ಕೃಷ್ಣ ಲಕ್ಷ್ಮಿಗೆ…
(ಮೋದಿಯ ಬ್ರಹ್ಮಾಸ್ತ್ರವ ನೆನೆಸಿ….)
ಕ್ಷಮಿಸಿ ಬಿಡು ತಾಯಿ ಭರತ ಪುತ್ರನ ನೀನು
ನಿನ್ನ ಹೊರಗಟ್ಟುವ ಸಮಯ ಬಂದಿಹುದು ಈಗ
ಸಿರಿವಂತರಾ ಮನೆಯ ಸಂದುಗೊಂದುಗಳಲ್ಲಿ
ಅನವರತ ನೆಲೆಸುತಲಿ ಅವರ ಸಲಹಿದೆಯೊ ||೧||
ಕೃಷ್ಣ ಸುಂದರಿ ನೀನು ಕಪ್ಪೆಂದು ಜರೆಯುವರು
ನಿನ್ನ ಬಯಸುವವರಿಗೆಲ್ಲ ನೀ ನಿರತ ಒಲಿದೆ
ಮೋಸ ವಂಚನೆಯೆಂಬ ನಿತ್ಯ ಮಂತ್ರಗಳಿಂದ
ನಿನ್ನ ಪೂಜೆಯಗೈದ ಭಕುತರಿಗೆ ಒಲಿದೆ ||೩||
ನ್ಯಾಯ ನಿಷ್ಠೆಗಳೆಂಬ ಸ್ತುತಿ ನಿನಗೆ ಬೇಕಿಲ್ಲ
ಶ್ರಮಿಕ ಮಧ್ಯಮ ವರ್ಗ ಸಲ್ಲದೈ ನಿನಗೆ
ನ್ಯಾಯಮಾರ್ಗವ ಬಿಟ್ಟು ನಿನ್ನನನುಸರಿಸುವರ
ನಿರತ ಕಾಯ್ದೆಯೊ ದೇವಿ ಅನವರತ ಸಲಹಿ ||೪||
ಮಂಗಳೆಯು ನೀನೆಂದು ನಿನ್ನ ನಂಬಿದವರಿಂಗೆ
ಮಂಗಳಾವಾರದೊಳೇಕೆ ನೀ ಮುನಿಸಿಕೊಂಡೆ
ಶುಭ ಮಂಗಳವಾರದಲಿ ಅಮಂಗಳೆಯು ಏಕಾದೆ
ನಿನ್ನ ನಂಬಿದವರನೇಕೆ ನಡು ನೀರಿನಲಿ ಬಿಟ್ಟೆ? |೫||
ಕಪ್ಪು ಬಟ್ಟೆಯ ತೊಡಿಸಿ ಪೂಜೆಗೈದವರೆಲ್ಲ
ಶ್ಚೇತ ವಸನವ ತೊಡಿಸೆ ಕಾತುರರು ನೋಡು
ನಗರ ಬೀದಿಗಳಲಿರುವ ಕೋಶಾಗಾರಗಳಲೆಲ್ಲ
ಸಾಲು ನಿಂದಿಹರು ನಿನಗೆ ಬಿಳಿ ಬಟ್ಟೆ ತೊಡಿಸೆ ||೬||
ಯಾವ ಸುದರ್ಶನ ಚಕ್ರ ನಿನ್ನ ಬೆಂಬತ್ತಿತೊ
ಏನಿದರ ಮರ್ಮವೋ ನಾನರಿಯೇ ದೇವಿ
ನಿನ್ನ ನಿರ್ಗಮನಕೆಂದೆ ನಡುರಾತ್ರಿಯಲವತರಿಸಿ
ಭರತಭೂಮಿಯಿಂದಲೇ ನಿನ್ನ ಕಳುಹಲಿದೆಯಂತೆ ||೭||
ಕಮಲಮುಖಿಯವಳ ಕಮಲದೊಳು ನೆಲೆಸಿಹಳ
ಶ್ವೇತ ವಸನವುಟ್ಟವಳ ಶ್ವೇತ ಸುಂದರಿಯ
ಅವಳ ಕೃಪೆಯೇ ಭಾಗ್ಯ ಅದುವೆ ಸಿರಿ ಸಂಪತ್ತು
ಭಾರತಿಯ ಜತೆಯಿರಲಿ ಅವಳು ಸತತ ||೮||
– ದಿವಾಕರ ಡೋಂಗ್ರೆ ಎಂ.
1 Comment
Nice