲಿ ಭಾರತದ ಮೇಲೆ ಚೀನಾ ದಾಳಿ ನಡೆಸಿದ ಸಂದರ್ಭದಲ್ಲಿ ಸಂಘವು ‘ವೀರ ಕವಿಗೋಷ್ಠಿ’ ನಡೆಸಿತ್ತು. ವಿದ್ಯಾರ್ಥಿಗಳು ಬರೆಯುತ್ತಿದ್ದ ಉತ್ತಮ ಪ್ರಬಂಧ, ಕವಿತೆಗಳನ್ನು ಪ್ರಕಟಿಸಲಾಗುತ್ತಿತ್ತು.

‘ಎಂ.ವಿ. ಸೀತಾರಾಮಯ್ಯ ಅವರು ಸಂಪಾದಿಸಿದ್ದ ‘ಕವಿರಾಜಮಾರ್ಗ’ವನ್ನು ಸಂಘ ಪ್ರಕಟಿಸಿತು. ಕವಿರಾಮಮಾರ್ಗದ ಕರ್ತೃ ಶ್ರೀವಿಜಯಾ ಎಂದು ಪ್ರತಿಪಾದಿಸುವ ಮೂಲಕ ಈ ವಿಚಾರದಲ್ಲಿ ಇದ್ದ ಗೊಂದಲವನ್ನು ಅವರು ಬಗೆಹರಿಸಿದರು’ ಎಂದು ಎಂ.ಎಚ್‌. ಕೃಷ್ಣಯ್ಯ ಸ್ಮರಿಸುತ್ತಾರೆ.

‘1971ರಲ್ಲಿ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ವಿಭಜನೆಯಾಯಿತು. ಅಲ್ಲಿಂದ ಕನ್ನಡ ಸಂಘದ ಕಾರ್ಯ ಕಡಿಮೆಯಾಗಿ ಪ್ರಕಟಣೆ, ಸಾಹಿತ್ಯ, ಸಂವಾದ ಚಟುವಟಿಕೆಗಳಿಗೂ ತಡೆ ಬಿತ್ತು’ ಎನ್ನುತ್ತಾರೆ.

‘ಸರ್ಕಾರಿ ಕಲಾ ಕಾಲೇಜಿನಲ್ಲಿ 2016ರಲ್ಲಿ ಕನ್ನಡ ಸಂಘಕ್ಕೆ ಮತ್ತೆ ಜೀವ ನೀಡಲಾಗಿದೆ. ವಿಚಾರ ಗೋಷ್ಠಿ, ಚರ್ಚೆ, ಸಂವಾದದ ಜತೆಗೆ ಪ್ರಕಟಣಾ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ವರ್ಷಕ್ಕೊಂದು ನಾಟಕ ತರಬೇತಿ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಅಲ್ಲದೆ ವಿವಿಧ ಸಂಘ ಸಂಸ್ಥೆಗಳು, ಟ್ರಸ್ಟ್‌, ಪ್ರತಿಷ್ಠಾನಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕಾಲೇಜಿನಲ್ಲಿ 1200 (ಸ್ನಾತಕೋತ್ತರ ಮತ್ತು ಪದವಿ) ವಿದ್ಯಾರ್ಥಿಗಳಿದ್ದು, ವಾರ್ಷಿಕವಾಗಿ ಕನ್ನಡ ಸಂಘಕ್ಕೆ ತಲಾ 50 ರೂಪಾಯಿ ಶುಲ್ಕ ಪಾವತಿಸುತ್ತಿದ್ದಾರೆ’ ಎಂದು ಕಾಲೇಜಿನ ಕನ್ನಡ ಸಂಘದ ಸಂಚಾಲಕ ಡಾ. ರುದ್ರೇಶ್‌ ಅದರಂಗಿ ಹೇಳುತ್ತಾರೆ.

**

ಟಿ.ಪಿ.ಕೈಲಾಸಂ ಅವರ ಪೋಲಿ ಕಿಟ್ಟಿ ನಾಟಕ ಪ್ರದರ್ಶನ: ಬುಧವಾರ ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಕಲಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ವಿನ್ಯಾಸ ಮತ್ತು ನಿರ್ದೇಶನ– ಎಲ್‌. ಕೃಷ್ಣಪ್ಪ; ಸಹ ನಿರ್ದೇಶನ– ಎಸ್‌. ಓಂಕಾರೇಶ; ಸಂಗೀತ– ಅವಿನಾಶ್‌ ಮಂಡ್ಯ; ಪ್ರಸಾಧನ– ರಾಮಕೃಷ್ಣ ಬೆಳ್ತೂರು

ನಾಡಹಬ್ಬ: ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ 10.30ಕ್ಕೆ ’ಕನ್ನಡ ಸಂಘ–ನಾಡಹಬ್ಬ’ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನೆ– ಸಾಹಿತಿಗಳಾದ ಡಾ. ಕಮಲಾ ಹಂಪನಾ, ಡಾ. ಹಂ.ಪ.ನಾಗರಾಜಯ್ಯ. ಅಧ್ಯಕ್ಷತೆ–ಪ್ರಾಂಶುಪಾಲ ಕೆ. ಎಂ.ವೆಂಕಟಶಾಮಿ ರೆಡ್ಡಿ.

Courtesy : Prajavani.net

http://www.prajavani.net/news/article/2018/04/04/563678.html

Leave a Reply